ಮಾವಿನ ಹಣ್ಣು ನಮ್ಮ ಬೇಸಿಗೆ ದಿನಗಳ ಆಪ್ತ ಸಖ. ಅದನ್ನು ಹಾಗೇ ತಿನ್ನುವುದು ಒಂದು ಬಗೆಯಾದರೆ ಅದರಿಂದ ಹಲವಾರು ಬಗೆಯ ಹುಳಿ- ಸಿಹಿ ತಿಂಡಿಗಳನ್ನು ಮಾಡಿಕೊಂಡು ಸವಿಯುವುದು ಇನ್ನೊಂದು ಬಗೆಯ ರುಚಿ.
ಕಾಡು ಮಾವಿನಹಣ್ಣಿನ ಮಾಂಬಳ
ಇದು ಕರಾವಳಿಗರ ಅತ್ಯಂತ ಪ್ರೀತಿಯ ಹುಳಿ- ಸಿಹಿ ತಿಂಡಿ. ಇದನ್ನು ಬೇಸಿಗೆಯಲ್ಲಿ ಮಾಡಿಟ್ಟುಕೊಂಡು, ಮಳೆಗಾಲದಲ್ಲಿ ಜೋರು ಮಳೆ ಸುರಿಯುತ್ತಿರುವಾಗ ಸೇವಿಸುತ್ತಾರೆ ಅಥವಾ ಗೊಜ್ಜು ಮಾಡಿಕೊಳ್ಳುತ್ತಾರೆ.
ಬೇಕಾಗುವ ಸಾಮಗ್ರಿ
ಕಾಡು ಮಾವಿನಹಣ್ಣು, ಬೆಲ್ಲ, ರುಚಿಗೆ ತಕ್ಕ ಉಪ್ಪು, ಹಸಿ ಮೆಣಸಿನಕಾಯಿ (ರುಚಿಗೆ ತಕ್ಕಷ್ಟು), ಒಣ ಮೆಣಸು, ಸಾಸಿವೆ, ಕರಿಬೇವು (ಒಗ್ಗರಣೆಗೆ)
ಮಾಡುವ ವಿಧಾನ:
ಮಾವಿನ ಹಣ್ಣಿನ ತಿರುಳನ್ನು ಶುದ್ಧವಾದ ಬಟ್ಟೆಯಲ್ಲಿ ಹಾಕಿ ಅದರ ರಸ ತೆಗೆಯಬೇಕು. ನಂತರ ಆ ರಸವನ್ನು ಅಗಲವಾದ ತಟ್ಟೆಯಲ್ಲಿ ಹಾಕಿ 5-6 ದಿನ ಬಿಸಿಲಿನಲ್ಲಿ ಇಡಬೇಕು. ಮಾವಿನ ರಸ ಗಟ್ಟಿಯಾದಾಗ ಅದನ್ನು ಮಗುಚಿ ಹಾಕಿ ಒಣಗಿಸಿ. ಅದರ ಎರಡೂ ಬದಿ ಒಣಗಿದರೆ ಸವಿಯಲು ರೆಡಿ. ಒಣಗಿದ ಮಾಂಬಳವನ್ನು ಬೇಕಾದ ಆಕಾರಕ್ಕೆ ಕತ್ತರಿಸಿ ಸಂಗ್ರಹಿಸಿ ಇಡಬಹುದು. ಮಾಂಬಳ ಚೆನ್ನಾಗಿ ಒಣಗಿರದೆ ಇದ್ದರೆ ಅದು ಹಾಳಾಗಬಹುದು.
ಮಾಂಬಳ ಗೊಜ್ಜು
ಮಾಂಬಳವನ್ನು ಹಾಗೇ ತಿನ್ನಬಹುದು ಅಥವಾ ಮಧ್ಯಾಹ್ನದ ಊಟಕ್ಕೆ ಗೊಜ್ಜು ಮಾಡಿಕೊಳ್ಳಬಹುದು. ನಿಮಗೆ ಬೇಕಾದಷ್ಟು ಮಾಂಬಳ ತೆಗೆದು ಸ್ವಲ್ಪ ನೀರಿನಲ್ಲಿ ನೆನೆ ಹಾಕಿ, ಸಿಹಿ ಬೇಕೆನ್ನುವವರು ಬೆಲ್ಲದ ಜತೆ ಹಾಕಿ ಕುದಿಸಿ, ಹಸಿ ಮೆಣಸಿನಕಾಯಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಕುದಿಸಿ, ನಂತರ ಒಗ್ಗರಣೆ ಹಾಕಿದರೆ ಮಾಂಬಳ ಗೊಜ್ಜು ರೆಡಿ.
