ಹುಳಿ ಹುಳಿ ಖಾರ ಖಾರ- ನಾಲಿಗೆ ಮೇಲೆ ಸ್ವರ್ಗ ತಂದಿಡುವ ಗೋಲ್ಗಪ್ಪಾ
ಗೋಲ್ಗಪ್ಪಾ ಭಾರತದ ಸ್ಟ್ರೀಟ್ ಫುಡ್ ಅಷ್ಟೇ ಅಲ್ಲ, ತನ್ನ ವಿಶಿಷ್ಠ ರುಚಿಯಿಂದಾಗಿ ಜನಮಾನಸ ಗೆದ್ದು ಫೈವ್‌ಸ್ಟಾರ್ ಹೋಟೆಲ್‌ಗಳಲ್ಲೂ ಸ್ಥಾನ ಭದ್ರಪಡಿಸಿಕೊಂಡಿದೆ.
ರವೆಯಿಂದ ತಯಾರಿಸಿದ ಬಂಗಾರವರ್ಣದ ಆ ವೃತ್ತಾಕಾರದ ಕಟಿಕಟಿ ಚೆಂಡಿನೊಳಗೆ ಕಣ್ಣು ಮಿಟುಕಿಸುವಷ್ಟರಲ್ಲಿ ಆತನ ಬೆರಳು ತೂರಿ ತೂತೊಂದು ತಯಾರಾಗಿ, ತನ್ನೊಳಗೆ ಹಾಕುವ ಮಸಾಲೆ ತಿಂಡಿಗಾಗಿ ಬಾಯಿ ತೆರೆದುಕೊಂಡಂತೆ ಕಾಣುತ್ತದೆ. ಬಾಯಿ ಕಳೆಯಬೇಕಾದ್ದು ಅದನ್ನು ತಿನ್ನಲು ತಯಾರಾಗಿರುವ ನಾನೋ, ಅಥವಾ ಈ ಚೆಂಡೋ ಎಂಬ ಅನುಮಾನ ನನ್ನಲ್ಲಿ. ಅಷ್ಟರಲ್ಲಿ ಆತ ಬೇಯಿಸಿದ ಆಲೂ, ಬಟಾಣಿ ಹಾಗೂ ಹಸಿ ಈರುಳ್ಳಿಗಳ ಮಸಾಲೆ ಮಿಶ್ರಣವನ್ನು ಅಲ್ಲಿ ತುಂಬುತ್ತಾನೆ. ಘನಾಹಾರದಿಂದ ಬಾಯಾರಿದೆಯೋ ಎಂಬಂತೆ ಕಾಣುವ ಅದನ್ನು ನೋಡಿ, ಪಕ್ಕದಲ್ಲಿರುವ ಪಾತ್ರೆಯೊಳಗೆ ಇರುವ ಹಸಿರು ನೀರಿನೊಳಗೆ ಅದ್ದಿ ತೆಗೆವಷ್ಟರಲ್ಲಿ ಅದರ ತುಂಬಾ ಪಾನಿ ತುಂಬಿಕೊಂಡಿರುತ್ತದೆ. ನನ್ನ ಕೈಲಿರುವ ಪ್ಲೇಟ್‌ಗೆ ಬೀಳುತ್ತಲೇ, ಅದು ಮೆತ್ತಗಾಗುವುದರೊಳಗೆ ಪಟಕ್ಕೆಂದು ಇಡಿಯಾಗಿ ಅದನ್ನು ಬಾಯಿಗೆ ತುಂಬಿಕೊಳ್ಳುತ್ತೇನೆ. ಒಂದೇ ಅಗೆತ... ಬೂಮ್! ಮೇರುರುಚಿಯ ರಸನಿಮಿಷವೊಂದು ಬಾಯೊಳಗೆ ಸ್ಫೋಟವಾದಂತಾಗಿ ಅದರ ಸ್ವಾದನೆಯಲ್ಲಿ ಕಳೆದುಹೋಗುವಷ್ಟರಲ್ಲಿ ಮತ್ತೊಂದು, ಮಗದೊಂದು ಪೂರಿ ಪ್ಲೇಟ್‌ಗೆ ಬಂದು ಬೀಳತೊಡಗುತ್ತವೆ. ಈ ರುಚಿ, ಅದು ನೀಡುವ ಇಂದ್ರಿಯ ಸುಖವೊಂದು ನನ್ನ ನೆನಪುಗಳ ಪದರದಲ್ಲಿ ಅಚ್ಚಾಗಿ ಉಳಿಯುತ್ತದೆ.
ಭಾರತದ ಕುರಿತ ಈ ವಿಷಯ ನಿಮಗ್ಗೊತ್ತಾ?
