ಈಗ ಟ್ರೈ ಮಾಡಬಲ್ಲ ಬಾಯಲ್ಲಿ ನೀರೂರಿಸುವ ಬಾಳೆಹಣ್ಣಿನ ರೆಸಿಪಿ

By Suvarna NewsFirst Published Apr 15, 2020, 6:33 PM IST
Highlights
ಹಳದಿ ಬಟ್ಟೆ ಹಾಕಿಕೊಂಡು ಮೆರೆಯುವ ಸುಂದರಿ ಬಾಳೆಹಣ್ಣು. ಈಕೆ ರುಚಿಯಷ್ಟೇ ಅಲ್ಲ, ಜೊತೆಗೆ ಬಹಳ ಆರೋಗ್ಯಕಾರಿ ಕೂಡಾ. ಫೈಬರ್, ವಿಟಮಿನ್ ಬಿ, ಮೆಗ್ನೀಶಿಯಂ, ಆ್ಯಂಟಿ ಆಕ್ಸಿಡೆಂಟ್‌ಗಳಿಂದ ತುಂಬಿರುವ ಬಾಳೆಹಣ್ಣು ಹಸಿವನ್ನು ತಣಿಸುವ ಜೊತೆಗೆ ಉತ್ತಮ ಜೀರ್ಣಕ್ರಿಯೆಗೆ ಸಹಕಾರಿ. ಬಾಳೆಹಣ್ಣಿನ ಕೆಲ ರೆಸಿಪಿಗಳು ಇಲ್ಲಿವೆ. 
ಬಾಳೆಹಣ್ಣು ಬಹಳ ನ್ಯೂಟ್ರಿಶಿಯಸ್ ಆದರೂ ಕೂಡಾ ಇತರೆ ಹಣ್ಣುಗಳಿಗೆ ಹೋಲಿಸಿದರೆ ಕಡಿಮೆ ಬೆಲೆಗೆ ಹಾಗೂ ಎಲ್ಲೆಡೆಯೂ ಸಿಗುವಂಥದ್ದು. ಹೆಚ್ಚುವ, ಬಿಡಿಸುವ ರಗಳೆಯಿಲ್ಲದ ಬಾಳೆಹಣ್ಣು- ಇಡೀ ಹಣ್ಣನ್ನೇ ಸೇವಿಸಿದರೂ ಅಥವಾ ಅದರ ತರಹೇವಾರಿ ತಿಂಡಿಗಳನ್ನು ತಿಂದರೂ ಕೂಡಾ ಹೊಟ್ಟೆ ತುಂಬಿಸುವ ತಾಕತ್ತು ಹೊಂದಿದೆ. ಈ ಲಾಕ್‌ಡೌನ್ ಸಮಯದಲ್ಲಿ ಹೆಚ್ಚು ಆಹಾರ ಪದಾರ್ಥಗಳು ಸುಲಭವಾಗಿ ಸಿಗುತ್ತಿಲ್ಲವಾದರೂ ಬಾಳೆಹಣ್ಣಿಗೆ ಈ ಕೊರತೆ ಇನ್ನೂ ಅಂಟಿಲ್ಲ. ಹಾಗಾಗಿ, ಮನೆಯೊಳಗೇ ಕುಳಿತು ತರಹೇವಾರಿ ತಿಂಡಿಗಳ ಕನಸು ಕಾಣುವವರಿಗೆ ಆಪದ್ಭಾಂದವನಂತೆ ಒದಗುವ ಬಾಳೆಹಣ್ಣಿನಿಂದ ತಯಾರಿಸಬಹುದಾದ ವಿವಿಧ ತಿಂಡಿತಿನಿಸುಗಳು ಸಮಾಧಾನ ನೀಡಬಹುದು. 

ಬಾಳೆಹಣ್ಣಿನ ಸ್ಮೂತಿ
ಬಹಳ ರುಚಿಯಾದ ವೇಗನ್ ಸ್ಮೂತಿ ಇದು. ಹಲವಾರು ರೀತಿಯಲ್ಲಿ ಇದನ್ನು ತಯಾರಿಸಬಹುದು. ಅವುಗಳಲ್ಲಿ ಬಹಳ ಸುಲಭ ವಿಧಾನ ಇಲ್ಲಿದೆ. ಮಕ್ಕಳಿಗೆ ಹೊಟ್ಟೆ ತುಂಬಿಸುವಂಥ, ಗಮನ ಸೆಳೆವಂಥ ರೆಸಿಪಿ ಇದು. ಹಾಗಾಗಿ, ಇದನ್ನು ಬ್ರೇಕ್‌ಫಾಸ್ಟ್ ಅಥವಾ ಬ್ರಂಚ್ ಸಮಯಕ್ಕೆ ಮಾಡಬಹುದು. 

