ಚಳಿಗಾಲ ಶುರುವಾಗ್ತಿದ್ದಂತೆ ಮಾರುಕಟ್ಟೆಗೆ ಸಿಹಿ ಗೆಣಸು ಬರಲು ಶುರುವಾಗುತ್ತದೆ. ಆರೋಗ್ಯಕರ ಗೆಡ್ಡೆಯಲ್ಲಿ ಒಂದಾಗಿರುವ ಸಿಹಿ ಗೆಣಸು ತಿನ್ನಲು ಬಹಳ ರುಚಿ. ಇದ್ರಲ್ಲಿ ಅನೇಕ ಬಗೆಯ ಆಹಾರ ತಯಾರಿಸಬಹುದು.
ಚಳಿಗಾಲದಲ್ಲಿ ಸಿಹಿ ಗೆಣಸು ತಿನ್ನಲು ಬಹುತೇಕರು ಇಷ್ಟಪಡುತ್ತಾರೆ. ಬಿಸಿ ಮತ್ತು ಮಸಾಲೆಯುಕ್ತ ಸಿಹಿ ಆಲೂಗಡ್ಡೆ ತಿನ್ನಲು ಮಾತ್ರ ರುಚಿಯಲ್ಲ.ಆರೋಗ್ಯಕ್ಕೂ ಇದು ಪ್ರಯೋಜನಕಾರಿ. ಸಿಹಿ ಗೆಣಸಿನಲ್ಲಿ ಖನಿಜ ಮತ್ತು ಉತ್ಕರ್ಷಣ ನಿರೋಧಕ ಹೇರಳವಾಗಿ ಕಂಡುಬರುತ್ತವೆ. ಇದರಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಆಲೂಗಡ್ಡೆಗಿಂತ ಸಿಹಿ ಆಲೂಗಡ್ಡೆ ಹೆಚ್ಚು ಪೌಷ್ಟಿಕದಿಂದ ಕೂಡಿರುತ್ತದೆ. ಇದರ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವುದರಿಂದ ಇದನ್ನು ಮಧುಮೇಹಿಗಳೂ ತಿನ್ನಬಹುದು. ವಿಟಮಿನ್ ಎ ಮತ್ತು ಬಿಟಿ ಕ್ಯಾರೋಟಿನ್ ಸಿಹಿಗೆಣಸಿನಲ್ಲಿ ಕಂಡುಬರುತ್ತದೆ. ಇದು ಕಣ್ಣುಗಳ ಆರೋಗ್ಯ ವೃದ್ಧಿಸುತ್ತದೆ. ನಾರಿನಂಶವಿರುವ ಸಿಹಿಗೆಣಸನ್ನು ಸೇವನೆ ಮಾಡೋದ್ರಿಂದ ತೂಕ ಕೂಡ ಇಳಿಯುತ್ತದೆ.
ಚಳಿಗಾಲ (Winter) ದಲ್ಲಿ ಅನೇಕ ಕಡೆ ಮಸಾಲೆ ಸಿಹಿ ಗೆಣಸು ಸಿಗುತ್ತದೆ. ಮನೆಯಲ್ಲಿ ಸಿಹಿ ಗೆಣಸಿನಿಂದ ತಯಾರಿಸಿದ ಚಾಟ್ ತಯಾರಿಸಿ ತಿನ್ನುವ ಖುಷಿಯೇ ಬೇರೆ. ನೀವು ಸಿಹಿ ಗೆಣಸು (Sweet Potato) ಚಾಟ್ ಇಷ್ಟಪಟ್ಟರೆ ಸ್ಟಾಲ್‌ಗೆ ಹೋಗುವ ಬದಲು ಮನೆಯಲ್ಲಿಯೇ ತಯಾರಿಸಿ ತಿನ್ನಿರಿ. ಮನೆಯಲ್ಲಿ ತಯಾರಿಸಿದ ಸಿಹಿ ಗೆಣಸಿನ ಚಾಟ್ (Chat) ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದನ್ನು ತಯಾರಿಸುವುದು ಕೂಡ ಸುಲಭ. ನಾವಿಂದು ಸಿಹಿ ಗೆಣಸಿನ ಚಾಟ್ ತಯಾರಿಸೋದು ಹೇಗೆ ಅಂತಾ ನಿಮಗೆ ಹೇಳ್ತೆವೆ.
ಸಿಹಿ ಗೆಣಸಿನ ಚಾಟ್ ತಯಾರಿಸಲು ಬೇಕಾಗುವ ಪದಾರ್ಥಗಳು :
ಮಧ್ಯಮ ಗಾತ್ರದ 2 ಸಿಹಿ ಆಲೂಗಡ್ಡೆ
ಚಾಟ್ ಮಸಾಲಾ 1/2 ಚಮಚ
ಚಿಲ್ಲಿ ಸಾಸ್ 2 ಚಮಚ
ಸಿಹಿ ಚಟ್ನಿ 2 ಚಮಚ
ದಾಳಿಂಬೆ ಕಾಳು 1/2 ಕಪ್
ಸೇವ್ 1/2 ಕಪ್
ಕೊತ್ತಂಬರಿ ಸೊಪ್ಪು 1 ಚಮಚ
ರುಚಿಗೆ ತಕ್ಕಷ್ಟು ಕಲ್ಲು ಉಪ್ಪು
Healthy Food : ಹಸಿವಾದಾಗ ಹಾಳು ಮೂಳು ತಿನ್ನೋದು ಎಷ್ಟು ಸರಿ?