ಹೌದು ಗೋಲುಗೋಲಾದ ಗೋಲ್ಗಪ್ಪಾದ ವರ್ಣನೆಯೇ ಇದು. ಎಷ್ಟು ವರ್ಣಿಸಿದರೂ ನನಗೆ ಸಿಕ್ಕ ರುಚಿಯ ತೃಪ್ತಿಯನ್ನು ಸರಿಯಾಗಿ ವಿವರಿಸಲಾಗುತ್ತಿಲ್ಲ ಎಂಬ ಅಸಮಾಧಾನವೊಂದು ಉಳಿದೇ ಬಿಡುತ್ತದೆ. ಹೋಗಲಿ ಬಿಡಿ, ಈ ಅನುಭವ ಕೇವಲ ನನ್ನೊಬ್ಬಗೆ ಮಾತ್ರ ಸೀಮಿತವಲ್ಲವಲ್ಲ... ನೀವೂ ಗೋಲ್ಗಪ್ಪಾವನ್ನು ಸವಿದೇ ಅನುಭವಿಸಿರುತ್ತೀರಿ. ಸ್ಟ್ರೀಟ್ ಫುಡ್ ಆಗಿ ಬಂದು, ಜನರನ್ನು ಆಕರ್ಷಿಸುವಲ್ಲಿ ಸಫಲವಾಗಿ ಫೈವ್‌ಸ್ಟಾರ್ ಹೋಟೆಲ್‌ವರೆಗೂ ತಲುಪಿ, ಹತ್ತು ಹಲವು ವಿಶಿಷ್ಠ ರೂಪಗಳನ್ನು ಪಡೆದುಕೊಂಡ ಗೋಲ್ಗಪ್ಪಾದ ಯಶಸ್ಸೇನು ಕಮ್ಮಿಯದಲ್ಲ...
ಗೋಲ್ಗಪ್ಪಾ ಹುಟ್ಟಿದ ಕತೆ
ಗೋಲ್ಗಪ್ಪಾ ಯಾವಾಗಪ್ಪ ಹುಟ್ತು ಅಂತ ಹುಡುಕಿಕೊಂಡು ಹೋದ್ರೆ ಎರಡೆರಡು ಕತೆ ಸಿಗುತ್ತದೆ. ಮೊದಲನೆಯದು ಪೌರಾಣಿಕ, ಎರಡನೆಯದು ಐತಿಹಾಸಿಕ ಎನ್ನಬಹುದೇನೋ. ಪೌರಾಣಿಕ ಕತೆ ಇರುವುದು ಮಹಾಭಾರತದಲ್ಲಿ. ಕತೆಯ ಪ್ರಕಾರ, ಹೊಸದಾಗಿ ವಿವಾಹವಾಗಿ ಬಂದ ದ್ರೌಪದಿಗೆ ಅತ್ತೆ ಕುಂತಿ ಟಾಸ್ಕ್ ಒಂದನ್ನು ನೀಡುತ್ತಾಳೆ. ಕಾಡಿನಲ್ಲಿ ಸಿಗುವ ಅಲ್ಪಸ್ವಲ್ಪ ಪದಾರ್ಥದಲ್ಲಿ ತನ್ನ ಐವರು ಪುತ್ರರ ಹೊಟ್ಟೆ ತುಂಬಿಸುವಷ್ಟು ಬೇಯಿಸಿ ಹಾಕಬಲ್ಲಳೇ ಸೊಸೆ ಎಂದು ಪರೀಕ್ಷಿಸುವ ಇರಾದೆ ಅವಳದು. ಇದಕ್ಕಾಗಿ ಅಳಿದುಳಿದ ಸ್ವಲ್ಪ ತರಕಾರಿ ಹಾಗೂ ಸ್ವಲ್ಪ ಗೋಧಿ ಹಿಟ್ಟನ್ನು ನೀಡಿ, ತನ್ನೆಲ್ಲ ಮಕ್ಕಳಿಗೆ ತೃಪ್ತಿಯಾಗುವಂಥದ್ದನ್ನು ತಯಾರಿಸಲು ಹೇಳುತ್ತಾಳೆ. ಈ ಸಂದರ್ಭದಲ್ಲೇ ದ್ರೌಪದಿ ಕೈಯ್ಯಲ್ಲಿ ಗೋಲ್ಗಪ್ಪಾದ ಮೊದಲ ವರ್ಶನ್ ಸೃಷ್ಟಿಯಾಗುತ್ತದೆ ಎಂಬ ಕತೆಯೊಂದಿದೆ.
