ತಲೆಯಲ್ಲಿ ಬುದ್ಧಿ ಇರೋರು ಮೊಟ್ಟೆ ಚಿಪ್ಪು ಎಸೆಯಲ್ಲ; ಮಾಡ್ತಾರೆ ಕಮಾಲ್!

By Suvarna News  |  First Published Apr 29, 2020, 6:48 PM IST

ಮೊಟ್ಟೆ ಚಿಪ್ಪನ್ನು ತಿನ್ನೋಕಾಗುತ್ತಾ? ಅದು ವೇಸ್ಟ್ ಎಂದು ಡಸ್ಟ್ಬಿನ್‍ಗೆ ಎಸೆಯುತ್ತೇವೆ. ಆದ್ರೆ ಮೊಟ್ಟೆ ಚಿಪ್ಪಿಂದಲೂ ಸಾಕಷ್ಟು ಪ್ರಯೋಜನಗಳಿವೆ. ಸಮಯ ಮತ್ತು ಮನಸ್ಸಿದ್ರೆ ಮೊಟ್ಟೆ ಚಿಪ್ಪುಗಳನ್ನು ನಾನಾ ರೀತಿಯಲ್ಲಿ ಬಳಸಬಹುದು.


ತೂಕ ಕಡಿಮೆ ಇರುವವರಿಗೆ, ಅಪೌಷ್ಟಿಕತೆಯಿಂದ ಬಳಲುತ್ತಿರುವವರಿಗೆ ವೈದ್ಯರು ಮೊಟ್ಟೆ ತಿನ್ನುವಂತೆ ಸಲಹೆ ನೀಡುತ್ತಾರೆ. ಬಾಡಿ ಬಿಲ್ಡ್ ಮಾಡೋರಿಗಂತೂ ಮೊಟ್ಟೆ ಮಸ್ಟ್. ಮೊಟ್ಟೆಯನ್ನು ಬೇಯಿಸಿಕೊಂಡು, ಆಮ್ಲೇಟ್ ಮಾಡ್ಕೊಂಡು, ಪಲ್ಯ ಮಾಡ್ಕೊಂಡು ಬಾಯಿ ಚಪ್ಪರಿಸುವ ನಾವು, ಅದರ ಚಿಪ್ಪನ್ನು ಹೊರಗೆಸೆಯುತ್ತೇವೆ. ಮೊಟ್ಟೆ ಚಿಪ್ಪು ನಿರುಪಯುಕ್ತ ಎಂಬ ಭಾವನೆ ಅಮ್ಮನಿಂದ ಮಗಳಿಗೆ, ಮಗಳಿಂದ ಅವಳ ಮಗಳಿಗೆ ವರ್ಗಾವಣೆಯಾಗಿ ಬಂದಿದೆ. ಹೀಗಾಗಿ ಅಮ್ಮ ಮೊಟ್ಟೆ ಒಡೆದ ಬಳಿಕ ಚಿಪ್ಪುಗಳನ್ನು ಡಸ್ಟ್ಬಿನ್‍ಗೆ ಎಸೆಯೋದನ್ನು ನೋಡಿದ ಮಗಳು ಕೂಡ ಅದನ್ನೇ ಮುಂದುವರಿಸಿದ್ದಾಳೆ. ಆದ್ರೆ ಮೊಟ್ಟೆ ಚಿಪ್ಪಿನಿಂದ ಎಷ್ಟೆಲ್ಲ ಪ್ರಯೋಜನಗಳಿವೆ ಎಂಬುದು ಗೊತ್ತಾದ್ರೆ ನಾಳೆಯಿಂದ ನೀವು ಅದನ್ನು ಖಂಡಿತಾ ಡಸ್ಟ್ಬಿನ್‍ಗೆ ಎಸೆಯೋದಿಲ್ಲ. ಹಾಗಾದ್ರೆ ಮೊಟ್ಟೆ ಚಿಪ್ಪಿನಿಂದ ಏನೆಲ್ಲ ಪ್ರಯೋಜನಗಳಿವೆ ಅಂತೀರಾ?

