ಡಯಟ್ ಕನ್ಸಲ್ಟಿಂಗ್‌ನ ಫಚೀತಿಯ ಸನ್ನಿವೇಶಗಳ ಇಲ್ಲಿವೆ. ಗೂಗಲ್‌ನಿಂದಾಗುವ ಅವಾಂತರ, ಕೌನ್ಸಿಲಿಂಗ್ ವೇಳೆ ಎಲ್ಲಿ ತನ್ನ ಬಂಡವಾಳ ಬಯಲಾಗುವುದೋ ಎಂಬ ಭೀತಿಯಲ್ಲಿರುವ ಟೆಕ್ಕಿಯ ಚಿತ್ರಗಳಿವೆ.
ಶಮನ್
ಡಯಟ್ ಕೌನ್ಸಿಲಿಂಗ್ ಮಾಡಲು ಆರಂಭಿಸಿದ ದಿನಗಳ ಒಂದು ಸಂದರ್ಭ. ಟೇಬಲ್ ಟೆನ್ನಿಸ್ ಆಡುವ ಒಂದು ಹುಡುಗಿ ಸ್ಪೋಟ್ಸ್‌ರ್ ನ್ಯೂಟ್ರಿಶನ್ ಕೇಳಲು ಬಂದಿದ್ದಳು. ಎಲ್ಲರಿಗೆ ಹೇಳುವಂತೆ ನನ್ನ ಫೀಸ್ ಬಗ್ಗೆ ಹೇಳಿದೆ. ಒಪ್ಪಿಕೊಂಡು ಕೌನ್ಸಿಲಿಂಗ್‌ಗೆ ತಾಯಿ ಮಗಳು ಬಂದರು. ಸಾಮಾನ್ಯವಾಗಿ ಮೊದಲ ಸೆಶನ್ ಒಂದರಿಂದ ಒಂದೂವರೆ ತಾಸು ತೆಗೆದುಕೊಳ್ಳುತ್ತದೆ. ಇವರದ್ದು ಮಾತ್ರ ಬರಾಬರಿ ಮೂರು ತಾಸು. ಎರಡು ದಿನದೊಳಗೆ ಡಯಟ್ ಚಾರ್ಟ್ ರೆಡಿ ಮಾಡಿ ಕಳುಹಿಸುತ್ತೇನೆ, ಅದರೊಳಗೆ ಫೀಸ್ ಪೇ ಮಾಡಿ ಹೇಳಿದೆ. ಗೂಗಲ್ ನನ್ನ ಎರಡು ಗಂಟೆ ಸಮಯವನ್ನು ನುಂಗಿತು ಅಂದುಕೊಂಡು ಸುಮ್ಮನಾದೆ.
undefined
ಬಾಯಲ್ಲಿ ನೀರೂರಿಸುವ ಬಾದಾಮಿ ರೆಸಿಪಿಗಳು
ಡಯಟ್ ಚಾರ್ಟ್ ರೆಡಿಯಾಗಿದೆ ಎಂದು ಮೆಸೇಜ್ ಮಾಡಿದೆ. ಅನ್‌ಲೈನ್ ಟ್ರಾನ್ಸ್ ಫರ್ ಮಾಡಕ್ಕೆ ಸಮಸ್ಯೆ ಇದೆ, ನಿಮ್ಮನ್ನು ಭೇಟಿ ಮಾಡಿ ಕ್ಯಾಶ್ ಕೊಡುತ್ತೇವೆ ಅಂದರು. ಸರಿ ಎಂದು ಭೇಟಿ ಮಾಡಲು ಬಂದರು. ನಾನು ಡಯಟ್ ಚಾರ್ಟ್ ವಿವರಿಸಿದೆ. ಅಲ್ಲೂ, ಜಾಸ್ತಿ ಸಮಯ ಹಿಡಿಯಿತು. ಹೇಗಿದ್ದರೂ ಬಂದಾಗ ಫೀಸ್ ಕೊಡುತ್ತೇವೆ ಅಂತ ಹೇಳಿದ್ದಾರೆ, ಹಾಗೆಂದುಕೊಂಡು ಡಯಟ್ ಚಾರ್ಟ್‌ಅನ್ನು ಮೇಲ್ ಮಾಡಿದೆ. ಮಾತೆಲ್ಲ ಮುಗಿಯುತ್ತಿದ್ದಂತೆ, ಇವತ್ತು ಕ್ಯಾಶ್ ತರಲು