ಬುದ್ಧಿ ಹೇಳಿದ ಸಂಬಂಧಿಕನಿಗೆ ಇರಿದು ಹತ್ಯೆ: ಆರೋಪಿ ಸೆರೆ

By Kannadaprabha NewsFirst Published Jan 16, 2023, 10:48 AM IST
Highlights

ದಾಂಪತ್ಯ ಕಲಹದ ಹಿನ್ನೆಲೆಯಲ್ಲಿ ಮನೆಗೆ ಹೋಗುವಂತೆ ಹೇಳಿದ್ದಕ್ಕೆ ಸಿಟ್ಟಾಗಿ ವ್ಯಕ್ತಿಯೊಬ್ಬ ತನ್ನ ಇಬ್ಬರು ಸಂಬಂಧಿಕರಿಗೆ ಚಾಕುವಿನಿಂದ ಇರಿದ ಪರಿಣಾಮ ಒಬ್ಬ ಮೃತಪಟ್ಟು, ಮತ್ತೊಬ್ಬನ ಸ್ಥಿತಿ ಗಂಭೀರವಾಗಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು:  ದಾಂಪತ್ಯ ಕಲಹದ ಹಿನ್ನೆಲೆಯಲ್ಲಿ ಮನೆಗೆ ಹೋಗುವಂತೆ ಹೇಳಿದ್ದಕ್ಕೆ ಸಿಟ್ಟಾಗಿ ವ್ಯಕ್ತಿಯೊಬ್ಬ ತನ್ನ ಇಬ್ಬರು ಸಂಬಂಧಿಕರಿಗೆ ಚಾಕುವಿನಿಂದ ಇರಿದ ಪರಿಣಾಮ ಒಬ್ಬ ಮೃತಪಟ್ಟು, ಮತ್ತೊಬ್ಬನ ಸ್ಥಿತಿ ಗಂಭೀರವಾಗಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪೀಣ್ಯ ಎರಡನೇ ಹಂತದ ತಿಗಳರಪಾಳ್ಯ ಮುಖ್ಯರಸ್ತೆಯ ನಿವಾಸಿ ಕೇಶವಮೂರ್ತಿ(32) ಕೊಲೆಯಾದ ವ್ಯಕ್ತಿ. ಈತನ ಬಾವ ಮೈದುನ ಕಲ್ಲೇಶ್‌ (27) ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಮುಂದುವರೆದಿದೆ. ಘಟನೆ ಸಂಬಂಧ ಆರೋಪಿ ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕನಹಳ್ಳಿ ಗ್ರಾಮದ ನಿವಾಸಿ ಭರತ್‌(28)ನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿ ಭರತ್‌ ಹಾಗೂ ಪತ್ನಿ ರಾಧಾ ನಡುವೆ ಆಗಾಗ ಜಗಳವಾಗುತ್ತಿತ್ತು. ಕೆಲವು ದಿನಗಳ ಹಿಂದೆ ಪತ್ನಿ ಜೊತೆ ಜಗಳ ಮಾಡಿಕೊಂಡು ಭರತ್‌ ಮನೆಗೆ ಹೋಗಿರಲಿಲ್ಲ. ಹೀಗಾಗಿ ಪತ್ನಿ ರಾಧಾ ಅತ್ತೆಯ ಮಗನಾದ ಕೇಶವಮೂರ್ತಿಗೆ ಕರೆ ಮಾಡಿ, ಗಂಡ ಮೂರು ದಿನಗಳಿಂದ ಮನೆಗೆ ಬಂದಿಲ್ಲ. ಎಲ್ಲಾದರೂ ಸಿಕ್ಕರೆ ಬುದ್ಧಿ ಹೇಳಿ ಮನೆಗೆ ಕಳುಹಿಸು ಎಂದು ಹೇಳಿದ್ದಾಳೆ.