ಊಟದಲ್ಲಿ ಕರಿಬೇವು ಸಿಕ್ಕರೆ ಸೈಡ್‍ಗೆ ಎತ್ತಿಡುತ್ತೀರಾ?

Tap to resize

Latest Videos

ಗಾರ್ಡನ್‍ಗೆ ಗೊಬ್ಬರ
ಮೊಟ್ಟೆ ಚಿಪ್ಪುಗಳಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಹೀಗಾಗಿ ಇವನ್ನು ನಿರುಪಯುಕ್ತ ಎಂದು ಎಸೆಯುವ ಬದಲು ನಿಮ್ಮನೆ ಗಾರ್ಡನ್‍ನಲ್ಲಿರುವ ಗಿಡಗಳಿಗೆ ಗೊಬ್ಬರವಾಗಿ ಬಳಸಬಹುದು. ನಿಮ್ಮ ಟೆರೇಸ್ ಗಾರ್ಡನ್ ಅಥವಾ ಕಿಚನ್ ಗಾರ್ಡನ್‍ಗಳಲ್ಲಿರುವ ಗಿಡಗಳಿಗೆ ಇದು ಅತ್ಯುತ್ತಮ ಗೊಬ್ಬರವಾಗೋದ್ರಲ್ಲಿ ಅನುಮಾನವೇ ಇಲ್ಲ. ಮೊಟ್ಟೆ ಚಿಪ್ಪನ್ನು ನೀರಿನಲ್ಲಿ ಚೆನ್ನಾಗಿ ತೊಳೆದು, ಒಳಭಾಗದ ಬಿಳಿ ಪದರವನ್ನು ಸಂಪೂರ್ಣವಾಗಿ ಕ್ಲೀನ್ ಮಾಡಿ. ಆ ಬಳಿಕ ಈ ಚಿಪ್ಪುಗಳನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿ ಕಂಟೈನರ್‍ನಲ್ಲಿ ತುಂಬಿಸಿಡಿ. ಅಗತ್ಯವಿದ್ದಾಗ ಗಿಡಗಳಿಗೆ ಹಾಕಿ. ಇದು ಮಣ್ಣಿಗೆ ಅಗತ್ಯ ಪ್ರಮಾಣದಲ್ಲಿ ಕ್ಯಾಲ್ಸಿಯಂ ಕಾರ್ಬೋನೇಟ್ ಒದಗಿಸುವ ಮೂಲಕ ಗಿಡಗಳ ಬೆಳವಣಿಗೆಗೆ ನೆರವು ನೀಡುತ್ತೆ. ಅಷ್ಟೇ ಅಲ್ಲದೆ, ಮಣ್ಣಿನಲ್ಲಿರುವ ಆಸಿಡ್ ಪ್ರಮಾಣವನ್ನು ತಗ್ಗಿಸುತ್ತೆ.

ಪ್ರಥಮ ಚಿಕಿತ್ಸೆ
ಮೊಟ್ಟೆ ಚಿಪ್ಪಿನಿಂದ ಪ್ರಥಮ ಚಿಕಿತ್ಸೆನಾ ಎಂದು ಹುಬ್ಬೇರಿಸಬೇಡಿ. ಮೊಟ್ಟೆಯ ಬಿಳಿ ಭಾಗ ಹಾಗೂ ಚಿಪ್ಪಿನ ನಡುವೆ ತೆಳವಾದ ಒಂದು ಪದರವಿದೆ, ಬೇಯಿಸಿದ ಮೊಟ್ಟೆಯ ಸಿಪ್ಪೆ ತೆಗೆಯವಾಗ ಇದು ಸ್ಪಷ್ಟವಾಗಿ ಗೋಚರಿಸುತ್ತದೆ. ಇದನ್ನು ಚಿಕ್ಕಪುಟ್ಟ ತರಚಿದ ಗಾಯಗಳ ಮೇಲೆ ಬ್ಯಾಂಡೇಜ್ ಆಗಿ ಬಳಸಬಹುದು. ಇದು ರಕ್ತಸ್ರಾವವನ್ನು ತಡೆಯುತ್ತೆ.