ಆಗಲಿಲ್ಲ, ನಾಳೆ ಒಳಗೆ ದುಡ್ಡು ಸೇರುವಂತೆ ಮಾಡುತ್ತೇನೆ ಅಂದರು. ನನಗೆ ಫೀಸ್ ಕೇಳೊ ಬಗ್ಗೆ ತುಂಬ ಸಂಕೋಚ. ಈ ತಕ್ಷಣ ಕೊಡಿ, ದುಡ್ಡು ಕೊಟ್ಟಮೇಲೆ ಮಾತ್ರ ಮಾತನಾಡುವೆ ಎಂದೆಲ್ಲ ಹೇಳುವುದು ಕಷ್ಟ. ಅವರು ಅಷ್ಟುಹೇಳಿದಾಗ ನಾನು, ‘ಪರವಾಗಿಲ್ಲ, ನಾಳೆ ಕೊಡಿ’ ಎಂದು ಹೇಳಿ ಕಳುಹಿಸಿದೆ.
ಎರಡು ದಿನ ಕಳೆದರೂ ಯಾವುದೇ ಸುದ್ದಿ ಇರಲಿಲ್ಲ. ಆದರೂ, ನಾನು ನನ್ನ ಪ್ರಕಾರ ಡಯೆಟ್ ಫಾಲೋ ಅಪ್ ಮಾಡಲು ಮೆಸೇಜ್ ಮಾಡಿದೆ. ‘ಸಾರಿ, ನನ್ನ ಪರ್ಸ್ ಕಳೆದು ಹೋಗಿದೆ, ಅದೇ ತಲೆ ಬಿಸಿಯಲ್ಲಿದ್ದೇನೆ, ವ್ಯವಸ್ಥೆ ಮಾಡುತ್ತೇನೆ’ ಎಂದರು.
ಇವರು ಆಟ ಆಡಿಸುತ್ತಿದ್ದಾರೆ ಎಂಬ ಸಣ್ಣ ಅನುಮಾನ ಹುಟ್ಟಿತು. ಆದರೂ, ನಿಜವಾಗಿಯೂ ತೊಂದರೆ ಆಗಿರಬಹುದು. ಮೋಸ ಮಾಡುವ ತರಹದವರಲ್ಲ ಎಂದು ಸಮಾಧಾನ ಮಾಡಿಕೊಂಡೆ. ಮತ್ತೆ ಪುನಃ ಕೇಳಬಾರದೆಂದು ತೀರ್ಮಾನಿಸಿದೆ.
ನಾಲ್ಕು ದಿನಗಳ ನಂತರ ಹುಡುಗಿಯ ತಾಯಿಯ ಫೋನ್ ಬಂತು. ಅವಳಿಗೆ ಹುಶಾರಿಲ್ಲ. ನಿಮ್ಮ ಡಯಟ್‌ನಿಂದ ಜ್ವರ ಮತ್ತು ಭೇದಿ ಆಗುತ್ತಿದೆ ಎಂದು. ಒಂದು ಸಲಕ್ಕೆ ಶಾಕ್ ಅಯಿತು. ಅರ್ರೇ, ಹೀಗೆ ನೇರವಾಗಿ ಹೇಗೆ ಆರೋಪ ಮಾಡಕ್ಕೆ ಸಾಧ್ಯ. ವಿಚಾರಿಸಿದೆ, ಏನೆಲ್ಲ ತಿಂದಿದ್ದಳು ಎಂದು. ನೀವು ಹೇಳಿರೋದನ್ನು ಮಾತ್ರ ಕೊಟ್ಟಿದ್ದೇನೆ ಅಂದರು. ಎಷ್ಟುದಿನ ಫಾಲೋ ಮಾಡಿದ್ದಳು ಕೇಳಿದೆ. ಒಂದು ದಿನ ಮಾತ್ರ ಮಾಡಕ್ಕೆ ಆಗಿರುವುದು, ಅಷ್ಟರಲ್ಲಿ ಖಾಯಿಲೆ ಬಂತು ಹೇಳಿದರು. ಬೇರೆ ಕಾರಣಕ್ಕೆ ಬಂದಿದೆ, ನಾನು ಕೊಟ್ಟಆಹಾರದಿಂದ ಬಂದಿರಲು ಸಾಧ್ಯವಿಲ್ಲ ಎಂದು ಗಟ್ಟಿಯಾಗಿ ಹೇಳಿದೆ.
