ಬೆಂಗಳೂರಿನಲ್ಲಿ ಮಾತ್ರವಲ್ಲ ಇನ್ಮುಂದೆ ರಾಜ್ಯದ ಈ ಜಿಲ್ಲೆಗಳಲ್ಲೂ ಸ್ವಿಗ್ಗಿ ಫುಡ್ ಡೆಲಿವರಿ ಲಭ್ಯ

By Vinutha Perla  |  First Published Sep 14, 2023, 3:39 PM IST

ಬಿಝಿಯಾಗಿದ್ದಾಗ, ಅಡುಗೆ ಮಾಡಲು ಸಮಯವಿಲ್ಲದಿದ್ದಾಗ ಆನ್‌ಲೈನ್‌ನಲ್ಲಿ ಫುಡ್ ಆರ್ಡರ್‌ ಮಾಡುವ ಫೆಸಿಲಿಟಿ ಇದ್ದರೆ ಅನುಕೂಲವಾಗುತ್ತದೆ. ಆದ್ರೆ ಝೊಮೆಟೋ, ಸ್ವಿಗ್ಗೀಯ ಸೇವೆಗಳು ಹೆಚ್ಚಾಗಿ ಪ್ರಮುಖ ಸಿಟಿಗಳಲ್ಲಿ ಮಾತ್ರ ಇರುತ್ತವೆ. ಆದ್ರೆ ಇನ್ಮುಂದೆ ಕೇವಲ ಬೆಂಗಳೂರು ಮಾತ್ರವಲ್ಲದೆ, ರಾಜ್ಯದ ಈ ಕೆಲವು ನಗರಗಳಲ್ಲೂ ಸ್ವಿಗ್ಗೀಯಲ್ಲಿ ಫುಡ್ ಆರ್ಡರ್‌ ಮಾಡಬಹುದಾಗಿದೆ. 


ಬೆಂಗಳೂರು: ತಿಂಡಿ–ತಿನಿಸುಗಳನ್ನು, ಊಟವನ್ನು ರೆಸ್ಟಾರೆಂಟ್‌ಗಳಿಂದ ಗ್ರಾಹಕರು ಇದ್ದಲ್ಲಿಗೆ ತಲುಪಿಸುವ ಸ್ವಿಗ್ಗಿ, ಕರ್ನಾಟಕದ ಏಳು ನಗರಗಳಿಗೆ ಹೊಸದಾಗಿ ತನ್ನ ಸೇವೆಗಳನ್ನು ವಿಸ್ತರಿಸುತ್ತಿರುವುದಾಗಿ ಪ್ರಕಟಿಸಿದೆ. ರಾಜ್ಯದ ಜನರಲ್ಲಿ ತಿಂಡಿ–ತಿನಿಸುಗಳ ಬಗ್ಗೆ ಇರುವ ಪ್ರೀತಿ ಹಾಗೂ ಅಭಿರುಚಿಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗುರುತಿಸಿ ಸ್ವಿಗ್ಗಿ ಕಂಪನಿಯು ತನ್ನ ಸೇವೆಗಳನ್ನು ಬಳ್ಳಾರಿ, ವಿಜಯಪುರ, ಚಿಕ್ಕಮಗಳೂರು, ಕಲಬುರ್ಗಿ, ಹಾವೇರಿ, ಶಿರಸಿ, ಕುಂದಾಪುರ ಮತ್ತು ಕೋಟೇಶ್ವರಕ್ಕೆ ವಿಸ್ತರಿಸುತ್ತಿದೆ.  

ಸ್ವಿಗ್ಗಿ ಕಂಪನಿಯು ಬೆಂಗಳೂರು, ಮಣಿಪಾಲ, ಮೈಸೂರು, ಹುಬ್ಬಳ್ಳಿ, ಬೆಳಗಾವಿ ನಗರಗಳಲ್ಲಿ ತಾನು ಈಗಾಗಲೇ ಹೊಂದಿರುವ ಅಸ್ತಿತ್ವವನ್ನು ಆಧಾರವಾಗಿ ಬಳಸಿಕೊಂಡು ಈ ವಿಸ್ತರಣಾ ಕಾರ್ಯಕ್ಕೆ ಮುಂದಾಗಿದೆ. ಈ ಕ್ರಮದ ಮೂಲಕ ಕಂಪನಿಯು ಸ್ಥಳೀಯ ಖಾದ್ಯಗಳನ್ನು (Food) ಮತ್ತು ಜನಪ್ರಿಯ ರೆಸ್ಟಾರೆಂಟ್‌ಗಳ ತಿನಿಸುಗಳನ್ನು  ಇನ್ನಷ್ಟು ಗ್ರಾಹಕರ (Customer) ಮನೆ ಬಾಗಿಲಿಗೆ ತಲುಪಿಸುವ ಗುರಿ ಹೊಂದಿದೆ. 

