ಇಂದು ನರಕ ಚತುರ್ದಶಿ. ನರಕಾಸುರನನ್ನು ಶ್ರೀಕೃಷ್ಣ- ಸತ್ಯಭಾಮೆಯರು ವಧಿಸಿದ ದಿನ. ತಮ್ಮ ಮಗ ಲೋಕಕಂಟಕ ಎಂದು ಗೊತ್ತಾದಾಗ ಅಪ್ಪ- ಅಮ್ಮ ಏನು ಮಾಡಬೇಕು ಎಂದು ಲೋಕಕ್ಕೆ ಆದರ್ಶ ತಿಳಿಹೇಳಿದ ದಿನ.
ನರಕಾಸುರನು (Narakasura) ಭಾಗವತ (Bhagawatha) ಪುರಾಣದಲ್ಲಿ ಬರುವ ಒಬ್ಬ ರಾಕ್ಷಸ. ಹಿರಣ್ಯಾಕ್ಷನನ್ನು ಕೊಲ್ಲಲು ವಿಷ್ಣು (Mahavishnu) ವರಾಹಾವತಾರ ತಳೆದಿದ್ದಾಗ ಆತನ ದೇಹದಿಂದ ಒಂದು ತೊಟ್ಟು ಬೆವರು ನೆಲದ ಮೇಲೆ ಬಿದ್ದಿತು. ಆಗ ಭೂದೇವಿಯಲ್ಲಿ ನರಕ ಎಂಬವನು ಜನಿಸಿದ. ಮಹಾವಿಷ್ಣು- ಭೂದೇವಿಯರ ಮಗನಾಗಿಯೂ ಈತ ತಾಮಸಿಕ ಸ್ವಭಾವದವನಾಗಿ ಮಾರ್ಪಟ್ಟ. ಅದು ಹೇಗೆ? ಹೇಗೆಂದರೆ ವರಾಹಾವತಾರ ಆದದ್ದೇ ಹಿರಣ್ಯಾಕ್ಷನನ್ನು ಕೊಲ್ಲಲು. ಆಗ ಮಹಾವಿಷ್ಣು ಉಗ್ರನಾಗಿದ್ದ. ವ್ಯಗ್ರನಾಗಿದ್ದ. ಭೂದೇವಿಯನ್ನು ಹಿರಣ್ಯಾಕ್ಷ ಸತತವಾಗಿ ಪೀಡಿಸುತ್ತ ಇದ್ದುದರಿಂದ ಅವಳೂ ನೊಂದಿದ್ದಳು. ಅವಳ ಮನಸ್ಸು ಕೂಡ ಸಿಟ್ಟು, ಆಕ್ರೋಶದಿಂದ ತುಂಬಿತ್ತು. ಹೀಗೆ ತಾಮಸಿಕ ವೇಳೆಯಲ್ಲಿ ಇಬ್ಬರ ಅಂಶವೂ ಸೇರಿದುದರಿಂದ, ಆಗ ಜನಿಸಿದ ನರಕನೂ ತಾಮಸ ಸ್ವಭಾವದವನಾದ. ಈತನಿಗೆ ಭೌಮಾಸುರ ಎಂಬ ಹೆಸರೂ ಉಂಟು. ಭೂದೇವಿಗೆ ತನ್ನ ಮಗನ ಮೇಲೆ ಕನಿಕರ. ಮಹಾವಿಷ್ಣುವನ್ನು ಬೇಡಿ ತನ್ನ ಮಗನಿಗೆ ವೈಷ್ಣವಾಸ್ತ್ರವನ್ನು ಸಂಪಾದಿಸಿಕೊಟ್ಟಳು. ಇದರ ಮಹಿಮೆಯಿಂದ ದುರ್ಜಯನಾದ ಈತ ಪ್ರಾಗ್ಜೋತಿಷಪುರದಲ್ಲಿ ವಾಸ ಮಾಡುತ್ತಿದ್ದು ಲೋಕಕಂಟಕನಾಗಿದ್ದ. ಈತನೂ ಈತನ ಸ್ನೇಹಿತನಾದ ಮುರಾಸುರನೂ ಇಂದ್ರನಿಗೆ ಪ್ರತಿನಿತ್ಯ ತೊಂದರೆ ಕೊಡುತ್ತಿದ್ದರು. ಇವರು ದೇವಲೋಕದ ಮೇಲೆ ದಾಳಿ ಮಾಡಿ, ಇಂದ್ರನನ್ನು ಓಡಿಸಿ, ಅವನ ಶ್ವೇತಚ್ಛತ್ರವನ್ನೂ ಸ್ವರ್ಗಲೋಕದ ಮಣಿಪರ್ವತವನ್ನೂ ಅಪಹರಿಸಿದರು.
