ದಿಟ್ಟತನದಿಂದ ನಿರ್ದೇಶನಕ್ಕೆ ಎಂಟ್ರಿ ಕೊಟ್ಟಿದ್ದಾರೆ ರಿಷಿಕಾ ಶರ್ಮಾ

By Suvarna Web DeskFirst Published Mar 8, 2018, 9:25 AM IST
Highlights

‘ಟ್ರಂಕ್’ ಎಂಬ ಹಾರರ್ ಸಿನಿಮಾದ ಮೂಲಕ ರಿಷಿಕಾ ಶರ್ಮಾ ನಿರ್ದೇಶಕಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಟನೆ, ಸಹ ನಿರ್ದೇಶನ ಮಾಡಿದ ಅನುಭವವಿದೆ. ಈಕೆ ಹಿರಿಯ ನಿರ್ದೇಶಕ ಜಿ.ವಿ ಅಯ್ಯರ್ ಅವರ ಮೊಮ್ಮಗಳು. ಪತ್ರಿಕೋದ್ಯಮ ಪದವೀಧರೆ. ಕಾಸ್ಟಿಂಗ್ ಕೌಚ್ ಸಮಸ್ಯೆ, ಪುರುಷರ ಮೇಲಾಟಗಳ ನಡುವೆಯೂ ನಿರ್ದೇಶಕಿಯಾಗಿ ಜಯಿಸಬಲ್ಲೆ ಎಂದು ಆತ್ಮವಿಶ್ವಾಸದಲ್ಲಿ ಹೇಳುವ ರಿಷಿಕಾ ಸ್ವತಃ ಸ್ವಲ್ಪ ಪ್ರಮಾಣದಲ್ಲಿ ಕಾಸ್ಟಿಂಗ್‌ಕೌಚ್ ಸನ್ನಿವೇಶಗಳನ್ನು ಫೇಸ್ ಮಾಡಿದವರು. 

ಬೆಂಗಳೂರು (ಮಾ.08): ‘ಟ್ರಂಕ್’ ಎಂಬ ಹಾರರ್ ಸಿನಿಮಾದ ಮೂಲಕ ರಿಷಿಕಾ ಶರ್ಮಾ ನಿರ್ದೇಶಕಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಟನೆ, ಸಹ ನಿರ್ದೇಶನ ಮಾಡಿದ ಅನುಭವವಿದೆ. ಈಕೆ ಹಿರಿಯ ನಿರ್ದೇಶಕ ಜಿ.ವಿ ಅಯ್ಯರ್ ಅವರ ಮೊಮ್ಮಗಳು. ಪತ್ರಿಕೋದ್ಯಮ ಪದವೀಧರೆ. ಕಾಸ್ಟಿಂಗ್ ಕೌಚ್ ಸಮಸ್ಯೆ, ಪುರುಷರ ಮೇಲಾಟಗಳ ನಡುವೆಯೂ ನಿರ್ದೇಶಕಿಯಾಗಿ ಜಯಿಸಬಲ್ಲೆ ಎಂದು ಆತ್ಮವಿಶ್ವಾಸದಲ್ಲಿ ಹೇಳುವ ರಿಷಿಕಾ ಸ್ವತಃ ಸ್ವಲ್ಪ ಪ್ರಮಾಣದಲ್ಲಿ ಕಾಸ್ಟಿಂಗ್‌ಕೌಚ್ ಸನ್ನಿವೇಶಗಳನ್ನು ಫೇಸ್ ಮಾಡಿದವರು. 