ಹಲಸು ತಿಂದು ಬೀಜ ಹೊರಗೆಸೆಯುವ ಮುನ್ನ ಇದನ್ನೊಮ್ಮೆ ಓದಿ

ಫ್ಲಾಸ್ಕ್ ಕ್ಲೀನ್ ಮಾಡಲು
ಕಾಫಿ ಫ್ಲಾಸ್ಕ್ ಒಳಗೆ ಕೈ ಹಾಕಿ ತೊಳೆಯಲು ಸಾಧ್ಯವಾಗೋದಿಲ್ಲ. ಹೀಗಾಗಿ ಫ್ಲಾಸ್ಕ್ ಕ್ಲೀನ್ ಮಾಡೋದೆ ದೊಡ್ಡ ತಲೆನೋವು. ಡೋಂಟ್ ವರಿ, ಮೊಟ್ಟೆ ಚಿಪ್ಪುಗಳನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ ಫ್ಲಾಸ್ಕ್ ಒಳಗೆ ಹಾಕಿ, ಆ ಬಳಿಕ ಸ್ವಲ್ಪ ಬಿಸಿ ನೀರು ಸುರಿದು ಕ್ಯಾಪ್ ಹಾಕಿ ಚೆನ್ನಾಗಿ ಅಲ್ಲಾಡಿಸಿ. ಆಮೇಲೆ ನೋಡಿ, ನಿಮ್ಮ ಫ್ಲಾಸ್ಕ್‍ನ ಒಳಭಾಗ ಲಕಲಕ ಹೊಳೆಯುತ್ತದೆ.

ಫೇಸ್‍ಮಾಸ್ಕ್
ಮೊಟ್ಟೆ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತೆ ಎಂಬುದು ಎಲ್ಲರಿಗೂ ಗೊತ್ತು. ಆದ್ರೆ ಮೊಟ್ಟೆ ಚಿಪ್ಪು? ಹೌದು, ಮೊಟ್ಟೆ ಚಿಪ್ಪಿನಿಂದಲೂ ತ್ವಚೆ ಅಂದ ಹೆಚ್ಚಿಸಬಹುದು. ಚಿಪ್ಪನ್ನು ಪುಡಿ ಮಾಡಿ ನುಣ್ಣಗಿನ ಪೌಡರ್ ಮಾಡಿಕೊಂಡು ಅದನ್ನು ಮೊಟ್ಟೆಯ ಬಿಳಿ ಭಾಗದೊಂದಿಗೆ ಮಿಕ್ಸ್ ಮಾಡಿ ಮುಖದ ಮೇಲೆ ಲೇಪಿಸಬೇಕು. ಇದು ಸಂಪೂರ್ಣವಾಗಿ ಒಣಗಿದ ಬಳಿಕ ಚೆನ್ನಾಗಿ ತೊಳೆಯಬೇಕು.