ಅವನಿಗೊಮ್ಮೆ ತನ್ನ ಆಯುಸ್ಸು ಹೆಚ್ಚಿಸಿಕೊಳ್ಳಬೇಕು ಎಂಬ ಆಸೆಯಾಯ್ತು. ಬ್ರಹ್ಮನ ಕುರಿತು ತಪಸ್ಸು ಮಾಡಿದ. ಬ್ರಹ್ಮ ಪ್ರತ್ಯಕ್ಷನಾದಾಗ ‘ನನಗೆ ಚಿರಂಜೀವತ್ವ ಬೇಕು' ಎಂದ. ಅದು ಯಾರಿಗೂ ಸಿಗುವುದಿಲ್ಲ ಎಂದ ಬ್ರಹ್ಮ. 'ಹಾಗಾದರೆ ನನ್ನ ತಂದೆ ತಾಯಿಯರು ಒಟ್ಟಾಗಿ ಬಂದು ನನ್ನೊಡನೆ ಯುದ್ಧ ಮಾಡಿದರೆ ಮಾತ್ರ ನನಗೆ ಸಾವು ಬರುವ ಹಾಗೆ ಮಾಡು’ ಎಂದು ಕೇಳಿದ. ಬ್ರಹ್ಮನಿಗೆ ಈ ಅಸುರನ ಕಪಟ ತಿಳಿಯದ್ದಲ್ಲ. ಆದರೂ ಆತ ತಥಾಸ್ತು ಎಂದ. ಬ್ರಹ್ಮನ ದಡ್ಡತನಕ್ಕೆ ಮನಸಾರೆ ನಕ್ಕು ತನ್ನ ಅರಮನೆಗೆ ಹಿಂತಿರುಗಿದ ನರಕಾಸುರ. ವರಾಹ- ಭೂಮಿ ಇನ್ನೆಂದೂ ಒಟ್ಟಾಗಲು ಸಾಧ್ಯವಿಲ್ಲ ಎಂದು ತಿಳಿದಿದ್ದ ಮೂರ್ಖ ಆತ.
Diwali: ಲಕ್ಷ್ಮಿದೇವಿಯ ಕೃಪೆ ಪಡೆಯಲು ಗೂಬೆಯನ್ನು ಆರಾಧಿಸಿ!
ಭೂಮಿಯ ಒಂದೊಂದೇ ಅರಸೊತ್ತಿಗೆಗಳನ್ನು ವಶಪಡಿಸಿಕೊಂಡ ಬಳಿಕ ದೇವಲೋಕಕ್ಕೆ ಅಡಿಯಿಟ್ಟ. ಇಂದ್ರನನ್ನು ಸೋಲಿಸಿ ದೇವಲೋಕದ ಸ್ತ್ರೀಯರನ್ನೆಲ್ಲ ತನ್ನ ಜೊತೆಗೆ ಸೆಳೆದೊಯ್ದ. ಈ ಹೊತ್ತಿಗೆ ತಾಯಿ ಅದಿತೀ ದೇವಿಯ ಕರ್ಣಾಭರಣಗಳು ಆತನನ್ನು ಆಕರ್ಷಿಸಿದವು. ಅದನ್ನು ಕತ್ತರಿಸಿ ತನ್ನ ವಶಕ್ಕೆ ತೆಗೆದುಕೊಂಡು ಹೋದ. ಇತ್ತ ಖಾಲಿ ಕಿವಿಯಲ್ಲಿ ಅಳುತ್ತಾ ಅದಿತಿಯು ಸತ್ಯಭಾಮೆ ಇರುವಲ್ಲಿಗೆ ಬಂದು ತನ್ನ ತಮ್ಮವರ ವ್ಯಥೆಯನ್ನು ಹೇಳುತ್ತಾಳೆ.
