ಬೆಂಗಳೂರು ವೆದರ್ ಫುಲ್ ಹಾಳಾಗಿದೆ. ಸಿಕ್ಕಾಪಟ್ಟೆ ಚಳಿ ಶುರುವಾಗಿದೆ. ಸಾಲ್ದು ಅಂತ ಮಳೆಯ ಕಾಟ ಬೇರೆ. ಮೈ ಕೊರೆಯುವ ಚಳಿಗೆ ಬಿಸಿಬಿಸಿಯಾಗಿ ಏನಾದ್ರೂ ತಿನ್ತಾ ಇರ್ಬೇಕು ಅನ್ಸುತ್ತೆ. ಟೀ ಓಕೆ ಜೊತೆಗೆ ತಿನ್ನೋಕೆ ಏನಾದ್ರೂ ಸ್ನ್ಯಾಕ್ಸ್ ಬೇಕಲ್ವಾ ? ಚಳಿಗೆ ತಿನ್ನೋಕೆ ಕೆಲವೊಂದು ಬೆಸ್ಟ್ ಸ್ನ್ಯಾಕ್ಸ್‌ಗಳ ರೆಸಿಪಿ ಇಲ್ಲಿದೆ.
ಬರಹ: ರೇಖಾ ಭಟ್
ಇನ್‌ಸ್ಟಾಗ್ರಾಮ್‌ನಲ್ಲಿ ಭಟ್ಟರ ಅಡುಗೆ ಎಂಬ ಫುಡ್ ಬ್ಲಾಗ್ ಬರೆಯುವ ಉತ್ತರಕನ್ನಡ ಮೂಲದ ರೇಖಾ ಭಟ್ ಅವರ ಅಡುಗೆ ರೆಸಿಪಿಗಳನ್ನು
ಇಷ್ಟಪಡುವ ದೊಡ್ಡ ಸಮೂಹವೇ ಸಾಮಾಜಿಕ ಜಾಲತಾಣದಲ್ಲಿ (Social media) ಇದೆ. ಅವರ ಬಗೆಬಗೆಯ ಅಡುಗೆಯ ಫೋಟೋಗಳನ್ನು ನೋಡಿದರೆ ಬಾಯಲ್ಲಿ ನೀರೂರುತ್ತದೆ. ಅಂಥಾ ವಿಶಿಷ್ಟ ಫುಡ್‌ಬ್ಲಾಗರ್ ನೀಡಿರುವ ವಿಶೇಷ ಅಡುಗೆ ರೆಸಿಪಿಗಳು ಇಲ್ಲಿವೆ.
ಬಾಳೆಹಣ್ಣಿನ ಸುಟ್ಟೇವು
ಬೇಕಾಗುವ ಸಾಮಗ್ರಿಗಳು
ಬಾಳೆಹಣ್ಣು - 6-8
ಜೋನಿಬೆಲ್ಲ - ಅರ್ಧ ಕಪ್ (ಅಂದಾಜು)
ಏಲಕ್ಕಿಪುಡಿ - ಅರ್ಧ ಚಮಚ
ಅಡುಗೆಸೋಡಾ ಸ್ಪಲ್ಪ
ಉಪ್ಪು
ಕರಿಯಲು ಎಣ್ಣೆ
ಮಾಡುವ ವಿಧಾನ: ಮೊದಲು 6-8 ಚೆನ್ನಾಗಿ ಕಳಿತ ಬಾಳೆಹಣ್ಣನ್ನು (Banana) ನುರಿದು ಅಥವಾ ಮಿಕ್ಸಿಯಲ್ಲಿ ರುಬ್ಬಿ ಇಟ್ಟುಕೊಳ್ಳಿ. ಈಗ ಅದಕ್ಕೆ ಅರ್ಧ ಕಪ್ ಜೋನಿಬೆಲ್ಲ, ಸ್ವಲ್ಪ ಉಪ್ಪು, ಏಲಕ್ಕಿಪುಡಿ, ಚಿಟಿಕೆ ಅಡುಗೆಸೋಡ, ಹಾಕಿ ಕಲಸಿ. ಅದಕ್ಕೆ ಸ್ವಲ್ಪ ಸ್ವಲ್ಪವೇ ಗೋಧಿಹಿಟ್ಟು (Wheat flour) ಸೇರಿಸುತ್ತಾ ತೆಳ್ಳಗೆ ಕಲಸಿಕೊಳ್ಳಿ. ಕೊನೆಯಲ್ಲಿ ಸ್ವಲ್ಪ ಕೊಬ್ಬರಿ ಎಣ್ಣೆ ಸೇರಿಸಿ ಕಲಸಿ 10 ನಿಮಿಷ ಮುಚ್ಚಿಡಿ. ಈಗ ಕಾದ ಕೊಬ್ಬರಿ ಎಣ್ಣೆಯಲ್ಲಿ ಸ್ವಲ್ಪ ಸ್ವಲ್ಪವೇ ಬಿಟ್ಟು ಸಣ್ಣ ಉರಿಯಲ್ಲಿ ಕರಿದು ತೆಗೆಯಿರಿ. ಹೊರಗೆ ಗರಿಗರಿ, ಒಳಗೆ ಸಾಫ್ಟ್ ಆದ ಸುಟ್ಟೇವು ರೆಡಿ. ತುಪ್ಪದೊಂದಿಗೆ ಅಥವಾ ಹಾಗೆಯೇ ತಿನ್ನಬಹುದು.
