ಆಹಾರ ಹಿಡಿದು ಲೇಟ್ ಆಗಿ ಬಂದ ಸ್ವಿಗ್ಗಿ ಬಾಯ್: ಅಸಮಾಧಾನದಿಂದ ಬಾಗಿಲು ತೆಗೆದವನಿಗೆ ಶಾಕ್‌

By Suvarna News  |  First Published Aug 11, 2022, 3:07 PM IST

ವಿಶೇಷ ಚೇತನರೊಬ್ಬರು ತಮ್ಮ ವೈಕಲ್ಯತೆ ಬಗ್ಗೆ  ಕೊರಗುತ್ತಾ ಕೂರದೇ  ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ದುಡಿಯುತ್ತಾ  ಯಾರ ಬಳಿಯೂ ಕೈ ಚಾಚದೇ ಸ್ವಾಭಿಮಾನದಿಂದ ಬದುಕುತ್ತಾ ಇತರರಿಗೆ ಮಾದರಿ ಆಗಿದ್ದಾರೆ. 


ನಮ್ಮಲ್ಲಿ ಬಹುತೇಕರು ಎಲ್ಲವೂ ಸರಿ ಇದ್ದರೂ ತಮ್ಮನ್ನು ಮತ್ತೊಬ್ಬರಿಗೆ ಹೋಲಿಕೆ ಮಾಡಿಕೊಳ್ಳುತ್ತಾ ನನಗೆ ಅದಿಲ್ಲ, ಇದಿಲ್ಲ, ಬಡತನ ಅಪ್ಪ ಸರಿ ಇಲ್ಲ ಅಮ್ಮ ಸರಿ ಇಲ್ಲ ಎಂದು ಸುತ್ತಲಿದ್ದವರನ್ನು ಹಳಿಯುತ್ತಾ ಆಕಾಶವೇ ತಲೆಯ ಮೇಲೆ ಬಿದ್ದಂತೆ ಕೊರಗುತ್ತಾ ಕೂರುತ್ತೇವೆ. ಅದರೆ ಏನೂ ಇಲ್ಲದಿದ್ದರೂ ಕೆಲವರು ಎಲ್ಲವೂ ಇದೇ ನಮ್ಮಲ್ಲಿ. ನಾವು ಯಾರಿಗೂ ಕಡಿಮೆ ಇಲ್ಲ ಎಂದು ಸಾಧಿಸಿ ತೋರಿಸಿ, ಬದುಕಿನಲ್ಲಿ ಜೀವನೋತ್ಸಾಹದಿಂದ ಮುನ್ನಡೆಯುವ ಜೊತೆ ತಮ್ಮಂತಹ ಅನೇಕ ಜನರಿಗೆ ತಮ್ಮ ಬದುಕನ್ನು ಮಾದರಿಯಾಗಿಸುವ ಜೊತೆ ಹೆಮ್ಮೆಯಿಂದ ಸ್ವಾಭಿಮಾನದ ಬದುಕು ನಡೆಸುವ ಅನೇಕರಿದ್ದಾರೆ. ಅಂತಹವರಲ್ಲಿ ದಿವ್ಯಾಂಗ ಸ್ವಿಗ್ಗಿ ಡೆಲಿವರಿ ಬಾಯ್‌ ಕೃಷ್ಣಪ್ಪ ರಾಥೋಡ್ ಒಬ್ಬರು.

ಇವರ ಕತೆಯನ್ನು ಬೆಂಗಳೂರಿನಲ್ಲಿ ಉದ್ಯೋಗಿ ಆಗಿರುವ ಲಿಂಕ್ಡಿನ್‌ ಬಳಕೆದಾರ ರೋಹಿತ್‌ ಕುಮಾರ್ ಸಿಂಗ್ ಅವರು ಬರೆದುಕೊಂಡಿದ್ದಾರೆ. ಕೃಷ್ಣಪ್ಪ ಅವರ ಕತೆ ವ್ಯಥೆ ಈಗ ವೈರಲ್ ಆಗಿದ್ದು, ಜನ ಅವರಿಗೆ ಸಹಾಯಹಸ್ತ ಚಾಚಲು ಮುಂದೆ ಬಂದಿದ್ದಾರೆ. ರೋಹಿತ್ ಅವರ ಬರಹದ ಸಾರಾಂಶ ಇಲ್ಲಿದೆ. ಸೋಮವಾರ ರೋಹಿತ್ ಅವರು ಹಂಚಿಕೊಂಡ ಪೋಸ್ಟ್‌ ಇದಾಗಿದೆ. ನಿನ್ನೆ ಬೆಂಗಳೂರಿನಲ್ಲಿ ಒಂದು ಸುಂದರವಾದ ಭಾನುವಾರವಾಗಿತ್ತು, ಕತ್ತಲು ಕತ್ತಲಾದ ವಾತಾವರಣ, ಲಘುವಾದ ತುಂತುರು ಮತ್ತು ಸೂರ್ಯನ ಬೆಳಕು  ಭಾನುವಾರವನ್ನು ಮತ್ತಷ್ಟು ಸುಂದರವಾಗಿಸಿತ್ತು.  ಭಾನುವಾರದಂದು ಹೆಚ್ಚಿನ ಬೆಂಗಳೂರಿಗರಂತೆ  ನಾನು ಕೂಡ ನನ್ನ ಆರಾಮದಾಯಕವಾದ ಹಾಸಿಗೆಯಿಂದ ಹೊರಬರಲು ಸೋಮಾರಿಯಾಗಿದ್ದೆ ಮತ್ತು ಹೀಗಾಗಿ ಆನ್‌ಲೈನ್‌ ಮೂಲಕ ಆಹಾರ ಆರ್ಡರ್‌ ಮಾಡಲು ನಿರ್ಧರಿಸಿದೆ. ಈ ಜೀವನ ಎಷ್ಟು ಸುಂದರ ಎಂದು ನನಗೆ ಅನಿಸಿತು.