Tap to resize

Latest Videos

ವಾರೆವ್ಹಾ..ಝೊಮೆಟೋದ 15ನೇ ವರ್ಷದ ಬರ್ತ್‌ಡೇಗೆ ಕೇಕ್‌ ಕಳುಹಿಸಿ ಶುಭಕೋರಿದ ಸ್ವಿಗ್ಗಿ

ಐದು ಸಾವಿರಕ್ಕೂ ಹೆಚ್ಚಿನ ರೆಸ್ಟೋರೆಂಟ್‌ಗಳ ಜೊತೆ ಸ್ವಿಗ್ಗಿ ಒಪ್ಪಂದ
ಹೊಸದಾಗಿ ಸೇವೆಯನ್ನು ಒದಗಿಸುತ್ತಿರುವ ನಗರಗಳಲ್ಲಿ ಸ್ವಿಗ್ಗಿ ಕಂಪನಿಯು ಒಟ್ಟು ಐದು ಸಾವಿರಕ್ಕೂ ಹೆಚ್ಚಿನ ರೆಸ್ಟೋರೆಂಟ್‌ಗಳ ಜೊತೆ ಒಪ್ಪಂದ ಮಾಡಿಕೊಂಡಿದೆ. ಕಾಸ್ವಾ ಹಿಲ್ಸ್, ನಬಿಸ್ ಎಂಪೋರಿಯೊ (ಕಲಬುರ್ಗಿ), ಹೆರಿಟೇಜ್ (ವಿಜಯಪುರ), ಅರೇಬಿಯನ್ ಕೆಫೆ ಮತ್ತು ಶೆಟ್ಟಿ ಲಂಚ್ ಹೋಮ್ (ಶಿರಸಿ), ಐಶ್ವರ್ಯ ಗಾರ್ಡನ್ ರೆಸ್ಟಾರೆಂಟ್ (ಹಾವೇರಿ), ಗ್ರಿಲ್ಯಾಂಡ್‌ ಆ್ಯಂಡ್‌ ಸಿಜ್ಲಿ ಚಿಕನ್ (ಹಾವೇರಿ), ಹೊಟೆಲ್ ಎಮಿರೇಟ್ಸ್ (ಬಳ್ಳಾರಿ) ಮತ್ತು ಅರೇಬಿಯನ್ ನೈಟ್ಸ್ (ಚಿಕ್ಕಮಗಳೂರು) ಒಪ್ಪಂದದ ಭಾಗವಾಗಿರುವ ಕೆಲವು ರೆಸ್ಟೋರೆಂಟ್‌ಗಳಾಗಿವೆ.

ಹೊಸ ನಗರಗಳ ಗ್ರಾಹಕರು ಅರೇಬಿಯನ್, ದಕ್ಷಿಣ ಭಾರತ, ಉತ್ತರ ಕರ್ನಾಟಕದ ಖಾದ್ಯಗಳು ಸೇರಿದಂತೆ ಹತ್ತು ಹಲವು ರುಚಿಕರ ತಿನಿಸುಗಳನ್ನು ಸವಿಯಬಹುದು. ಹೊಸದಾಗಿ ಸೇವೆ ವಿಸ್ತರಿಸುತ್ತಿರುವ ನಗರಗಳಲ್ಲಿ (City) ನೂರಾರು ಮಂದಿ ಡೆಲಿವರಿ ಪ್ರತಿನಿಧಿಗಳು ಸ್ವಿಗ್ಗಿ ಜೊತೆ ಇದ್ದಾರೆ. ಇದರಿಂದಾಗಿ ಕಂಪನಿಯ ಡೆಲಿವರಿ ಸಾಮರ್ಥ್ಯವು (Capacity) ಸಧೃಡವಾಗಿದೆ. 