ಮೊದಲನೆಯದೇ ಹಾರರ್ ಸಿನಿಮಾ, ಹೆಣ್ಮಕ್ಕಳಿಗೂ ಹಾರರ್‌ಗೂ ಆಗಿಬರಲ್ಲ ಅಂತಾರಲ್ವಾ, ಇದು ನಿಮಗೆ ಅನ್ವಯಿಸಲ್ವಾ?
ಅದೆಲ್ಲ ತಪ್ಪು ಕಲ್ಪನೆ. ಎಲ್ಲರೂ ಕುರ್ಚಿಯ ತುದಿಯಲ್ಲಿ ಕೂತು  ಹಾರರ್ ಸಿನಿಮಾ ನೋಡ್ತಾರೆ. ನಾವು ಥಿಯೇಟರ್‌ಗೆ ಯಾಕೆ ಹೋಗ್ತೀವಿ ಹೇಳಿ, ಒಂದು ರಿಫ್ರೆಶ್‌ಮೆಂಟ್, ಮನೋರಂಜನೆ ಸಿಗಲಿ ಎಂಬ ಉದ್ದೇಶಕ್ಕಲ್ವಾ. ಈ ಎರಡನ್ನೂ ನೀಡುವ ಸಾಮರ್ಥ್ಯ ಇರೋದು ಹಾರರ್‌ಗೆ. ‘ಟ್ರಂಕ್’ ಉತ್ತರ ಕರ್ನಾಟಕದ ಹಳ್ಳಿಯೊಂದರಲ್ಲಿ ನಡೆದ ಸತ್ಯಘಟನೆಯ ಎಳೆ ಇಟ್ಟುಕೊಂಡು ಮಾಡಿದ ಸಿನಿಮಾ. ಇವತ್ತಿಗೂ ಆ ಮನೆಯಲ್ಲಿ ವಿಲಕ್ಷಣವೆನಿಸುವ ಘಟನೆಗಳು ನಡೆಯುತ್ತವೆ. ಈ ಸಿನಿಮಾದ
ಹೀರೋ ನಿಹಾಲ್ ಅವರೇ ಈ ಕಥೆಯನ್ನು ಹುಡುಕಿ ನನಗೆ ಹೇಳಿದ್ದು. ಆರಂಭದಲ್ಲಿ ಸಿನಿಮೋತ್ಸವಕ್ಕೆ ಶಾರ್ಟ್‌ಫಿಲ್ಮಂ ಅಂತ ಮಾಡೋಕೆ ಹೊರಟಿದ್ದೆವು. ಬಳಿಕ ಇದನ್ನು ಫುಲ್‌ಲೆನ್ತ್ ಫೀಚರ್ ಸಿನಿಮಾ ಮಾಡಬಹುದು ಅನಿಸಿತು, ಹಾಗೇ ಮಾಡಿದೆವು.
ರಾಜೇಶ್ ಭಟ್ ಎಂಬ ಸಾಫ್ಟ್‌ವೇರ್ ಇಂಜಿನಿಯರ್ ಇದರ ನಿರ್ಮಾಪಕರು. ಅವರಿಗೆ ನಮ್ಮ ಕೆಲಸದ ಬಗ್ಗೆ ಸಂಪೂರ್ಣ ಭರವಸೆ ಇದೆ.