ನಿಮ್ಮ ಬ್ಲಡ್ ಗ್ರೂಪ್‌ಗೆ ತಕ್ಕ ಆಹಾರ ಯಾವುದು ನಿಮಗೆ ಗೊತ್ತಾ?
ಇಲ್ಲ, ನೀವು ಮದರೆಂಗಿ ಸೊಪ್ಪು ಸೇವಿಸಲು ಹೇಳಿದ್ದು ತೊಂದರೆ ಮಾಡಿರಬಹುದು. ನಾನು ಗೂಗಲ್ ನೋಡಿದೆ, ಮದರೆಂಗಿ ಸೊಪ್ಪು ದೇಹದ ಒಳಗೆ ಸೇರಿದರೆ ವಿಷ ಅಂತ ಇದೆ. ನೀವು ಅದನ್ನ ಕೊಟ್ಟಿದ್ದೀರಿ. ಅದರಿಂದ ಹೀಗೆಲ್ಲ ಆಗಿದ್ದು ಎಂದರು.
ಮೊದಲನೆಯ ಬಾರಿಗೆ ನನಗೆ ಈ ಅನುಭವ. ತುಂಬ ಜನರಿಗೆ ಕೊಟ್ಟಿದ್ದೇನೆ, ಸ್ವತಃ ನಾನೇ ಬಳಸಿದ್ದೇನೆ. ಯಾವಾತ್ತೂ, ಏನೂ ಆಗಲಿಲ್ಲ. ಇಲ್ಲಿ ಯಾಕೆ ಹೀಗೆ ಅಗುತ್ತಿದೆ ಎಂದು ತಲೆ ಕೆಡಿಸಿಕೊಂಡೆ. ಬೇರೇನೊ ಆಗಿದೆ ಎಂದು ವಿವರಿಸಲು ಪ್ರಯತ್ನಿಸಿದೆ. ಮದರೆಂಗಿ ಸೊಪ್ಪನ್ನು ಬಳಸಬೇಕು ಪೌಡರ್ ಬಳಸಬಾರದು ಎಂಬ ವಿಷಯಗಳನ್ನು ಬರೆದು ಕೊಟ್ಟಿದ್ದೆ. ಅವುಗಳನ್ನೆಲ್ಲ ಸರಿಯಾಗಿ ಪಾಲಿಸಿದ ಬಗೆ ಕೇಳಿದೆ. ಸರಿಯಾಗಿ ಮಾಡಿದ್ದೇವೆ ಎಂದು ಹೇಳಿದರು. ನಿಮ್ಮ ಡಯಟ್ ಫಾಲೋ ಮಾಡಲ್ಲ ಅಂದರು. ನಿಮ್ಮ ದುಡ್ಡು ಕೊಡುತ್ತೇನೆ ಎಂದು ಹೇಳಿ ಫೋನ್ ಕಟ್ ಮಾಡಿದರು.
ಇವತ್ತಿನ ತನಕ ಅವರ ಸುದ್ದಿಯೇ ಇಲ್ಲ.
ಕೆಲವು ದಿನಗಳ ನಂತರದಲ್ಲಿ ಅವಳ ಜೊತೆ ಆಡುವ ಒಂದು ಹುಡುಗಿ ನನ್ನಲ್ಲಿಗೆ ಬರುತ್ತಾಳೆ. ಅವಳಲ್ಲಿ ಅವಳ ಬಗ್ಗೆ ವಿಚಾರಿಸಿದೆ.
