ಲಾಕ್‍ಡೌನ್‍ನಿಂದ ಮನೆಯೊಳಗೆ ಕುಳಿತವರ ಎದೆಯೊಳಗೆ ಭೀತಿಯೊಂದು ಅವಲಕ್ಕಿ ಕುಟ್ಟುತ್ತಿದ್ದದ್ದು ಸುಳ್ಳಲ್ಲ. ಈ ಹೇಳಲಾಗದ ಒತ್ತಡ, ಹತಾಶೆಯಿಂದ ಹೊರಬರಲು ನೆರವಿಗೆ ಬಂದದ್ದೇ ಅಡುಗೆ ಎಂಬ ಚಮತ್ಕಾರಿ ಕಲೆ.
ಅಡುಗೆಮನೆ ಕಡೆ ಮುಖವೇ ಹಾಕದವರು ಕೂಡ ಸೌಟು ಹಿಡಿದು ಹೊಸ ರೆಸಿಪಿಗಳನ್ನು ಟ್ರೈ ಮಾಡುವಂತೆ ಮಾಡಿದ ಕ್ರೆಡಿಟ್ ಲಾಕ್‍ಡೌನ್‍ಗೆ ಸಲ್ಲುತ್ತೆ. ಸದಾ ಆಫೀಸ್, ಮೀಟಿಂಗ್, ಪಾರ್ಟಿ, ಔಟಿಂಗ್ ಎಂದು ಸುತ್ತಾಡಿಕೊಂಡು ಕಂಡ ಕಂಡ ಹೋಟೆಲ್, ರೆಸ್ಟೋರೆಂಟ್‍ಗಳ ಸ್ಪೆಷಲ್ ರೆಸಿಪಿಗಳನ್ನು ಸವಿಯುತ್ತಿದ್ದ ನಗರವಾಸಿಗಳಿಗೆ ಲಾಕ್‍ಡೌನ್ ಅಡುಗೆ ಪಾಠ ಕಲಿಸಿದೆ. ಹೊರಗೆ ಕಾಲಿಡುವಂತಿಲ್ಲ, ಮನೆಯೊಳಗೆ ಕುಳಿತು ಕುಳಿತು ಬೇಸತ್ತ ಮನಸ್ಸಿಗೆ ಹಿತ ನೀಡಿದ್ದು ಅಡುಗೆಮನೆ. ಕೈಯಲ್ಲಿ ಮೊಬೈಲ್ ಎಂಬ ಬ್ರಹ್ಮಾಂಡ ಇರಲು ತೆಂಗು, ಇಂಗು ನೀಡಿದ್ರೆ ಯಾರೂ ಬೇಕಾದ್ರೂ ಅಡುಗೆ ಮಾಡಬಹುದು ಎಂಬ ಕಾಲವಿದು. ಬಾಯಿ ಬಯಸಿದ ಖಾದ್ಯದ ರೆಸಿಪಿಗೆ ಗೂಗಲ್ ಸರ್ಚ್ ಕೊಟ್ಟರೆ ಸಾಕು, ಕ್ಷಣಾರ್ಥದಲ್ಲಿ ಏನೆಲ್ಲ ಸಾಮಗ್ರಿ ಬೇಕು, ಸಿದ್ಧಪಡಿಸೋದು ಹೇಗೆ ಎಂಬೆಲ್ಲ ಮಾಹಿತಿ ಬೆರಳ ತುದಿಯಲ್ಲಿರುತ್ತೆ. ಆಮೇಲೆ ನೀವೇ ಮಾಸ್ಟರ್ ಶೆಫ್. ಸ್ವಲ್ಪ ತಾಳ್ಮೆ, ಆಸಕ್ತಿ ಜೊತೆಗೊಂದಿಷ್ಟು ಕಾಮನ್‍ಸೆನ್ಸ್ ಇದ್ರೆ ಸಾಕು, ರುಚಿಯಾದ ಖಾದ್ಯ ಸಿದ್ಧ. ಲಾಕ್‍ಡೌನ್‍ನಲ್ಲಿ ಸೌಟು ಹಿಡಿದವರಲ್ಲಿ ‘ಅಯ್ಯೋ ಈ ರುಚಿಗೇನಾ ಹೋಟೆಲ್‍ನಲ್ಲಿ ಅಷ್ಟು ದುಡ್ಡು ಕೊಡುತ್ತಿದ್ದದ್ದು’ ಎಂದು ಹಣೆ ಚಚ್ಚಿಕೊಂಡವರು ಅದೆಷ್ಟೋ!
