ಬಿಇಗೆ ಬೇಡಿಕೆ ಕುಸಿತ, ಬಿಎಸ್ಸಿಗೆ ಭಾರಿ ಡಿಮ್ಯಾಂಡ್‌!

By Web DeskFirst Published Oct 13, 2018, 10:20 AM IST
Highlights

ವರ್ಷದಿಂದ ವರ್ಷಕ್ಕೆ ಕಾಲೇಜಿನಲ್ಲಿ ಪ್ರತಿ ಕೋರ್ಸ್‌ಗಳ ಬೇಡಿಕೆ ಏರುಪೇರಾಗುವುದು ಸಾಮಾನ್ಯ. ಆದರೆ ಎಂಜಿನಿಯರಿಂಗ್ ಪದವೀಧರ ಕ್ಷೇತ್ರಕ್ಕೆ ಭಾರಿ ಬೇಡಿಕೆ ಇತ್ತು. ಇದೀಹ ಬರು ಬರುತ್ತಾ ಇದರ ಬೇಡಿಕೆ ಕುಸಿಯತೊಡಗಿದೆ.  ಎಂಜಿನಿಯರಿಂಗ್‌ ಪದವೀಧರರಿಗೆ ಉದ್ಯೋಗ ದೊರೆಯದಿರುವುದೇ ಪ್ರಮುಖ ಕಾರಣ

ಬೆಂಗಳೂರು(ಅ.13):  ಮೂಲ ವಿಜ್ಞಾನ (ಬಿಎಸ್‌ಸಿ) ಹಾಗೂ ಎಂಜಿನಿಯರಿಂಗ್‌ ನಡುವೆ ಸಹಜ ಆಯ್ಕೆ ಯಾವುದು ಎಂದು ಪ್ರಶ್ನಿಸಿದರೆ, ಥಟ್ಟನೇ ಬರುವ ಉತ್ತರ ಎಂಜಿನಿಯರಿಂಗ್‌!  ಆದರೆ, ಇದು ಹಳೆ ಟ್ರೆಂಡ್‌. ಹೊಸ ಟ್ರೆಂಡ್‌ ಪ್ರಕಾರ ಕರ್ನಾಟಕದ ವಿದ್ಯಾರ್ಥಿಗಳು ಎಂಜಿನಿಯರಿಂಗ್‌ಗಿಂತ ಈಗ ಮೂಲ ವಿಜ್ಞಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. 

ವರ್ಷದಿಂದ ವರ್ಷಕ್ಕೆ ಎಂಜಿನಿಯರಿಂಗ್‌ ಕೋರ್ಸ್‌ಗಳ ಬೇಡಿಕೆ ಕುಸಿಯುತ್ತಿದೆ. ವಿದ್ಯಾರ್ಥಿಗಳು ವಿಜ್ಞಾನ ಕೋರ್ಸ್‌ನತ್ತ ವಾಲಿದ್ದಾರೆ. ಎಂಜಿನಿಯರಿಂಗ್‌ನಲ್ಲಿ ಅಪ್ಲೈಡ್‌ ಸೈನ್ಸ್‌ ಕಲಿಯುತ್ತಿದ್ದ ವಿದ್ಯಾರ್ಥಿಗಳು ಇದೀಗ ಬೇಸಿಕ್‌ ಸೈನ್ಸ್‌ನತ್ತ (ಮೂಲ ವಿಜ್ಞಾನ/ಬಿಎಸ್‌ಸಿ) ಮುಖ ಮಾಡುತ್ತಿದ್ದಾರೆ.

ಅಂಕಿ-ಅಂಶಗಳೇ ಹೇಳ್ತವೆ:
ಕಳೆದ ಮೂರು ವರ್ಷಗಳ ಅಂಕಿ ಅಂಶಗಳು ಈ ವಿಚಾ​ರ​ವನ್ನು ಸ್ಪಷ್ಟವಾಗಿ ನಿರೂಪಿಸುತ್ತವೆ. ರಾಜ್ಯದಲ್ಲಿ ಒಟ್ಟಾರೆ 68,000 ಎಂಜಿ​ನಿ​ಯ​ರಿಂಗ್‌ ಸೀಟು​ಗಳು ಲಭ್ಯ​ವಿವೆ. ಆದರೆ, ಈ ಸೀಟು​ಗಳು ಸಂಪೂ​ರ್ಣ​ವಾಗಿ ಭರ್ತಿ​ಯಾ​ಗು​ತ್ತಿಲ್ಲ. ಅಷ್ಟೇ ಅಲ್ಲ ವರ್ಷ​ದಿಂದ ವರ್ಷಕ್ಕೆ ಉಳಿ​ಕೆ​ಯಾ​ಗು​ತ್ತಿ​ರುವ ಸೀಟು​ಗಳ ಸಂಖ್ಯೆ ಹೆಚ್ಚು​ತ್ತಿದೆ. ಕಳೆದ ಮೂರು ವರ್ಷಗಳಲ್ಲಿ (2016-17ನೇ ಸಾಲಿನಿಂದ) ಕ್ರಮವಾಗಿ 24,892, 29,345 ಮತ್ತು 25,061 ಸೀಟುಗಳು ಉಳಿಕೆಯಾಗಿವೆ.

