ಅತ್ಯುತ್ತಮ ಬೇಳೆಕಾಳುಗಳನ್ನು ಮನೆಗೆ ತರುವ ಪ್ಲಾನ್ ಮಾಡಿ ಮಾರುಕಟ್ಟಗೆ ಹೋಗಿರ್ತೇವೆ. ಖರೀದಿ ಮಾಡಿ ಮನೆಗೆ ತಂದು ಅಡುಗೆ ಮಾಡಿದಾಗ ಕೆಲವೊಂದು ದೋಷ ಕಾಣಿಸುತ್ತದೆ. ಮತ್ತೆ ಕೆಲವು ದೋಷ ನಮ್ಮ ಅರಿವಿಗೆ ಬರೋದೇ ಇಲ್ಲ.
ಭಾರತೀಯ ಮನೆಗಳಲ್ಲಿ ಬೇಳೆಕಾಳುಗಳಿಲ್ಲದೆ ಅಡುಗೆಯಿಲ್ಲ. ಪ್ರತಿಯೊಬ್ಬರ ಮನೆಯಲ್ಲೂ ಬೇಳೆಗಳ ಬಳಕೆ ಹೆಚ್ಚು. ಸಾಂಬಾರ್ ಗೆ ತೊಗರಿ ಬೇಳೆ ಬೇಕೇಬೇಕು ಎನ್ನುವವರಿದ್ದಾರೆ. ಇಡ್ಲಿಗೆ ಉದ್ದಿನ ಬೇಳೆಯಾದ್ರೆ ಒಗ್ಗರಣೆಗೆ ಕಡಲೆ ಬೇಳೆ ಎನ್ನುತ್ತಾರೆ ಜನರು. ಒಟ್ಟಿನಲ್ಲಿ ಒಂದಲ್ಲ ಒಂದು ಆಹಾರ ತಯಾರಿಸಲು ಜನರು ಬೇಳೆ ಬಳಸ್ತಾರೆ. ಈ ಬೇಳೆಗಳಲ್ಲಿ ಹೆಸರು ಬೇಳೆ ಕೂಡ ಒಂದು. ಭಾರತದ ಅನೇಕ ಮನೆಗಳಲ್ಲಿ ಸಾಂಬಾರ್ ತಯಾರಿಸಲು ಹೆಸರು ಬೇಳೆ ಉಪಯೋಗಿಸ್ತಾರೆ. ಹೆಸರು ಬೇಳೆ ತೊವ್ವೆ, ಪೊಂಗಲ್, ಹೆಸರು ಬೇಳೆ ಪಾಯಸ ಸೇರಿದಂತೆ ಅನೇಕ ರೆಸಿಪಿಗಳಿಗೆ ಹೆಸರು ಬೇಳೆಯನ್ನು ಬಳಸಲಾಗುತ್ತದೆ. ಹೆಸರು ಬೇಳೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಮಾರುಕಟ್ಟೆಯಿಂದ ಒಳ್ಳೆ ಗುಣಮಟ್ಟದ ಹೆಸರು ಬೇಳೆ ಖರೀದಿಸಿ ತಂದಾಗ ಅದ್ರ ಪ್ರಯೋಜ ಡಬಲ್ ಆಗುತ್ತದೆ. ಹಾಗೆಯೇ ಒಳ್ಳೆ ಗುಣಮಟ್ಟದ ಹೆಸರು ಬೇಳೆಯಲ್ಲಿ ಮಾಡಿದ ಆಹಾರದ ರುಚಿ ಹೆಚ್ಚು. ಗುಣಮಟ್ಟದ ಹೆಸರು ಬೇಳೆ ಮನೆಗೆ ಬರ್ಬೇಕೆಂದ್ರೆ ಹೆಸರು ಬೇಳೆ ಖರೀದಿ ವೇಳೆ ಕೆಲವು ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಆ ವಿಷ್ಯಗಳು ಯಾವುವು ಎಂಬುದನ್ನು ನಾವಿಂದು ಹೇಳ್ತೇವೆ.
ಹೆಸರು ಬೇಳೆ (Moong Dal) ಖರೀದಿಸುವ ಮುನ್ನ :
ಹೆಸರು ಬೇಳೆಯ ಬಣ್ಣ : ಹೆಸರು ಬೇಳೆ ಕಡು ಹಳದಿ (Yellow) ಬಣ್ಣದಲ್ಲಿರುತ್ತದೆ ಎಂದು ಅನೇಕ ಜನರು ಗೊಂದಲಕ್ಕೊಳಗಾಗುತ್ತಾರೆ. ಆದರೆ ಈ ಭ್ರಮೆಯಲ್ಲಿ ನೀವಿದ್ದರೆ ಹೊರಗೆ ಬನ್ನಿ. ಹೆಸರು ಬೇಳೆ ತಿಳಿ ಹಳದಿ ಬಣ್ಣವನ್ನು ಹೊಂದಿರುತ್ತದೆ. ಯಾವಾಗ್ಲೂ ತಿಳಿ ಹಳದಿ ಬಣ್ಣದ ಹೆಸರು ಬೇಳೆ ಖರೀದಿ ಮಾಡಿ. ಕಡು ಹಳದಿ ಬಣ್ಣದ ಹೆಸರು ಬೇಳೆಯನ್ನು ಖರೀದಿಸಬೇಡಿ. ಅದರಲ್ಲಿ ಕೃತಕ ಬಣ್ಣ ಬಳಸಿರುವ ಸಾಧ್ಯತೆಯಿರುತ್ತದೆ. ಇದು ನಿಮ್ಮ ಆರೋಗ್ಯ (Health) ಕ್ಕೆ ಹಾನಿಯುಂಟು ಮಾಡುವ ಸಾಧ್ಯತೆಯಿರುತ್ತದೆ.
ಹೆಸರು ಬೇಳೆಯ ಗಾತ್ರ : ಹೆಸರು ಬೇಳೆಯಲ್ಲಿ 2 ವಿಧಗಳಿವೆ. ಮಾರುಕಟ್ಟೆಯಲ್ಲಿ ಸಿಪ್ಪೆ ಸುಲಿದ ಬೇಳೆ ಮತ್ತು ಸಿಪ್ಪೆ ಇರುವ ಬೇಳೆ ಸಿಗುತ್ತದೆ. ಅಷ್ಟೇ ಅಲ್ಲ ಒಡೆಯದ ಹೆಸರು ಬೇಳೆ ಕೂಡ ಸಿಗುತ್ತದೆ. ನೀವು ಮಾರುಕಟ್ಟೆಯಿಂದ ಹೆಸರು ಬೇಳೆ ಖರೀದಿಸುತ್ತಿದ್ದರೆ ಸಿಪ್ಪೆ ಸುಲಿದ ಮತ್ತು ಸಿಪ್ಪೆ ಇರುವ ಹೆಸರು ಬೇಳೆಯಲ್ಲಿ ಯಾವುದನ್ನು ಬೇಕಾದ್ರೂ ಖರೀದಿಸಬಹುದು. ಆದ್ರೆ ಬೇಳೆಯನ್ನು ಮಧ್ಯದಲ್ಲಿ ಕಟ್ ಮಾಡಲಾಗಿದೆಯೇ ಎಂಬುದನ್ನು ಗಮನಿಸಬೇಕು.
ಇದನ್ನೂ ಓದಿ: Kichten Hacks: ಅಡುಗೆಗೆ ಖಾರ, ಉಪ್ಪು ಹೆಚ್ಚಾದ್ರೆ ಹೀಗ್ಮಾಡಿ
ಹೆಸರು ಬೇಳೆ ಖರೀದಿ (Purchase) ಮಾಡುವಾಗ ಇದನ್ನೂ ಪರೀಕ್ಷೆ ಮಾಡಿ : ಇದು ನಕಲಿ ಯುಗ. ಇಲ್ಲಿ ಕಲಬೆರಕೆ ಹೆಚ್ಚು. ಬೇಳೆಗಳ ಜೊತೆ ಬೇರೆ ಬೇರೆ ವಸ್ತುಗಳನ್ನು ಬೆರೆಸಿ ತೂಕ ಹೆಚ್ಚು ಮಾಡ್ತಾರೆ. ಅನೇಕ ಬಾರಿ ಸುಣ್ಣದ ತುಂಡುಗಳು, ಪ್ಲಾಸ್ಟಿಕ್ (Plastic) ತುಂಡುಗಳನ್ನು ಬೇಳೆ ಜೊತೆ ಬೆರೆಸಲಾಗುತ್ತದೆ. ಹಾಗಾಗಿ ಬೇಳೆಕಾಳುಗಳನ್ನು ಖರೀದಿಸಿದಾಗ ಅದರಲ್ಲಿ ಬೇಳೆಕಾಳುಗಳನ್ನು ಹೊರತುಪಡಿಸಿ ಬೇರೆನಾದ್ರೂ ಇದ್ಯಾ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು. ಬರೀ ಹೆಸರು ಬೇಳೆಯಲ್ಲಿ ಮಾತ್ರವಲ್ಲ ಬಹುತೇಕ ಎಲ್ಲ ಬೇಳೆಯಲ್ಲೂ ಈ ಕಲಬೆರಕೆ ನಡೆಯುತ್ತದೆ. ಹಾಗಾಗಿ ಲೂಸ್ ಬೇಳೆಗಳನ್ನು ತೆಗೆದುಕೊಳ್ಳುವಾಗ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಒಳ್ಳೆಯ ಗುಣಮಟ್ಟ (Quality) ದ ಬೇಳೆ ಬೇಕೆಂದ್ರೆ ಪ್ಯಾಕೆಟ್ ಮಾಡಿರುವ ಬೇಳೆ ಖರೀದಿ ಒಳ್ಳೆಯದು.
ಇದನ್ನೂ ಓದಿ: ನೂರು ವರ್ಷ ಕಾಲ ಬದುಕೋ ಆಸೆ ಇದ್ದರೆ ಈ ಆಹಾರ ಸೇವಿಸಿ
ಹುಳ : ಬೇಳೆಕಾಳುಗಳಿಗೆ ಹುಳುಗಳು ಬೇಗ ಕಾಣಿಸಿಕೊಳ್ಳುತ್ತವೆ. ಅದ್ರಲ್ಲೂ ಹೆಸರು ಬೇಳೆ ಬೇಗ ಹಾಳಾಗುತ್ತದೆ. ಹಾಗಾಗಿ ಮಾರುಕಟ್ಟೆಯಲ್ಲಿ ಇದನ್ನು ಖರೀದಿ ಮಾಡುವ ಮೊದಲು ನೀವು ಹುಳಗಳಿವೆಯೇ ಎಂಬುದನ್ನು ಪರೀಕ್ಷೆ ಮಾಡಬೇಕು. ಹುಳು ಹಿಡಿದ ಹೆಸರು ಬೇಳೆ ತಿನ್ನಲು ಯೋಗ್ಯವಾಗಿರುವುದಿಲ್ಲ. ಅದ್ರಲ್ಲಿ ಪೌಷ್ಠಿಕಾಂಶವಿರುವುದಿಲ್ಲ. ಹಾಗೆಯೇ ತಿನ್ನಲು ರುಚಿಯಾಗಿರುವುದಿಲ್ಲ.