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕಿಯರಿಗೆ ಬರವಿದೆ, ಇದಕ್ಕೇನು ಕಾರಣ ಅನಿಸುತ್ತೆ?
ಹೌದು, ಕಾರಣಗಳು ಸಾಕಷ್ಟಿವೆ. ಮೊದಲನೆಯದಾಗಿ  ಹುಡುಗಿಯರಿಗೆ ನಟನೆಯ ಬಗ್ಗೆ ಒಂದು ಫ್ಯಾನ್ಸಿ ಇಮೇಜ್ ಇದೆ. ಕ್ಯಾರವಾನ್ ಇರುತ್ತೆ, ಐಷಾರಾಮಿ ಸವಲತ್ತು ಇರುತ್ತೆ, ಸಖತ್ ಜನಪ್ರಿಯತೆಯೂ ಸಿಗುತ್ತೆ ಅನ್ನುವಂಥ ಕಲ್ಪನೆ ಇದೆ.
ಆದರೆ ಟೆಕ್ನಿಕಲ್ ಫೀಲ್ಡ್‌ನಲ್ಲಿರುವ ಖುಷಿಯ ಬಗ್ಗೆ ಅವರಿಗೆ ಹೆಚ್ಚಿಗೆ ಗೊತ್ತಿಲ್ಲ ಅನಿಸುತ್ತೆ. ಒಮ್ಮೆ ಗೊತ್ತಾದರೆ ಖಂಡಿತಾ ನಿರ್ದೇಶನಕ್ಕೆ ಬರುತ್ತಾರೆ. ಕೆಲವೊಮ್ಮೆ ನಿರ್ಮಾಪಕರೂ ಹೆಣ್ಮಕ್ಕಳು ಅಂದರೆ ಅವಕಾಶ ಕೊಡಲ್ಲ, ಹೆಣ್ಮಕ್ಕಳನ್ನು ಕೇವಲ ಬ್ಯೂಟಿಯಿಂದ ಮಾತ್ರ ನೋಡುವ ಮನೋಭಾವ ಇರುತ್ತೆ. ಅವಳಿಂದ ನಿರ್ದೇಶನ ಮಾಡಿಸಿಕೊಳ್ಳಲು ನಟರಿಗೆ ಇಗೋ ಸಮಸ್ಯೆಯೂ ಎದುರಾಗುತ್ತೆ. ನಿರ್ದೇಶನ ಮಾಡುವಾಗ, ‘ಇವಳ ಮಾತನ್ಯಾಕೆ ಕೇಳಬೇಕು?’ ಅನ್ನುವ ನಟರ ಅಹಂ ನನ್ನ ಗಮನಕ್ಕೂ ಬಂದಿದೆ. ಹೀಗೆ ಸಾಕಷ್ಟು ಕಾರಣ ಇದೆ. ಆದರೆ ನನಗೆ ನನ್ನ ಫೋಕಸ್ ಏನು ಅನ್ನೋದು ಗೊತ್ತಿದೆ. ಹೀಗಾಗಿ ಮುಂದುವರಿಯುವುದು ಕಷ್ಟವಾಗುತ್ತಿಲ್ಲ.

