ಭಾರತದ ಮೂಲೆಮೂಲೆಯಲ್ಲೂ ಕೆಲ ಸಮುದಾಯಗಳನ್ನು ಹುಟ್ಟು ಹಾಕುವಲ್ಲಿ ಆಹಾರ ಹಾಗೂ ಆ ಕುರಿತ ನಂಬಿಕೆಗಳ ಪಾಲು ದೊಡ್ಡದಿದೆ. ಈ ಎರಡೂ ವಿಷಯಗಳು ನಮ್ಮ ಸಮಾಜದ ವಿನ್ಯಾಸದಲ್ಲಿ ದೊಡ್ಡ ಮಟ್ಟಿನ ಪ್ರಭಾವ ಬೀರಿವೆ. ಸಮುದಾಯಗಳನ್ನು ಒಟ್ಟು ತರುವಲ್ಲಿ ಪಾತ್ರ ವಹಿಸುವ ಕೆಲವೊಂದು ಆಹಾರ ಸಂಪ್ರದಾಯಗಳು, ಅವೇ ಒಂದು ಸಂಸ್ಕೃತಿಯಾಗಿ ತಲೆಮಾರಿನಿಂದ ತಲೆಮಾರಿಗೆ ದಾಟುತ್ತಾ ಸಾಗುತ್ತವೆ. ಹೀಗೆ ನಂಬಿಕೆಗಳ ಸುತ್ತಮುತ್ತ ಹುಟ್ಟಿಕೊಂಡಿರುವ ಆಹಾರ ಸಂಸ್ಕೃತಿಗಳಲ್ಲಿ ಹೆಚ್ಚು ಜನರಿಗೆ ತಿಳಿದಿಲ್ಲದ ಕೆಲವೊಂದನ್ನು ಇಲ್ಲಿ ಕೊಡಲಾಗಿದೆ.
ಅಕ್ಕಿಯ ಬಿಯರೂ, ಮೇಘಾಲಯದ ಕರ್ಬಿ ಬುಡಕಟ್ಟೂ
ಮೇಘಾಲಯದ ಕರ್ಬಿ ಬುಡಕಟ್ಟಿನ ನಂಬಿಕೆಗಳಲ್ಲಿ ಆಹಾರವೇ ದೊಡ್ಡ ಪಾತ್ರ ವಹಿಸುವುದು. ಅವರ ಆಹಾರ ಕ್ರಮದಲ್ಲಿ ಬಹುಮುಖ್ಯ ಸ್ಥಾನವನ್ನು ಅಕ್ಕಿಯ ಬಿಯರಿಗೆ ನೀಡಲಾಗಿದೆ. ಅವರ ಪ್ರಕಾರ, ಈ ಬಿಯರ್ ದೇವರ ಆಹಾರ. ಹಾಗಾಗಿ, ಅವರು ದೇವರಿಗೆ ಕೃತಜ್ಞತೆ, ಭಕ್ತಿ ತೋರಿಸಬೇಕೆಂದರೆ ಅಕ್ಕಿಯ ಬಿಯರ್ ಹಾಗೂ ಮಾಂಸವನ್ನು ನೀಡುತ್ತಾರೆ.
ಕರ್ಬಿ ಸಂಸ್ಕೃತಿಯಲ್ಲಿ ಅಕ್ಕಿಗೆ ಪ್ರಮುಖ ಸ್ಥಾನವಿದೆ. ಅವರು ಅಕ್ಕಿಯನ್ನು ಪೋರ್ಕ್, ಕೋಣ, ಚಿಕನ್, ಮೀನು ಹಾಗೂ ಕೀಟಗಳೊಂದಿಗೆ ಬೇಯಿಸಿ ತಿನ್ನುತ್ತಾರೆ. ಇದರೊಂದಿಗೆ ಬಿದಿರು ಕೂಡಾ ಅವರ ಜೀವನಶೈಲಿ ಹಾಗೂ ಆಹಾರಕ್ರಮದಲ್ಲಿ ಮುಖ್ಯ ಸ್ಥಾನ ಪಡೆದಿದೆ. ಇದನ್ನು ಮನೆ ಕಟ್ಟಲು, ಇಂಧನವಾಗಿ ಸುಡಲು, ರೈಸ್ ಬಿಯರ್ ಕುಡಿಯುವ ಲೋಟವಾಗಿ, ತಿನ್ನಲು, ಅಡಿಗೆ ಮಾಡಲು ಮುಂತಾದವುಗಳಿಗೆ ಬಳಸುತ್ತಾರೆ.