ಹುಡುಗಿಗೆ ಐಸ್‌ಕ್ರೀಂ ನೀಡಲು 3 ಕಿಲೋ ಮೀಟರ್ ನಡೆದ ಡೆಲಿವರಿ ಬಾಯ್‌ಗೆ ಸಿಕ್ತು ಬೆಸ್ಟ್ ಗಿಫ್ಟ್‌

ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಕಂಪನಿಯ ಆಹಾರ ಮಾರುಕಟ್ಟೆ ವಿಭಾಗದ ರಾಷ್ಟ್ರೀಯ ಬ್ಯುಸಿನೆಸ್ ಹೆಡ್ ಸಿದ್ಧಾರ್ಥ ಭಾಕೂ, 'ಕಂಪನಿಯು ತನ್ನ ಗ್ರಾಹಕರಿಗೆ ಸಾಟಿಯಿಲ್ಲದ ಅನುಕೂಲಗಳನ್ನು ಕಲ್ಪಿಸಲು ನಿರಂತರವಾಗಿ ಶ್ರಮಿಸಿದೆ. ರಾಜ್ಯದ ಈ ನಗರಗಳಿಗೆ ನಾವು ಹೊಸದಾಗಿ ಪ್ರವೇಶಿಸುವ ಮೂಲಕ ನಮ್ಮ ವಿಶ್ವದರ್ಜೆಯ ಸೇವೆಗಳನ್ನು ಇನ್ನಷ್ಟು ಹೊಸ ಗ್ರಾಹಕರಿಗೆ ಒದಗಿಸುತ್ತಿದ್ದೇವೆ. ಸ್ಥಳೀಯ ರೆಸ್ಟಾರೆಂಟ್‌ಗಳ ಜೊತೆ ಪಾಲುದಾರಿಕೆ ಮಾಡಿಕೊಳ್ಳುವುದಕ್ಕೆ, ಅವುಗಳ ಬೆಳವಣಿಗೆಗೆ ನೆರವು ನೀಡುವುದಕ್ಕೆ ಹಾಗೂ ಸ್ಥಳೀಯರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸುವುದಕ್ಕೆ ನಾವು ಉತ್ಸುಕರಾಗಿದ್ದೇವೆ' ಎಂದು ಹೇಳಿದ್ದಾರೆ.

'ಸ್ವಿಗ್ಗಿ ಒನ್' ಸದಸ್ಯರು ಉಚಿತ ಡೆಲಿವರಿ, ಬೇಡಿಕೆ ಹೆಚ್ಚಿರುವ ಅವಧಿಯಲ್ಲಿಯೂ ಹೆಚ್ಚುವರಿ ಶುಲ್ಕ ಪಾವತಿಯ ಹೊರೆ ಇಲ್ಲದಿರುವುದು ಹಾಗೂ ವಿಶೇಷ ಕೊಡುಗೆಗಳ ಪ್ರಯೋಜನ ಪಡೆಯಬಹುದು. ಈ ನಗರಗಳ ಜನಪ್ರಿಯ ಸಸ್ಯಾಹಾರಿ ರೆಸ್ಟಾರೆಂಟ್‌ಗಳಲ್ಲಿ ಸಿಗುವ ಖಾದ್ಯಗಳ ವಿಶೇಷ ಪಟ್ಟಿಯು ಸ್ವಿಗ್ಗಿಯಲ್ಲಿ ಇರಲಿದ್ದು, ಸಸ್ಯಾಹಾರಿಗಳಿಗೆ ಇದು ಪ್ರಯೋಜನ ತಂದುಕೊಡಲಿದೆ. 'ಸ್ವಿಗ್ಗಿಯ ಜೊತೆಗಿನ ಪಾಲುದಾರಿಕೆಯು ನಮ್ಮ ಗ್ರಾಹಕರ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚು ಮಾಡಿದೆ. ನಮ್ಮಲ್ಲಿನ ಖಾದ್ಯಗಳನ್ನು ಇನ್ನಷ್ಟು ಜನರಿಗೆ ತಲುಪಿಸಲು ಸಾಧ್ಯವಾಗಿದೆ' ಎಂದು ಚಿಕ್ಕಮಗಳೂರಿನ ಅರೇಬಿಯನ್‌ ನೈಟ್ಸ್‌ನ ಉಮರ್ ಅವರು ಹೇಳಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಸ್ವಿಗ್ಗಿ ಕಂಪನಿಯು ಭಾರತದಲ್ಲಿ ಬಹುಜನರ ಆಯ್ಕೆಯ ಸೇವಾದಾತ ಆಗಿ ಬೆಳೆದಿದೆ. ಆಹಾರವನ್ನು ಮನೆ ಬಾಗಿಲಿಗೆ ತರಿಸಿಕೊಳ್ಳುವ ಕೆಲಸವನ್ನು ಸುಲಭವಾಗಿಸಿರುವುದಷ್ಟೇ ಅಲ್ಲದೆ, ಇದು ಗ್ರಾಹಕರ ವಿಶ್ವಾಸಕ್ಕೆ ಕೂಡ ಪಾತ್ರವಾಗಿದೆ.

click me!