'ಆ ದಿನಗಳ' ಹೊಟ್ಟೆನೋವಿಗೆ ಪಪ್ಪಾಯ ಬೀಜೌಷಧ
ಮಾಸ್ಟರ್ ಶೆಫ್ ಕಾಂಪಿಟೇಷನ್
ಹೊಸ ರುಚಿ ಟ್ರೈ ಮಾಡಿದ ಬಳಿಕ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿಲ್ಲ ಅಂದ್ರೆ ಹೇಗೆ ಅಲ್ವಾ? ಸೋಷಿಯಲ್ ಮೀಡಿಯಾವನ್ನು ಸೆಲ್ಫ್ ಮಾರ್ಕೆಟಿಂಗ್‍ಗೆ ವೇದಿಕೆಯಾಗಿ ಬಳಸಿಕೊಂಡವರಂತೂ ಲಾಕ್‍ಡೌನ್ ಅವಧಿಯಲ್ಲಿ ತಾವು ಮಾಡಿದ ನಳಪಾಕವನ್ನು ಫೇಸ್‍ಬುಕ್‍ನಲ್ಲಿ, ವಾಟ್ಸ್ಆಪ್‍ನಲ್ಲಿ ಹಂಚಿಕೊಂಡು ಲೈಕ್, ಕಮೆಂಟ್‍ಗಳನ್ನು ಲೆಕ್ಕ ಹಾಕಿ ಖುಷಿಪಟ್ಟಿದ್ದಂತೂ ಸುಳ್ಳಲ್ಲ. ಒಂದರ್ಥದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಮಾಸ್ಟರ್ ಶೆಫ್ ಕಾಂಪೀಟೇಷನೇ ನಡೆಯಿತು. ಹೆಸರೇ ಕೇಳದ, ಜಗತ್ತಿನ ನಾನಾ ಮೂಲೆಗಳ ಖಾದ್ಯಗಳ ಪರಿಚಯ ಈ ಅವಧಿಯಲ್ಲಾಗಿದೆ. ದಕ್ಷಿಣ ಕೊರಿಯಾದಲ್ಲಿ ಯಾರೋ ಪುಣ್ಯತ್ಮರು ಪುರುಸೊತ್ತಿನಿಂದ ಸಿದ್ಧಪಡಿಸಿದ ಹಾಲಿನ ಮೇಲೆ ತೇಲಾಡುವ ಕಾಫಿ ಕ್ರೀಮ್ –ಡಾಲ್ಗೊನಾ ಕಾಫಿ ಎಂಬ ಹೆಸರಿನಿಂದ ಜಗತ್ತಿನಾದ್ಯಂತ ಸಿಕ್ಕಾಪಟ್ಟೆ ವೈರಲ್ ಆಯ್ತು. ಇಂಥ ಅದೆಷ್ಟೋ ಹೊಸ ಖಾದ್ಯಗಳ ಆವಿಷ್ಕಾರಕ್ಕೆ ಜಗತ್ತಿನ ಅದೆಷ್ಟು ಕಿಚನ್‍ಗಳು ಸಾಕ್ಷಿಯಾಗಿದ್ದವೋ ಗೊತ್ತಿಲ್ಲ! ಅದೇನೇ ಇರಲಿ, ಕೊರೋನಾ ವೈರಸ್‍ನಿಂದ ಮನಸ್ಸಿನಲ್ಲಿ ಮನೆ ಮಾಡಿದ ಭೀತಿ, ಆತಂಕಗಳನ್ನು ದೂರ ಮಾಡಲು ಅಡುಗೆ ಹಲವು ಮಂದಿಗೆ ನೆರವು ನೀಡಿರೋದು ಮಾತ್ರ ಸುಳ್ಳಲ್ಲ.
ಜೇನು ತುಪ್ಪದ ಸವಿ ಗೊತ್ತು, ಜೇನು ನೊಣವೂ ಇಷ್ಟು ಉಪಕಾರಿಯೇ?