ಬೇಕಾಗುವ ಪದಾರ್ಥಗಳು
ಚೆನ್ನಾಗಿ ಬಲಿತ ದೊಡ್ಡ ಬಾಳೆಹಣ್ಣು 3
ಕಾಯಿಹಾಲು ಅರ್ಧ ಕಪ್
ದಾಲ್ಚೀನಿ ಪೌಡರ್ ಅರ್ಧ ಚಮಚ
ವೆನಿಲಾ ಪೌಡರ್ ಕಾಲು ಚಮಚ
ಬಾದಾಮಿ, ಗೋಡಂಬಿ ಪುಡಿ ಅರ್ಧ ಚಮಚ

ದಾಲ್ಗೊನಾ ಕಾಫಿ ಆಯ್ತು, ಈಗ ದಾಲ್ಗೊನಾ ರೈಸ್‌!

ಮಾಡುವ ವಿಧಾನ
ಕಾಯಿಯನ್ನು ತುರಿದುಕೊಂಡು ಮಿಕ್ಸಿಯ ಸಹಾಯದಿಂದ ರಸತೆಗೆದಿಟ್ಟುಕೊಳ್ಳಿ. ಇನ್ನೊಂದೆಡೆ ಬಾಳೆಹಣ್ಣುಗಳ ಸಿಪ್ಪೆಗಳನ್ನು ಬಿಡಿಸಿಕೊಂಡು ಬ್ಲೆಂಡರ್‌ನಲ್ಲಿ ನುಣ್ಣಗೆ ಮಾಡಿಕೊಳ್ಳಿ. ಇದಕ್ಕೆ ಅರ್ಧ ಕಪ್ ಕಾಯಿಹಾಲು ಸೇರಿಸಿ. ಜೊತೆಗೆ ವೆನಿಲಾ ಪುಡಿ ಹಾಗೂ ದಾಲ್ಚೀನಿ ಪುಡಿ ಸೇರಿಸಿ ಚೆನ್ನಾಗಿ ಬೆರೆಸಿ. ಮತ್ತೊಮ್ಮೆ ಬ್ಲೆಂಡ್ ಮಾಡಿ. ಇದನ್ನು ಸರ್ವಿಂಗ್ ಗ್ಲಾಸ್‌ಗೆ ಹಾಕಿದ ಬಳಿಕ ಮೇಲಿನಿಂದ ಬಾದಾಮಿ, ಗೋಡಂಬಿ ಪುಡಿ ಉದುರಿಸಿ. ಇದು ಸ್ಮೂತಿಗೆ ಕ್ರಂಚೀ ವಿನ್ಯಾಸ ಕೊಡುತ್ತದೆ. ಇಲ್ಲಿ ಕಾಯಿಹಾಲಿನ ಬದಲಿಗೆ ಬಾದಾಮಿ ಹಾಲನ್ನು ಕೂಡಾ ಬಳಸಬಹುದು. ಜೊತೆಗೆ, ನಿಮ್ಮ ರುಚಿಗೆ ಅಗತ್ಯವಿದ್ದರೆ ಸಕ್ಕರೆ ಸೇರಿಸಿಕೊಳ್ಳಬಹುದು. 
***
ಬಾಳೆಹಣ್ಣಿನ ಅಪ್ಪಂ/ಪನಿಯಾರಂ
ಫಡ್ಡು ಮಾಡುವ ಬಾಣಲೆ ಮನೆಯಲ್ಲಿದ್ದರೆ ಪನಿಯಾರಂ ಮಾಡಿ ನೋಡಬಹುದು. ಸಾಫ್ಟ್ ಜೊತೆಗೆ ಕ್ರಿಸ್ಪಿಯಾಗಿಯೂ ಇರುವ ಅಪ್ಪಂ ಬಿಸಿಬಿಸಿಯಿದ್ದಾಗ ರುಚಿ ಹೆಚ್ಚು. ಇವುಗಳನ್ನು 8ರಿಂದ 10 ದಿನಗಳ ಕಾಲ ಫ್ರಿಡ್ಜ್‌ನಲ್ಲಿಟ್ಟುಕೊಂಡು ತಿನ್ನಬಹುದು. ಆದರೆ ಆರಂಭದ ಕ್ರಿಸ್ಪಿನೆಸ್ ಇರುವುದಿಲ್ಲವಷ್ಟೇ. ಬೆಳಗಿನ ತಿಂಡಿಗೆ ಅಥವಾ ಸಂಜೆಯ ಹೊತ್ತಿಗೆ ಸ್ವಲ್ಪ ಹೊಟ್ಟೆ ತುಂಬುವಂಥದ್ದು ಬೇಕೆನ್ನುವವರಿಗೆ ಇದು ಸರಿಯಾದ ಆಯ್ಕೆ. 

ಬೇಕಾಗುವ ಪದಾರ್ಥಗಳು
ದೊಡ್ಡ ಗಾತ್ರದ ಬಾಳೆಹಣ್ಣು 3
ಸ್ವಲ್ಪ ಒರಟಾದ ಅಕ್ಕಿಹಿಟ್ಟು
ತುರಿದ ಬೆಲ್ಲ ಅರ್ಧ ಕಪ್
ನೀರು 1.5 ಕಪ್
ತುರಿದ ಕಾಯಿ ಕಾಲು ಕಪ್
ತುಪ್ಪ 2 ಚಮಚ
ಅಡುಗೆ ಸೋಡಾ ಅರ್ಧ ಚಮಚ
ಏಲಕ್ಕಿ ಪುಡಿ ಅರ್ಧ ಚಮಚ
ಶುಂಠಿ ಪುಡಿ ಅರ್ಧ ಚಮಚ
ಜೀರಿಗೆ ಪುಡಿ ಅರ್ಧ ಚಮಚ
ಕರಿಎಳ್ಳು 2 ಚಮಚ

ಮಾಡುವ ವಿಧಾನ
ಬಾಣಲೆಯಲ್ಲಿ ನೀರನ್ನು ಕುದಿಯಲಿಟ್ಟು ಅದರಲ್ಲಿ ಬೆಲ್ಲ ಕರಗಲು ಸಣ್ಣ ಉರಿಯಲ್ಲಿ ಇಡಿ. ಮಧ್ಯೆ ಮಧ್ಯೆ ಸೌಟಾಡಿಸುತ್ತಿರಿ. ಬೆಲ್ಲ ಚೆನ್ನಾಗಿ ಕರಗಿದ ಬಳಿಕ ಇದನ್ನು ಸೋಸಿ ಸಿರಪ್ ತೆಗೆದಿಟ್ಟುಕೊಳ್ಳಿ. 
ಈಗ ಬಾಣಲೆಯಲ್ಲಿ ಎರಡು ಚಮಚ ತುಪ್ಪ ಹಾಕಿ ಬಿಸಿ ಮಾಡಿ. ಇದಕ್ಕೆ ತುರಿದ ಕಾಯಿಯನ್ನು ಸೇರಿಸಿ. ಇದು ಸ್ವಲ್ಪ ಚಿನ್ನದ ಬಣ್ಣಕ್ಕೆ ತಿರುಗಿದ ಬಳಿಕ ಒಲೆಯಾರಿಸಿ. 
ಮತ್ತೊಂದೆಡೆ ಬಾಳೆಹಣ್ಣುಗಳನ್ನು ಬಿಡಿಸಿಕೊಂಡು ಯಾವುದೇ ಮುದ್ದೆ ಸಿಗದಂತೆ ಚೆನ್ನಾಗಿ ಮ್ಯಾಶ್ ಮಾಡಿ. ಬ್ಲೆಂಡರ್‌ಗೆ ಹಾಕಿ ಪ್ಯೂರಿ ಮಾಡಿಟ್ಟುಕೊಂಡರೂ ಆದೀತು. ಇದಕ್ಕೆ ಏಲಕ್ಕಿ ಪುಡಿ, ಶುಂಠಿ ಹಾಗೂ ಜೀರಿಗೆ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. (ಶುಂಠಿ ಹಾಗೂ ಜೀರಿಗೆ ಪುಡಿ ಹಾಕದಿದ್ದರೂ ಆಗುತ್ತದೆ)