ಸತ್ಯಭಾಮೆ ಈ ವಿಷಯ ಕೃಷ್ಣನಿಗೆ ತಿಳಿಸುತ್ತಾಳೆ. ಚತುರ ಕೃಷ್ಣ ಇದೇ ಸಂದರ್ಭಕ್ಕೆ ಕಾದಿದ್ದವನಂತೆ ನರಕಾಸುರನ ವಿರುದ್ಧ ಯುದ್ಧ ಘೋಷಿಸುತ್ತಾನೆ. ಯುದ್ಧಕ್ಕೆ ಹೋಗುವ ಮೊದಲು ಆತ ಸತ್ಯಭಾಮೆಯನ್ನು ಕರೆಯುತ್ತಾನೆ, ‘ಬಹಳ ದಿನಗಳಿಂದ ನನ್ನ ಜೊತೆಗೆ ಯುದ್ಧಭೂಮಿಗೆ ಬರಬೇಕು ಅಂತ ಹಂಬಲಿಸಿದವಳು ನೀನು. ಆ ದಿನ ಈಗ ಬಂದಿದೆ. ಈ ಯುದ್ಧಕ್ಕೆ ನಾವಿಬ್ಬರೂ ಜೊತೆಯಲ್ಲೇ ಹೋಗೋಣ’. ಹೀಗೆ ಸತ್ಯಭಾಮೆಯೊಡಗೂಡಿ ಯುದ್ಧಕ್ಕೆ ಕೃಷ್ಣ ಬಂದಾಗ ನರಕಾಸುರ ನಿರ್ಲಕ್ಷ್ಯದಿಂದ ನಗುತ್ತಾನೆ. ಸೈನ್ಯವನ್ನು ಯುದ್ಧಕ್ಕೆ ಕಳುಹಿಸುತ್ತಾನೆ. ಅವನ ಲೆಕ್ಕಾಚಾರಕ್ಕೆ ವಿರುದ್ಧವಾಗಿ ಕೃಷ್ಣ ರಾಕ್ಷಸರನ್ನೆಲ್ಲ ಸದೆಬಡಿದ. ಮರಾಸುರನನ್ನೂ ಸಾಯಿಸಿದ.
ಕೊನೆಗುಳಿದವನು ನರಕಾಸುರ ಒಬ್ಬನೇ. ಅವನಿಗೂ ಕೃಷ್ಣನಿಗೂ ಭಯಂಕರ ಯುದ್ಧ. ಒಂದು ಹಂತದಲ್ಲಿ ನರಕಾಸುರ ಬಿಟ್ಟ ಬಾಣಕ್ಕೆ ಕೃಷ್ಣ ಪ್ರಜ್ಞೆ ತಪ್ಪಿ ಬಿದ್ದ. ಸತ್ಯಭಾಮೆಗೀಗ ಏನೂ ಮಾಡಲೂ ತೋಚದ ಸ್ಥಿತಿ. ಆದರೆ ಆಕೆ ಮಹಾ ಧೀರೆ. ತಾನೇ ಮುಂದೆ ನಿಂತು ನರಕನ ಮೇಲೆ ಬಾಣ ಪ್ರಯೋಗಿಸುತ್ತಾಳೆ. ಆ ಅಸ್ತ್ರ ನರಕನ ಶಿರವನ್ನು ಛಿದ್ರ ಮಾಡಿ ಆತ ಸಾಯುವಂತೆ ಮಾಡುತ್ತದೆ. ಮೂರ್ಛೆ ಹೋದಂತೆ ಬಿದ್ದುಕೊಂಡಿದ್ದ ಕೃಷ್ಣ ಈಗ ಎಂದಿನ ತುಂಟ ನಗುವಿನೊಂದಿಗೆ ಎದ್ದು ನಿಲ್ಲುತ್ತಾನೆ.
