ವೈಟ್‌ ಲಾಸ್ ಮಾಡ್ಕೊಳ್ಳೋಕೆ ದಿನಕ್ಕೆ ಎಷ್ಟು ಲೋಟ ನೀರು ಕುಡೀಬೇಕು?

By Vinutha PerlaFirst Published Apr 26, 2024, 9:26 AM IST
Highlights

ತೂಕ ಹೆಚ್ಚಳ ಇವತ್ತಿನ ದಿನಗಳಲ್ಲಿ ಎಲ್ಲರನ್ನೂ ಕಾಡುತ್ತಿರುವ ಸಾಮಾನ್ಯ ಸಮಸ್ಯೆ. ತೂಕ ಕಡಿಮೆ ಮಾಡ್ಕೊಳ್ಬೇಕು ಅಂತ ವರ್ಕೌಟ್‌, ಡಯೆಟ್‌ ಅಂತ ಏನೇನೋ ಸರ್ಕಸ್ ಮಾಡ್ತಾರೆ. ಕೆಲವೊಬ್ಬರು ತಿನ್ನೋ ಆಹಾರದ ಪ್ರಮಾಣವನ್ನೂ ಕಡಿಮೆ ಮಾಡಿಕೊಳ್ಳುತ್ತಾರೆ. ಆದ್ರೆ ಇಷ್ಟೆಲ್ಲಾ ಕಷ್ಟಪಡದೆ ಕೇವಲ ನೀರು ಕುಡಿದು ತೂಕ ಇಳಿಸಿಕೊಳ್ಬೋದು ಅನ್ನೋದು ನಿಮ್ಗೆ ಗೊತ್ತಿದ್ಯಾ?

ನೀರು ಆರೋಗ್ಯಕ್ಕೆ ಅತೀ ಅಗತ್ಯ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ. ಜೀರ್ಣಕ್ರಿಯೆ, ಸ್ನಾಯುಗಳ ಬೆಳವಣಿಗೆ ಮತ್ತು ಇತರ ಹಲವಾರು ದೇಹದ ಕಾರ್ಯಗಳಿಗೆ ನೀರಿನ ಅಗತ್ಯವಿದೆ. ಒಬ್ಬ ವ್ಯಕ್ತಿ ಕುಡಿಯೋ ನೀರಿನ ಪ್ರಮಾಣವು ಒಟ್ಟಾರೆ ಆರೋಗ್ಯದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಆದರೆ ನೀರು ಕುಡಿದು ತೂಕ ಇಳಿಸಿಕೊಳ್ಳಬಹುದು ಅನ್ನೋದು ಹಲವು ಅಧ್ಯಯನಗಳಿಂದ ಸಾಬೀತಾಗಿದೆ.  ಕೆಲವು ಸಂಶೋಧನೆಗಳು ನೀರು ಚಯಾಪಚಯವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದೆ. ಆದರೆ ತೂಕವನ್ನು ಕಳೆದುಕೊಳ್ಳಲು ನೀವು ಎಷ್ಟು ನೀರು ಕುಡಿಯಬೇಕು? ಆ ಬಗ್ಗೆ ಮಾಹಿತಿ ಇಲ್ಲಿದೆ. 

ನೀರು ಕುಡಿಯುವುದು ತೂಕ ಇಳಿಕೆಗೆ ಕಾರಣವಾಗುವುದು ಹೇಗೆ?
ನೀರು ಕುಡಿಯುವ ಅಭ್ಯಾಸ ಹೆಚ್ಚು ತಿನ್ನುವುದನ್ನು ನಡೆಯುತ್ತದೆ. ಹೆಚ್ಚು ನೀರು ಕುಡಿದಾಗ ದೀರ್ಘಕಾಲ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಹೊಟ್ಟೆ ತುಂಬಿದ ಅನುಭವವಾದಾಗ ನಾವು ಕಡಿಮೆ ತಿನ್ನುತ್ತೇವೆ. ಇದು ಪ್ರತಿ ಊಟದ ಸಮಯದಲ್ಲಿ ಸೇವಿಸುವ ಒಟ್ಟು ಕ್ಯಾಲೊರಿಗಳನ್ನು ಕಡಿಮೆ ಮಾಡುತ್ತದೆ. ಹೆಚ್ಚಿನ ಜನರು ಬಾಯಾರಿಕೆಯಯಾದಾಗ ಇದನ್ನು ಹಸಿವೆಯೆಂದು ತಿಳಿದು ಹೆಚ್ಚೆಚ್ಚು ತಿನ್ನುತ್ತಾರೆ. ಇದರಿಂದ ಸಹಜವಾಗಿಯೇ ತೂಕ ಹೆಚ್ಚುತ್ತದೆ. ಹೀಗಾಗದಿರಲು ಹೆಚ್ಚೆಚ್ಚು ನೀರು ಕುಡಿಯಿರಿ.

