ಮೊಳಕೆ ಕಾಳುಗಳೆಂದರೆ ಸಸಿಯಾಗಿ, ಗಿಡವಾಗಿ ಎತ್ತರಕ್ಕೆ ಬೆಳೆಯಬಲ್ಲ ಸಾಮರ್ಥ್ಯ ಇರುವ ಕಾಳುಗಳು. ಕೆಲ ಗಂಟೆಗಳ ಕಾಲ ನೀರಿನಲ್ಲಿಟ್ಟರೆ ಸಾಕು, ಹೆಸರುಕಾಳು, ಕಡ್ಲೆಕಾಳು, ಹುರುಳಿ ಮುಂತಾದವು ದಿನ ಕಳೆವಷ್ಟರಲ್ಲಿ ಮೊಳಕೆ ಬಂದಿರುತ್ತವೆ. ಈ ಕಾಳುಗಳನ್ನು ಹಸಿಯಾಗಿ ಅಥವಾ ಬೇಯಿಸಿ ಸೇವಿಸುವುದರಿಂದ ಆರೋಗ್ಯಕ್ಕೆ ತರಹೇವಾರಿ ಲಾಭಗಳಿವೆ.
ಮೊಳಕೆಕಾಳುಗಳು- ಪೌಷ್ಟಿಕಾಂಶಗಳ ಪವರ್ ಹೌಸ್. ಸಾಮಾನ್ಯ ಕಾಳನ್ನು ಸೇವಿಸುವುದಕ್ಕಿಂತಲೂ ಅವನ್ನು ಮೊಳಕೆ ಬರಿಸಿ ಸೇವಿಸಿದಲ್ಲಿ ಆರೋಗ್ಯಕ್ಕೆ 10 ಪಟ್ಟು ಹೆಚ್ಚು ಲಾಭ ಸಿಗುತ್ತದೆ ಎನ್ನುತ್ತವೆ ಸಂಶೋಧನೆಗಳು. ಇವುಗಳಲ್ಲಿ ಏನುಂಟು ಏನಿಲ್ಲ? ಮೊಳಕೆಕಾಳುಗಳಲ್ಲಿ ವಿಟಮಿನ್ ಎ, ಬಿ, ಸಿ, ಇ, ಕೆ, ಐರನ್, ಆಂಟಿಆಕ್ಸಿಡೆಂಟ್ಸ್, ಬಯೊಟಿನ್, ಸೆಲೆನಿಯಮ್, ಮೆಗ್ನೀಷಿಯಂ, ಮ್ಯಾಂಗನೀಸ್, ಕ್ಯಾಲ್ಶಿಯಂ, ಪೊಟ್ಯಾಸಿಯಂ, ಫೈಟೊಕೆಮಿಕಲ್ಸ್, ಪ್ರೋಟೀನ್, ಕಿಮೋ ಪ್ರೊಟೆಕ್ಟಂಟ್ಸ್, ಫೋಲಿಕ್ ಆಮ್ಲ, ಜಿಂಕ್, ನಿಯಾಸಿನ್, ಕಾಪರ್, ರೈಬೋಫ್ಲೇವಿನ್ ಇತ್ಯಾದಿಗಳು ಸಮೃದ್ಧವಾಗಿವೆ. ಅಂದ ಮೇಲೆ ಪ್ರತಿನಿತ್ಯ ಮೊಳಕೆಕಾಳುಗಳನ್ನು ಡಯಟ್‌ಗೆ ಸೇರಿಸಿಕೊಂಡಲ್ಲಿ ಎಷ್ಟೆಲ್ಲ ಲಾಭಗಳಿವೆ ಗೊತ್ತಾ?