ಕೊಡಗಿನಲ್ಲಿ ಯುವತಿಯ ಕೊಲೆ: ಗುಂಡು ಹಾರಿಸಿಕೊಂಡು ಯುವಕ ಆತ್ಮಹತ್ಯೆ

ಬಾರ್‌ಗೆ ಕರೆಸಿ ಹಲ್ಲೆ

ಅದರಂತೆ ಕೇಶವಮೂರ್ತಿ ಹಾಗೂ ಆತನ ಬಾವ ಮೈದುನ ಕಲ್ಲೇಶ್‌ ಜ.13ರಂದು ರಾತ್ರಿ 8ಕ್ಕೆ ಭರತ್‌ಗೆ ಕರೆ ಮಾಡಿ ಪೀಣ್ಯ ಎರಡನೇ ಹಂತದ ಮಂದಾರ ಬಾರ್‌ಗೆ ಕರೆಸಿಕೊಂಡು, ಮೂವರು ಮದ್ಯ ಸೇವಿಸಿದ್ದಾರೆ. ಈ ವೇಳೆ ಕೇಶವಮೂರ್ತಿ, ಮನೆಗೆ ಹೋಗದಿರುವ ಬಗ್ಗೆ ಭರತ್‌ನನ್ನು ಪ್ರಶ್ನಿಸಿ ಹೊಡೆದಿದ್ದಾನೆ. ನಂತರ ಇಬ್ಬರು ಪರಸ್ಪರ ಬೈದಾಡಿಕೊಂಡು ಸಮಾಧಾನವಾಗಿದ್ದಾರೆ. ಬಳಿಕ ಆರೋಪಿ ಭರತ್‌, ಪತ್ನಿಯ ಊರು ಮತ್ಕೂರಿಗೆ ಹೋಗೋಣವೆಂದು ಕೇಶವಮೂರ್ತಿ ಹಾಗೂ ಕಲ್ಲೇಶ್‌ನನ್ನು ಕರೆದುಕೊಂಡು ಮೂವರು ದ್ವಿಚಕ್ರ ವಾಹನದಲ್ಲಿ ಹೊರಟಿದ್ದಾರೆ. ಮಾರ್ಗ ಮಧ್ಯೆ ಹೆಸರಘಟ್ಟಮುಖ್ಯರಸ್ತೆ ದ್ವಾರಕನಗರದ ಹಿಮಾಲಯ ಡಾಬಾ ಬಳಿಯ ಚಿಗಾರಿ ವೈನ್ಸ್‌ನಲ್ಲಿ ಮದ್ಯ ಖರೀದಿಸಿ ಸೇವಿಸಲು ಆರಂಭಿಸಿದ್ದಾರೆ.

ಅಟ್ಟಾಡಿಸಿ ಇರಿದು ಪರಾರಿ

ರಾತ್ರಿ 10.55ರ ಸುಮಾರಿಗೆ ಆರೋಪಿ ಭರತ್‌ ಏಕಾಏಕಿ ಕೇಶವಮೂರ್ತಿ ಹಾಗೂ ಕಲ್ಲೇಶ್‌ ಅವರಿಗೆ ನನ್ನ ಮಕ್ಕಳಾ, ನನಗೆ ಬುದ್ಧಿ ಹೇಳುತ್ತೀರಾ. ನಿಮ್ಮನ್ನು ಮರ್ಡರ್‌ ಮಾಡದೇ ಬಿಡುವುದಿಲ್ಲ ಎಂದು ಜೇಬಿನಿಂದ ಚಾಕು ತೆಗೆದು ಮೊದಲು ಕಲ್ಲೇಶ್‌ಗೆ ಇರಿದಿದ್ದಾನೆ. ಈ ವೇಳೆ ಕೇಶವಮೂರ್ತಿ ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದಾಗ, ಅಟ್ಟಾಡಿಸಿ ರಸ್ತೆಗೆ ಕೆಡವಿ ಎದೆ, ಹೊಟ್ಟೆಭಾಗಕ್ಕೆ ಹತ್ತಾರು ಬಾರಿ ಇರಿದು ದ್ವಿಚಕ್ರ ವಾಹನ ತೆಗೆದುಕೊಂಡು ಪರಾರಿಯಾಗಿದ್ದ.

ಈ ವೇಳೆಗೆ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಇಬ್ಬರು ಗಾಯಾಳುಗಳನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಎದೆ ಭಾಗಕ್ಕೆ ತೀವ್ರ ಹಾನಿಯಾಗಿದ್ದ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಿಸದೆ ಕೇಶವಮೂರ್ತಿ ಶನಿವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ. ಕಲ್ಲೇಶ್‌ ನೀಡಿದ ದೂರಿನ ಮೇರೆಗೆ ಭರತ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಲದೇವನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!