
ಭಾರತೀಯರಿಗೆ ಅನ್ನ ಅಂದ್ರೆ ದೇವರು.ಇದೇ ಕಾರಣಕ್ಕೆ ಭಾರತದಲ್ಲಿ ಊಟಕ್ಕೂ ಒಂದು ಶಿಷ್ಟಚಾರವಿದೆ. ಊಟ ಮಾಡೋವಾಗ ಮಾತಾಡಬಾರದು, ಇನ್ನೊಬ್ಬರೊಂದಿಗೆ ತಟ್ಟೆ ಹಂಚಿಕೊಳ್ಳಬಾರದು ಸೇರಿದಂತೆ ಹತ್ತಾರು ನಿಯಮ, ನಂಬಿಕೆಗಳಿವೆ. ಆದ್ರೆ ಇಂಥ ನಿಯಮಗಳ ಹಿಂದೆ ಕೆಲವೊಂದು ಆರೋಗ್ಯಕಾರಿ ಪ್ರಯೋಜನಗಳೂ ಇವೆ.
ನೆಲದ ಮೇಲೆ ಕೂತು ಊಟ ಮಾಡೋದು
ಹಿಂದೆಲ್ಲ ಮನೆಯಲ್ಲಿ ಡೈನಿಂಗ್ ಟೇಬಲ್ ಇರಲಿಲ್ಲ. ಅಲ್ಲದೆ, ಕೂಡು ಕುಟುಂಬವಾದ ಕಾರಣ ಮನೆ ತುಂಬಾ ಜನ. ಹೀಗಾಗಿ ಎಲ್ಲರೂ ಅಡುಗೆ ಮನೆ ಅಥವಾ ಸಾಕಷ್ಟು ಸ್ಥಳಾವಕಾಶವಿರುವ ಜಾಗದಲ್ಲಿ ನೆಲದ ಮೇಲೆ ಸಾಲಾಗಿ ಕುಳಿತು ಊಟ ಮಾಡುತ್ತಿದ್ದರು. ಇದೇ ಕಾರಣಕ್ಕೆ ನಮ್ಮ ಪೂರ್ವಜರಿಗೆ ಜೀರ್ಣ ಕ್ರಿಯೆ ಅಥವಾ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಡಿಮೆ. ಊಟ ಮಾಡುವಾಗ ಸುಖಾಸನದಲ್ಲಿ ಕುಳಿತುಕೊಳ್ಳುವ ಕಾರಣ ಆಹಾರ ಸೇವನೆ ಸಮಯದಲ್ಲೂ ಭಾರತೀಯರು ಯೋಗ ಭಂಗಿಗೆ ಮಹತ್ವ ನೀಡುತ್ತಿದ್ದರು ಎಂಬುದು ಸ್ಪಷ್ಟ. ಹೀಗೆ ಸುಖಾಸನದಲ್ಲಿ ಕುಳಿತುಕೊಳ್ಳೋದ್ರಿಂದ ಹೊಟ್ಟೆಯ ಸ್ನಾಯುಗಳಿಗೆ ಮಸಾಜ್ ಸಿಗುತ್ತದೆ. ದೇಹದ ಕೆಳ ಭಾಗಕ್ಕೆ ರಕ್ತ ಸಂಚಾರ ಉತ್ತಮಗೊಂಡು ಫ್ಲೆಕ್ಸಿಬಲಿಟಿ ಹೆಚ್ಚುತ್ತೆ.