ಕಾಸ್ಟಿಂಗ್ ಕೌಚ್ ಸಮಸ್ಯೆ ತೀರಾ ಸಾಮಾನ್ಯವಾಗಿದೆ, ನಿಮಗೇನೂ ಈ ಥರ ಅನುಭವವಾಗಿಲ್ವಾ?
ನೇರವಾಗಿ ಅಂತ ಆಗಿಲ್ಲ. ಆದರೆ ಆಗೇ ಇಲ್ಲ ಅಂತ ಹೇಳಲ್ಲ. ಒಂದಿಬ್ಬರು ಫೋನ್‌ನಲ್ಲಿ ಈ ವಿಚಾರ ಮಾತನಾಡಿದ್ದಾರೆ. ಆದರೆ ನಾನು ಸ್ಕ್ರಿಕ್ಟ್ ಆಗಿ ವಿರೋಧಿಸಿದೆ. ಆಮೇಲೆ ತಂಟೆಗೆ ಬಂದಿಲ್ಲ. ನಾವು 13 ಜನ ಫ್ರೆಂಡ್ಸ್ ಇದ್ದೀವಿ. ಎಲ್ಲೇ ಹೋದರೂ ಜೊತೆಗೇ  ಹೋಗುತ್ತೀವೆ. ಹಾಗಾಗಿ ನಮ್ಮನ್ನು ಅಷ್ಟು ಸುಲಭದಲ್ಲಿ ಯಾಮಾರಿಸಲಿಕ್ಕಾಗಲ್ಲ. ಒಮ್ಮೆಯಂತೂ, ನಿರ್ದೇಶಕರೊಬ್ಬರು ಆಡಿಶನ್ ಇದೆ ಅಂತ ಕರೆ ಮಾಡಿದ್ರು. ಅವರು ನನ್ನೊಬ್ಬರನ್ನೇ ಕರೆದಿದ್ದರೂ ನಾನು ನಿಹಾಲ್ ಹಾಗೂ ಇನ್ನೊಬ್ಬರು ಫ್ರೆಂಡ್ ಜೊತೆಗೆ ಹೋಗಿದ್ದೆ. ಅದೊಂದು ಮನೆ. ಅಡಿಶನ್ ನಡೆಯುವ ಯಾವ ಲಕ್ಷಣಗಳೂ ಅಲ್ಲಿರಲಿಲ್ಲ. ಇಡೀ ಬಿಲ್ಡಿಂಗ್‌ನಲ್ಲಿ ಕರೆಂಟ್ ಇದ್ದರೂ, ಆ ಮನೆಯಲ್ಲಿ ಮಾತ್ರ ಕತ್ತಲು, ಟೇಬಲ್ ಮೇಲೆ ಒಂದು ಕ್ಯಾಂಡಲ್, ಅಲಂಕರಿಸಿದ ಬೆಡ್‌ನಂತಿದ್ದ ಸೋಫಾ. ನಾನೊಬ್ಬಳೇ ಬರುತ್ತೇನೆ ಅಂದುಕೊಂಡಿದ್ದ ಅವರಿಗೆ ಮೂರು ಜನ ಬಂದಿದ್ದು ಕಂಡು ಗಲಿಬಿಲಿಯಾಯ್ತು. ಬೇರೇನೋ ಪ್ಲಾನ್ ಮಾಡಿದ್ದವರು, ತನ್ನ ಗುಟ್ಟು ಬಯಲಾದ ಬಗ್ಗೆ ಆತಂಕ
ಇದ್ದಂತಿತ್ತು. ಆಮೇಲೆ ಹಾರಿಕೆಯ ಉತ್ತರ ಹೇಳಿ ನಮ್ಮನ್ನು ಅಲ್ಲಿಂದ ಸಾಗ ಹಾಕಿದ್ರು. ಅವತ್ತಿಂದ ಇನ್ನಷ್ಟು  ಎಚ್ಚರದಿಂದಿರುತ್ತೇನೆ, ಎಲ್ಲೇ ಹೋದರೂ ಪ್ರೆಂಡ್ಸ್ ಜೊತೆಗೆ ಹೋಗುತ್ತೇನೆ.

