ಮಗುವಿನ ಹಂಬಲದಲ್ಲಿರುವ ಹೆಣ್ಣುಮಕ್ಕಳು ಎಂಥ ಆಹಾರ ಹೆಚ್ಚಾಗಿ ಸೇವಿಸಿದರೆ ಫಲವತ್ತತೆ ಹೆಚ್ಚುತ್ತದೆ ಎಂಬುದರ ಬಗ್ಗೆ ಸೆಲೆಬ್ರಿಟಿ ನ್ಯೂಟ್ರಿಶನಿಸ್ಟ್ ರುಜುತಾ ದಿವೇಕರ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ತಿಳಿಸಿದ್ದಾರೆ.
ಅಧ್ಯಯನಗಳ ಪ್ರಕಾರ ನೂರಕ್ಕೆ 15 ಜೋಡಿಗಳು ಮಕ್ಕಳಾಗುವ ಸಂಬಂಧ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾರೆ. ಅದಕ್ಕೆ ಮುಖ್ಯ ಕಾರಣಗಳೆಂದರೆ ಇಂದಿನ ಜೀವನಶೈಲಿ, ಒತ್ತಡ, ಮಾಲಿನ್ಯ, ಆತಂಕ, ಖಿನ್ನತೆ, ಆಹಾರ ಇತ್ಯಾದಿ. ಆದರೆ ಒಂದು ಸಮಾಧಾನದ ವಿಷಯವೆಂದರೆ ನೈಸರ್ಗಿಕವಾಗಿಯೇ ಜೀವನಶೈಲಿ ಬದಲಾವಣೆ ಮೂಲಕ ಫಲವತ್ತತೆ ಹೆಚ್ಚಿಸಿಕೊಂಡು ಬೇಗ ಗರ್ಭ ಧರಿಸಲು ಅವಕಾಶಗಳಿವೆ. ಹೌದು, ಜೀವನಶೈಲಿ ಹಾಗೂ ಡಯಟ್ ಬದಲಾವಣೆಯಿಂದ ಈ ರೀತಿ ಫರ್ಟಿಲಿಟಿಯನ್ನು ಶೇ.69ರಷ್ಟು ಹೆಚ್ಚಿಸಿಕೊಳ್ಳಬಹುದು.
ಅದಕ್ಕಾಗಿ ಮೊದಲು ಮಾಡಬೇಕಿರುವುದು ಆರೋಗ್ಯಕರ ತೂಕ ಹೊಂದುವತ್ತ ಗಮನ ಹರಿಸುವುದು, ಮಧ್ಯ ಹಾಗೂ ಸಿಗರೇಟ್‌ನಿಂದ ದೂರ ಉಳಿಯುವುದು. ನಂತರದಲ್ಲಿ ಓವ್ಯುಲೇಶನ್ ಸಂದರ್ಭದಲ್ಲಿ ಸರಿಯಾಗಿ ಸೆಕ್ಸ್ ಮಾಡುವುದು ಕೂಡಾ ಅತ್ಯಗತ್ಯ. ಇದರ ಹೊರತಾಗಿ ಉತ್ತಮ ಇನ್ಸುಲಿನ್ ಸೆನ್ಸಿಟಿವಿಟಿ ಹೊಂದಿದ್ದರೆ ಬೇಗ ಕನ್ಸೀವ್ ಆಗಲು ಸಾಧ್ಯವಾಗುತ್ತದೆ. ಈ ಇನ್ಸುಲಿನ್ ಸೆನ್ಸಿಟಿವಿಟಿಗಾಗಿ ತೂಕ ಹೆಚ್ಚಿಸಿದಂಥ ಆಹಾರ ಸೇವನೆ ಮಾಡುವುದು ಮುಖ್ಯವಾಗುತ್ತದೆ. ಅಂಥ ಆಹಾರಗಳು ಯಾವುವು, ಏನು ಮಾಡಬೇಕು ಎಂಬ ಕುರಿತು ಸೆಲೆಬ್ರಿಟಿ ನ್ಯೂಟ್ರಿಶನಿಸ್ಟ್ ರುಜುತಾ ದಿವೇಕರ್ ಕೊಟ್ಟ ಟಿಪ್ಸ್ ಇಲ್ಲಿವೆ.
- ಪ್ಯಾಕೇಜ್ ಆಹಾರ ಬೇಡ
ತಾವು ಬಹಳ ಆರೋಗ್ಯಕಾರಿ ಎಂದು ಹೇಳಿಕೊಳ್ಳುವ ಪ್ಯಾಕೇಜ್ಡ್ ಆಹಾರ ಕೂಡಾ ಬೇಡ. ಸೆರೀಲ್ಸ್, ಜ್ಯೂಸ್‌ಗಳು, ಚಿಪ್ಸ್, ಬಿಸ್ಕೇಟ್ಸ್, ಐಸ್ ಕ್ರೀಂ, ಯೋಗರ್ಟ್, ಚೀಸ್ ಸೇರಿದಂತೆ ಯಾವುದೇ ಪ್ಯಾಕೇಜ್ಡ್ ಆಹಾರದಿಂದ ದೂರವಿರಿ. ಯಾವುದೋ ಒಂದು ಬಹಳ ಪ್ರಮುಖ ನ್ಯೂಟ್ರಿಯೆಂಟ್ ಇದೆ ಎಂದು ಹೇಳಿಕೊಳ್ಳುವ ಆಹಾರವೂ ಬೇಡ.
- ಉಪ್ಪಿನಕಾಯಿ ಹಾಗೂ ಚಟ್ನಿ
ಪ್ರತಿದಿನ ನಿಮ್ಮ ಊಟದೊಂದಿಗೆ ಉಪ್ಪಿನಕಾಯಿ ಅಥವಾ ಚಟ್ನಿಯನ್ನು ಸೇವಿಸುವುದು ಅಭ್ಯಾಸ ಮಾಡಿಕೊಳ್ಳಿ. ಬೆಳಗಿನ ತಿಂಡಿ ಅಥವಾ ಮಧ್ಯಾಹ್ನದ ಊಟದೊಂದಿಗೆ 1 ಚಮಚ ಉಪ್ಪಿನಕಾಯಿ, ದಿನಕ್ಕೆ 2-3 ಚಮಚ ಚಟ್ನಿ ಸೇವನೆ ದೇಹಕ್ಕೆ ಅಗತ್ಯವಾದ ವಿಟಮಿನ್ ಬಿ12 ಒದಗಿಸುತ್ತದೆ.
- ಮನೆಯ ಮೊಸರು
ಮೊಸರೊಂದು ಮ್ಯಾಜಿಕಲ್ ಆಹಾರವಾಗಿದ್ದು, ಹಲವಾರು ಗಟ್- ಫ್ರೆಂಡ್ಲಿ ಬ್ಯಾಕ್ಟೀರಿಯಾಗಳನ್ನೊಳಗೊಂಡಿದೆ. ಜೊತೆಗೆ ಇದರಲ್ಲಿ ಪ್ರಮುಖವಾದ ಅಮೈನೋ ಆ್ಯಸಿಡ್ಸ್ ಹಾಗೂ ಬಿ ವಿಟಮಿನ್‌ಗಳು ಇವೆ. ಹಾಗಂಥ ಪ್ಯಾಕೇಜ್ ಆಗಿ ಬಂದ ಮೊಸರಿಗಿಂತ ಮನೆಯಲ್ಲೇ ಹಾಲು ಹೆಪ್ಪು ಹಾಕಿ ತಯಾರಿಸುವ ಮೊಸರು ಆರೋಗ್ಯಕ್ಕೆ ಒಳ್ಳೆಯದು. ಪಿಎಂಎಸ್ ಸಂದರ್ಭದ ಸ್ವೀಟ್ ಕ್ರೇವಿಂಗ್ಸ್ ಹಾಗೂ ಸುಮ್ಮಸುಮ್ಮನೆ ಅಳು, ಸಿಟ್ಟು ಬರುವುದನ್ನು ಕೂಡಾ ಮೊಸರು ನಿಯಂತ್ರಿಸಲು ಸಹಕರಿಸುತ್ತದೆ. ಜೊತೆಗೆ, ಪ್ರಗ್ನೆಂಟ್ ಆದ ಬಳಿಕವೂ ಅಸಿಡಿಟಿಯನ್ನು ದೂರವಿಡಬಲ್ಲದು.
- ಸೀಸನಲ್ ಫುಡ್ಸ್
ಸ್ಥಳೀಯವಾಗಿ ಬೆಳೆದಂಥ ಹಾಗೂ ಆಯಾ ಕಾಲದಲ್ಲಿ ಬೆಳೆದ ಆಹಾರವನ್ನೇ ದೈನಂದಿನ ಡಯಟ್‌ನಲ್ಲಿ ಸೇರಿಸಿಕೊಳ್ಳಿ. ಡಯಟ್‌ನಲ್ಲಿ ವೈವಿಧ್ಯತೆ ಇದ್ದಷ್ಟೂ ದೇಹಕ್ಕೆ ಬೇಕಾದ ಪ್ರೊಬಯೋಟಿಕ್ ಬ್ಯಾಕ್ಟೀರಿಯಾ, ಇಂಟೆಸ್ಟೈನಲ್ ಮ್ಯೂಕೋಸಾ ಹಾಗೂ ಇನ್ಸುಲಿನ್ ಸೆನ್ಸಿಟಿವಿಟಿ ಹೆಚ್ಚುತ್ತದೆ.
- ಮೆಂಟಲ್ ಮೀಲ್ ಮ್ಯಾಪ್
ಯಾವಾಗ ತಿನ್ನುವುದು ನಿಲ್ಲಿಸಬೇಕೆಂಬ ಅರಿವು ಎಲ್ಲರಿಗೂ ಇರಬೇಕು. ತಿನ್ನಲು ಆರಂಭಿಸುವಾಗಲೇ ತನಗೆಷ್ಟು ಬೇಕೆಂಬ ಮೆಂಟಲ್ ಮ್ಯಾಪೊಂದು ರೆಡಿ ಇರಬೇಕು. ನಂತರದ ಅದರ ಅರ್ಧದಷ್ಟು ಆಹಾರವನ್ನು ಮಾತ್ರ ಬಡಿಸಿಕೊಂಡು ತಿನ್ನಬೇಕು. ಹೀಗೆ ತಿನ್ನುವಾಗ ನಿಧಾನಗತಿ ಅಳವಡಿಸಿಕೊಳ್ಳಬೇಕು. ಆಹಾರವು ಸಣ್ಣದಾಗಿ ಹೊಟ್ಟೆಗೆ ಹೋದಷ್ಟೂ ಮೈಕ್ರೋನ್ಯೂಟ್ರಿಯೆಂಟ್‌ಗಳನ್ನು ದೇಹ ಚೆನ್ನಾಗಿ ಗುರುತಿಸುತ್ತದೆ ಹಾಗೂ ಇನ್ಸುಲಿನ್ ಪ್ರತಿಕ್ರಿಯೆ ಚೆನ್ನಾಗಿರುತ್ತದೆ. ಅಷ್ಟು ಖಾಲಿಯಾದ ಬಳಿಕ ಇನ್ನೂ ಆಹಾರ ಬೇಕು ಎಂದು ದೇಹ ಕೇಳಿದರೆ ಮಾತ್ರ ನೀಡಿ. ತಿನ್ನುವಾಗ ಗ್ಯಾಜೆಟ್‌ಗಳಿಂದ ದೂರವುಳಿಯಿರಿ.
- ತುಪ್ಪ
ಫಲವತ್ತತೆ ಹೆಚ್ಚಿಸಬೇಕೆನ್ನುವವರು ದಿನಕ್ಕೆ ಕನಿಷ್ಠ 3-5 ಚಮಚಗಳಷ್ಟಟು ತುಪ್ಪ ಸೇವಿಸಬೇಕು. ಇದರ ಆರೋಗ್ಯ ಲಾಭಗಳು ಹತ್ತು ಹಲವು.