ಬೀಟ್ರೂಟ್‌ ರೆಸಿಪಿ: ಹಲ್ವಾ, ಸೂಪ್ ಹಾಗೂ ಸಾಸಿವೆ ಮಾಡೋದ್ಹೀಗೆ!

By Web Desk  |  First Published Nov 7, 2019, 2:33 PM IST

ಬೀಟ್ರೂಟ್‌ ರೆಸಿಪಿಗಳು ಕಲರ್‌ಫುಲ್, ಜೊತೆಗೆ ಆರೋಗ್ಯಕಾರಿ ಕೂಡಾ. ಇಲ್ಲಿ ಬೀಟ್ರೂಟ್‌ನ್ನು ಪ್ರತಿ ನಿತ್ಯದ ಬಳಕೆಯಲ್ಲಿ ಮೂರು ರೀತಿ ಸೇವಿಸಬಹುದಾದ ವಿಧಾನಗಳನ್ನು ಕೊಡಲಾಗಿದೆ. ಬ್ರೀಟ್ರೂಟ್‌ನ ಸಿಹಿತಿನಿಸು, ಸಿಹಿ ಇಷ್ಟವಿಲ್ಲದವರಿಗೆ ಬಿಸಿ ಬಿಸಿ ಸೂಪ್, ಬಿಸಿಲಿನ ಝಳ ಹೆಚ್ಚಿದ್ದಾಗ ಬೀಟ್ರೂಟ್ ಸಾಸಿವೆ... ಎಲ್ಲವನ್ನೂ ಮಾಡಿ ನೋಡಿ ನಿಮಗ್ಯಾವುದು ಇಷ್ಟವಾಯಿತು ತಿಳಿಸಿ.


ಬೀಟ್ರೂಟ್‌ನಲ್ಲಿ ಐರನ್, ಕ್ಯಾಲ್ಶಿಯಂ ಹಾಗೂ ಮಿನರಲ್ಸ್ ಹೇರಳವಾಗಿದ್ದು, ಇದೊಂದು ಸೂಪರ್‌ಫುಡ್. ನಿಶಕ್ತಿ ಹೆಚ್ಚಿರುವವರು, ಅನೀಮಿಯಾ, ಲೋ ಬಿಪಿ, ಪೀರಿಯಡ್ಸ್ ಸಮಯದಲ್ಲಿ ವಿಪರೀತ ಬ್ಲೀಡಿಂಗ್‌ನಿಂದ ಬಳಲುವವರು, ಹೆಂಗಸರು, ಹಿರಿಯರು ಹಾಗೂ ಮಕ್ಕಳು ಬೀಟ್ರೂಟನ್ನು ನಿಯಮಿತವಾಗಿ ಬಳಸುವುದು ಒಳ್ಳೆಯದು. ಬೀಟ್ರೂಟ್‌ನಲ್ಲಿ ಬಗೆಬಗೆಯ ಅಡಿಗೆ ಮಾಡಬಹುದು. ಅದರಲ್ಲಿ ಮೂರು ವಿಧಗಳನ್ನಿಲ್ಲಿ ನೀಡಲಾಗಿದೆ. 

ಕುಂಬಳಕಾಯಿ ಹಲ್ವಾ ಹಳೆಯದಾಯಿತು. ಈಗ ಕಣ್ಣಿಗೂ, ನಾಲಿಗೆಗೂ, ದೇಹಕ್ಕೂ ಹಬ್ಬವೆನಿಸುವ ಬೀಟ್ರೂಟ್ ಹಲ್ವಾ ಮಾಡುವ ಸಮಯ...

Tap to resize

Latest Videos

ಬೀಟ್‌ರೂಟ್ ಚಹಾ ಎಂಬ ಗರ್ಭಿಣಿಗೆ ಅದ್ಭುತ ಮದ್ದು! .