ಆಗ ತಿಳಿಯಿತು ಸತ್ಯ. ಅವರು ಮದರೆಂಗಿ ಸೊಪ್ಪು ಬಳಸಲಿಲ್ಲ ಬದಲಿಗೆ ಪುಡಿ ಬಳಸಿದ್ದರು!
ಈಗ ಫೀಸ್ ಕೊಟ್ಟಮೇಲೆ ಮಾತ್ರ ಡಯಟ್ ಚಾರ್ಟ್ ಶೇರ್ ಮಾಡುತ್ತೇನೆ ಎಂದು ಹೇಳಲು ಈಗ ಕಲಿತಿರುವೆ. ಗೂಗಲ್ ನೋಡಿಕೊಂಡು ಮಾತನಾಡುವವರಿಗೆ ಜಾಸ್ತಿ ಸಮಯ ಮೀಸಲಿಡಬಾರದು ಎಂದು ನಿರ್ಧಾರ ಮಾಡಿದೆ.
ಪೇಚಿಗೆ ಸಿಲುಕಿದ ಟೆಕ್ಕಿ
ಒಮ್ಮೆ ಒಬ್ಬ ಬಂದಿದ್ದ ಡಯಟ್ ಕೇಳಲು. ಅವನ ಜೊತೆ ಇನ್ನಿಬ್ಬರು ಇದ್ದರು. ನನಗೆ ಜಾಸ್ತಿ ಸಮಯ ಇಲ್ಲ, ನಾನು ಅಮೇರಿಕದಲ್ಲಿರುವುದು. ಇನ್ನು ಎರಡು ದಿನದಲ್ಲಿ ನಾನು ವಾಪಸ್ ಹೋಗುತ್ತೇನೆ, ಇವತ್ತೇ ನನಗೆ ಚಾರ್ಟ್ ರೆಡಿ ಮಾಡಿ ಕೊಡಿ ಎಂದು ಕೇಳಿದ. ನಾನು ಒಪ್ಪಿದೆ.
ಕೌನ್ಸಿಲ್ಲಿಂಗ್ ಶುರು ಮಾಡಿದೆ. ಮೊದಲು ಅವರ ದಿನಚರಿ ಕೇಳುವುದು ರೂಢಿ. ‘ಸಸ್ಯಾಹಾರಿಯಾ?’ ಅಂತ ಕೇಳಿದೆ. ‘ಹೌದು’ ಎಂದ. ನಿದ್ದೆ, ನೀರು, ಆಹಾರ, ವಿಹಾರ ಬಗ್ಗೆ ಕೇಳುತ್ತಿದೆ. ‘ಏನು ತರಕಾರಿ ತಿನ್ನುತ್ತೀರಿ’ ಎಂದು ಕೇಳಿದೆ. ಒಂದೆರಡು ಹೆಸರು ಹೇಳಿ, ನಂಗೆ ಹೆಸರುಗಳು ಗೊತ್ತಿಲ್ಲ, ಹೆಂಡತಿ ಮಾಡಿರುವುದನ್ನು ತಿನ್ನುತ್ತೇನೆ. ಅವಳು ಕೊಟ್ಟಿರುವುದನ್ನು ತಿನ್ನುವುದು. ಫೋನ್ ಮಾಡಿ ಕೊಡುತ್ತೇನೆ ಅವಳನ್ನ ಕೇಳಿ ಎಂದ. ಎಷ್ಟುತಿನ್ನುವಿರಿ ಎಂದು ಕೇಳಿದಾಗ ನನಗೆ ಗೊತ್ತಿಲ್ಲ, ಹೆಂಡತಿ ಹಾಕಿದಷ್ಟುತಿನ್ನುತ್ತೇನೆ. ತುಂಬ ಕೆಲಸದ ಒತ್ತಡ ಇರುತ್ತದೆ, ಕೆಲಸಗಳನ್ನು ಮಾಡುತ್ತ ತಿನ್ನುತ್ತೇನೆ, ಆದ್ದರಿಂದ ನನಗೆ ಉತ್ತರ ಕೊಡೋದು ಕಷ್ಟಅಂದ. ನೀವು ಡಯಟ್ ಚಾರ್ಟ್‌ಅನ್ನು ಅವಳಿಗೆ ವಿವರಿಸಿ. ನನಗೆ ಹೇಳುವುದು ಬೇಡ ಎಂದ.