ಇನ್ನು ಐತಿಹಾಸಿಕವಾಗಿ ಹುಡುಕಿಕೊಂಡು ಹೋದರೆ, ಗೋಲ್ಗಪ್ಪಾದ ಮುಂಚಿನ ರೂಪ ಫುಲ್ಕಿಯು ಮಗಧದಲ್ಲೆಲ್ಲೋ ಮೊದಲು ಹುಟ್ಟಿತು. ಆದರೆ, ಇದನ್ನು ಕಂಡುಹಿಡಿದವನ ಹೆಸರು ಇತಿಹಾಸದ ಪುಟಗಳಲ್ಲಿ ದಾಖಲಾಗಲಿಲ್ಲ. ಆದರೆ, ಇಂದಿನ ವರ್ಶನ್‌ಗೂ ಹಿಂದಿನದಕ್ಕೂ ಬಳಸಿದ ಪದಾರ್ಥಗಳು ಬೇರೆಯವೇ. ಏಕೆಂದರೆ ಗೋಲ್ಗಪ್ಪಾದ ಪ್ರಮುಖ ಆಹಾರ ಪದಾರ್ಥಗಳಾದ ಆಲೂಗಡ್ಡೆ ಹಾಗೂ ಮೆಣಸು ಭಾರತಕ್ಕೆ ಬಂದಿದ್ದೇ 300-400 ವರ್ಷಗಳ ಹಿಂದೆ. ಆಹಾರ ಇತಿಹಾಸಜ್ಞ ಪುಶ್ಪೇಶ್ ಪಂಥ್ ಅಂದಾಜಿಸಿದಂತೆ 100-125 ವರ್ಷಗಳ ಹಿಂದೆ ಗೋಲ್ಗಪ್ಪಾ ಉತ್ತರ ಪ್ರದೇಶ ಹಾಗೂ ಬಿಹಾರ ಸುತ್ತಮುತ್ತಲೆಲ್ಲೋ ಹುಟ್ಟಿತು. ಅವರ ಪ್ರಕಾರ, ಬಹುಷಃ ರಾಜ್ ಕಚೋರಿಯಿಂದ ಗೋಲ್ಗಪ್ಪಾ ಸೃಷ್ಟಿಯಾಗಿರಬಹುದು.
ಭಾರತವನ್ನಾಳುವ ಗೋಲ್ಗಪ್ಪಾ
ಭಾರತೀಯರಲ್ಲಿ ಗೋಲ್ಗಪ್ಪಾ ಇಷ್ಟ ಪಡದವರಾರಿದ್ದಾರೆ? ಕೆಲವೊಂದು ಸಂಜೆಗಳನ್ನು ಅವು ಸುಂದರವಾಗಿಸಿವೆ, ಗೆಳೆಯರೊಂದಿಗೆ ತಿರುಗಲು ಒಂದು ಗುರಿಯಾಗಿವೆ, ಗೋಲ್ಗಪ್ಪಾ ಪಾರ್ಟಿ ಕೊಟ್ಟು ದುಡ್ಡೂ ಉಳಿಸಿ, ಗೆಳೆಯರ ಹೊಟ್ಟೆಯನ್ನೂ ತುಂಬಿಸಿ ಸಮಾಧಾನ ಪಟ್ಟವರಿದ್ದಾರೆ. ಅವನ್ನು ಸ್ಪರ್ಧೆಯ ಮೇಲೆ ಲೆಕ್ಕವಿಡದಷ್ಟು ತಿಂದು ನಂತರದ ದಿನಗಳಲ್ಲಿ ಇದನ್ನು ಉತ್ತಮ ನೆನಪಾಗಿಸಿಕೊಂಡವರಿದ್ದಾರೆ. ಒಟ್ಟಿನಲ್ಲಿ ಗೋಲ್ಗಪ್ಪಾ ಭಾರತದ ಅತ್ಯಂತ ಆಕರ್ಷಣೀಯ ಸ್ಠ್ರೀಟ್ ಫುಡ್. ಭಾರತದ ಒಂದೊಂದು ಪ್ರದೇಶದಲ್ಲಿ ಒಂದೊಂದು ಹೆಸರು ಪಡೆದುಕೊಂಡಿದ್ದರೂ, ಅಲ್ಲಿನ ಜನರಿಗೆ ಸಿಗುವುದು ಅದೇ ಹುಳಿ, ಖಾರ ರುಚಿಯೇ. ಹರಿಯಾಣದಲ್ಲಿ ಇದಕ್ಕೆ ಪಾನಿ ಪಟಾಶಿ ಎಂದರೆ, ಮಧ್ಯಪ್ರದೇಶದಲ್ಲಿ ಫುಲ್ಕಿ ಎನ್ನುತ್ತಾರೆ. ಉತ್ತರ ಪ್ರದೇಶದಲ್ಲಿ ಪಾನಿ ಕೆ ಬಟಾಶೆ ಎಂದರೆ ಅಸ್ಸಾಂನಲ್ಲಿ ಫುಸ್ಕಾ ಎನ್ನುತ್ತಾರೆ. ಒಡಿಶಾದಲ್ಲಿ ಗಪ್ ಚುಪ್, ಬಿಹಾರ, ನೇಪಾಳ, ಜಾರ್ಖಂಡ್, ಬಂಗಾಳ ಹಾಗೂ ಛತ್ತೀಸಗಢದಲ್ಲಿ ಪುಚ್ಕಾ ಹೆಸರಿನಲ್ಲಿ ಹೆಸರು ಮಾಡಿದೆ ಗೋಲ್ಗಪ್ಪಾ.