ಬೆಳಗ್ಗೆ ಬೇಗ ಬ್ರೇಕ್‍ಫಾಸ್ಟ್ ಮಾಡೋದು
ಬೆಳಗ್ಗೆ ಬೇಗ ಎದ್ದೇಳಬೇಕು, ಬೇಗ ಉಪಾಹಾರ ಸೇವಿಸಬೇಕು ಎಂಬುದು ಭಾರತೀಯರು ಪುರಾತನ ಕಾಲದಿಂದಲೂ ಅನುಸರಿಸಿಕೊಂಡು ಬಂದ ಸಂಪ್ರದಾಯ. ಆಧುನಿಕ ಜೀವನಶೈಲಿಗೆ ಮಾರು ಹೋಗಿರುವವರು ಈಗ ಇದನ್ನು ಮರೆತಿದ್ದಾರೆ ಅಷ್ಟೆ. ರಾತ್ರಿ ಊಟದ ಬಳಿಕ ಕನಿಷ್ಠ 8 ಗಂಟೆಯಾದ್ರೂ ಮಲಗಿರುತ್ತೇವೆ. ಹೀಗಾಗಿ ರಾತ್ರಿ ಊಟ ಮತ್ತು ಬೆಳಗ್ಗೆ ತಿಂಡಿ ನಡುವೆ ದೀರ್ಘ ಗ್ಯಾಪ್ ಇರುತ್ತೆ. ಇದ್ರಿಂದ ಸಹಜವಾಗಿಯೇ ಹೊಟ್ಟೆ ಖಾಲಿಯಿರುವ ಕಾರಣ ದೇಹದ ಎನರ್ಜಿ ಲೈವೆಲ್ ಕಡಿಮೆಯಾಗಿರುತ್ತೆ. ಆದಕಾರಣ ಬೆಳಗ್ಗೆ ಆದಷ್ಟು ಬೇಗ ಬ್ರೇಕ್‍ಫಾಸ್ಟ್ ಮಾಡೋದು ಒಳ್ಳೆಯದು. ತಡವಾಗಿ ಬ್ರೇಕ್‍ಫಾಸ್ಟ್ ಮಾಡೋದು ಇಲ್ಲವೆ ಅದನ್ನು ಸ್ಕಿಪ್ ಮಾಡೋದ್ರಿಂದ ಮಧುಮೇಹ ಬರುವ ಸಾಧ್ಯತೆಯಿರೋದು ವೈಜ್ಞಾನಿಕವಾಗಿ ಸಾಬೀತಾಗಿದೆ ಕೂಡ.
ಎಂಜಲು ಆಹಾರ ಸೇವಿಸಬಾರ್ದು
ಫ್ರೆಂಡ್ಸ್ ಗ್ರೂಪ್‍ನಲ್ಲಿ ಒಂದೇ ಚಾಕಲೇಟ್ ಅನ್ನು ಎಲ್ಲರೂ ಕಚ್ಚಿ ತಿನ್ನುತ್ತ ಶೇರ್ ಮಾಡಿಕೊಳ್ಳೋದು, ಒಂದೇ ಗ್ಲಾಸ್‍ನಲ್ಲಿ ಜ್ಯೂಸ್ ಸಿಪ್ ಮಾಡೋದು ಈಗೆಲ್ಲ ಫ್ಯಾಶನ್. ಆದ್ರೆ ಪುರಾತನ ಕಾಲದಲ್ಲಿ ಇಂಥ ಅಭ್ಯಾಸ ನಿಷಿದ್ಧ. ಇನ್ನೊಬ್ಬರ ತಟ್ಟೆಯಲ್ಲಿರೋದನ್ನು ಅಥವಾ ಇನ್ನೊಬ್ಬರು ತಿಂದ ಆಹಾರವನ್ನು ಎಂಜಲು ಎಂದು ಪರಿಗಣಿಸಲಾಗುತ್ತಿತ್ತು. ಎಂಜಲು ಆಹಾರವನ್ನು ಸೇವಿಸುವಂತಿರಲಿಲ್ಲ. ಈಗ ನಮಗಿದು ಮೂಢನಂಬಿಕೆ ಅನ್ನಿಸಬಹುದು. ಆದ್ರೆ ಈ ನಿಯಮದ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಎಂಜಲಿನ ಮೂಲಕ ರೋಗಗಳು ಹರಡುವ ಸಾಧ್ಯತೆಯಿರುವ ಕಾರಣ ಇನ್ನೊಬ್ಬರು ತಿಂದ ಆಹಾರವನ್ನು ಸೇವಿಸೋದ್ರಿಂದ ಕಾಯಿಲೆಗೆ ತುತ್ತಾಗಬಹುದು ಎಂಬ ಮುನ್ನೆಚ್ಚರಿಕೆಯಿಂದ ಈ ನಿಯಮ ರೂಪಿಸಿದ್ದರು. ಸದ್ಯ ಜಗತ್ತು ಕೊರೋನಾ ಎಂಬ ದೊಡ್ಡ ಗಂಡಾಂತರಕ್ಕೆ ಸಿಕ್ಕಿದೆ ಇದ್ರಿಂದ ಪಾರಾಗಲು ಕೈಗೊಳ್ಳಬೇಕಿರುವ ಮುನ್ನೆಚ್ಚರಿಕೆಗಳಲ್ಲಿ ಇದೂ ಕೂಡ ಒಂದು ಎಂಬುದು ಗಮನಾರ್ಹ.