Winter Food: ಚಳಿಗಾಲದಲ್ಲಿ ಸೇವಿಸಲು ಆಯುರ್ವೇದ ಶಿಫಾರಸು ಮಾಡಿರುವ ಆಹಾರಗಳು
ಶಂಕರಪೋಳಿ
ಬೇಕಾಗುವ ಸಾಮಗ್ರಿಗಳು
ಮೈದಾಹಿಟ್ಟು - 2 ಕಪ್
ಸಕ್ಕರೆಪುಡಿ - ಅರ್ಧ ಕಪ್
ಹಾಲು -ಅರ್ಧ ಕಪ್
ತುಪ್ಪ - 4 ಚಮಚ
ಸೋಂಪು - 1 ಚಮಚ
ಉಪ್ಪು ಚಿಟಿಕೆ
ಎಣ್ಣೆ - ಕರಿಯಲು
ಮಾಡುವ ವಿಧಾನ: ಮೈದಾಹಿಟ್ಟು, ಸಕ್ಕರೆಪುಡಿ, ಸೋಂಪು (ಕುಟ್ಟಿ ಪುಡಿ ಮಾಡಿದ್ದು), ಉಪ್ಪು ಎಲ್ಲವನ್ನೂ ಹಾಕಿ ಕೈಯಾಡಿಸಿ. ಬಿಸಿಬಿಸಿ ತುಪ್ಪವನ್ನು ಅದಕ್ಕೆ ಸ್ವಲ್ಪ ಸ್ವಲ್ಪ ಹಾಕಿ ಚೆನ್ನಾಗಿ ಹಿಟ್ಟಿಗೆ ಸೇರಿಕೊಳ್ಳುವಂತೆ ಕೈಯ್ಯಲ್ಲಿ ಮಿಕ್ಸ್ ಮಾಡಿ. ಈಗ ಸ್ವಲ್ಪ ಸ್ವಲ್ಪವೇ
ಹಾಲು ಸೇರಿಸಿ ಚಪಾತಿ ಹಿಟ್ಟಿನಂತೆ ಕಲಸಿ 15 ನಿಮಿಷ ಗಾಳಿಯಾಡದಂತೆ ಮುಚ್ಚಳ ಮುಚ್ಚಿಡಿ. ನಂತರ ಮತ್ತೊಮ್ಮೆ ಚೆನ್ನಾಗಿ ನಾದಿ ದೊಡ್ಡ ದೊಡ್ಡ ಉಂಡೆ ಮಾಡಿ ಮೈದಾಹಿಟ್ಟಲ್ಲಿ ಅದ್ದಿ ಸ್ವಲ್ಪ ದಪ್ಪಗೆ ಲಟ್ಟಿಸಿ. ಸ್ಕ್ವೇರ್ ಅಥವಾ ಡೈಮಂಡ್ ಆಕಾರದಲ್ಲಿ ಕತ್ತರಿಸಿ ಕಾದ ಎಣ್ಣೆಯಲ್ಲಿ ಸಣ್ಣ ಉರಿಯಲ್ಲಿ ಹೊಂಬಣ್ಣ ಬರು ವವರೆಗೆ ಕರಿದು ತೆಗೆದರೆ ಪೊಳ್ಳುಪೊಳ್ಳಾದ, ಗರಿಗರಿಯಾದ ಶಂಕರಪೋಳಿ ರೆಡಿ. ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಸ್ಟೋರ್ ಮಾಡಿ
ಉದ್ದಿನ ಬೋಂಡ
ಬೇಕಾಗುವ ಸಾಮಗ್ರಿಗಳು
ಉದ್ದಿನಬೇಳೆ - 1 ಕಪ್
ಅಕ್ಕಿಹಿಟ್ಟು - 4 ಚಮಚ
ಶುಂಠಿ - 1 ಇಂಚು
ಹಸಿಮೆಣಸು - 4-6
ಕರಿಬೇವು - 10-12 ಎಲೆ
ಕೊತ್ತಂಬರಿ ಸೊಪ್ಪು - ಒಂದು ಹಿಡಿ
ಒಣಕೊಬ್ಬರಿ ಪೀಸ್ ಸ್ವಲ್ಪ
ಕಾಳುಮೆಣಸು - 8-10 ಕಾಳು
ಉಪ್ಪು