ಒತ್ತಡ ತಗ್ಗಿಸುತ್ತೆ ಕುಕ್ಕಿಂಗ್
ಅಡುಗೆ ಮಾಡಿದ್ರೆ ಮನಸ್ಸು ರಿಲ್ಯಾಕ್ಸ್ ಆಗುತ್ತೆ. ಆ ಮೂಲಕ ಒತ್ತಡ ತಗ್ಗುತ್ತೆ ಅನ್ನೋದನ್ನು ಇತ್ತೀಚೆಗೆ ನಡೆದ ಅಧ್ಯಯನಗಳು ಬಹಿರಂಗಪಡಿಸಿವೆ. ಲಾಕ್‍ಡೌನ್ ಅವಧಿಯಲ್ಲಿ ಗೂಗಲ್‍ನಲ್ಲಿ ಸರ್ಚ್‍ಗೊಳಗಾದ ರೆಸಿಪಿಗಳ ಸಂಖ್ಯೆ ಹೆಚ್ಚಳವಾಗಿರೋದು ಇದಕ್ಕೆ ಪುಷ್ಟಿ ನೀಡುತ್ತೆ ಕೂಡ. ಕೊರೋನಾ ವೈರಸ್, ಲಾಕ್‍ಡೌನ್‍ನಿಂದ ಎದುರಾಗಿರುವ ಒತ್ತಡ, ಭೀತಿಗಳಿಂದ ದೂರವಾಗಲು ಜನರಿಗೆ ನೆರವು ನೀಡಿದ್ದು ಅಡುಗೆ. ರುಚಿಯಾದ ಆಹಾರ ಹೊಟ್ಟೆಯ ಹಸಿವನ್ನಷ್ಟೆ ತಣಿಸೋದಿಲ್ಲ, ಮನಸ್ಸನ್ನು ಕೂಡ ಮುದಗೊಳಿಸುತ್ತೆ. ಆಹಾರಗಳು ಕೂಡ ನಮ್ಮ ಯೋಚನೆಗಳ ಮೇಲೆ ಪ್ರಭಾವ ಬೀರುತ್ತೆ ಎನ್ನುತ್ತದೆ ಆಯುರ್ವೇದ. ಸಂಕಷ್ಟದ ಸಮಯದಲ್ಲಿ ಸೌಟು ಹಿಡಿದು ಏನಾದರೊಂದು ರುಚಿಯನ್ನು ಟ್ರೈ ಮಾಡೋದ್ರಿಂದ ಆ ಸಮಯದಲ್ಲಿ ಮನಸ್ಸು ಸಂಪೂರ್ಣವಾಗಿ ಅದರಲ್ಲೇ ತೊಡಗುವ ಕಾರಣ ನರಗಳ ಮೇಲಿನ ಒತ್ತಡ ತಗ್ಗುತ್ತೆ. ಇದ್ರಿಂದ ಮನಸ್ಸು ನಿರಾಳವಾಗುತ್ತೆ.
ಸೂಪರ್‌ಫುಡ್ ಆಗಿ ಜಗತ್ತಿನ ಮನಸ್ಸು ಗೆಲ್ಲುತ್ತಿರುವ ಹಲಸು
ಸಂಬಂಧ ಬೆಸೆಯುತ್ತೆ
ಈ ಅನಿಶ್ಚಿತತೆಯ ಕಾಲದಲ್ಲಿ ಕುಕ್ಕಿಂಗ್ ದೂರವಿರುವ ಮನಸ್ಸುಗಳನ್ನು ಬೆಸೆಯುತ್ತಿದೆ. ಅದು ಹೇಗೆ ಅಂತೀರಾ? ಸೋಷಿಯಲ್ ಮೀಡಿಯಾಗಳಲ್ಲಿ ನೀವು ಹಂಚಿಕೊಂಡ ರೆಸಿಪಿ ನೋಡಿ,ಎಷ್ಟೋ ದಿನಗಳಿಂದ ನಿಮ್ಮೊಂದಿಗೆ ಚಾಟ್ ಮಾಡದ ಅಥವಾ ಭೇಟಿಯಾಗದ ಸ್ನೇಹಿತೆ ಮೆಸೇಜ್ ಇಲ್ಲವೆ ಕಮೆಂಟ್ ಮಾಡಬಹುದು. ಇದು ಸಂಬಂಧಗಳಲ್ಲಿ ಸಕಾರಾತ್ಮಕ ಅಲೆಗಳನ್ನು ಹುಟ್ಟು ಹಾಕುತ್ತೆ. ಅಡುಗೆ ಮನೆ ಕಡೆ ತಲೆಯೇ ಹಾಕದ ಪತಿ ಖುದ್ದು ಹೊಸ ರೆಸಿಪಿಯೊಂದನ್ನು ಸಿದ್ಧಪಡಿಸಿ ಪತ್ನಿ ಮುಂದಿಟ್ಟರೆ ಆಕೆಯ ಹೃದಯದಲ್ಲಿ ಹೆಪ್ಪುಗಟ್ಟಿರುವ ಕೋಪ-ತಾಪಗಳೆಲ್ಲ ಕರಗಿ ನೀರಾಗದಿರಲು ಸಾಧ್ಯವೆ?