ಬೇಸಿಗೆ ಸೆಕೆ ಓಡಿಸೋ ಮಾವಿನ ಕೂಲ್ ಕೂಲ್ ರೆಸಿಪಿ
ಮಾವಿನ ಕಾಯಿ ಮುರಬ್ಬಾ
ಬೇಕಾಗುವ ಸಾಮಗ್ರಿ
ಒಂದು ಮಾವಿನ ಕಾಯಿ, ಸಕ್ಕರೆ, ಏಲಕ್ಕಿ ಪುಡಿ,
ಮಾಡುವ ವಿಧಾನ
ಒಂದು ಮಾವಿನ ಕಾಯಿಯನ್ನು ಅರ್ಧ ಇಂಚಿನಷ್ಟು ದೊಡ್ಡದಾದ ತುಂಡುಗಳನ್ನಾಗಿಸಿ. ಇವನ್ನು ಒಂದು ಒಂದು ಪಾತ್ರೆಯಲ್ಲಿ ಒಂದು ಕಪ್ ನೀರು ಸೇರಿಸಿ ಕುದಿಸಿ. ನೀರು ಕುದಿಯಲು ಪ್ರಾರಂಭಿಸಿದ ಬಳಿಕ ಉರಿಯನ್ನು ಚಿಕ್ಕದಾಗಿಸಿ ನೀರು ಅರ್ಧಮಟ್ಟಕ್ಕಿ ಇಳಿಯುವಷ್ಟು ಕಾಲ ಕುದಿಸಿ. ಈ ಪಾತ್ರೆಯನ್ನು ಇಳಿಸಿ ಪಕ್ಕದಲ್ಲಿಡಿ. ಇನ್ನೊಂದು ಪಾತ್ರೆಯಲ್ಲಿ ಎರಡು ಕಪ್ ಸಕ್ಕರೆ ಹಾಕಿ ಇದು ಮುಳುಗುವಷ್ಟು ಮಾತ್ರ ನೀರು ಹಾಕಿ ಕೊಂಚ ಬಿಸಿ ಮಾಡಿ ದಪ್ಪನೆಯ ದ್ರಾವಣವಾಗುವಂತೆ ಮಾಡಿ. ಈ ದ್ರಾವಣಕ್ಕೆ ಮೊದಲ ಪಾತ್ರೆಯಲ್ಲಿರುವ ಬೇಯಿಸಿದ ಮಾವಿನ ತುಂಡುಗಳನ್ನು ಹಾಕಿ ಬೆರೆಸಿ. ಕೊಂಚ ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಬೆರೆಸಿ. ನೀರಿನ ಪ್ರಮಾಣ ಹೆಚ್ಚಾದಂತೆ ಕಂಡು ಬಂದರೆ ಕೊಂಚ ಬಿಸಿ ಮಾಡಬಹುದು. ಬಳಿಕ ಇದನ್ನು ಗಾಜಿನ ಜಾಡಿಯಲ್ಲಿ ಹಾಕಿ ಗಟ್ಟಿಯಾದ ಮುಚ್ಚಳ ಹಾಕಿ ಫ್ರಿಜ್ಜಿನಲ್ಲಿ ಸಂಗ್ರಹಿಸಿ. ಊಟದ ಬಳಿಕ ಸಿಹಿತಿಂಡಿಯ ರೂಪದಲ್ಲಿ ಸೇವಿಸಲು ಇದು ಚೆನ್ನಾಗಿರುತ್ತದೆ.
ಹಲಸು ತಿಂದು ಬೀಜ ಹೊರಗೆಸೆಯುವ ಮುನ್ನ ಇದನ್ನೊಮ್ಮೆ ಓದಿ
ಕಾಡು ಮಾವಿನ ಹಣ್ಣಿನ ತೊಕ್ಕು
ಬೇಕಾಗುವ ಸಾಮಗ್ರಿ
ಏಳೆಂಟು ಕಾಡು ಮಾವಿನಹಣ್ಣು, ೨ ಚಮಚ ಕೆಂಪು ಮೆಣಸಿನ ಹುಡಿ, ಉಪ್ಪು
ಮಾಡುವ ವಿಧಾನ
ಕಾಡು ಮಾವಿನ ಹಣ್ಣನ್ನು ಚೆನ್ನಾಗಿ ಕಿವುಚಿ ರಸ ತೆಗೆದು, ಉಪ್ಪು, ಕೆಂಪು ಮೆಣಿಸನ ಹುಡಿ ಸೇರಿಸಿ ಸಣ್ಣ ಉರಿಯಲ್ಲಿ ಬಾಣಲೆಯಲ್ಲಿ ಬೇಯಿಸಿ. ಗಟ್ಟಿಯಾಗುತ್ತಾ ಬರುವಾಗ ಆಗಾಗ ಸೌಟಿನಿಂದ ಕೈಯಾಡಿಸಿ. ಗಟ್ಟಿಯಾದ ಬಳಿಕ ಒಲೆಯಿಂದ ಕೆಳಗಿಳಿಸಿ. ಇದನ್ನು ಅನ್ನದ ಜೊತೆಗೆ ತೆಂಗಿನೆಣ್ಣೆ ಸೇರಿಸಿಕೊಂಡು ಸೇವಿಸುವುದು ಬಲು ರುಚಿ. ಎರಡು ಮೂರು ತಿಂಗಳು ಇಟ್ಟರೂ ಹಾಳಾಗದು.