ಕರಿಯಲು ಎಣ್ಣೆ
ಮಾಡುವ ವಿಧಾನ: ಒಂದು ಕಪ್ ಉದ್ದಿನಬೇಳೆಯನ್ನು ತೊಳೆದು 4-5 ಗಂಟೆ ನೆನೆಸಿಡಿ. ಈಗ ಸ್ವಲ್ಪವೇ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಅದಕ್ಕೆ ಅಕ್ಕಿಹಿಟ್ಟು, ಶುಂಠಿತುರಿ, ಹೆಚ್ಚಿಕೊಂಡ ಹಸಿಮೆಣಸು (Green chillies), ಕರಿಬೇವು, ಕೊತ್ತಂಬರಿಸೊಪ್ಪು, ಒಣಕೊಬ್ಬರಿ, ಜಜ್ಜಿಕೊಂಡ ಕಾಳುಮೆಣಸು, ಉಪ್ಪು ಹಾಕಿ ಚೆನ್ನಾಗಿ ಕಲಸಿ. ಕಾದ ಎಣ್ಣೆಗೆ ಬೋಂಡಾ ಥರ ಬಿಟ್ಟು ಕರಿದು ತೆಗೆಯಿರಿ. ಕಾಯಿಚಟ್ನಿಯೊಂದಿಗೆ ಸರ್ವ್ ಮಾಡಿ
Winter Food: ನಾಲಿಗೆ ಚಪ್ಪರಿಸುತ್ತಲೇ ಇರಬೇಕೆನಿಸೋ ರುಚಿ ರುಚೀ ಟೊಮ್ಯಾಟೋ ಕಾಯಿ ಚಟ್ನಿ
ಪುದೀನಾ ಅಂಬೊಡೆ
ಬೇಕಾಗುವ ಸಾಮಗ್ರಿಗಳು
ಕಡಲೆಬೇಳೆ - 2 ಕಪ್
ಅಕ್ಕಿಹಿಟ್ಟು - ಅರ್ಧಕಪ್
ಹಸಿಮೆಣಸು - 4
ಶುಂಠಿ - 1 ಇಂಚು
ಉಪ್ಪು
ಪುದೀನಾಸೊಪ್ಪು - 2 ಹಿಡಿ
ಕೊತ್ತಂಬರಿಸೊಪ್ಪು 1- ಹಿಡಿ
ಎಣ್ಣೆ - ಕರಿಯಲು
ಮಾಡುವ ವಿಧಾನ: ಮಿಕ್ಸಿ ಜಾರ್‌ಗೆ 2-3 ಗಂಟೆ ನೆನೆಸಿಟ್ಟ ಕಡಲೆಬೇಳೆ, ಸ್ವಲ್ಪವೇ ನೀರು ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ. ಅದಕ್ಕೆ ಸಣ್ಣದಾಗಿ ಹೆಚ್ಚಿಕೊಂಡ ಕೊತ್ತಂಬರಿಸೊಪ್ಪು, ಪುದೀನಾಸೊಪ್ಪು, ಶುಂಠಿ-ಹಸಿಮೆಣಸು ಪೇಸ್ಟ್, ಉಪ್ಪು, ಅಕ್ಕಿಹಿಟ್ಟು (Rice flour) ಹಾಕಿ ಚೆನ್ನಾಗಿ ಕಲಸಿ. ಚಿಕ್ಕ ಉಂಡೆ ಮಾಡಿ, ಕೊಂಚ ಚಪ್ಪಟೆ ಮಾಡಿ ಕಾದ ಎಣ್ಣೆಗೆ ಹಾಕಿ ಮಧ್ಯಮ ಉರಿಯಲ್ಲಿ ಕೆಂಪಾಗುವವರೆಗೆ ಕರಿದು ತೆಗೆಯಿರಿ. ಪುದೀನಾ ಪರಿಮಳದ ಅಂಬೊಡೆ/ ವಡಾ ರೆಡಿ.