ಊಟ ಮಾಡುವಾಗ ಕರಿಬೇವಿನ ಎಲೆಗಳು ಸಿಕ್ಕಿದ್ರೆ ಎತ್ತಿ ಬದಿಗಿಡುತ್ತೇವೆ. ಆದ್ರೆ ಕರಿಬೇವಿನ ಎಲೆಗಳಿಂದ ಆರೋಗ್ಯಕ್ಕೆ ಎಷ್ಟೆಲ್ಲ ಪ್ರಯೋಜನಗಳಿವೆ ಗೊತ್ತಾ? ಕರಿಬೇವು ತಿನ್ನಲು ರುಚಿಸದಿದ್ರೂ ಆರೋಗ್ಯಕ್ಕೆ ಒಳ್ಳೆಯದು.
ತಿಂಡಿ ತಿನ್ನುವಾಗ, ಊಟ ಮಾಡುವಾಗ ಮಧ್ಯದಲ್ಲಿ ಕರಿಬೇವು ಸಿಕ್ಕಿದ್ರೆ ಅದನ್ನು ಬಾಯಿಗೆ ಹಾಕಿಕೊಳ್ಳದೆ ತಟ್ಟೆ ಬದಿಯಲ್ಲಿಡುವ ಅಭ್ಯಾಸ ಬಹುತೇಕರಿಗಿದೆ. ಕರಿಬೇವಿನ ಎಲೆ ಖಾದ್ಯಕ್ಕೆ ಬರೀ ಪರಿಮಳವನ್ನಷ್ಟೇ ನೀಡೋದಿಲ್ಲ, ಅದ್ರಿಂದ ಆರೋಗ್ಯಕ್ಕೆ ಹತ್ತಾರು ಲಾಭಗಳಿವೆ ಕೂಡ. ಕರಿಬೇವಿನಲ್ಲಿ ಕಬ್ಬಿಣಾಂಶ, ಕ್ಯಾಲ್ಸಿಯಂ, ವಿಟಮಿನ್ ಎ ಹಾಗೂ ವಿಟಮಿನ್ ಬಿ ಹೆಚ್ಚಿನ ಪ್ರಮಾಣದಲ್ಲಿದ್ದು, ಅನೇಕ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿದೆ. ಹೀಗಾಗಿ ನಿತ್ಯದ ಆಹಾರದಲ್ಲಿ ಕರಿಬೇವಿನ ಎಲೆಗಳನ್ನು ಬಳಸುವ ಜೊತೆಗೆ ಅದನ್ನು ಸೇವಿಸೋದ್ರಿಂದ ಆರೋಗ್ಯಕ್ಕೆ ಹತ್ತಾರು ಪ್ರಯೋಜನಗಳಿವೆ.
ರೋಗನಿರೋಧಕ ಶಕ್ತಿ ಹೆಚ್ಚಿಸುತ್ತೆ
ಕರಿಬೇವಿನ ಎಲೆಗಳಲ್ಲಿ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಶಕ್ತಿಯಿದೆ. ಇದು ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಉತ್ತಮಪಡಿಸುತ್ತೆ. ಆಂಟಿಬಯೋಟಿಕ್ ಕೋರ್ಸ್‍ಗೊಳಗಾದ ಸಮಯದಲ್ಲಿ ಕರಿಬೇವಿನ ಎಲೆಗಳನ್ನು ತಿನ್ನೋದು ಉತ್ತಮ ಎಂದು ಹೇಳಲಾಗುತ್ತೆ. ಇದರಿಂದ ಕಾಯಿಲೆ ಬೇಗ ವಾಸಿಯಾಗುತ್ತದೆ.