ಉಡ್ವಾಡಾದ ಆಹಾರ
ಪಾರ್ಸಿ ಆಹಾರ ಸಂಸ್ಕೃತಿಯ ವಿಷಯಕ್ಕೆ ಬಂದರೆ ಗುಜರಾತ್‌ನ ತೀರ ಪ್ರದೇಶದಲ್ಲಿರುವ ಪುಟ್ಟ ಪಟ್ಟಣ ಉಡ್ವಾಡಾ ಹೆಸರು ಮೇಲೆ ಬರುತ್ತದೆ. ಏಕೆಂದರೆ ಇಲ್ಲಿ ಪಾರ್ಸಿಗಳು ಹೆಚ್ಚು. ಈ ಸಮುದಾಯದ ಬಹಳ ಆಸಕ್ತಿಕರವಾದ ಆಹಾರ ಸಂಪ್ರದಾಯವನ್ನು ಯಾರಾದರೂ ಮೃತಪಟ್ಟಾಗ ಕಾಣಬಹುದು. ವ್ಯಕ್ತಿಯು ಜೀವ ಬಿಟ್ಟ ಬಳಿಕ ಆಹಾರವನ್ನು ದೇವರಿಗೋ, ಅಗ್ನಿಗೋ ನೀಡುವುದಿಲ್ಲ. ಬದಲಿಗೆ ಸತ್ತ ವ್ಯಕ್ತಿಯ ಆತ್ಮಕ್ಕೆ ನೀಡಲಾಗುತ್ತದೆ. ಇಂಥ ಸಂದರ್ಭದಲ್ಲಿ ಗೋಧಿ, ಗುಲಾಬಿ, ಗಂಧ, ಹಾಲು ಹಾಗೂ ತಾಮ್ರವನ್ನು ಆತ್ಮದ ಹಸಿವು ತಣಿಸಲು ನೀಡಲಾಗುತ್ತದೆ.
ಇನ್ನು ಪಾರ್ಸಿ ಆಹಾರ ಸಂಸ್ಕೃತಿಯ ಪ್ರಮುಖ ಲಕ್ಷಣವೆಂದರೆ ಹುಳಿ, ಸಿಹಿ ಹಾಗೂ ಖಾರ- ಮೂರನ್ನೂ ಹೊಂದಿದ ಬ್ಯಾಲೆನ್ಸ್ಡ್ ಆಹಾರಗಳು. ಬೋಯ್ ನಿ ಮಚ್ಚಿ, ಅಕುರಿ, ಪಾಪ್ರಾ ಹಾಗೂ ಬಕ್ರಾ ಮುಂತಾದ ಪಾರ್ಸಿ ಅಡುಗೆಗಳು ಗಮನ ಸೆಳೆಯುತ್ತವೆ. ಇತ್ತೀಚೆಗೆ ಪಾರ್ಸಿ ಆಹಾರ ಸಂಸ್ಕೃತಿಯ ಮೇಲೆ ಗುಜರಾತಿ ಆಹಾರ, ಪೋರ್ಚುಗೀಸ್ ಅಡುಗೆ ಶೈಲಿ, ಬಾಂಬೆಯ ಐಂಗ್ಲೋ ಇಂಡಿಯನ್ ಶೈಲಿಗಳು ಕೂಡಾ ತಮ್ಮ ಪ್ರಭಾವ ಬೀರಿರುವುದನ್ನು ಕಾಣಬಹುದು.
ಕೋಲ್ಕತ್ತಾದ ಜಿವ್ಸ್ ಹಾಗೂ ಶಬ್ಬತ್
ಕೋಲ್ಕತ್ತಾದಲ್ಲಿ ಕೆಲವು ಸಾವಿರದಲ್ಲಿದ್ದ ಜಿವ್ಸ್ ಸಮುದಾಯದವರು ಇಂದು ಬೆರಳೆಣಿಕೆಯಷ್ಟೇ ಸಿಗುವುದಾದರೂ ಅವರ ಆಹಾರ ಸಂಪ್ರದಾಯಗಳು ಇನ್ನೂ ಜೀವಂತವಿರುವುದನ್ನು ಕಾಣಬಹುದು. ಜಿವ್ಸ್‌ಗಳ ಅಂಥ ಒಂದು ಆಹಾರ ಸಂಸ್ಕೃತಿ ಎಂದರೆ ಶಬ್ಬತ್‌ನ ದಿನ ತಯಾರಿಸುವ ಊಟ. ಅಂದು ಜಿವ್ಸ್ ಶುಕ್ರವಾರ ರಾತ್ರಿ ಅಡುಗೆ ಪ್ರಾರಂಭಿಸಿ, ಶನಿವಾರ ಬೆಳಗಿನಜಾವದವರೆಗೂ ಈ ಕಾರ್ಯದಲ್ಲಿ ತೊಡಗುತ್ತಾರೆ. ಶಬ್ಬತ್ ಫೀಸ್ಟ್ ಎಂದರೆ ಸಾಮಾನ್ಯವಾಗಿ ಉಪ್ಪಿನಲ್ಲಿ ಮುಳುಗಿಸಿದ ಬ್ರೆಡ್, ವೈನ್, ಆಲೂ ಮಖಲ್ಲಾ, ಹಿಲ್ಬೆ, ಝಲಾಟಾ, ಮಹಾಶಾಸ್, ಚಿಕನ್ ರೋಸ್ಟ್, ಪುಲಾವ್, ಕುಬ್ಬಾಗಳನ್ನೊಳಗೊಂಡಿರುತ್ತದೆ.