ತಿನ್ನದೇ ಇರೋದ್ರಿಂದ ತೂಕ ಕಡಿಮೆಯಾಗಲ್ಲ..ವೈಟ್ ಲಾಸ್ ಬಗ್ಗೆ ನಿಮ್ಗೆ ಗೊತ್ತಿರದ ವಿಚಾರಗಳಿವು

ಆಹಾರ ಸೇವನೆ ಕಡಿಮೆ ಮಾಡಲು ನೆರವಾಗುತ್ತದೆ
ಹೆಚ್ಚಿನ ಕ್ಯಾಲೋರಿ ಆಹಾರಗಳ ಬಗ್ಗೆ ಯೋಚಿಸಿದಾಗ, ಕೊಬ್ಬು, ಸಕ್ಕರೆ ತಿಂಡಿಗಳು ಮತ್ತು ಜಂಕ್ ಫುಡ್‌ಗಳ ಸೇವನೆ ಕಣ್ಮುಂದೆ ಬರುತ್ತದೆ. ಜ್ಯೂಸ್‌ಗಳಂತಹ ಕೆಲವು ಪಾನೀಯಗಳು ಆಹಾರಕ್ಕೆ ಹೆಚ್ಚಿನ ಕ್ಯಾಲೋರಿಫಿಕ್ ಮೌಲ್ಯವನ್ನು ಸೇರಿಸುತ್ತವೆ ಎಂಬುದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಹಾಗೆಯೇ ಸೋಡಾ, ಕಾಫಿಗಳು ಅಥವಾ ಶೇಕ್‌ಗಳಂತಹ ಹಾಲಿನ ಪಾನೀಯಗಳು ದೈನಂದಿನ ಕ್ಯಾಲೋರಿ ಸಂಖ್ಯೆಯನ್ನು ಹೆಚ್ಚಿಸಬಹುದು. ಆದರೆ ನೀರು ಕುಡಿಯುವುದರಿಂದ ಈ ಯಾವುದೇ ರೀತಿಯ ಸಮಸ್ಯೆಯಿಲ್ಲ

ಹೆಚ್ಚಿನ ಕ್ಯಾಲೊರಿ ಬರ್ನ್ ಮಾಡುತ್ತದೆ
ಒಬ್ಬ ವ್ಯಕ್ತಿಯು ವಿಶ್ರಾಂತಿ ಪಡೆಯುತ್ತಿರುವಾಗಲೂ ದೇಹವು ಕ್ಯಾಲೊರಿಗಳನ್ನು ಸುಡುತ್ತದೆ . ಇದನ್ನು ಮಾಡಲು ನೀರು ನಿರ್ಣಾಯಕವಾಗಿದೆ. ವಿಶ್ರಾಂತಿ ಪಡೆಯುವಾಗ ಮೊದಲೇ ನೀರು ಕುಡಿದಿದ್ದರೆ, ಕ್ಯಾಲೋರಿ ಸುಡುವ ಪ್ರಮಾಣವನ್ನು ಕುಡಿಯುವ ನೀರು 3% ರಷ್ಟು ಹೆಚ್ಚಿಸುತ್ತದೆ. ಅಧ್ಯಯನಗಳ ಪ್ರಕಾರ, 500ml ಐಸ್-ತಣ್ಣೀರಿನ ಸೇವನೆಯು ಚಯಾಪಚಯ ದರವನ್ನು ಹೆಚ್ಚಿಸುತ್ತದೆ. ಹೀಗಾಗಿ ಇದು ಹೆಚ್ಚು ಕ್ಯಾಲೊರಿಗಳನ್ನು ಸುಡುತ್ತದೆ. 

