ರಾಷ್ಟ್ರೀಯ ನೇಮಕಾತಿ ಸಂಸ್ಥೆ ಪರೀಕ್ಷೆ ನಡೆಯೋದು ಹೀಗೆ

By Kannadaprabha NewsFirst Published Aug 20, 2020, 9:44 AM IST
Highlights

 ಕೇಂದ್ರ ಸರ್ಕಾರಿ ಹುದ್ದೆಗಳ ನೇಮಕಾತಿಗೆ ‘ಸಾಮಾನ್ಯ ಅರ್ಹತಾ ಪರೀಕ್ಷೆ’ (ಸಿಇಟಿ) ನಡೆಸುವ ಸಲುವಾಗಿ ರಾಷ್ಟ್ರೀಯ ನೇಮಕಾತಿ ಸಂಸ್ಥೆ ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ. ವರ್ಷಕ್ಕೆ ಎರಡು ಬಾರಿ ನಡೆಸುವ ಇಂಥ ಪರೀಕ್ಷೆಯಿಂದ ಹಲವು ಪರೀಕ್ಷೆ ಬರೆಯಲು ವೆಚ್ಚವಾಗುತ್ತಿದ್ದ ಹಣ ಹಾಗೂ ಸಮಯ ಎರಡೂ ಉಳಿಯಲಿದೆ.

ನವದೆಹಲಿ (ಆ. 20): ಕೇಂದ್ರ ಸರ್ಕಾರಿ ಹುದ್ದೆಗಳ ನೇಮಕಾತಿಗೆ ‘ಸಾಮಾನ್ಯ ಅರ್ಹತಾ ಪರೀಕ್ಷೆ’ (ಸಿಇಟಿ) ನಡೆಸುವ ಸಲುವಾಗಿ ರಾಷ್ಟ್ರೀಯ ನೇಮಕಾತಿ ಸಂಸ್ಥೆ ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ. ವರ್ಷಕ್ಕೆ ಎರಡು ಬಾರಿ ನಡೆಸುವ ಇಂಥ ಪರೀಕ್ಷೆಯಿಂದ ಹಲವು ಪರೀಕ್ಷೆ ಬರೆಯಲು ವೆಚ್ಚವಾಗುತ್ತಿದ್ದ ಹಣ ಹಾಗೂ ಸಮಯ ಎರಡೂ ಉಳಿಯಲಿದೆ.

ಪದವೀಧರರು, ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಆನ್‌ಲೈನ್‌ ಮೂಲಕ ಸಿಇಟಿ ನಡೆಸಲಾಗುತ್ತದೆ. 14 ಭಾಷೆಗಳಲ್ಲಿ ಪರೀಕ್ಷೆ ಬರೆಯಬಹುದಾಗಿರುತ್ತದೆ. ಈ ಪರೀಕ್ಷೆಯಲ್ಲಿ ಅರ್ಹತೆ ಗಳಿಸುವ ವಿದ್ಯಾರ್ಥಿಯ ಅಂಕ 3 ವರ್ಷಗಳ ವಾಯಿದೆ ಹೊಂದಿರುತ್ತದೆ. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ನೇಮಕಾತಿ ಮಾಡಿಕೊಳ್ಳುವಾಗ ಈ ಅಂಕವನ್ನೇ ಪರಿಗಣಿಸಲಾಗುತ್ತದೆ. ಹೀಗಾಗಿ ಪ್ರತಿ ಇಲಾಖೆಯಲ್ಲೂ ನೇಮಕಾತಿ ಪರೀಕ್ಷೆ ಬರೆಯಬೇಕಾಗಿರುವುದಿಲ್ಲ. ಪರೀಕ್ಷೆ ಹೆಸರಿನಲ್ಲಿ ಊರಿಂದ ಊರಿಗೆ ಅಲೆಯಬೇಕಾಗಿರುವುದಿಲ್ಲ. ಪರೀಕ್ಷಾ ಶುಲ್ಕ ಹಾಗೂ ಸಮಯ ಎರಡೂ ಸಿಇಟಿಯಿಂದ ಉಳಿತಾಯವಾಗುತ್ತದೆ. ಪ್ರತಿ ಇಲಾಖೆಗೂ ಪ್ರತ್ಯೇಕ ಪಠ್ಯ ಓದಬೇಕಾಗಿಲ್ಲ. ಅಂಕ ಕಡಿಮೆ ಬಂದರೆ ಮರಳಿ ಯತ್ನವ ಮಾಡಬಹುದು.