ಸರ್ವಿಂಗ್ಸ್: 3 ಮಂದಿ
ಬೇಕಾಗುವ ಸಾಮಗ್ರಿಗಳು:

ಬೀಟ್ರೂಟ್  2, ಹಾಲು 1 ಕಪ್, ಸಕ್ಕರೆ 1/2 ಕಪ್, ಕೋವಾ 100 ಗ್ರಾಂ, ತುಪ್ಪ 5 ಚಮಚ, ಏಲಕ್ಕಿ ಪುಡಿ 1 ಚಮಚ, ಸ್ವಲ್ಪ ಗೋಡಂಬಿ, ದ್ರಾಕ್ಷಿ, ಬಾದಾಮಿ. 

ಮಾಡುವ ವಿಧಾನ :

- ಬೀಟ್ರೂಟನ್ನು ಚೆನ್ನಾಗಿ ತೊಳೆದು, ಸಿಪ್ಪೆ ತೆಗೆದು ತುರಿದಿಟ್ಟುಕೊಳ್ಳಿ.

- ಬಾಣಲೆಯನ್ನು ಒಲೆ ಮೇಲಿಟ್ಟು ತುಪ್ಪ ಹಾಕಿ ಬಿಸಿ ಮಾಡಿ. ಇದಕ್ಕೆ ದ್ರಾಕ್ಷಿ, ಗೋಡಂಬಿ, ಬಾದಾಮಿ ಹಾಕಿ ಸಣ್ಣ ಬೆಂಕಿಯಲ್ಲಿ ಹುರಿದು ತೆಗೆದಿಟ್ಟುಕೊಳ್ಳಿ. ಇವು ಮೂರನ್ನೂ ಹುರಿವಾಗ ಮೊದಲು ಬಾದಾಮಿ ಹಾಕಿ 30 ಸೆಕೆಂಡ್ ಬಳಿಕ ಗೋಡಂಬಿ ಹಾಕಬೇಕು. ನಂತರ 40 ಸೆಕೆಂಡ್ ಬಳಿಕ ದ್ರಾಕ್ಷಿ ಹಾಕಿ. ಆಗ ಯಾವುದೂ ಸುಟ್ಟು ಕರಕಲಾಗುವುದು ಅಥವಾ ಅರ್ಧಂಬರ್ಧ ಹುರಿದಂತಾಗುವುದು ಸಾಧ್ಯವಿಲ್ಲ. 

- ಈಗ ತುರಿದ ಬೀಟ್ರೂಟ್‌ಗಳನ್ನು ಬಿಸಿಯಾದ ತುಪ್ಪಕ್ಕೆ ಹಾಕಿ ಸಣ್ಣ ಉರಿಯಲ್ಲಿ ಹುರಿಯಿರಿ. ಇದಕ್ಕೆ ಹಾಲು ಮತ್ತು ಕೋವಾವನ್ನು ಹಾಕಿ. ಸೌಟಾಡಿಸುತ್ತಿರಿ. 

- ಇದಕ್ಕೆ ಸಕ್ಕರೆ, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಸಣ್ಣ ಉರಿಯಲ್ಲಿ ಬೇಯಲು ಬಿಡಿ. ಆಗಾಗ ಸೌಟಾಡಿಸುತ್ತಿರಿ. ಮಿಶ್ರಣವು ಗಟ್ಟಿಯಾಗುವವರೆಗೆ ಇದು ಮುಂದುವರಿಯಲಿ. 

- ಇದು ಹಲ್ವಾ ರೂಪಕ್ಕೆ ತಿರುಗಿದ ಬಳಿಕ ದ್ರಾಕ್ಷಿ, ಗೋಡಂಬಿ, ಬಾದಾಮಿ ಸೇರಿಸಿ, ಬಿಸಿಬಿಸಿಯಾಗಿ ಸವಿಯಿರಿ.   ಚೆನ್ನಾಗಿ ಬೇಯಿಸಿದ್ದರೆ ಇದನ್ನು 15 ದಿನಗಟ್ಟಲೆ ಫ್ರಿಡ್ಜ್‌ನಲ್ಲಿ ಇಟ್ಟು ಬಳಸಬಹುದು. 
-----
ಯಾವಾಗಲೂ ಪಾಲಕ್, ಟೋಮ್ಯಾಟೋ ಸೂಪ್ ಮಾಡಬೇಡಿ- ಇದರಿಂದ ಎಲ್ಲ ಪೋಷಕಸತ್ವಗಳು ಸಿಗುವುದಿಲ್ಲ. ಆಗಾಗ ವೆಜಿಟೇಬಲ್ ಸೂಪ್, ಬೀಟ್ರೂಟ್ ಸೂಪನ್ನು ಕೂಡಾ ಟ್ರೈ ಮಾಡಿ. ಸಧ್ಯ ಬೀಟ್ರೂಟ್ ಸೂಪ್ ಮಾಡುವುದು ಹೇಗೆ ನೋಡೋಣ