ದೀಪಾವಳಿಯಲ್ಲಿ ಜೇಡಿಮಣ್ಣಿನ ಈ ವಸ್ತುಗಳನ್ನು ಮನೆಗೆ ತನ್ನಿ, ಅದೃಷ್ಟವಂತರಾಗಿ...!
ಹೀಗ್ಯಾಕಾಯ್ತು ಎಂದು ಸತ್ಯಭಾಮೆಗೆ ಅರ್ಥವಾಗುವುದಿಲ್ಲ. ಆಗ ಕೃಷ್ಣ ತಿಳಿಸಿ ಹೇಳುತ್ತಾನೆ- ನಾನು ಮಹಾವಿಷ್ಣುವಿನ ಅವತಾರ, ನೀನು ಭೂದೇವಿಯ ಅವತಾರ. ನಾವಿಬ್ಬರೂ ಹಿಂದಿನ ಅವತಾರಗಳಲ್ಲಿ ಈ ನರಕನ ಜನ್ಮಕ್ಕೆ ಕಾರಣರಾಗಿದ್ದೇವೆ. ಇವನು ತಂದೆತಾಯಿಯಿಂದಲೇ ಮರಣ ಎಂಬ ವರ ಪಡೆದಿದ್ದಾನೆ. ಈಗ ಇವನು ಲೋಕಕಂಟಕನಾಗಿದ್ದಾನೆ. ಆದ್ದರಿಂದ ಅವನನ್ನು ವಧಿಸುವ ಹೊಣೆ ನಮ್ಮ ಮೇಲೆಯೇ ಬಿದ್ದಿದೆ ಎಂದ. ನಂತರ ನರಕನ ಜೈಲಿನಲ್ಲಿ ಸೆರೆಯಾಗಿದ್ದ 16000 ಕನ್ಯೆಯರ ಬಿಡುಗಡೆಯಾಯ್ತು. ಅದಿತಿಯ ಓಲೆ ಅವಳಿಗೆ ಮರಳಿ ಸಿಕ್ಕಿತು. ದೇವತೆಗಳು ಮತ್ತೊಮ್ಮೆ ನಿರಾಳತೆಯಿಂದ ನಿಟ್ಟುಸಿರು ಬಿಟ್ಟರು.
ಮಕ್ಕಳು ಲೋಕಕಂಟಕರಾದರೆ, ದುಷ್ಟರಾದರೆ, ಅವರನ್ನು ಶಿಕ್ಷಿಸಲು ಸ್ವತಃ ತಂದೆ- ತಾಯಿ ಕೂಡ ಹಿಂದೆ ಮುಂದೆ ನೋಡಬಾರದು ಎಂಬ ಸಂದೇಶವನ್ನು ಈ ಕತೆ ತಿಳಿಹೇಳುವುದಿಲ್ಲವೇ? ಡ್ರಗ್ಸ್ ಅಡಿಕ್ಟ್‌ಗಳಾದ ಸೆಲೆಬ್ರಿಟಿಗಳ ಮಕ್ಕಳ ಈ ಕಾಲದಲ್ಲಿ ಈ ಕತೆ ಸಕಾಲಿಕ ನೀತಿಯನ್ನು ಸಾರುತ್ತಿಲ್ಲವೇ?