ಕಣ್ಣಿಗೆ ಕಾಣದ, ಚಿತ್ರಹಿಂಸೆ ನೀಡುವ ರೋಗದಲ್ಲಿ ಅಸಿಡಿಟಿ ಒಂದು. ನಾನಾ ಕಾರಣಕ್ಕೆ ಇದು ನಮ್ಮನ್ನು ಕಾಡುತ್ತದೆ. ಅಸಿಡಿಟಿಯಿಂದ ಬಳಲುತ್ತಿರುವ ಜನರು ಮಾತ್ರೆ ಬದಲು ಮನೆಯಲ್ಲಿರುವ ವಸ್ತುವಿನಿಂದ್ಲೇ ಪರಿಹಾರ ಕಂಡುಕೊಳ್ಳಬಹುದು.
ಅಸಿಡಿಟಿ ಈಗಿನ ದಿನಗಳಲ್ಲಿ ಜನರನ್ನು ಹೆಚ್ಚಾಗಿ ಕಾಡ್ತಿದೆ. ಜೀವನ ಶೈಲಿ, ವ್ಯಾಯಾಮದ ಕೊರತೆ, ಕೆಟ್ಟ ಆಹಾರ ಪದ್ಧತಿಯಿಂದಾಗಿ ಜನರು ಅಸಿಡಿಟಿ ಸಮಸ್ಯೆಗೆ ಒಳಗಾಗ್ತಿದ್ದಾರೆ. ಒಮ್ಮೆ ಶುರುವಾದ ಈ ಅಸಿಡಿಟಿಯಿಂದ ಮುಕ್ತಿ ಪಡೆಯೋದು ಕಷ್ಟ. ಅಸಿಡಿಟಿಯಿಂದ ಹೊಟ್ಟೆ ಉರಿ, ವಾಕರಿಕೆ, ವಾಂತಿ, ತಲೆನೋವು, ಮೈಕೈನೋವು ಸೇರಿದಂತೆ ಅನೇಕ ಸಮಸ್ಯೆ ಶುರುವಾಗುತ್ತದೆ. ಅಸಿಡಿಟಿ (Acidity) ಯಿಂದ ನೆಮ್ಮದಿ ಪಡೆಯಲು ಜನರು ಔಷಧಿ (Medicine) ಗಳ ಸೇವನೆಗೆ ಮುಂದಾಗ್ತಾರೆ. ಮಾತ್ರೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಿದ್ರೆ ಅದು ಅಡ್ಡಪರಿಣಾಮ ಬೀರುತ್ತದೆ. ಅಸಿಡಿಟಿ ಸಮಸ್ಯೆಯಿಂದ ಹೊರಗೆ ಬರಬೇಕು ಎನ್ನುವವರು ಪುದೀನಾ (Mint) ಎಲೆಗಳನ್ನು ಬಳಸಬಹುದು. ಪುದೀನಾ ಎಲೆ ನಿಮ್ಮ ಅಸಿಡಿಟಿ ಸಮಸ್ಯೆಗೆ ರಾಮಬಾಣ.
ಪುದೀನಾ ಎಲೆ ಸೇವನೆಯು ಹೊಟ್ಟೆಗೆ ತುಂಬಾ ಪ್ರಯೋಜನಕಾರಿ. ಪುದೀನಾದಲ್ಲಿ ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ, ಕ್ಯಾಲ್ಸಿಯಂ, ರಂಜಕ ಮತ್ತು ಕಿಣ್ವಗಳಂತಹ ಪೋಷಕಾಂಶಗಳು ಕಂಡುಬರುತ್ತವೆ. ಇವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಹೊಟ್ಟೆಯ ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ. ಪುದೀನಾ ಸೊಪ್ಪು ತಂಪಿನ ಗುಣವನ್ನು ಹೊಂದಿದ್ದು, ಅದರ ಸೇವನೆಯಿಂದ ಹೊಟ್ಟೆ ತಂಪಾಗುತ್ತದೆ. ಎದೆ ಉರಿ ಸಮಸ್ಯೆ ಕಡಿಮೆಯಾಗುತ್ತದೆ. ಅಸಿಡಿಟಿ ಇರುವವರು ಪುದೀನಾವನ್ನು ಹೇಗೆ ಸೇವನೆ ಮಾಡ್ಬೇಕು ಎಂಬ ಪ್ರಶ್ನೆ ಕಾಡುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.
ಅಪ್ಪಿತಪ್ಪಿಯೂ ಈ ಪದಾರ್ಥಗಳನ್ನು ಕುಕ್ಕರ್‌ನಲ್ಲಿ ಬೇಯಿಸಬೇಡಿ
ಅಸಿಡಿಟಿ ಸಮಸ್ಯೆಯಿರುವವರು ಪುದೀನಾವನ್ನು ಹೇಗೆ ಸೇವನೆ ಮಾಡಿ :
ಖಾಲಿ ಹೊಟ್ಟೆಯಲ್ಲಿ ಪುದೀನಾ ಎಲೆ ತಿನ್ನಿ : ನಿಮಗೆ ಅಸಿಡಿಟಿ ಸಮಸ್ಯೆ ಇದೆ ಎಂದಾದ್ರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪುದೀನಾ ಎಲೆಗಳನ್ನು ತಿನ್ನಿ. ಪುದೀನಾ ಎಲೆಯನ್ನು ಖಾಲಿ ಹೊಟ್ಟೆಯಲ್ಲಿ ಜಗಿದು ತಿನ್ನುವುದ್ರಿಂದ ಹಲವಾರು ಪ್ರಯೋಜನಗಳಿವೆ. ಪುದೀನದಲ್ಲಿ ಮೆಂತೆ ಅಂಶವಿದ್ದು, ಇದು ಹೊಟ್ಟೆಯನ್ನು ತಂಪಾಗಿಡುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಹೊಟ್ಟೆಯಲ್ಲಿ ಸಾಂಕ್ರಾಮಿಕ ಬ್ಯಾಕ್ಟೀರಿಯಾವನ್ನು ತಡೆಯಲು ಸಹಾಯ ಮಾಡುತ್ತದೆ. ಇದು ಹೊಟ್ಟೆ ನೋವು, ಅಸಿಡಿಟಿ, ಗ್ಯಾಸ್ ಮತ್ತು ಅಜೀರ್ಣದಂತಹ ಸಮಸ್ಯೆಗಳಿಂದ ನಿಮ್ಮನ್ನು ದೂರವಿಡುತ್ತದೆ. ಬಾಯಿಯ ಆರೋಗ್ಯಕ್ಕೂ ಇದು ಪ್ರಯೋಜನಕಾರಿ. ನಿಮ್ಮ ಬಾಯಿಯಿಂದ ಬರುವ ವಾಸನೆಯನ್ನು ಇದು ಕಡಿಮೆ ಮಾಡುತ್ತದೆ.