ಚಪಾತಿ ರುಚಿ ಹೆಚ್ಚಿಸೋ ಹೆಸರು ಕಾಳು ಪಲ್ಯ ಮಾಡೋದು ಹೀಗೆ
- ಹೊಳೆವ ಉದ್ದನೆ ಕೂದಲು
ಮೊಳಕೆ ಕಾಳುಗಳಲ್ಲಿ ಹೆಚ್ಚಿನ ವಿಟಮಿನ್ ಇ ಮತ್ತು ವಿಟಮಿನ್ ಎಗಳಿವೆ. ಇವೆರಡೂ ಕೂದಲ ಆರೋಗ್ಯಕ್ಕೆ ಅಗತ್ಯ. ಪ್ರತಿ ನಿತ್ಯ ಇವುಗಳ ಸೇವನೆಯಿಂದ ಶುಷ್ಕಗೊಂಡಿರುವ ನೆತ್ತಿಗೆ ಚಿಕಿತ್ಸೆ ದೊರೆತು, ದುರ್ಬಲ ಕೂದಲ ಬೇರು ಬಲಿಷ್ಠವಾಗುತ್ತವೆ. ನಿಮ್ಮ ಕೂದಲನ್ನು ದುರ್ಬಲಗೊಳಿಸುವ ಫ್ರೀ ರಾಡಿಕಲ್ಸ್ ವಿರುದ್ಧ ಇವು ಹೋರಾಡುತ್ತವೆ. ಇದರೊಂದಿಗೆ ಕೂದಲ ಪೋಷಣೆಗೆ ಬೇಕಾದ ಪ್ರೋಟೀನ್ ಮೊಳಕೆಕಾಳುಗಳಲ್ಲಿರುವುದರಿಂದ ಇದು ಕೂದಲು ತುಂಡಾಗುವುದು, ಉದುರುವುದು ಮುಂತಾದವನ್ನು ತಡೆಗಟ್ಟೆ ಹೊಸ ಕೂದಲ ಬೆಳವಣಿಗೆಗೆ ಕಾರಣವಾಗುತ್ತದೆ. ಇನ್ನು ಆ ಪ್ರೋಟೀನ್ ಉತ್ಪಾದನೆಗೆ ಬೇಕಾದ ವಿಟಮಿನ್ ಕೆ ಫ್ಯಾಟ್ ಸೊಲ್ಯುಬಲ್ ಪೌಷ್ಟಿಕಾಂಶವಾಗಿದ್ದು, ಅದು ಕೂಡಾ ಸ್ಪ್ರೌಟ್ಸ್‌ನಲ್ಲಿ ಅಧಿಕವಾಗಿರುತ್ತದೆ.
undefined
- ತಲೆಹೊಟ್ಟಿನಿಂದ ಮುಕ್ತಿ
ಮೊಳಕೆ ಕಾಳುಗಳು ಸೆಲೆನಿಯಮ್‌ನಿಂದ ಸಮೃದ್ಧವಾಗಿದ್ದು, ಮಲಸ್ಸೇಜಿಯಾ ಎಂಬ ತಲೆಹೊಟ್ಟನ್ನು ಉಂಟು ಮಾಡುವ ಫಂಗಸ್ ಕೊಲ್ಲುವಲ್ಲಿ ಸಹಾಯ ಮಾಡುತ್ತದೆ. ಪ್ರತಿನಿತ್ಯ ಮೊಳಕೆ ಕಾಳುಗಳನ್ನು ಸೇವಿಸುವುದರಿಂದ ಈ ತಲೆಹೊಟ್ಟು ಸಂಪೂರ್ಣ ಮಾಯವಾಗುತ್ತದೆ. ಇದರ ಪರಿಣಾಮವಾಗಿ ತುರಿಕೆಯೂ ನಿಲ್ಲುತ್ತದೆ. ಹಸಿ ಕಾಳುಗಳನ್ನು ಸೇವಿಸುವುದು ಬೇಯಿಸಿದ ಕಾಳುಗಳಿಗಿಂತ ಉತ್ತಮ.
ಹೃದ್ರೋಗಕ್ಕೆ ಮೊಳಕೆ ಕಾಳೆಂಬ ಮದ್ದು
- ಆರೋಗ್ಯಕರ ತ್ವಚೆ
ಮೊಳಕೆ ಕಾಳುಗಳಲ್ಲಿರುವ ವಿಟಮಿನ್ ಇ ಹಾಗೂ ಎ ನಿಮ್ಮ ಚರ್ಮಕ್ಕೆ ಅಗತ್ಯವಿರುವ ಪೌಷ್ಟಿಕತೆಯನ್ನು ನೀಡಿ, ಕೊಲಾಜನ್ ಉತ್ಪಾದನೆಯನ್ನು ಪ್ರಚೋದಿಸುತ್ತದೆ. ಕೊಲಾಜನ್ ನಿಮ್ಮ ಚರ್ಮವನ್ನು ಮೃದುವಾಗಿಸಿ ಹೊಳೆಯುವಂತೆ ಮಾಡಿ, ಆರೋಗ್ಯಕರವಾಗಿಸುತ್ತದೆ. ಮೊಳಕೆ ಕಾಳುಗಳು ಜೀವಕೋಶಗಳ ಪುನರುತ್ಪಾದನೆಯ ಮೂಲಕ ದೇಹದಲ್ಲಾದ ಗಾಯವನ್ನು ಗುಣಪಡಿಸುವಲ್ಲಿ ಸಹಾಯ ಮಾಡುತ್ತವೆ.
