ಕೋವಿಡ್ ಕೇಸ್‌ಗಳು ಹೆಚ್ಚಾಗುತ್ತಿವೆ. ಮನೆಯಲ್ಲೇ ಬೇಕಾದ ತಿನಿಸು ತಯಾರಿಸಿ ತಿನ್ನೋರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹೆಚ್ಚು ಟೈಮ್ ಬೇಡದ ಕಡಿಮೆ ಸಾಮಗ್ರಿಯಲ್ಲಿ ಮಾಡಬಹುದಾದ ಅಡುಗೆ ಅಮೃತ ಫಲ. ಅದನ್ನು ಮಾಡುವ ವಿಧಾನದ ಡೀಟೈಲ್ಸ್ ಇಲ್ಲಿದೆ.
ಅಮೃತ ಫಲ
ಸುಲಭದಲ್ಲಿ ತಯಾರುವ ಸ್ವೀಟ್. ಟೈಮ್ ಸ್ವಲ್ಪ ಹೆಚ್ಚು ಬೇಕು. ಹಾಗಂತ ನಿಮ್ಮ ಶ್ರಮಕ್ಕೆ ಖಂಡಿತಾ ನಿರಾಸೆಯಾಗಲ್ಲ. ಬಾಯಿಗಿಟ್ಟ ಕೂಡಲೇ ಕರಗುವ ದೇವಲೋಕದ ಅಮೃತದ ರುಚಿ ಹೇಗಿರಬಹುದು ಅನ್ನೋ ಕಲ್ಪನೆ ತರಿಸುವ ಸ್ವೀಟ್.
ಇದಕ್ಕೆ ಬೇಕಾಗುವ ಸಾಮಗ್ರಿಗಳು ಮೂರೇ ಮೂರು. ಆಮೇಲೆ ಏಲಕ್ಕಿ ಪುಡಿ ಬೇಕಿದ್ದರೆ ಸೇರಿಸಬಹುದು.
ಬೇಕಾಗುವ ಅವಧಿ : ಮುಕ್ಕಾಲರಿಂದ ಒಂದು ಗಂಟೆ.
ಏನೇನು ಸಾಮಗ್ರಿಗಳು ಬೇಕು?: ಹಾಲು 2 ಕಪ್, ತೆಂಗಿನ ಕಾಯಿ ಹಾಲು 2 ಕಪ್, ಸಕ್ಕರೆ ಒಂದೂವರೆ ಕಪ್, ಸ್ವಲ್ಪ ಏಲಕ್ಕಿ ಪುಡಿ
ಹುಳಿ ಹುಳಿ ಖಾರ ಖಾರ- ನಾಲಿಗೆ ಮೇಲೆ ಸ್ವರ್ಗ ತಂದಿಡುವ ಗೋಲ್ಗಪ್ಪಾ
ಮಾಡುವ ವಿಧಾನ ಹೇಗೆ?
- ಮೊದಲು ಒಂದು ದೊಡ್ಡ ಗಾತ್ರದ ತೆಂಗಿನ ಕಾಯನ್ನು ತುರಿಯಿರಿ.
- ಇದನ್ನು ಒಂದು ಲೋಟ ನೀರು ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ.
- ಈಗ ತೆಳ್ಳನೆ ಬಟ್ಟೆಗೆ ಈ ರುಬ್ಬಿದ ತೆಂಗಿನ ಕಾಯಿಯ ಹಾಲು ಹಾಕಿ ಚೆನ್ನಾಗಿ ಹಿಂಡಿ. ಸುಮಾರು ೨ ದೊಡ್ಡ ಕಪ್ ಹಾಲು ಬರುತ್ತೆ,
- ಸ್ಟೌಮೇಲೆ ದಪ್ಪ ತಳದ ಬಾಣಲೆ ಇಡಿ. ಇದಕ್ಕೆ ಒಂದೂವರೆ ಕಪ್ ಸಕ್ಕರೆ ಹಾಕಿ.
- ಇದಕ್ಕೆ ತೆಂಗಿನ ಕಾಯಿ ಹಾಲು ಮತ್ತು ಹಸುವಿನ ಹಾಲನ್ನು ಹಾಕಿ. ದೊಡ್ಡ ಎರಡು ಬೌಲ್‌ನಲ್ಲಾದರೆ ಉತ್ತಮ. ಎರಡು ಕಪ್ ಹಸುವಿನ ಹಾಲಿದ್ದರೆ ಎರಡು ಕಪ್ ತೆಂಗಿನ ಕಾಯಿ ಹಾಲು ಇರಲಿ.
- ಈಗ ಸ್ಟೌ ಉರಿ ಹೆಚ್ಚಿಸಿ. ದೊಡ್ಡ ಸ್ಪೂನ್‌ನಲ್ಲಿ ತಿರುತ್ತಾ ಇರಿ.
- ಹತ್ತು ನಿಮಿಷಕ್ಕೆಲ್ಲ ಸಕ್ಕರೆ ಕರಗುತ್ತೆ. ತಿರುವೂದನ್ನು ಮುಂದುವರಿಸಿ.