ದ್ವಿತೀಯ ಪಿಯುಸಿ ಪೂರಕ ಪರೀಕ್ಷಾ ದಿನಾಂಕ ಬದಲು; ಇಲ್ಲಿದೆ ಹೊಸ ವೇಳಾಪಟ್ಟಿ

ದೇಶದ ಪ್ರತಿ ಜಿಲ್ಲಾ ಕೇಂದ್ರದಲ್ಲೂ ಪರೀಕ್ಷಾ ಕೇಂದ್ರ ಇರುತ್ತದೆ. ಹೀಗಾಗಿ ಪರೀಕ್ಷೆ ಬರೆಯಲೆಂದೇ ಮತ್ತೊಂದು ಜಿಲ್ಲೆ ಅಥವಾ ರಾಜ್ಯಕ್ಕೆ ಅಭ್ಯರ್ಥಿ ಹೋಗಬೇಕಾದ ಅಗತ್ಯವಿಲ್ಲ. ಕೇಂದ್ರ ಸರ್ಕಾರದ ಪ್ರತಿ ನೇಮಕಾತಿ ಪರೀಕ್ಷೆಯಲ್ಲೂ 2.5ರಿಂದ 3 ಕೋಟಿ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಾರೆ. ಸಿಇಟಿಯಿಂದಾಗಿ ಅವರು ಅಮ್ಮೆ ಪರೀಕ್ಷೆ ಬರೆದು, ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಆನಂತರ ಆ ಇಲಾಖೆಯಲ್ಲಿ ಉನ್ನತ ಪರೀಕ್ಷೆ ತೆಗೆದುಕೊಳ್ಳಬೇಕಾಗಿರುತ್ತದೆ ಎಂದು ಜಿತೇಂದ್ರ ಸಿಂಗ್‌ ತಿಳಿಸಿದ್ದಾರೆ.

ರಾಷ್ಟ್ರೀಯ ನೇಮಕಾತಿ ಸಂಸ್ಥೆ ದೆಹಲಿಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರಲಿದೆ. ಇದರ ಸ್ಥಾಪನೆಗಾಗಿ ಸರ್ಕಾರ 1517.57 ಕೋಟಿ ರು. ಮಂಜೂರು ಮಾಡಿದೆ. ಮುಂದಿನ 3 ವರ್ಷಗಳಲ್ಲಿ ಇದನ್ನು ವೆಚ್ಚ ಮಾಡಲಾಗುತ್ತದೆ. ಆರಂಭಿಕ ಹಂತದಲ್ಲಿ ದೇಶಾದ್ಯಂತ 1000 ಪರೀಕ್ಷಾ ಕೇಂದ್ರ ತೆರೆಯುವ ಉದ್ದೇಶವಿದೆ ಎಂದು ಹೇಳಿದ್ದಾರೆ.)

ಈಗ ಹೇಗಿದೆ?

- ಕೇಂದ್ರ ಸರ್ಕಾರಿ ಹುದ್ದೆ ಬಯಸುವ ವಿದ್ಯಾರ್ಥಿ ಪ್ರತ್ಯೇಕ ಪರೀಕ್ಷೆ ಬರೆಯಬೇಕು

- ಉದಾಹರಣೆಗೆ ರೈಲ್ವೆ, ಬ್ಯಾಂಕಿಂಗ್‌, ಸ್ಟಾಫ್‌ ಸೆಲೆಕ್ಷನ್‌ ಪರೀಕ್ಷೆಗೆ ಪ್ರತ್ಯೇಕವಾಗಿ ಕೂರಬೇಕು