ಅಯ್ಯೋ ದೇವರೇ, ತಾನು ಏನನ್ನ, ಎಷ್ಟುತಿನ್ನುತ್ತಿದ್ದೇನೆ ಅಂತ ಗೊತ್ತಿಲ್ಲದವರೂ ಈ ಜಗದಲ್ಲಿದ್ದಾರೆ ಎಂದು ತಿಳಿಯಿತು. ಹೊಸ ಬಗೆಯ ಜನರು ಎಂದು ಮನಸ್ಸಿನೊಳಗೆ ನಕ್ಕು ಸುಮ್ಮನಾದೆ. ಅವನ ಹೆಂಡತಿಯೊಡನೆ ಫೋನ್‌ನಲ್ಲಿ ಮಾತಾಡಿ ಕೆಲವೊಂದು ಆಹಾರ ಕ್ರಮಗಳ ಬಗ್ಗೆ ತಿಳಿದುಕೊಂಡೆ.
ಆಹಾರ ವಿಷಯದ ನಂತರ, ‘ಸಿಗರೇಟ್, ಪಾರ್ಟಿ?’ ಅಂತ ಕೇಳಿದೆ. ‘ಹಂಗೇನಿಲ್ಲ’ ಎಂದು ಗಟ್ಟಿಯಾಗಿ ಹೇಳಿದ. ಆಮೇಲೆ ಏನೋ ಹೇಳಿದ ಹಾಗೆ ಅನಿಸಿತು. ನನಗೆ ಸರಿಯಾಗಿ ಕೇಳಿಸಲಿಲ್ಲ. ‘ಸಾರಿ, ಕೇಳಲಿಲ್ಲ ಪುನಃ ಹೇಳಿ’ ಅಂದೆ. ‘ಈ ಪ್ರಶ್ನೆಗಳನ್ನು ಈಗ ಕೇಳಬೇಡಿ’ ಎಂದು ಮೆತ್ತನೆ ಧ್ವನಿಯಲ್ಲಿ ಹೇಳಿ ಪೇಚಾಡುತ್ತಿದ್ದ. ನನಗೆ ಅರ್ಥ ಆಗಲಿಲ್ಲ. ನಾನು ಪ್ರಶ್ನೆಗಳನ್ನು ಮುಂದುವರಿಸಿದೆ. ಅವನು ಫೋನ್ ತೆಗೆದುಕೊಂಡು ಟೈಪಿಸಲು ಆರಂಭಿಸಿದ. ಟೈಪ್ ಮಾಡಿ ನನಗೆ ಕಾಣುವಂತೆ ಇಟ್ಟನು.
‘ನನ್ನ ಜೊತೆಗೆ ಇರುವುದು ನನ್ನ ಅತ್ತೆ ಮತ್ತು ಭಾವ. ಅವರಿಗೆ ನಾನು ಕುಡಿಯುವುದು, ಸಿಗರೇಟ್ ಸೇದುವುದು, ಮಾಂಸಾಹಾರ ತಿನ್ನುವುದು ಗೊತ್ತಿಲ್ಲ. ಅದರ ಬಗ್ಗೆ ಈಗ ಮಾತನಾಡಬೇಡಿ. ನನ್ನ ಮರ್ಯಾದೆ ಉಳಿಸಿ’ ಎಂದು ಬರೆದಿದ್ದ. ಒಂದು ಮುಗಳ್ನಗೆ ಬೀರಿ ನಾನು ಮುಂದಿನ ಪ್ರಶ್ನೆಗೆ ಸಾಗಿದೆ. ಅವನ ಪೇಚಾಡಿದ್ದು ಇವತ್ತಿಗೂ ನನ್ನ ಕಣ್ಣಿಗೆ ಕಟ್ಟಿದಂತಿದೆ.