ಹಲಸು ತಿಂದು ಬೀಜ ಹೊರಗೆಸೆಯುವ ಮುನ್ನ ಇದನ್ನೊಮ್ಮೆ ಓದಿ
ಭೇದಿ ಹಾಗೂ ಮಲಬದ್ಧತೆಗೆ ಮದ್ದು
ಕರಿಬೇವಿನ ಎಲೆಗಳಲ್ಲಿ ಭೇದಿ ಹಾಗೂ ಮಲಬದ್ಧತೆಯನ್ನು ವಾಸಿ ಮಾಡುವ ಶಕ್ತಿಯಿದೆ. ನೀರಿಗೆ ಕರಿಬೇವಿನ ಎಲೆಗಳನ್ನು ಹಾಕಿ ಕುದಿಸಿ ಕುಡಿಯಬೇಕು. ಎಲೆಗಳನ್ನು ಪೇಸ್ಟ್ ಮಾಡಿ ತಿನ್ನುವ ಆಹಾರದಲ್ಲಿ ಸೇರಿಸುವ ಮೂಲಕ ಅಥವಾ ಬೆಲ್ಲದ ಜೊತೆ ಸೇವಿಸೋದ್ರಿಂದ ಕೂಡ ಈ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
ಮಾರ್ನಿಂಗ್ ಸಿಕ್‍ನೆಸ್, ಸುಸ್ತು ದೂರವಾಗುತ್ತೆ
ಸಾಮಾನ್ಯವಾಗಿ ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವ ಮಾರ್ನಿಂಗ್ ಸಿಕ್‍ನೆಸ್, ವಾಕರಿಕೆ, ತಲೆ ಸುತ್ತು ಹಾಗೂ ಸುಸ್ತನ್ನು ಕರಿಬೇವಿನ ಎಲೆಗಳ ಸೇವನೆಯಿಂದ ತಗ್ಗಿಸಬಹುದು. ಕೀಮೋಥೆರಪಿ ಅಥವಾ ರೆಡಿಯೇಷನ್‍ಗೊಳಗಾದ ರೋಗಿಗಳಲ್ಲಿ ಕಾಣಿಸಿಕೊಳ್ಳುವ ವಾಕರಿಕೆಯನ್ನು ಕರಿಬೇವಿನ ಸೇವನೆಯಿಂದ ಕಡಿಮೆ ಮಾಡಬಹುದು. ಕರಿಬೇವನ್ನು ಪುಡಿ ಮಾಡಿ ನಿತ್ಯ ತಿನ್ನುವ ಆಹಾರಗಳೊಂದಿಗೆ ಸೇರಿಸಿ ಗರ್ಭಿಣಿಯರಿಗೆ ನೀಡಬಹುದು.
ಸಕ್ಕರೆ ಕಾಯಿಲೆಗೂ ಪರಿಣಾಮಕಾರಿ
ಕರಿಬೇವಿನ ಎಲೆಗಳಲ್ಲಿ ಕಬ್ಬಿಣಾಂಶ, ತಾಮ್ರ ಹಾಗೂ ಸತು ಹೆಚ್ಚಿನ ಪ್ರಮಾಣದಲ್ಲಿದ್ದು, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಗ್ಗಿಸಲು ನೆರವು ನೀಡುತ್ತದೆ. ಹಾಗಾಗಿ ಮಧುಮೇಹ ರೋಗಿಗಳು ಕರಿಬೇವನ್ನು ನಿಯಮಿತವಾಗಿ ಸೇವಿಸೋದ್ರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.
ಬೇಸಿಗೆ ಸೆಕೆ ಓಡಿಸೋ ಮಾವಿನ ಕೂಲ್ ಕೂಲ್ ರೆಸಿಪಿ
ಕಣ್ಣಿನ ಆರೋಗ್ಯಕ್ಕೆ ಉತ್ತಮ
ಕಣ್ಣಿನ ದೃಷ್ಟಿ ಹೆಚ್ಚಳಕ್ಕೆ ವಿಟಮಿನ್ ಎ ಸಹಕಾರಿ. ಕರಿಬೇವಿನ ಎಲೆಗಳಲ್ಲಿ ವಿಟಮಿನ್ ಎ ಇರುವ ಕಾರಣ ದೃಷ್ಟಿ ಕುಂದುವುದು, ಇರುಳು ಕುರುಡುತನ ಮುಂತಾದ ದೃಷ್ಟಿ ಸಮಸ್ಯೆಗಳನ್ನು ದೂರ ಮಾಡುತ್ತೆ.