ಸಿಹಿ ಗೆಣಸಿನ ಚಾಟ್ ತಯಾರಿಸುವ ವಿಧಾನ : ಸಿಹಿ ಆಲೂಗಡ್ಡೆ ಚಾಟ್ ಅನ್ನು ಎರಡು ರೀತಿಯಲ್ಲಿ ತಯಾರಿಸಬಹುದು. ಕೆಲವರು ಸಿಹಿಗೆಣಸಿನ ಸಿಪ್ಪೆ ಸುಲಿದು ಚಿಕ್ಕದಾಗಿ ಕತ್ತರಿಸಿ ಹುರಿಯುತ್ತಾರೆ. ಇದರ ನಂತರ ಅದಕ್ಕೆ ಮಸಾಲೆಗಳನ್ನು ಸೇರಿಸುವ ಮೂಲಕ ಚಾಟ್ ತಯಾರಿಸುತ್ತಾರೆ. ಕೆಲವರು ಸಿಹಿ ಆಲೂಗಡ್ಡೆಗಳನ್ನು ಬೇಯಿಸಿ ನಂತ್ರ ಚಾಟ್ ತಯಾರಿಸುತ್ತಾರೆ. ನೀವು ಮೊದಲು ಸಿಹಿ ಆಲೂಗಡ್ಡೆಯನ್ನು ಬೇಯಿಸಬೇಕು. ನಂತರ ಅದನ್ನು ಸಣ್ಣ ತುಂಡುಗಳಾಗಿ ಕತ್ತರಿಸಬೇಕು. ಇದರ ನಂತರ ಸಿಹಿ ಚಟ್ನಿ, ಚಿಲ್ಲಿ ಸಾಸ್, ಚಾಟ್ ಮಸಾಲಾ, ಕೊತ್ತಂಬರಿ ಸೊಪ್ಪು, ಕಲ್ಲು ಉಪ್ಪು, ದಾಳಿಂಬೆ ಕಾಳು ಮತ್ತು ಸೇವ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಈಗ ರುಚಿಯಾದ ಸಿಹಿ ಗೆಣಸಿನ ಚಾಟ್ ತಿನ್ನಲು ಸಿದ್ಧ.
RECAP 2022: ಈ ವರ್ಷ ಜನ ಅತೀ ಹೆಚ್ಚು ಗೂಗಲ್ ಮಾಡಿದ ಆಹಾರ ಯಾವುದು ?
ಸಿಹಿ ಗೆಣಸಿನ ಚಾಟ್ ಸೇವನೆಯಿಂದ ಏನು ಪ್ರಯೋಜನ? : ಸಿಹಿ ಗೆಣಸನ್ನು ಬೇಯಿಸಿ ಹಾಗೇ ಸೇವನೆ ಮಾಡಬಹುದು. ರುಚಿ ಹೆಚ್ಚಾಗಬೇಕೆಂದ್ರೆ ನೀವು ಚಾಟ್ ತಯಾರಿಸಿ ತಿನ್ನಬಹುದು. ಈ ಚಾಟ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ದೇಹದ ತೂಕವನ್ನು ಕಡಿಮೆ ಮಾಡಲು ಇದು ನೆರವಾಗುತ್ತದೆ. ಅಜೀರ್ಣ ಸಮಸ್ಯೆಯನ್ನು ಮುಕ್ತಿ ಪಡೆಯಲು ಗೆಣಸನ್ನು ಸೇವನೆ ಮಾಡಬೇಕು. ಸಿಹಿ ಆಲೂಗೆಡ್ಡೆಯಲ್ಲಿರುವ ಫೈಬರ್ ಮಲಬದ್ಧತೆ ಮತ್ತು ಆಮ್ಲೀಯತೆಯ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಫೈಬರ್ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದು, ಇದು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ದೇಹದಲ್ಲಿ ಕಬ್ಬಿಣದ ಕೊರತೆಯಿದ್ದವರು ಸಿಹಿ ಆಲೂಗಡ್ಡೆಯನ್ನು ಸೇವಿಸಬೇಕು. ದೇಹಕ್ಕೆ ಶಕ್ತಿ ನೀಡುವ ಕೆಲಸವನ್ನು ಸಿಹಿ ಗೆಣಸು ಮಾಡುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲಸವನ್ನು ಸಿಹಿ ಗೆಣಸು ಮಾಡುತ್ತದೆ. ರಕ್ತದೊತ್ತಡ ಸಮಸ್ಯೆಯಿದ್ದವರು ಸಿಹಿ ಗೆಣಸು ಸೇವನೆ ಮಾಡಿದ್ರೆ ಹೆಚ್ಚು ಪ್ರಯೋಜನ ಪಡೆಯುತ್ತಾರೆ.