ಆರೋಗ್ಯ ಚೆನ್ನಾಗಿಡುವ 3 ಬಗೆ ಸ್ಪೆಷಲ್ ದೋಸೆ- ಚಟ್ನಿ!
ಊಟ ಮಾಡೋವಾಗ ಮಾತಾಡಬಾರ್ದು
ಊಟ ಮಾಡೋವಾಗ ಮಾತಾಡಬಾರ್ದು ಎಂಬ ನಿಯಮವಿದೆ. ಆದ್ರೆ ಇಂದು ಮಾತನಾಡುತ್ತ, ಟಿವಿ ಇಲ್ಲವೆ ಮೊಬೈಲ್ ನೋಡುತ್ತ ಊಟ ಮಾಡೋದು ಕಾಮನ್ ಆಗಿದೆ. ಊಟ ಮಾಡೋವಾಗ ಮಾತಾಡಬಾರ್ದು ಎನ್ನೋದರ ಹಿಂದೆ ಪ್ರಬಲ ಕಾರಣವಿದೆ. ಆಹಾರವನ್ನು ಸರಿಯಾಗಿ ಅಗೆಯದೆ ನುಂಗಬಹುದು. ಇದ್ರಿಂದ ಅಜೀರ್ಣದಂತಹ ಸಮಸ್ಯೆ ಉಂಟಾಗುತ್ತದೆ. ಅಲ್ಲದೆ, ಊಟ ಮಾಡೋವಾಗ ಮಾತನಾಡೋದ್ರಿಂದ ಬಾಯಿಯಲ್ಲಿರುವ ಆಹಾರ ಮುಂದೆ ಅಥವಾ ಅಕ್ಕಪಕ್ಕ ಊಟಕ್ಕೆ ಕುಳಿತವರ ತಟ್ಟೆ ಅಥವಾ ಮೈ ಮೇಲೆ ಬೀಳಬಹುದು ಎಂಬ ಕಾರಣಕ್ಕೆ ಈ ನಿಯಮ ರೂಪಿಸಲಾಗಿದೆ.
ಮೂರು ಹೊತ್ತಿಗೆ ಮೂರು ಅಡುಗೆ
ಹಿಂದಿನ ಮನೆಗಳಲ್ಲಿ ಈಗಿನಂತೆ ಆಧುನಿಕ ಸಲಕರಣೆಗಳಿರಲಿಲ್ಲ. ರೆಡಿ ಟು ಈಟ್ ಆಹಾರಗಳಿರಲಿಲ್ಲ. ಆದ್ರೂ ಆ ಕಾಲದ ಮನೆಗಳಲ್ಲಿ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿಗೆ ಬೇರೆ ಬೇರೆ ಆಹಾರ ಸಿದ್ಧವಾಗುತ್ತಿತ್ತು. ಆಹಾರವನ್ನು ಸಿದ್ಧಪಡಿಸಿದ ತಕ್ಷಣ ಸೇವಿಸೋದು ಆರೋಗ್ಯಕ್ಕೆ ಒಳ್ಳೆಯದು ಎಂಬುದು ನಮ್ಮ ಪೂರ್ವಜರ ನಂಬಿಕೆಯಾಗಿತ್ತು. ಆಹಾರವನ್ನು ಸಿದ್ಧಪಡಿಸಿ ಹಲವು ಗಂಟೆಗಳ ಕಾಲ ಹೊರಗಿಡೋದು ಅಥವಾ ಮತ್ತೆ ಬಿಸಿ ಮಾಡೋದ್ರಿಂದ ಅದರಲ್ಲಿರುವ ಪೋಷಕಾಂಶಗಳು ನಾಶವಾಗುತ್ತವೆ ಹಾಗೂ ಕೆಲವು ಆಹಾರಗಳು ವಿಷಯುಕ್ತವಾಗುತ್ತವೆ.
ಬಾಯಲ್ಲಿ ನೀರೂರಿಸುವ ಬಾದಾಮಿ ರೆಸಿಪಿಗಳು
ಮಣ್ಣಿನ ಪಾತ್ರೆಯಲ್ಲಿ ಅಡುಗೆ
ಹಿಂದಿನ ಕಾಲದ ಮನೆಗಳಲ್ಲಿ ಈಗಿನಂತೆ ಸ್ಟೀಲ್, ಪ್ಲಾಸ್ಟಿಕ್ ಹಾಗೂ ಅಲ್ಯೂಮೀನಿಯಂ ಪಾತ್ರೆಗಳಿರಲಿಲ್ಲ. ಅವರ ಬಳಿ ಇದ್ದದ್ದು ಕೇವಲ ಮಣ್ಣಿನ ಪಾತ್ರೆಗಳು. ಆದ್ರೆ ಈ ಮಣ್ಣಿನ ಪಾತ್ರೆಗಳಲ್ಲಿ ಆಹಾರ ಸಿದ್ಧಪಡಿಸೋದ್ರಿಂದ ಕ್ಯಾಲ್ಸಿಯಂ, ಫಾಸ್ಪರಸ್, ಕಬ್ಬಿಣಾಂಶ, ಮೆಗ್ನೇಷಿಯಂ, ಸಲ್ಫರ್ ಹಾಗೂ ಇತರ ಖನಿಜಾಂಶಗಳು ಸೇರ್ಪಡೆಗೊಳ್ಳುತ್ತವೆ. ಅಲ್ಲದೆ, ಮಣ್ಣಿನ ಪಾತ್ರೆಯಲ್ಲಿ ಅಲ್ಕಲೈನ್ ಅಂಶವಿದ್ದು, ಇದು ಆಹಾರದಲ್ಲಿನ ಪಿಎಚ್ ಮಟ್ಟವನ್ನು ನಿಯಂತ್ರಿಸುತ್ತದೆ. ಅಲ್ಕಲೈನ್ ವಾತಾವರಣದಲ್ಲಿ ಕ್ಯಾನ್ಸರ್‍ನಂತಹ ಕಾಯಿಲೆಗಳು ಅಭಿವೃದ್ಧಿ ಹೊಂದುವುದಿಲ್ಲ.
ಕೈಯಿಂದ ಊಟ
ಭಾರತದಲ್ಲಿ ಕೈಯಿಂದಲೇ ಊಟ ಮಾಡೋದು ಕಾಮನ್. ವಿದೇಶಿಗರಿಗೆ ಅನಾಗರೀಕತೆ ಅನ್ನಿಸಬಹುದು. ಆದ್ರೆ ಕೈಯಿಂದ ಊಟ ಮಾಡೋದ್ರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ. ಆಯುರ್ವೇದದ ಪ್ರಕಾರ ಕೈಯಿಂದ ಬಾಯಿಗೆ ತುತ್ತು ಹಾಕಿಕೊಳ್ಳುವಾಗ ಐದು ಬೆರಳುಗಳು ಸೇರಿ ಒಂದು ಮುದ್ರೆ ರಚನೆಯಾಗುತ್ತೆ, ಇದು ಪಂಚೇಂದ್ರಿಯಗಳನ್ನು ಪ್ರೇರೇಪಿಸುವ ಮೂಲಕ ಪ್ರಾಣವನ್ನು ಸಮತೋಲನದಲ್ಲಿಡಲು ನೆರವು ನೀಡುತ್ತೆ. ಅಲ್ಲದೆ, ಕೈ ಆಹಾರವನ್ನು ಮುಟ್ಟಿದ ತಕ್ಷಣ ಮೆದುಳಿಗೆ ಸಂಜ್ಞೆ ರವಾನೆಯಾಗಿ ಜೀರ್ಣಕ್ರಿಯೆಗೆ ಅಗತ್ಯವಾದ ರಸಗಳನ್ನು ಶರೀರ ಬಿಡುಗಡೆಗೊಳಿಸುತ್ತೆ. ಕೈಯಿಂದ ಊಟ ಮಾಡಿದಾಗ ಆಹಾರದ ರುಚಿ ಹೆಚ್ಚಲು ಬಹುಶಃ ಇದೇ ಕಾರಣವಿರಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.