ರಕ್ತ ವೃದ್ಧಿಗೆ ಬೇಕು ಬೀಟ್‌ರೂಟ್ .

ಸರ್ವಿಂಗ್ಸ್: 3 ಮಂದಿ
ಬೇಕಾಗುವ ಸಾಮಗ್ರಿಗಳು:

ಬೆಣ್ಣೆ 2 ಚಮಚ, 1 ದಾಲ್ಚೀನಿ ಎಲೆ, 2 ಎಸಳು ಬೆಳ್ಳುಳ್ಳಿ, 1 ಇಂಚು ಶುಂಠಿ, 1.5 ಕಪ್ ಬೀಟ್ರೂಟ್ ಹೋಳುಗಳು, 1 ಕ್ಯಾರಟ್ ಹೋಳಾಗಿಸಿಕೊಂಡಿದ್ದು, 1 ಹೆಚ್ಚಿದ ಟೊಮ್ಯಾಟೋ, ರುಚಿಗೆ ತಕ್ಕಷ್ಟು ಉಪ್ಪು, 3 ಕಪ್ ನೀರು, 1 ಚಮಚ ಪೆಪ್ಪರ್, ಪುದಿನಾ ಸೊಪ್ಪು ಸ್ವಲ್ಪ

ಮಾಡುವ ವಿಧಾನ :

ಕುಕ್ಕರ್‌ನಲ್ಲಿ ಬೆಣ್ಣೆ ಬಿಸಿ ಮಾಡಿ ದಾಲ್ಚೀನಿ ಎಲೆ ಹಾಕಿ. ಇದರ ಪರಿಮಳ ಹೊಮ್ಮುತ್ತಲೇ ಬೆಳ್ಳುಳ್ಳಿ, ಶುಂಠಿ ಹಾಕಿ ಅರ್ಧ ನಿಮಿಷ ಹುರಿಯಿರಿ. ಇದಕ್ಕೆ ಬೀಟ್ರೂಟ್, ಕ್ಯಾರೆಟ್, ಟೊಮ್ಯಾಟೋ ಹಾಗೂ ಉಪ್ಪು ಸೇರಿಸಿ 1 ನಿಮಿಷ ಹುರಿಯಿರಿ. ನಂತರ 3 ಕಪ್ ನೀರು ಸೇರಿಸಿ ಕುಕ್ಕರ್ ಮುಚ್ಚಳ ಹಾಕಿ 4 ವಿಶಲ್ ಬರಿಸಿ. ಬಳಿಕ ನೀರನ್ನು ಬಸಿದು ತರಕಾರಿಗಳನ್ನು ಮಿಕ್ಸಿಗೆ ಹಾಕಿ ರುಬ್ಬಿ ಪೇಸ್ಟ್ ಮಾಡಿಕೊಳ್ಳಿ. ದೊಡ್ಡ ಬಾಣಲೆಯೊಂದನ್ನು ಒಲೆಯ ಮೇಲಿಟ್ಟು ಅದಕ್ಕೆ ಈ ಬೀಟ್ರೂಟ್ ಪೇಸ್ಟ್ ಹಾಕಿ. ಇದಕ್ಕೆ ಬಸಿದ ನೀರು ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಸೂಪ್ ಕುದಿಯಲಾರಂಭಿಸಿದ ಮೇಲೆ ಪೆಪ್ಪರ್ ಹಾಗೂ ಬೆಣ್ಣೆ ಸೇರಿಸಿ. ಪುದೀನಾ ಎಲೆಗಳಿಂದ ಅಲಂಕರಿಸಿ. ಇದಕ್ಕೆ ಪೋಷಕಾಂಶ ಹೆಚ್ಚಿಸಲು ಆಲೂಗಡ್ಡೆ ಅಥವಾ ಗೆಣಸು ಸೇರಿಸಿಕೊಳ್ಳಬಹುದು. ಇದು ಆರೋಗ್ಯಕರ ಮಾತ್ರವಲ್ಲ, ಹಸಿವನ್ನು ಹೆಚ್ಚಿಸುತ್ತದೆ.
---------
ಅನ್ನಕ್ಕೆ ಕೇವಲ ಸಾಂಬಾರ್, ಸಾರಲ್ಲ, ಅವುಗಳ ಜೊತೆ ತಂಬುಳಿ, ಸಾಸಿವೆಯನ್ನೂ ಆಗಾಗ ಮಾಡುವ ಅಭ್ಯಾಸ ಒಳ್ಳೆಯದು. ಈಗ ಬೀಟ್ರೂಟ್ ಸಾಸಿವೆ ಹೇಗೆ ಮಾಡೋದು ನೋಡೋಣ.