‘ಟ್ರಂಕ್’ ನಿರ್ದೇಶನದ ಅನುಭವ ಹೇಗಿತ್ತು?
ತುಂಬ ಚೆನ್ನಾಗಿತ್ತು. ಆಗಲೇ ಹೇಳಿದ ಹಾಗೆ ಇದು ಒಂದು ಅತಿಮಾನುಷ ಘಟನೆಯ ಸುತ್ತ ನಡೆಯುವ ಸಿನಿಮಾ. ಮಾತಿಗಿಂತ ಮೌನಕ್ಕೇ ಪ್ರಾಧಾನ್ಯತೆ.ಕನ್ನಡದಲ್ಲಿ ಮೊತ್ತ ಮೊದಲ ಬಾರಿಗೆ ಈ ಸಿನಿಮಾದಲ್ಲಿ ರಿಯಲ್ ಗೋಸ್ಟ್ ಹಂಟರ್ಸ್ ಇರುತ್ತಾರೆ. ನಿಹಾಲ್ ಹಾಗೂ ವೈಶಾಲಿ ದೀಪಕ್ ಮುಖ್ಯ ಪಾತ್ರಧಾರಿಗಳು. ಅರುಣಾ ಬಾಲರಾಜ್, ಸುಂದರಶ್ರೀ ಮೊದಲಾದವರು ಮುಖ್ಯ ಪಾತ್ರಧಾರಿಗಳು. ಶಾಂತಿನಗರ ಚರ್ಚ್ನ ಫಾದರ್ ಆಲ್ಫ್ರೆಡ್ ಸುದರ್ಶನ ಈ ಸಿನಿಮಾದಲ್ಲೂ ಫಾದರ್ ಪಾತ್ರ ನಿರ್ವಹಿಸುತ್ತಾರೆ. ಈ ಸಿನಿಮಾಕ್ಕೆ ಹಿನ್ನೆಲೆ ಸಂಗೀತ ನೀಡಿರುವವರು ಹಾಲಿವುಡ್‌ನ ಹಿನ್ನೆಲೆ ಸಂಗೀತಗಾರ ಆಲ್ಬಿನ್ ಡೊಮಿನಿಕ್. ನಮ್ಮದೆಲ್ಲ ಟೀಂ ವರ್ಕ್. ನಾನು ಥಿಯೇಟರ್'ನಿಂದ ಬಂದವಳು. ಅಲ್ಲಿ ಪ್ರತಿಯೊಂದು ಕೆಲಸವನ್ನೂ ಪ್ರತಿಯೊಬ್ಬರೂ ಮಾಡುತ್ತಾರೆ. ಇಲ್ಲೂ ಹಾಗೇ ನಿಹಾಲ್ ತನ್ನ ನಟನೆಯ ಬಳಿಕ ಮಧ್ಯಾಹ್ನ ಊಟ ವ್ಯವಸ್ಥೆಯನ್ನೂ ನೋಡ್ಕೊಳ್ತಿದ್ರು. ಎಲ್ಲರೂ ಎಲ್ಲ ಕೆಲಸವನ್ನೂ ಮಾಡುತ್ತಿದ್ದರು. ಕೆಲವೊಮ್ಮೆ ಬೆಳಗ್ಗೆ ೬ಕ್ಕೆ ಶುರುವಾಗುವ ಕೆಲಸ ಮರುದಿನ
ಬೆಳಗಿನವರೆಗೂ ಮುಂದುವರಿಯುತ್ತಿತ್ತು. ಇದರಿಂದ ಹುಮ್ಮಸ್ಸು ಹೆಚ್ಚುತ್ತಿತ್ತೇ ಹೊರತು, ಸುಸ್ತು, ಆಯಾಸ ಅನ್ನೋದೆಲ್ಲ ಗಣನೆಗೇ ಬರುತ್ತಿರಲಿಲ್ಲ. ಹಾಗಾಗಿ ಕೆಲಸ ತುಂಬ ಖುಷಿ ಕೊಟ್ಟಿತು.
 

ನಿಮ್ಮ ತಾತ ಜಿ.ವಿ ಅಯ್ಯರ್ ಜೊತೆಗೆ ಒಡನಾಟ?
ಅಯ್ಯರ್, ನನ್ನ ಅಪ್ಪನ ದೊಡ್ಡಪ್ಪ, ನನ್ನ ದೊಡ್ಡ ತಾತ. ಚಿಕ್ಕವಳಿದ್ದಾಗ ತಾತ, ನನ್ನನ್ನು ಭಾರದ್ವಾಜ ಆಶ್ರಮಕ್ಕೆ ಕರೆದುಕೊಂಡು ಹೋಗ್ತಿದ್ರು. ಬಹಳ ಚಿಕ್ಕವಳಾಗಿದ್ದ ಕಾರಣ ಶೂಟಿಂಗ್ ಏನು ಅಂತ ಅರ್ಥ ಆಗ್ತಿರಲಿಲ್ಲ. ಆದರೂ ನನ್ನೊಳಗೆ ತಾತ ಆ್ಯಕ್ಷನ್, ಕಟ್ ಹೇಳ್ತಿದ್ದ ಚಿತ್ರ ಹಾಗೇ ಇದೆ. ಏಳನೇ ಕ್ಲಾಸ್ ಓದುತ್ತಿದ್ದಾಗಲೇ ತಾತ ತೀರಿಕೊಂಡರು. 

click me!