ಡೆಕೋರೇಟಿವ್ ಕ್ಯಾಂಡಲ್
ಮುಂದಿನ ಬಾರಿ ದೀಪಾವಳಿಗೆ ಅಥವಾ ಮನೆಯ ಡೆಕೋರೇಷನ್‍ಗೆ ಹಣ ಕೊಟ್ಟು ಕ್ಯಾಂಡಲ್ ಖರೀದಿಸುವ ಬದಲು, ನೀವೇ ಮನೆಯಲ್ಲಿ ಮೊಟ್ಟೆ ಚಿಪ್ಪಿನಿಂದ ಆಕರ್ಷಕ ಕ್ಯಾಂಡಲ್ ತಯಾರಿಸಿ. ಮೊಟ್ಟೆಗಳನ್ನು ಒಡೆಯುವಾಗ ಚಿಪ್ಪು ಅರ್ಧಕ್ಕಿಂತ ಹೆಚ್ಚು ಇರುವಂತೆ ಜಾಗ್ರತೆ ವಹಿಸಿ. ಬಳಿಕ ಅವುಗಳನ್ನು ಕ್ಲೀನ್ ಮಾಡಿ ಒಣಗಿಸಿ ಅಥವಾ ಬಟ್ಟೆಯಿಂದ ಒರೆಸುವ ಮೂಲಕ ನೀರಿನಂಶ ಇಲ್ಲದಂತೆ ಮಾಡಿ. ಬಳಿಕ ವ್ಯಾಕ್ಸ್ ಕರಗಿಸಿ ಚಿಪ್ಪಿಗೆ ಹಾಕಿ ಅದಕ್ಕೊಂದು ಬತ್ತಿ ಸೇರಿಸಿದ್ರೆ ಕ್ಯಾಂಡಲ್ ರೆಡಿ. ಈ ಕ್ಯಾಂಡಲ್‍ಗಳನ್ನು ಮಣ್ಣಿನಿಂದ ತುಂಬಿರುವ ಬೌಲ್‍ಗಳಲ್ಲಿ ಅಥವಾ ಹೂವಿನಿಂದ ಅಲಂಕೃತಗೊಂಡಿರುವ ತಟ್ಟೆಯಲ್ಲಿಟ್ಟರೆ ಆಕರ್ಷಕವಾಗಿ ಕಾಣಿಸುತ್ತವೆ. 

ಬೇಸಿಗೆ ಸೆಕೆ ಓಡಿಸೋ ಮಾವಿನ ಕೂಲ್ ಕೂಲ್ ರೆಸಿಪಿ

ಪುಟ್ಟ ಪಾಟ್
ನಗರದಲ್ಲಿ ಗಾರ್ಡನ್ ಮಾಡುವ ಮನಸ್ಸಿದ್ರೂ ಹತ್ತಾರು ತೊಡಕುಗಳಂತೂ ಇದ್ದೇಇರುತ್ತವೆ. ಹೀಗಾಗಿ ಇನೋವೇಟಿವ್ ಆಗಿ ಥಿಂಕ್ ಮಾಡಿ ಗಾರ್ಡನಿಂಗ್ ಮಾಡುವ ಕೆಲಸಕ್ಕೆ ಕೆಲವರು ಕೈ ಹಾಕುತ್ತಾರೆ. ನಿಮಗೂ ಇಂಥ ಆಸಕ್ತಿಯಿದ್ರೆ ಬೀಜಗಳನ್ನು ಮೊಳಕೆ ಬರಿಸಲು ಮೊಟ್ಟೆ ಚಿಪ್ಪುಗಳನ್ನು ಬಳಸಿಕೊಳ್ಳಬಹುದು. ಮೊಟ್ಟೆ ಚಿಪ್ಪನ್ನು ಮೇಲ್ಭಾಗದಲ್ಲಿ ಸ್ವಲ್ಪವೇ ಒಡೆದು ಬಳಸಿ. ಈ ಚಿಪ್ಪುಗಳನ್ನು ಕ್ಲೀನ್ ಮಾಡಿದ ಬಳಿಕ ಅವುಗಳಿಗೆ ಮಣ್ಣು ತುಂಬಿಸಿ ಬೀಜ ಹಾಕಿ. ಚಿಪ್ಪಿನ ಕೆಳಭಾಗದಲ್ಲಿ ಪುಟ್ಟ ರಂಧ್ರ ಮಾಡಿ. ಬಳಿಕ ಈ ಚಿಪ್ಪುಗಳನ್ನು ಬಿಸಿಲು ಬೀಳುವ ಜಾಗದಲ್ಲಿಡಿ. ಬೀಜ ಮೊಳಕೆಯೊಡೆದು ಪುಟ್ಟ ಸಸಿ ಸೃಷ್ಟಿಯಾದ ಬಳಿಕ ಮೊಟ್ಟೆ ಚಿಪ್ಪನ್ನು ಕೆಳಭಾಗದಿಂದಲೇ ಒಡೆದು ಪಾಟ್ ಅಥವಾ ನೆಲದಲ್ಲಿ ನೆಡಿ. 

click me!