- ಆ್ಯಂಟಿಆಕ್ಸಿಡೆಂಟ್‌ಗಳ ಕಣಜ
ಆ್ಯಂಟಿ ಆಕ್ಸಿಡೆಂಟ್ಸ್ ಹೆಚ್ಚಾಗಿವೆ ಎಂದರೆ ಮುಪ್ಪಿಗೆ ಒಂದು ರೀತಿಯಲ್ಲಿ ಫುಲ್‌ಸ್ಟಾಪ್ ಹಾಕಿದಂತೆಯೇ. ಇದು ನಿಮ್ಮ ಜೀವಕೋಶಗಳ ಜೀವಾವಧಿಯನ್ನು ಹೆಚ್ಚಿಸಿ, ನಿಮ್ಮ ಕೂದಲು ಬೆಳ್ಳಗಾಗುವುದನ್ನು ತಡೆಯುತ್ತದೆ. ಜೊತೆಗೆ ಆರೋಗ್ಯಕರ ಚರ್ಮಕ್ಕೆ ಕೂಡಾ ಇವು ಅಗತ್ಯ.
- ಅನೀಮಿಯಾ ವಿರುದ್ದ ಹೋರಾಟ
ಮೊಳಕೆಕಾಳುಗಳಲ್ಲಿ ಐರನ್ ತುಂಬಿದ್ದು, ಇದು ಹಿಮೋಗ್ಲೋಬಿನ್ ಹೆಚ್ಚಿಸಿ ಅನೀಮಿಯಾಕ್ಕೆ ರಾಮಬಾಣದಂತೆ ಕೆಲಸ ಮಾಡುತ್ತದೆ.
- ಹಾರ್ಮೋನ್ ಏರುಪೇರಿಗೆ ಫುಲ್‌ಸ್ಟಾಪ್
ಹಾರ್ಮೋನ್‌ಗಳ ಅಸಮತೋಲನದಿಂದ ತೂಕ ಹೆಚ್ಚುವುದು, ಕೂದಲುದುರುವುದು, ಸುಖಾಸುಮ್ಮನೆ ಸಿಟ್ಟು ಬರುವುದು, ಒತ್ತಡ, ದೇಹದ ಉಷ್ಣತೆ ಏರುಪೇರು, ನಿದ್ರಾ ಸಮಸ್ಯೆ ಮುಂತಾದವು ಕಂಡುಬರುತ್ತವೆ. ಆದರೆ ಪ್ರತಿನಿತ್ಯ ಮೊಳಕೆಕಾಳುಗಳ ಸೇವನೆಯಿಂದ ಈ ಹಾರ್ಮೋನ್‌ಗಳ ಅಸಮತೋಲನ ತಡೆಯಬಹುದು.
- ಭ್ರೂಣದ ಬೆಳವಣಿಗೆ
ಗರ್ಭಾವಸ್ಥೆಯಲ್ಲಿ ಮೊಳಕೆಕಾಳುಗಳನ್ನು ಸೇವಿಸುವುದರಿಂದ ಮಗುವಿನ ಸ್ನಾಯುಗಳ ಬೆಳವಣಿಗೆಗೆ ಪ್ರೊಟೀನ್, ರೋಗನಿರೋಧಕ ಶಕ್ತಿ ಹೆಚ್ಚಿಸಲು ವಿಟಮಿನ್ ಸಿ, ಭ್ರೂಣದ ಬುದ್ಧಿ ಬೆಳವಣಿಗೆಗೆ ಐರನ್ ಸಿಗುವ ಜೊತೆಗೆ ಹತಚ್ತು ಹಲವು ಪೋಷಕಸತ್ವಗಳು ಜೊತೆಗೂಡುತ್ತವೆ. ಇನ್ನು ಗರ್ಭಿಣಿಯರಿಗೆ ಕಾಡುವ ಕೂದಲುದುರುವಿಕೆ, ಮಲಬದ್ಧತೆ, ಚರ್ಮದ ಮೆಲಾಸ್ಮ ಕಡಿಮೆಯಾಗುತ್ತದೆ.
- ತೂಕ ನಿಯಂತ್ರಣ
ಮೊಳಕೆಕಾಳುಗಳು ಹೆಚ್ಚಿನ ಪೌಷ್ಟಿಕಾಂಶಗಳನ್ನು ಹೊಂದಿದ್ದರೂ, ಕಡಿಮೆ ಕ್ಯಾಲೋರಿ ಹೊಂದಿರುವುದರಿಂದ ತೂಕ ಹೆಚ್ಚು ಏರುವುದಿಲ್ಲ. ಅಲ್ಲದೆ, ಅಧಿಕ ಫೈಬರ್ ಹೊಂದಿರುವ ಮೊಳಕೆಕಾಳುಗಳು ಹೆಚ್ಚಿನ ಸಮಯ ಹೊಟ್ಟೆ ತುಂಬಿರುವ ಭಾವ ನೀಡುತ್ತದೆ. ಇದರಿಂದ ಹಸಿವು ಕಡಿಮೆಯಾಗಿ ತೂಕ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ.