ಮೇಲುಕೋಟೆ ಶಿಕ್ಷಕಿ ಹಂತಕ ಹೊಸಪೇಟೆಯಲ್ಲಿ ಅರೆಸ್ಟ್: 'ಅಪ್ಪಾಜಿ ದೀಪಿಕಾ ಅಕ್ಕಾ ಸಿಕ್ಕಿದ್ರಾ' ಅಂತ ಕೇಳಿದ್ದ ಕೊಲೆಗಾರ!

By Sathish Kumar KHFirst Published Jan 24, 2024, 3:46 PM IST
Highlights

ಮೇಲುಕೋಟೆ ಶಿಕ್ಷಕಿಯನ್ನು ಕೊಲೆಗೈದು ಮಣ್ಣಿನಲ್ಲಿ ಹೂತಿಟ್ಟಿದ್ದ ಕೊಲೆಗಾರನನ್ನು ಪೊಲೀಸರು 30 ಗಂಟೆಯೊಳಗೆ ಹೊಸಪೇಟೆಯಲ್ಲಿ ಬಂಧಿಸಿದ್ದಾರೆ.

ಮಂಡ್ಯ (ಜ.24): ರಾಜ್ಯದ ಐತಿಹಾಸಿಕ ತಾಣ ಮೇಲುಕೋಟೆಯ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ದೀಪಿಕಾಳನ್ನು ಅಕ್ಕ ಅಕ್ಕ ಎನ್ನುತ್ತಲೇ ಬೆಟ್ಟದ ತಪ್ಪಲಿಗೆ ಕರೆದೊಯ್ದು ಕೊಲೆಗೈದ ಹಂತಕನನ್ನು ಪೊಲೀಸರು 30 ಗಂಟೆಯೊಳಗೆ ಕಾರ್ಯಾಚರಣೆ ಮಾಡಿ ವಿಜಯನಗರದಲ್ಲಿ ಅರೆಸ್ಟ್ ಮಾಡಿದ್ದಾರೆ.

ಮೇಲುಕೋಟೆ ಶಿಕ್ಷಕಿ ಮಿಸ್ಸಿಂಗ್ ಮತ್ತು ಮರ್ಡರ್ ಕೇಸ್ ಪ್ರಕರಣ ಬೆಳಕಿಗೆ ಬಂದ 30 ಗಂಟೆಯಲ್ಲೇ ಹಂತಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಜ.20ರಂದು ಶಿಕ್ಷಕಿಯನ್ನು ಕೊಲೆಗೈದು ತಲೆಮರೆಸಿಕೂಂಡಿದ್ದ 22 ವರ್ಷದ ನಿತೀಶ್‌ನನ್ನು ವಿಜಯನಗರ ಜಿಲ್ಲೆ ಜಿಲ್ಲಾಕೇಂದ್ರ ಹೊಸಪೇಟೆಯಲ್ಲಿ ಅರೆಸ್ಟ್ ಮಾಡಲಾಗಿದೆ. ಮೇಲುಕೋಟೆ ಬೆಟ್ಟದ ತಪ್ಪಲಲ್ಲಿ ಶಿಕ್ಷಕಿ ಕೊಂದು, ಶವ ಹೂತಿಟ್ಟಿದ್ದನು. ಮೃತ ದೀಪಿಕಾ (28) ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮಾಣಿಕ್ಯನಹಳ್ಳಿ ಗ್ರಾಮದವಳಾಗಿದ್ದು, ಮೇಲುಕೋಟೆಯ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಳು.

ಮೇಲುಕೋಟೆ ಶಿಕ್ಷಕಿಯನ್ನು ಕೊಲೆಗೈದು ಮಣ್ಣಲ್ಲಿ ಮುಚ್ಚಿ ಹೋದನಾ ಮಂಡ್ಯ ಹೈದ?

ಶನಿವಾರ ಮಧ್ಯಾಹ್ನ ಶಾಲೆಯಿಂದ ತೆರಳಿದ್ದ ದೀಪಿಕಾ ನಿಗೂಢವಾಗಿ ನಾಪತ್ತೆಯಾಗಿದ್ದಳು. ಅಂದು ಸಂಜೆ ಬೆಟ್ಟದ ಹಿಂಭಾಗದ ರಸ್ತೆ ಸಮೀಪ ದೀಪಿಕಾ ಸ್ಕೂಟರ್ ಪತ್ತೆಯಾಗಿತ್ತು. ಅಲ್ಲದೆ ದೀಪಿಕಾಳನ್ನ ಎಳೆದಾಡುತ್ತಿದ್ದ ದೃಶ್ಯವನ್ನ ಬೆಟ್ಟದ ಮೇಲಿಂದ ಪ್ರವಾಸಿಗೊಬ್ಬರು ವಿಡಿಯೋ ಮಾಡಿದ್ದರು. ಕೊಲೆ ಆರೋಪಿ ನಿತೀಶ್‌ ದೀಪಿಕಾಗೆ ಕಡೆಯದಾಗಿ ಫೋನ್ ಮಾಡಿದ್ದನು. ಬೆಟ್ಟದ ಬಳಿ ಹದ್ದು, ಕಾಗೆಗಳ ಹಾರಾಟ ಹಾಗೂ ದುರ್ವಾಸನೆ ಬಂದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ ಸೋಮವಾರ ಸಂಜೆ ಬೆಟ್ಟದ ತಪ್ಪಲಿನಲ್ಲಿ ದೀಪಿಕಾ ಶವ ಪತ್ತೆಯಾಗಿತ್ತು.