ಅದೇ ಬೇಳೆ, ಟೊಮ್ಯಾಟೋ ರಸಂ ತಿಂದು ಬೇಜಾರಾ? ಇಲ್ಲಿದೆ ಹೊಸ ರಸಂ ರೆಸಿಪಿ

ಸರ್ವಿಂಗ್ಸ್: 3
ಬೇಕಾಗುವ ಸಾಮಗ್ರಿಗಳು:

2 ಸಣ್ಣ ಬೀಟ್ರೂಟ್, ಕಾಲು ಕಪ್ ಕಾಯಿ ತುರುದುಕೊಂಡಿದ್ದು, ಒಗ್ಗರಣೆ ವಸ್ತುಗಳು ಎಲ್ಲವೂ ಅರ್ಧ ಚಮಚ, ಹಸಿಮೆಣಸು 2, ಮೊಸರು 2 ಬಟ್ಟಲು, ಉಪ್ಪು ರುಚಿಗೆ ತಕ್ಕಷ್ಟು. 

ಮಾಡುವ ವಿಧಾನ: 

ಬೀಟ್ರೂಟನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು ತುರಿದಿಟ್ಟುಕೊಳ್ಳಿ. ಬಾಣಲೆ ಬಿಸಿಗಿಟ್ಟು ಅದಕ್ಕೆ 3 ಚಮಚ ಎಣ್ಣೆ ಹಾಕಿ, ಉದ್ದು, ಜೀರಿಗೆ, ಸಾಸಿವೆ, ಕೆಂಪುಮೆಣಸಿನಕಾಯಿ ಹುರಿದುಕೊಳ್ಳಿ. ಇದಕ್ಕೆ ಬೀಟ್ರೂಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ಇದು ತಣಿದ ಬಳಿಕ ಎರಡು ಬಟ್ಟಲು ಮೊಸರು ಸೇರಿಸಿ. ಇನ್ನೊಂದೆಡೆ ಕಾಯಿ, ಹಸಿಮೆಣಸು ಹಾಗೂ ಸಾಸಿವೆಯನ್ನು ಮಿಕ್ಸಿ ಮಾಡಿ ಇದಕ್ಕೆ ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಬೀಟ್ರೂಟ್ ಸಾಸಿವೆ ರೆಡಿ. ನೀರುಳ್ಳಿ ಇಷ್ಟಪಡುವವರು ಹಸಿ ನೀರುಳ್ಳಿಯನ್ನು ಕೊಚ್ಚಿ ಮೇಲಿನಿಂದ ಹಾಕಿಕೊಳ್ಳಬಹುದು. 

click me!