ಪುರಿ ಜಗನ್ನಾಥನ ಭೂರಿ ಭೋಜನ
ಪುರಿಯ ಜಗನ್ನಾಥ ದೇವಾಲಯದಲ್ಲಿ ದೇವರನ್ನು ನಡೆಸಿಕೊಳ್ಳುವ ರೀತಿ ನೋಡಿದರೆ ಆತ ದೇವರೋ ಅಥವಾ ನಮ್ಮಂತೆ ಮನುಷ್ಯನೋ, ಇಲ್ಲವೇ ಸೆಲೆಬ್ರಿಟಿಯೋ ಎಂಬ ಅನುಮಾನ ಕಾಡುತ್ತದೆ. ಪ್ರತಿದಿನ ಜಗನ್ನಾಥನನ್ನು ಏಳಿಸಿ, ಬ್ರಶ್ ಮಾಡಿಸಿ, ಸ್ನಾನ, ವಿಶ್ರಾಂತಿ- ಜೊತೆಗೆ ದಿನಕ್ಕೆ 6 ಬಾರಿ 56 ವಿವಿಧ ಪದಾರ್ಥಗಳನ್ನೊಳಗೊಂಡ ರುಚಿಯಾದ ಊಟವನ್ನು ನೀಡಲಾಗುತ್ತದೆ. ಬೆಳಗ್ಗೆ ಪೇಡಾ, ಕೋರಾ, ಮೊಸರು, ಹಣ್ಣುಗಳನ್ನು ನೀಡಿದರೆ ಮಧ್ಯಾಹ್ನ ಹಾಗೂ ಸಂಜೆಗೆ ಶುದ್ಧ ತುಪ್ಪ, ಪನೀರ್ ಸೇರಿದಂತೆ ವಿಧ ವಿಧ ಬಗೆಯ ಆಹಾರಗಳನ್ನು ನೈವೇಧ್ಯಕ್ಕೆ ನೀಡಲಾಗುತ್ತದೆ.
ಕೈಗೊಂಪದ ಚಾಂಪಿಯನ್‌ಗಳ ಉಪಾಹಾರ
ಟಿಬೆಟಿಯನ್ ಸನ್ಯಾಸಿಗಳ ಒಂದು ಪ್ರಮುಖ ಆಹಾರ ಸಂಸ್ಕೃತಿ ಎಂದರೆ ಸಾಲ್ಟೀ ಬಟರ್ ಟೀ ಹಾಗೂ ಪುಕ್ ಒಳಗೊಂಡ ಬ್ರೇಕ್‌ಫಾಸ್ಟ್. ಈ ಪುಕ್ ಎಂಬುದನ್ನು ಬೆಣ್ಣೆ, ತುಪ್ಪ, ಸಕ್ಕರೆ ಜೊತೆಗೆ ಹಿಟ್ಟು ಹಾಕಿ ತಯಾರಿಸುತ್ತಾರೆ. ಎಲ್ಲ ಆಹಾರದಂತೆ ಇದಕ್ಕೂ ಧಾರ್ಮಿಕ ನಂಬಿಕೆಗಳಿವೆ. ಈ ಚಾಯ್‌ಯನ್ನು ಮೊದಲಿಗೆ ತಮ್ಮ ಸುತ್ತಮುತ್ತ ಓಡಾಡುವ ಹಸಿದಿರುವ ದೆವ್ವಗಳಿಗೆ ನೀಡಲಾಗುತ್ತದೆ.