ಈಗ ಬೆಲ್ಲದ ಸಿರಪ್‌ಗೆ ಅಕ್ಕಿ ಹಿಟ್ಟನ್ನು ಸೇರಿಸಿ ಕಲೆಸಿ. ಅಕ್ಕಿ ಹಿಟ್ಟು ತರಿತರಿಯಾಗಿದ್ದಷ್ಟೂ ರುಚಿ ಹೆಚ್ಚು. ನುಣ್ಣಗಿದ್ದರೆ ಕೂಡಾ ಬಳಸಬಹುದು. ಇದಕ್ಕೆ ಎಳ್ಳನ್ನು ಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡಿ ದೋಸೆ ಹಿಟ್ಟಿನ ಹದಕ್ಕೆ ತಂದುಕೊಳ್ಳಿ. ಯಾವುದೇ ಗಂಟುಗಳಿರದಂತೆ ಎಚ್ಚರ ವಹಿಸಿ. ಇದಕ್ಕೆ ಬಾಳೆಹಣ್ಣಿನ ಪ್ಯೂರಿ ಸೇರಿಸಿ. ಕಾಯಿಯನ್ನೂ ಹಾಕಿ. ಇದಕ್ಕೆ ಬೇಕಿಂಗ್ ಸೋಡಾ ಹಾಕುವುದರಿಂದ ಹಿಟ್ಟಿನ ಟೆಕ್ಸ್‌ಚರ್ ರಂಧ್ರದಿಂದ ಕೂಡಿದಂತೆಯೂ ಸಾಫ್ಟ್ ಆಗಿಯೂ ಇರುವುದು. ಚೆನ್ನಾಗಿ ಮಿಕ್ಸ್ ಮಾಡಿ. 
ಫಡ್ಡು ಬಾಣಲೆ ಬಿಸಿ ಮಾಡಿ ತುಪ್ಪ ಹಾಕಿ. ಪ್ರತಿ ಮೌಲ್ಡ್‌ಗೂ ಮುಕ್ಕಾಲು ಭಾಗ ಹಿಟ್ಟು ಹಾಕಿ. ಮೀಡಿಯಂ ಉರಿಯಲ್ಲಿ ಬೇಯಲು ಬಿಡಿ. ಒಂದು ಬದಿ ಗೋಲ್ಡನ್ ಬಣ್ಣಕ್ಕೆ ತಿರುಗಿದ ಅಪ್ಪಂನ್ನು ತಿರುವಿ ಹಾಕಿ ಬೇಯಿಸಿ.  ಎರಡೂ ಬದಿ ಬೆಂದ ಬಳಿಕ ಅಪ್ಪಂ ತೆಗೆದಿಡಿ. ಹೆಚ್ಚು ದಿನಗಳ ಕಾಲ ಇಡಬೇಕೆಂದರೆ ಏರ್ ಟೈಟ್ ಕಂಟೇನರ್‌ಗೆ ಹಾಕಿ ಫ್ರಿಡ್ಜ್‌ನಲ್ಲಿಡಿ. 
***

ಬನ್ಸ್
ಸ್ವಲ್ಪ ಸಿಹಿ ಹೊಂದಿದ, ನೋಡಲು ಪೂರಿಯಂತಿರುವ ಬನ್ಸ್‌ ಬೆಳಗಿನ ಉಪಾಹಾರಕ್ಕೆ ಆಗಿ ಬರುತ್ತದೆ. ಮಕ್ಕಳು ಕೂಡಾ ಇಷ್ಟಪಡುವ ಈ ತಿಂಡಿಯನ್ನು 15 ದಿನಕ್ಕೊಮ್ಮೆ ಮಾಡಬಹುದು. ಇವನ್ನು ಹಾಗೆಯೂ ಸೇವಿಸಬಹುದು. ಇಲ್ಲವೇ ಕಾಯಿಚಟ್ನಿಯೊಂದಿಗೂ ಸೇರುತ್ತದೆ. 