ಇದೇ ಅವಧಿಯಲ್ಲಿ ಬಿಎಸ್‌ಸಿ ಪ್ರವೇಶ ಪಡೆ​ಯು​ತ್ತಿ​ರುವ ವಿದ್ಯಾ​ರ್ಥಿ​ಗಳ ಸಂಖ್ಯೆಯಲ್ಲಿ ಹೆಚ್ಚ​ಳ ಉಂಟಾ​ಗಿದೆ. 2016-17ನೇ ಸಾಲಿನಲ್ಲಿ ಪದವಿ ಮೊದಲ ವರ್ಷಕ್ಕೆ 33,971 ಇದ್ದ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. 2017-18ನೇ ಸಾಲಿನಲ್ಲಿ 40,755 ಮತ್ತು 2018-19ನೇ ಸಾಲಿನಲ್ಲಿ 47,705 ಪ್ರವೇಶ ಪಡೆದಿದ್ದಾರೆ. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಮೂಲ ವಿಜ್ಞಾನಕ್ಕೆ ಹೆಚ್ಚಳವಾಗಿದ್ದಾರೆ.

ಅಪ್ಲೈಡ್‌ ಸೈನ್ಸ್‌ ಅನ್ನು ಎಂಜಿನಿಯರಿಂಗ್‌ ತಾಂತ್ರಿಕ ಕೋರ್ಸ್‌ಗಳಾದ ಏರೋಸ್ಪೇಸ್‌ ಎಂಜಿನಿಯರಿಂಗ್‌, ಆಟೋಮೇಟಿವ್‌, ಎಲೆಕ್ಟ್ರಿಕಲ್‌ ಮತ್ತು ಕಂಪ್ಯೂಟರ್‌, ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌ಗಳಲ್ಲಿ ಕಲಿಸಲಾಗುತ್ತಿದೆ. ಆದರೆ ಐಟಿ ಕಂಪನಿಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಎಂಜಿನಿಯರಿಂಗ್‌ ಕಲಿತವರಿಗೆ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿವೆ. ಹೀಗಾಗಿ, ಇವರೆಲ್ಲರೂ ಮೂಲ ವಿಜ್ಞಾನ ವಿಷ​ಯ​ಗ​ಳತ್ತ ಗಮನ ಹರಿಸುತ್ತಿದ್ದಾರೆ.

ನಿರುದ್ಯೋಗವೇ ಕಾರಣ:
ಮೊದಲಿನಿಂದಲೂ ವಿಜ್ಞಾನ ವಿಷಯಗಳಿಗೆ ಬೇಡಿಕೆ ಇದ್ದೇ ಇದೆ. ಬದಲಾದ ಟ್ರೆಂಡ್‌ನಲ್ಲಿ ಮೆಡಿಕಲ್‌ ಮತ್ತು ಎಂಜಿನಿಯರಿಂಗ್‌ನತ್ತ ಹೆಚ್ಚು ಆಸಕ್ತರಾಗಿದ್ದರು. ಬದಲಾದ ಪರಿಸ್ಥಿತಿಯಲ್ಲಿ ಬಿಇ ಪಡೆದ ಭಾಗಶಃ ಪದವೀಧರರು ನಿರುದ್ಯೋಗಿಗಳಾಗಿದ್ದಾರೆ. ಅಲ್ಲದೆ, ಬಿಇ ವ್ಯಾಸಂಗಕ್ಕೆ ಹೆಚ್ಚಿನ ಶುಲ್ಕ ಭರಿಸಬೇಕಾಗುತ್ತದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಕೂಡ ಕಷ್ಟಪಟ್ಟು, ಹೆಚ್ಚಿನ ಶುಲ್ಕ ಪಾವತಿಸಿ ಎಂಜಿನಿಯರಿಂಗ್‌ ವ್ಯಾಸಂಗ ಮಾಡುತ್ತಿದ್ದರು. ಉದ್ಯೋಗ ಅವಕಾಶಗಳು ನಿರಂತರವಾಗಿ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಮೂಲ ವಿಜ್ಞಾನವಾದ ಬಿಎಸ್‌ಸಿಯತ್ತ ಹೆಚ್ಚು ಆಸಕ್ತರಾಗಿದ್ದಾರೆ.