ಇನ್ನು ಶವ ಪತ್ತೆಯಾಗುತ್ತಿದ್ದಂತೆ ನಿತೀಶ್ ಗ್ರಾಮದಿಂದ ಎಸ್ಕೇಪ್ ಆಗಿದ್ದನು. ಇದರಿಂದ ಆತನೇ ಕೊಲೆಗಾರ ಎಂದು ದೀಪಿಕಾ ಪತಿ ಲೋಕೇಶ್ ಆರೋಪಿಸಿದ್ದರು. ಆಗ ಯುವಕನ ಪತ್ತೆಗೆ ಪೊಲೀಸರು ಎರಡು ತಂಡವನ್ನು ರಚಿಸಿದ್ದರು. ಕೊನೆಗೂ ಪೊಲೀಸರು ಹಂತಕ ನಿತೀಶ್ ಹೊಸಪೇಟೆಯಲ್ಲಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಅಲ್ಲಿಗೆ ತೆರಳಿದ ಪೊಲೀಸರು ಆರೋಪಿಯನ್ನು ಬಂಧಿಸಿ ಕರೆತಂದಿದ್ದಾರೆ. ಇಂದು ಸಂಜೆಯೊಳಗೆ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ.

ಮಂಡ್ಯ: ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟೀವ್ ಆಗಿದ್ದ ಮಹಿಳೆ ಶವವಾಗಿ ಪತ್ತೆ

ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಹಂತಕನ ವಿಚಾರಣೆ ಮಾಡಲಾಗುತ್ತಿದೆ. ಈಗಾಗಲೇ ತಾನೇ ಕೊಲೈಗೈದಿದ್ದಾಗಿ ಒಪ್ಪಿಕೊಂಡಿದ್ದಾನೆ. ಕೊಲೈಗೈದು ಎರಡು ದಿನ ಗ್ರಾಮದಲ್ಲೆ ಇದ್ದನು. ಈ ಪ್ರಕರಣದ ದಿಕ್ಕು ತಪ್ಪಿಸಲು ನಾಟಕವಾಡಿದ್ದನು. ಕೊಲೆಯಾದ ಮಾರನೇ ದಿನ ದೀಪಿಕಾಳ ತಂದೆಗೆ ತಾನೇ ಕರೆ ಮಾಡಿದ್ದನು. 'ಅಪ್ಪಾಜಿ ದೀಪಿಕಾ ಅಕ್ಕಾ ಸಿಕ್ಕಿದ್ರಾ' ಎಂದು ವಿಚಾರಿಸಿದ್ದನು. ಮೃತ ದೀಪಿಕಾಳನ್ನ ಅಕ್ಕ ಅಂತ ಕರೆದ್ರೇ ಆಕೆಯ ತಂದೆಯನ್ನ ಅಪ್ಪಾಜಿ ಎನ್ನುತ್ತಿದ್ದನು. ತನ್ನ ಮೇಲೆ ಅನುಮಾನ ಬಾರದಂತೆ ದೀಪಿಕಾಳ ಬಗ್ಗೆ ವಿಚಾರಿಸುವ ನಾಟಕವಾಡಿದ್ದನು. ಆದ್ರೆ ಶವ ಪತ್ತೆಯಾಗ್ತಿದ್ದಂತೆ ಹೆದರಿ ಎಸ್ಕೇಪ್ ಆಗಿದ್ದನು. ಶವ ಹೂತಿಟ್ಟಿದ್ದರಿಂದ ಸಿಗೋದಿಲ್ಲ ಅಂದುಕೊಂಡಿದ್ದ ಆರೋಪಿ, ಶವ ಸಿಕ್ಕ ನಂತರ ಪರಾರಿ ಆಗಿ ಈಗ ಸಿಕ್ಕಿಬಿದ್ದಿದ್ದಾನೆ.

click me!