ಫುಡೀ ಆದ್ರೂ ಪರ್ಫೆಕ್ಟ್ ಫಿಟ್‌ನೆಸ್; ಇದು ಸುತಾರಿಯಾ ಡಯಟ್ ಕತೆ!
ಫೈವ್‌ಸ್ಟಾರ್ ಪೂರಿ
ಗೋಲ್ಗಪ್ಪಾ ಎಂದಿಗೂ ಕಳೆದುಹೋಗದ ಫುಡ್. ಏಕೆಂದರೆ ಅದು ಕಾಲಕ್ಕೆ ಸರಿಯಾಗಿ ಅಪ್ಡೇಟ್ ಆಗುವ ಗುಣ ಹೊಂದಿದೆ. ಆಧುನಿಕತೆಗೆ ತೆರೆದುಕೊಳ್ಳುವ ಇದರ ಗುಣವೇ ಇದನ್ನು ಹೊಸ ಹೊಸ ರೂಪಾಂತರಗಳಾಗಿಸುತ್ತಿದೆ. ಅದೇ ಕಾರಣಕ್ಕೆ ಫೈವ್ ಸ್ಟಾರ್ ಹೋಟೆಲ್‌ಗೂ, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗೂ, ಪಬ್‌ಗಳಿಗೂ, ಮದುವೆ ಸಮಾರಂಭಗಳಿಗೂ ಗೋಲ್ಗಪ್ಪಾ ಕಾಲಿಟ್ಟಿದೆ. ಮೆಟ್ರೋ ನಗರಗಳ ಬಾರ್‌ಗಳಲ್ಲಿ ಪಾನಿಯ ಬದಲಿಗೆ ಪೂರಿಯೊಳಗೆ ವೈನ್, ಸ್ಕಾಚ್, ವಿಸ್ಕಿಯನ್ನು ತುಂಬಿ ಕೊಡುವ ಪ್ರಯೋಗವೊಂದು ಯಶ ಸಾಧಿಸಿದೆ. ಎಣ್ಣೆಯೊಂದಿಗೆ ಕುರುಕಲು ತಿಂದು ಖುಷಿ ಪಡುವವರಿಗೆ ಕುರುಕಲಿನೊಳಗೇ ಎಣ್ಣೆ ಹಾಕಿಕೊಡುವ ಪ್ರಯೋಗವಿದು. ಇನ್ನು ವಿದೇಶಿಯರನ್ನು ಮೆಚ್ಚಿಸಲು ಪಾನಿ ಪೂರಿ ಟೆಕೀಲಾ ಶಾಟ್‌ಗಳು ಯಶಸ್ವಿಯಾಗಿವೆ. ಇನ್ನು ಫೈವ್ ಸ್ಟಾರ್ ಹೋಟೆಲ್‌ಗಳಲ್ಲಿ ಪಿಜ್ಜಾ ಸಾಸ್, ಚೀಸ್ ತುಂಬಿದ ಮಾರ್ಗರಿಟಾ ಗೋಲ್ಗಪ್ಪಾ, ಚಾಕೋಲೇಟ್ ಗೋಲ್ಗಪ್ಪಾ, ಬಟರ್ ಚಿಕನ್ ಗೋಲ್ಗಪ್ಪಾ, ಫ್ರೂಟ್ ಗೋಲ್ಗಪ್ಪಾ ಇತ್ಯಾದಿ ರೂಪಾಂತರಗಳು ಗ್ರಾಹಕರನ್ನು ಆಕರ್ಷಿಸುವಲ್ಲಿ ಒಂದು ಹೆಜ್ಜೆ ಮುಂದೆಯೇ ಇವೆ. ಒಟ್ಟಿನಲ್ಲಿ, ಭಾರತದ ಮಸಾಲೆ ಹಾಗೂ ಹುಳಿ ಹುಳಿ ರುಚಿಯನ್ನು ಜಗತ್ತಿಗೆ ಪರಿಚಯಿಸುವಲ್ಲಿ ಗೋಲ್ಗಪ್ಪಾದ ಪಾತ್ರವಿದ್ದೇ ಇದೆ.