Tap to resize

Latest Videos

ಆನ್‌ಲೈನ್‌ನಲ್ಲಿ ಆಹಾರ ಆರ್ಡರ್ ಮಾಡಿದ ನನಗೆ ಆಹಾರ ಆಗಮನಕ್ಕೆ 30 ನಿಮಿಷ ತೋರಿಸುತ್ತಿತ್ತು. ಹಸಿವು ಜೋರಾಗಿದ್ದರಿಂದ ನನ್ನ ತಾಳ್ಮೆಯೂ ಕೆಡಲು ಶುರುವಾಗಿತ್ತು. ಆದರೆ ಸ್ವಲ್ಪ ಸಮುಯದಲ್ಲೇ 30 ನಿಮಿಷಗಳು ಕಳೆದವು. ಆದರೆ ಡೆಲಿವರಿ ಬಾಯ್ ಇನ್ನು ಬಂದಿದರಲಿಲ್ಲ. ಡೆಲಿವರಿ ಬಾಯ್‌ಗೆ ಕರೆ ಮಾಡಿದಾಗ ಆತ ತುಂಬಾ ಸಮಾಧಾನದ ಸ್ವರದಿಂದ ನಾನು ಸ್ವಲ್ಪ ಸಮಯದಲ್ಲೇ ಅಲ್ಲಿರುತ್ತೇನೆ ಸರ್ ಎಂದ. ಮತ್ತಷ್ಟು ನಿಮಿಷಗಳು ಕಳೆದವು. ನಾನು ಮತ್ತೆ ಆತನಿಗೆ ಕರೆ ಮಾಡಿದೆ, ('ಭಯ್ಯಾ ಪ್ಲೀಸ್‌ ಜಲ್ದಿ ಕರೋ ನಾ, ಭೂಖ್‌ ಲಗ್ ರಹ ಹೈ) ಸಹೋದರ ದಯವಿಟ್ಟು ಬೇಗ ಬಾ ನನಗೆ ಬಹಳ ಹಸಿವಾಗುತ್ತಿದೆ ಎಂದು ಹೇಳಿದೆ. 

ಅವರು ಮತ್ತೊಮ್ಮೆ ಅದೇ ಶಾಂತ ಚಿತ್ತದಿಂದ  ಪ್ರತಿಕ್ರಿಯಿಸಿದರು ಮತ್ತು ನನಗೆ ಕೇವಲ 5 ನಿಮಿಷಗಳಲ್ಲಿ ತಲುಪುವೆ ಎಂದರು. ಮುಂದಿನ 5-10 ನಿಮಿಷಗಳಲ್ಲಿ,ಕರೆಗಂಟೆ ಬಾರಿಸಿತು. ನಾನು ವಿಳಂಬವಾಗಿ ಬಂದಿರುವುದಕ್ಕೆ ತಾಳ್ಮೆಗೆಟ್ಟು ಅವರಿಗೆ ವಿಳಂಬದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಬೇಕು ಎಂದು ಬಿರ ಬಿರನೇ ನಡೆದು ಬಾಗಿಲು ತೆಗೆದು ನೋಡಿದಾಗ ನನಗೆ ಆಘಾತ ಕಾದಿತ್ತು. ಡೆಲಿವರಿ ಬಾಯ್ ಒಬ್ಬರು ವಿಶೇಷಚೇತನರಾಗಿದ್ದರು. ಬೈಯ್ಯಲು ಯೋಚಿಸಿದ್ದ ನಾನು ಅಲ್ಲೇ ಮೌನವಾದೆ.