ಬೇಕಾಗುವ ಸಾಮಗ್ರಿಗಳು
ಗಳಿಯಾದ ಬಾಳೆಹಣ್ಣು 3ರಿಂದ 5
ಗೋಧಿಹಿಟ್ಟು 1 ಬಟ್ಟಲು
ಮೈದಾ ಕಾಲು ಬಟ್ಟಲು
ಸಕ್ಕರೆ ಕಾಲು ಕಪ್
ಮೊಸರು 4 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಅಡುಗೆ ಸೋಡ 1 ಚಿಟಿಕೆ
ಜೀರಿಗೆ ಪುಡಿ 1 ಚಮಚ
ತುಪ್ಪ 2 ಚಮಚ
ಕರಿಯಲು ಎಣ್ಣೆ

ಗೋವಾದಲ್ಲಿದೆ ಆಕಾಶದಲ್ಲಿ ಊಟ ಮಾಡೋ ಅವಕಾಶ

ಮಾಡುವ ವಿಧಾನ
ಬಾಳೆಹಣ್ಣನ್ನು ಮಿಕ್ಸರ್‌ನಲ್ಲಿ ಬ್ಲೆಂಡ್ ಮಾಡಿಕೊಂಡು ಪ್ಯೂರಿಗೆ ಸಕ್ಕರೆ ಸೇರಿಸಿ ಚೆನ್ನಾಗಿ ಮ್ಯಾಶ್ ಮಾಡಿ. ಇದಕ್ಕೆ ಗೋಧಿ ಹಿಟ್ಟು, ಮೈದಾ ಹಿಟ್ಟು, ಮೊಸರು, ಉಪ್ಪು, ಬೇಕಿಂಗ್ ಸೋಡಾ, ಜೀರಿಗೆ ಪುಡಿ ಹಾಗೂ 1 ಚಮಚ ತುಪ್ಪ ಸೇರಿಸಿ ಚೆನ್ನಾಗಿ ನಾದಿ. ಹಿಟ್ಟು ಸ್ವಲ್ಪ ಅಂಟಂಟಾಗಿರುವುದರಿಂದ ಕೈಗೆ ಎಣ್ಣೆ ಅಥವಾ ತುಪ್ಪ ಸವರಿಕೊಳ್ಳಿ. ಚೆನ್ನಾಗಿ ನಾದಿದ ಹಿಟ್ಟನ್ನು 3ರಿಂದ 4 ಗಂಟೆಗಳ ಕಾಲ ಹಾಗೆಯೇ ಇಡಿ. ಬಳಿಕ ಹಿಟ್ಟನ್ನು ಸಣ್ಣ ಉಂಡೆಯಾಗಿ ತೆಗೆದುಕೊಂಡು, ಗೋಧಿ ಹುಡಿ ಹಿಟ್ಟನ್ನು ಉದುರಿಸುತ್ತಾ ಪೂರಿಯಂತೆ ಲಟ್ಟಿಸಿಕೊಳ್ಳಿ. ಪೂರಿಯಷ್ಟು ತೆಳ್ಳಗಾಗಬೇಕಿಲ್ಲ. 
ಬಾಣಲೆಯಲ್ಲಿ ಎಣ್ಣೆ ಕಾಯಲು ಇಟ್ಟು ಅದಕ್ಕೆ ಬನ್ಸ್ ಹಾಕಿ. ಬನ್ಸ್ ಉಬ್ಬುವಂತೆ ಸೌಟಿನಿಂದ ಎಣ್ಣೆಯನ್ನು ಎಲ್ಲ ಭಾಗಕ್ಕೆ ತಾಗಿಸುತ್ತಿರಿ. ಒಂದು ಬದಿ ಕೆಂಪಗಾದ ಬಳಿಕ ಮಗುಚಿ ಹಾಕಿ. ಎರಡೂ ಬದಿ ಬೆಂದ ಬನ್ಸ್ ತೆಗೆದು ಟಿಶ್ಯೂ ಪೇಪರ್ ಮೇಲೆ ಹಾಕಿ ಹೆಚ್ಚಿನ ಎಣ್ಣೆ ಹೀರಲು ಬಿಡಿ. ಬಳಿಕ ಇದನ್ನು ತಟ್ಟೆಗೆ ಹಾಕಿ ಸರ್ವ್ ಮಾಡಿ. 

"
click me!