- ಇಪ್ಪತ್ತು ನಿಮಿಷಕ್ಕೆ ಈ ಪಾಕ ಮಂದವಾಗುತ್ತದೆ. ಹೈ ಫ್ಲೇಮ್‌ನಲ್ಲಿರುವ ಉರಿಯನ್ನು ಈಗ ಮೀಡಿಯಂ ಫ್ಲೇಮ್ ಗೆ ಇಳಿಸಿ.
- ನಲವತ್ತು ನಿಮಿಷಕ್ಕೆ ದಪ್ಪಗಾಗುತ್ತಾ ಹೋಗುತ್ತೆ. ಪಾಕದ ಬಣ್ಣ ಬಿಳಿಯಿಂದ ನಸು ಕಂದುಬಣ್ಣಕ್ಕೆ ತಿರುಗುವಾಗ ಏಲಕ್ಕಿ ಪುಡಿ ಹಾಕಿ.
- ಕೊನೆಯಲ್ಲಿ ಈ ಪಾಕ ಕಂದು ಮೈಸೂರು ಪಾಕ್ ಬಣ್ಣಕ್ಕೆ ತಿರುಗುತ್ತೆ. ತಳ ಬಿಡುತ್ತೆ.
- ಇಷ್ಟರಲ್ಲಾಗಲೇ ಒಂದು ಪ್ಲೇಟ್ ಅಥವಾ ಬಟ್ಟಲಿಗೆ ತುಪ್ಪ ಸವರಿ ಇಟ್ಟಿದ್ದರೆ ಬೆಸ್ಟ್.
- ಪಾಕ ಮೈಸೂರು ಪಾಕ್ ಬಣ್ಣಕ್ಕೆ ತಿರುಗಿದಾಗ ತುಪ್ಪ ಸವರಿದ ಪಾತ್ರೆಗೆ ಇದನ್ನು ಹಾಕಿ.
- ಪಾಕ ಬೇಗ ಗಟ್ಟಿಯಾಗುತ್ತೆ. ಬಟ್ಟಲಿಗೆ ಸುರುವಿದ ನೀಟ್ ಆಗಿ ಸೆಟ್ ಮಾಡಿ. ನಿಮಗೆ ಬೇಕಾದ ಶೇಪ್‌ಗೆ ಕತ್ತರಿಸಿಕೊಳ್ಳಿ.
- ಬಿಸಿ ಆರಲು ಬಿಡಿ. ತಣ್ಣಗಾದ ಮೇಲೆ ಬಾಯಿಗಿಟ್ಟರೆ ಥೇಟ್ ಅಮೃತ ಸದೃಶ ರುಚಿಯ ಸ್ವೀಟ್ ನ ಸ್ವಾದಕ್ಕೆ ಆಹ್ ಅಂದೇ ಅನ್ನುತ್ತೀರಿ.
ಲಾಕ್‍ಡೌನ್ ಒತ್ತಡ ತಗ್ಗಿಸಿದ ಕುಕ್ಕಿಂಗ್; ಸೋಷಿಯಲ್ ಮೀಡಿಯಾದಲ್ಲಿ ರೆಸಿಪಿಯದ್ದೇ ಕಾರುಬಾರು
ಸೂಚನೆ :
- ಬಹಳ ಬೇಗ ಇದು ತಳ ಹಿಡಿಯೋ ಕಾರಣ ತಿರುವುತ್ತಲೇ ಇರಬೇಕು.
- ಕೊನೆಯಲ್ಲಿ ಈ ಪಾಕ ಕುಗ್ಗುವ ಕಾರಣ ಹಾಲು, ಕಾಯಿ ಹಾಲು ಹೆಚ್ಚೇ ತೆಗೆದುಕೊಳ್ಳಿ.
- ಸ್ವೀಟ್ ನಿಮಗೆ ಬಹಳ ಇಷ್ಟ ಇದ್ದರೆ ಸಕ್ಕರೆ ಇನ್ನೊಂದು ಸ್ವಲ್ಪ ಹೆಚ್ಚು ಹಾಕಬಹುದು. ಕಡಿಮೆ ಬೇಕಿದ್ದರೆ ಮೇಲೆ ಹೇಳಿದ ಪ್ರಮಾಣಕ್ಕಿಂತಲೂ ಕೊಂಚ ಕಡಿಮೆ ಸಕ್ಕರೆ ಹಾಕಿ.
- ಈ ಸ್ವೀಟ್‌ಗೆ ನೀರು ತಾಗಿಸದೇ ಇದ್ದರೆ ಕೆಲವು ದಿನಗಳವರೆಗೂ ಹಾಳಾಗಲ್ಲ. ಗಾಳಿಯಾಡದ ಡಬ್ಬಗಳಲ್ಲಿ ಹಾಕಿಟ್ಟರೆ ಬೇಕಾದಾಗ ತಿನ್ನಬಹುದು. ಹಾಗಂತ ಫ್ರಿಡ್ಜ್‌ನಲ್ಲಿಡಲು ಹೋಗಬೇಡಿ. ನಿಜ ಸ್ವಾದ ಹಾಳಾಗುತ್ತೆ.
'ಆ ದಿನಗಳ' ಹೊಟ್ಟೆನೋವಿಗೆ ಪಪ್ಪಾಯ ಬೀಜೌಷಧ