ಆದರೆ ಅವರು ನಾನು ಆರ್ಡರ್ ಮಾಡಿದ ಆಹಾರವನ್ನು ಕೈಯಲ್ಲಿ ಹಿಡಿದು ಅದೇ ಶಾಂತ ಚಿತ್ತದಿಂದ ಮುಖದಲ್ಲಿ ನಗು ತುಂಬಿ ಆಹಾರ ಪೊಟ್ಟಣವನ್ನು ನನ್ನತ್ತ ನೀಡಿದರು. 40ರ ಪ್ರಾಯದ ಮಧ್ಯ ವಯಸ್ಕರಾದ ಅವರ ತಲೆಕೂದಲು ಅಲ್ಲಲ್ಲಿ ಬಿಳಿಯಾಗಿದ್ದವು. ಊರುಗೋಲುಗಳ ಸಹಾಯದಿಂದ ನೇರವಾಗಿ ನಿಲ್ಲಲು ಪ್ರಯತ್ನಿಸುತ್ತಿದ್ದರು. ಮತ್ತು ನನ್ನತ್ತ ನಗು ಬೀರಿದರು. ಅವರ ಸ್ಥಿತಿಯನ್ನು ಕಂಡು ನಾನು ಕ್ಷಣಕಾಲ ದಂಗಾಗಿದ್ದೆ. ಎಲ್ಲವೂ ಸರಿ ಇರುವ ನಾನು ತಮ್ಮ ಜೀವನಕ್ಕಾಗಿ ಶ್ರಮ ವಹಿಸಿ ದುಡಿಯುವ ಇವರ ಮೇಲೆ ಕೋಪಗೊಂಡಿದ್ದಕ್ಕೆ ನನ್ನನ್ನೇ ನಾನು ಶಪಿಸಿಕೊಂಡೆ. ಕೂಡಲೇ ಕ್ಷಮೆಯಾಚಿಸಿ ಅವರಲ್ಲಿ ನಾನು ಮಾತುಕತೆ ನಡೆಸಲು ಮುಂದಾದೆ. 

ಅವರ ಹೆಸರು ಕೃಷ್ಣಪ್ಪ ರಾಥೋಡ್‌, ಕೆಫೆಯಲ್ಲಿ ಕೆಲಸ ಮಾಡುತ್ತಿದ್ದ ಅವರು ಕೋವಿಡ್ ಸಮಯದಲ್ಲಿ ಕೆಲಸ ಕಳೆದುಕೊಂಡರಂತೆ, ಅಂದಿನಿಂದ ತನ್ನ ಕುಟುಂಬವನ್ನು ಹೊರೆಯಲು ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದಾರೆ. ಮೂವರು ಮಕ್ಕಳಿದ್ದು, ಆರ್ಥಿಕ ಸಂಕಷ್ಟದಿಂದಾಗಿ ಅವರೆಲ್ಲರನ್ನೂ ಬೆಂಗಳೂರಿಗೆ ಕರೆತರಲು ಸಾಧ್ಯವಾಗಿಲ್ಲ. ಮುಂಜಾನೆ ಏಳುವುದರಿಂದ ಹಿಡಿದು ಇಡೀ ದಿನ ದಣಿವರಿವಿಲ್ಲದೇ ಕೆಲಸ ಮಾಡುತ್ತಾ ಎಲ್ಲಾ ಕಷ್ಟಗಳನ್ನು ಎದುರಿಸುವ ಶಕ್ತಿ ಅವರಲ್ಲಿದೆ. 

ನಾವು ಸುಮಾರು 2-3 ನಿಮಿಷಗಳ ಕಾಲ  ಮಾತನಾಡಿದೆವು. ಅಷ್ಟರಲ್ಲಿ ಅವರು ಸರ್ ನನ್ನ ಮುಂದಿನ ವಿತರಣೆಗೆ ತಡವಾಗುತ್ತಿದೆ ಎಂದು ಕೃಷ್ಣಪ್ಪ ಅಲ್ಲಿಂದ ಹೊರಟು ಹೋದರು. ನನಗೆ ಉತ್ತರಿಸಲು ನಿಜವಾಗಿಯೂ ಕಷ್ಟಕರವಾದ ಹಲವು ಪ್ರಶ್ನೆಗಳನ್ನು ಬಿಟ್ಟು ಹೋದರು ಎಂದು ರೋಹಿತ್ ಅವರು ಬರೆದುಕೊಂಡಿದ್ದಾರೆ. ಅಲ್ಲದೇ ಕೃಷ್ಣಪ್ಪ ಅವರಿಗೆ ಯಾರಾದರೂ ಸ್ವಲ್ಪ ಮೊತ್ತವನ್ನು ಸಹಾಯ ಮಾಡಲು ಬಯಸಿದರೆ, ದಯವಿಟ್ಟು ನನಗೆ DM ಮಾಡಿ. ನಾನು ಅವನ Gpay ಸಂಖ್ಯೆಯನ್ನು ಹಂಚಿಕೊಳ್ಳುತ್ತೇನೆ ಎಂದು ರೋಹಿತ್ ಬರೆದುಕೊಂಡಿದ್ದಾರೆ.
 

click me!