ಕೂದಲಿನ ಆರೋಗ್ಯವರ್ಧನೆ
ಕೂದಲುದುರೋದು ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಕಾಡುವ ಕಾಮನ್ ಪ್ರಾಬ್ಲಂ. ತೆಂಗಿನೆಣ್ಣೆ ಜೊತೆ ಕರಿಬೇವಿನ ಎಲೆಗಳನ್ನು ಸೇರಿಸಿ ಕುದಿಸಿ ಬಾಟಲ್‍ನಲ್ಲಿ ಹಾಕಿಟ್ಟರೆ, 3ರಿಂದ 6 ತಿಂಗಳ ಕಾಲ ಬಳಸಬಹುದು. ಇದ್ರಿಂದ ಕೂದಲು ಉದುರುವ ಸಮಸ್ಯೆಯಷ್ಟೇ ಅಲ್ಲ, ತಲೆಹೊಟ್ಟು ಕೂಡ ದೂರವಾಗುತ್ತೆ. ಅಲ್ಲದೆ, ಕೂದಲು ಬೇಗ ಹಣ್ಣಾಗೋದನ್ನು ಕೂಡ ಇದು ತಡೆಯುತ್ತೆ. ಹೀಗಾಗಿ ತಲೆಗೆ ಬರೀ ತೆಂಗಿನೆಣ್ಣೆಯನ್ನು ಬಳಸುವ ಬದಲು ಕರಿಬೇವನ್ನು ಸೇರಿಸಿ ಹಚ್ಚೋದು ಸೂಕ್ತ.
ಕೊಲೆಸ್ಟ್ರಾಲ್ ನಿಯಂತ್ರಣ
ಕರಿಬೇವಿನ ಎಲೆಗಳು ಕೊಲೆಸ್ಟ್ರಾಲ್ ನಿಯಂತ್ರಿಸುವ ಸಾಮಥ್ರ್ಯವನ್ನು ಹೊಂದಿವೆ. ಯಕೃತ್ತಿನಲ್ಲಿ ಕೊಲೆಸ್ಟ್ರಾಲ್ ಉತ್ಪತ್ತಿಯನ್ನು ನಿಯಂತ್ರಿಸಲು ಇದು ನೆರವು ನೀಡುತ್ತದೆ. ಕೊಲೆಸ್ಟ್ರಾಲ್ ಹೆಚ್ಚಿರುವವರು ತಮ್ಮ ಡಯಟ್‍ನಲ್ಲಿ ಕರಿಬೇವನ್ನು ಸೇರಿಸಿಕೊಳ್ಳೋದು ಉತ್ತಮ.
ಹಲಸಿನ ರುಚಿ ಬಲ್ಲವರು ಈ ರೆಸಿಪಿ ಇಷ್ಟಪಡೋದ್ರಲ್ಲಿ ಡೌಟಿಲ್ಲ
ಜೀರ್ಣಕ್ರಿಯೆಗೆ ಸಹಕಾರಿ
ಕಾರ್ಬೋಹೈಡ್ರೇಟ್ಸ್, ಫ್ಯಾಟ್ಸ್ ಹಾಗೂ ಪ್ರೋಟೀನ್‍ಗಳನ್ನು ವಿಭಜಿಸುವ ಕಿಣ್ವಗಳ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಉತ್ತಮ ಜೀರ್ಣಕ್ರಿಯೆಗೆ ಕರಿಬೇವಿನ ಎಲೆಗಳು ಸಹಕಾರಿಯಾಗಿವೆ.
ಮೆದುಳಿನ ಆರೋಗ್ಯಕ್ಕೆ ಉತ್ತಮ
ಕರಿಬೇವಿನ ಎಲೆಗಳಲ್ಲಿ ವಿಟಮಿನ್ ಬಿ ಅಧಿಕ ಪ್ರಮಾಣದಲ್ಲಿದ್ದು, ಇದು ಮೆದುಳಿನ ಆರೋಗ್ಯಕ್ಕೆ ಸಹಕಾರಿ. ಮರೆಗುಳಿತನ ಸೇರಿದಂತೆ ಅನೇಕ ಮೆದುಳಿನ ಕಾಯಿಲೆಗಳನ್ನು ಕರಿಬೇವಿನ ಎಲೆಗಳ ಸೇವನೆಯಿಂದ ದೂರವಾಗಿಸಬಹುದು.