- ಪರೀಕ್ಷೆಗಾಗಿ ದೂರದೂರ ಪ್ರಯಾಣಿಸಬೇಕು. ಪ್ರತಿ ಪರೀಕ್ಷೆಗೂ ಪ್ರತ್ಯೇಕ ಶುಲ್ಕ ಕಟ್ಟಬೇಕು

- ಹಲವು ಪಠ್ಯ ಓದಬೇಕು. ಹಲವು ಪರೀಕ್ಷೆಗಳು ಒಂದೇ ದಿನ ನಿಗದಿಯಾದರೆ ಅವಕಾಶ ವಂಚಿತ

- ಬಹುತೇಕ ಪರೀಕ್ಷೆಗಳು ಹಿಂದಿ, ಇಂಗ್ಲಿಷ್‌ ಭಾಷೆಯಲ್ಲಿ ಮಾತ್ರವೇ ನಡೆಯುತ್ತವೆ

ಹೊಸ ವ್ಯವಸ್ಥೆ ಹೇಗಿದೆ?

- ಎಲ್ಲ ನೇಮಕಾತಿಗೂ ಒಂದೇ ಅರ್ಹತಾ ಪರೀಕ್ಷೆ. ಪ್ರತ್ಯೇಕವಾಗಿ ಪರೀಕ್ಷೆ ಬರೆಯಬೇಕಾಗಿಲ್ಲ

- ಅಂಕಗಳಿಗೆ 3 ವರ್ಷಗಳ ವಾಯಿದೆ ಇರುತ್ತದೆ. ಈ ಅವಧಿಯಲ್ಲಿ ನೇಮಕಾತಿಯಾದರೆ ಅರ್ಜಿ ಸಲ್ಲಿಸಬಹುದು

- ಉತ್ತಮ ಅಂಕ ಬಂದಿಲ್ಲವಾದರೆ ಮರು ಪರೀಕ್ಷೆ ಬರೆಯಬಹುದು. ಎಲ್ಲರಿಗೂ ಒಂದೇ ರೀತಿಯ ಸಿಲೆಬಸ್‌

- ಸಿಇಟಿ ಅಂಕಗಳನ್ನೇ ಅರ್ಹತೆಯಾಗಿ ಪರಿಗಣಿಸಲಾಗುತ್ತದೆ. ನೇಮಕಾತಿ ವೇಳೆ ಉನ್ನತ ಪರೀಕ್ಷೆ ಬರೆದರೆ ಸಾಕು

- ಪ್ರತಿ ಪರೀಕ್ಷೆಗೂ ಹಣ ಕಟ್ಟಬೇಕಾದ ಅಗತ್ಯವಿಲ್ಲ. ಪರೀಕ್ಷೆ ಬರೆಯಲು ಊರಿಂದೂರಿಗೆ ಹೋಗಬೇಕಾಗಿಲ್ಲ

- ಹಿಂದಿ, ಇಂಗ್ಲಿಷ್‌ ಮಾತ್ರವೇ ಅಲ್ಲದೆ ಒಟ್ಟು 12 ಭಾಷೆಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ

3 ಕೋಟಿ ಮಂದಿ: ಕೇಂದ್ರ ಸರ್ಕಾರಿ ಹುದ್ದೆ ನಿರೀಕ್ಷೆಯಲ್ಲಿ ಪ್ರತಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳು

1000 ಕೇಂದ್ರ: ಆರಂಭಿಕವಾಗಿ 1000 ಪರೀಕ್ಷಾ ಕೇಂದ್ರಗಳು ದೇಶಾದ್ಯಂತ ಸ್ಥಾಪನೆ

1517 ಕೋಟಿ ರು.: ರಾಷ್ಟ್ರೀಯ ನೇಮಕಾತಿ ಸಂಸ್ಥೆ ಸ್ಥಾಪನೆಗೆ ಹಣ ಮಂಜೂರು

click me!