ಅಪ್ಲೈಡ್‌ ಸೈನ್ಸ್‌ಗೆ ಪ್ರತಿಷ್ಠಿತ ಕಾಲೇಜುಗಳಲ್ಲಿ ಹಾಗೂ ಕ್ಯಾಂಪಸ್‌ ಆಯ್ಕೆಯಲ್ಲಿ ಉದ್ಯೋಗ ಕಲ್ಪಿಸುವಂತಹ ಕಾಲೇಜುಗಳಿಗೆ ಈಗಲೂ ಬೇಡಿಕೆ ಇದೆ ಎನ್ನುತ್ತಾರೆ ಹೆಚ್ಚಿನ ವಿಜ್ಞಾನ ಬೋಧಕರು.

ದೇಶದಲ್ಲಿ 10 ಮತ್ತು 12ನೇ ತರಗತಿಗಳ ನಿಖರವಾಗಿ ಇಂತದ್ದೇ ಕೋರ್ಸ್‌ ವ್ಯಾಸಂಗ ಮಾಡಬೇಕು ಎನ್ನುವವರು ಕಡಿಮೆ. ಯಾವ ಟ್ರೆಂಡ್‌ ಇರುತ್ತೆ ಅತ್ತ ಜಾರುತ್ತಾರೆ. ಇತ್ತೀಚೆಗೆ ಎಂಜಿನಿಯರಿಂಗ್‌ನಲ್ಲಿ ಅಪ್ಲೈಡ್‌ ಸೈನ್ಸ್‌ ಬೇಡಿಕೆ ಕುಸಿಯುತ್ತಿದ್ದಂತೆ, ಬೇಸಿಕ್‌ ಸೈನ್ಸ್‌ನತ್ತ ವಾಲುತ್ತಿದ್ದಾರೆ. ಎಂಜಿನಿಯರಿಂಗ್‌ನಲ್ಲಿ ಉತ್ತಮ ವೇತನ ನೀಡುವ ಉದ್ಯೋಗಗಳು ದೊರೆಯುತ್ತಿಲ್ಲ, ಅದರ ಜತೆಗೆ ಒತ್ತಡ ಜಾಸ್ತಿಯಾಗುತ್ತಿದೆ. ಕೌಶಲ್ಯಾಧಾರಿತ ವಿದ್ಯಾರ್ಥಿಗಳು ಹೊರ ಬಾರದಿರುವುದೇ ಬೇಡಿಕೆ ಕುಸಿಯಲು ಕಾರಣವಾಗಿದೆ ಎನ್ನುತ್ತಾರೆ ಸರ್ಕಾರಿ ವಿಜ್ಞಾನ ಕಾಲೇಜು ಪ್ರಾಧ್ಯಾಪಕ ಡಾ. ಕೆ. ರಾಮಕೃಷ್ಣ ರೆಡ್ಡಿ.

ಮೊದಲಿನಿಂದಲೂ ವಿಜ್ಞಾನ ವಿಷಯಗಳಿಗೆ ಬೇಡಿಕೆ ಇದ್ದೇ ಇದೆ. ಇತ್ತೀಚೆಗೆ ಬಿಇ ಪದವೀಧರರಿಗೆ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿರುವುದು ಮತ್ತು ಬಿಇ ವ್ಯಾಸಂಗಕ್ಕೆ ದುಬಾರಿ ಶುಲ್ಕ ಭರಿಸಬೇಕಾಗಿರುವ ಹಿನ್ನೆಲೆಯಲ್ಲಿ ಮೂಲ ವಿಜ್ಞಾನದತ್ತ ಹೆಚ್ಚು ಆಸಕ್ತರಾಗಿದ್ದಾರೆ ಎಂದು ವಿಜಯನಗರ್ ಸ.ಪ್ರ.ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಮಹೇಶ್ವರಿ ಹೇಳಿದ್ದಾರೆ. 

ಎನ್‌.ಎಲ್‌. ಶಿವಮಾದು

click me!