ದಿನಾ ಈ ಹಣ್ಣುಗಳನ್ನು ತಿಂದ್ರೆ ಬೆಲ್ಲಿ ಫ್ಯಾಟ್ ಈಝಿಯಾಗಿ ಕರಗುತ್ತೆ

ಹೆಚ್ಚು ವ್ಯಾಯಾಮ ಮಾಡಲು ಸಾಧ್ಯವಾಗುತ್ತದೆ
ತೂಕ ಇಳಿಕೆಗೆ ವ್ಯಾಯಾಮ ಮಾಡುವುದು ಅಗತ್ಯ. ಇದು ಆರೋಗ್ಯವನ್ನು ಚೆನ್ನಾಗಿಡುತ್ತದೆ. ನಿಯಮಿತ ನೀರಿನ ಸೇವನೆಯು ಹೃದಯ ಮತ್ತು ಶ್ವಾಸಕೋಶದ ಕಾರ್ಯವನ್ನು ಸುಧಾರಿಸುತ್ತದೆ. ಹೆಚ್ಚು ನೀರು ಕುಡಿದಾಗ ಉಸಿರಾಟದ ತೊಂದರೆ, ನೋವು ಅಥವಾ ಸೆಳೆತ ಮೊದಲಾದ ಸಮಸ್ಯೆಯಿಲ್ಲದೆ ಕೆಲಸ ಮಾಡುವ ಸಾಧ್ಯವಾಗುತ್ತದೆ. ವ್ಯಾಯಾಮದ ಅವಧಿಗಳು ಹೆಚ್ಚು ಉತ್ಪಾದಕವಾಗಿರುತ್ತವೆ. ಹೆಚ್ಚು ಕೊಬ್ಬು ಮತ್ತು ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಾಧ್ಯವಾಗುತ್ತದೆ. ಇದು ತೂಕ ನಷ್ಟವನ್ನು ಸುಲಭಗೊಳಿಸುತ್ತದೆ.

ದೈನಂದಿನ ನೀರಿನ ಸೇವನೆ ಎಷ್ಟಿರಬೇಕು?
ತೂಕ ನಷ್ಟ ಬೆಂಬಲಕ್ಕಾಗಿ ಪ್ರತಿ ದಿನ 4 ರಿಂದ 8 ಗ್ಲಾಸ್ ನೀರು (1-2 ಲೀಟರ್) ಕುಡಿಯುವಂತೆ ಅಧ್ಯಯನಗಳು ಸೂಚಿಸುತ್ತವೆ. ಹೆಚ್ಚು ಬೆವರುವವರಿಗೆ ಹೆಚ್ಚುವರಿ ನೀರು ಕುಡಿಯುವ ಅಗತ್ಯವಿದೆ. ದೈಹಿಕವಾಗಿ ಹೆಚ್ಚು ಶ್ರಮಪಟ್ಟು ಕೆಲಸ ಮಾಡುವ ವ್ಯಕ್ತಿಗಳಿಗೆ, ಬಿಸಿಲಿನಲ್ಲಿ ನಿಂತು ದುಡಿಯುವವರಿಗೆ ಹೆಚ್ಚು ನೀರಿನ ಅಗತ್ಯವಿರುತ್ತದೆ. ಹೆಚ್ಚು ನೀರನ್ನು ಕುಡಿಯುವ ಅಭ್ಯಾಸ ಹಸಿವನ್ನು ಕಡಿಮೆ ಮಾಡುತ್ತದೆ ಮತ್ತು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಅಕಾಡೆಮಿ ಆಫ್ ನ್ಯೂಟ್ರಿಷನ್ ಮತ್ತು ಡಯೆಟಿಕ್ಸ್ ಮಹಿಳೆಯರಿಗೆ ದಿನಕ್ಕೆ 9 ಕಪ್ ನೀರು ಮತ್ತು ಪುರುಷರಿಗೆ 13 ಕಪ್‌ಗಳಷ್ಟು ನೀರನ್ನು ಕುಡಿಯಲು ಶಿಫಾರಸು ಮಾಡುತ್ತಾರೆ.

ನೀರಿನ ಜೊತೆಗೆ ತರಕಾರಿಗಳು, ಹಣ್ಣುಗಳು ಮತ್ತು ಸೂಪ್‌ಗಳಂತಹ ನೀರಿನ ಅಂಶವಿರುವ ಆಹಾರಗಳನ್ನು ಸೇರಿಸುವುದು ದೈನಂದಿನ ಜಲಸಂಚಯನ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ. ವಿಶಿಷ್ಟವಾಗಿ, ದೈನಂದಿನ ನೀರಿನ ಸೇವನೆಯ 20% ಆಹಾರದಿಂದಲೇ ಬರುತ್ತದೆ. ಹೀಗಾಗಿ ನೀರಿನಂಶವುಳ್ಳ ಆಹಾರವನ್ನು ಹೆಚ್ಚೆಚ್ಚು ಸೇವಿಸುವುದು ಮುಖ್ಯ.

click me!