ಪುದೀನಾ ಮತ್ತು ಓಂಕಾಳಿನ ಚಟ್ನಿ : ಅಸಿಡಿಟಿ ಸಮಸ್ಯೆಯಿಂದ ತೊಂದರೆಯಾಗಿದ್ದರೆ ಪುದೀನಾ ಮತ್ತು ಓಂಕಾಳಿನ ಚಟ್ನಿ ಮಾಡಿ ತಿನ್ನಬೇಕು. ಜೀರ್ಣಕ್ರಿಯೆ ಸುಧಾರಿಸಲು ಓಂಕಾಳು ಹಾಗೂ ಪುದೀನಾ ಎರಡೂ ಪ್ರಯೋಜನಕಾರಿ. ಗ್ಯಾಸ್, ಅಸಿಡಿಟಿ, ಮಲಬದ್ಧತೆ ಮತ್ತು ಅಜೀರ್ಣದಂತಹ ಸಮಸ್ಯೆಗಳಿಂದ ಪರಿಹಾರ ಪಡೆಯಲು ನೀವು ಓಂಕಾಳಿನ ಜೊತೆ ಪುದೀನಾ ಚಟ್ನಿ ತಯಾರಿಸಿ. 5-6 ಲವಂಗ, ನಾಲ್ಕೈದು ಬೆಳ್ಳುಳ್ಳಿ ಎಸಳು, ನಾಲ್ಕೈದು ಪುದೀನಾ ಎಲೆ ಮತ್ತು ಅರ್ಧ ಟೀಚಮಚ ಓಂಕಾಳನ್ನು ಸೇರಿಸಿ ಪುಡಿ ಮಾಡಿ ಅದಕ್ಕೆ ಉಪ್ಪು ಹಾಕಿ ನೀವು ಚಟ್ನಿ ತಯಾರಿಸಿ ಸೇವನೆ ಮಾಡಬೇಕು.
ಡಿಟಾಕ್ಸ್ ಪೇಯ: ಜೇನುತುಪ್ಪ, ನಿಂಬೆ ರಸ, ಬಿಸಿನೀರಿನಿಂದೇನು ಪ್ರಯೋಜನ?
ಪುದೀನಾ ಟೀ : ಅಸಿಡಿಟಿ ಸಮಸ್ಯೆಯಿದೆ ಎನ್ನುವವರು ಪುದೀನಾ ಎಲೆಗಳ ಟೀ ಕುಡಿಯಬೇಕು. ಟೀ ಸೇವನೆಯಿಂದ ಶೀಘ್ರವೇ ಅಸಿಡಿಟಿ ಸಮಸ್ಯೆಗೆ ಮುಕ್ತಿ ಸಿಗುತ್ತದೆ. ದೇಹದ ಪಿಹೆಚ್ ಮಟ್ಟವನ್ನು ಇದು ಸಮತೋಲಿತವಾಗಿಡುತ್ತದೆ. ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಪುದೀನಾ ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಹಾಲಿನ ಟೀ ಬದಲು ನೀವು ಬೆಳಗ್ಗೆ ಪುದೀನಾ ಟೀ ಸೇವಿಸಬೇಕು. ಒಂದು ಲೋಟ ನೀರನ್ನು ಬಿಸಿ ಮಾಡಿ ಅದಕ್ಕೆ 4-5 ಪುದೀನಾ ಎಲೆಗಳನ್ನು ಹಾಕಿ ಕುದಿಸಿ. ನಂತರ ಅದನ್ನು ಫಿಲ್ಟರ್ ಮಾಡಿ ಮತ್ತು ಸೇವಿಸಿ.
ಪುದೀನಾ ಮಜ್ಜಿಗೆ : ಮಜ್ಜಿಗೆಗೆ ಪುದೀನಾ ಸೊಪ್ಪನ್ನು ಸೇರಿಸಿ ಕುಡಿಯುವುದರಿಂದ ಅಸಿಡಿಟಿ ಸಮಸ್ಯೆ ಕಡಿಮೆಯಾಗುತ್ತದೆ. ಇದು ಕರುಳಿನಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾವನ್ನು ಉತ್ತೇಜಿಸುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಪುದೀನಾ ಸೇರಿಸಿದ ಮಜ್ಜಿಗೆ ಹೊಟ್ಟೆಯನ್ನು ತಂಪಾಗಿಸುತ್ತದೆ. ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಪುದೀನ ಎಲೆಗಳು ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುತ್ತದೆ. ಇದು ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ.