ಕುಣಿಗಲ್ ತಾಲೂಕಿನ ಹೇರೂರು ವ್ಯಾಪ್ತಿಯ ಕುಳ್ಳಿ ನಂಜಯ್ಯನ ಪಾಳ್ಯದಲ್ಲಿ ಅತಿಥಿ ಶಿಕ್ಷಕನ ಭೀಕರ ಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಮೃತ ಶಿಕ್ಷಕ ಮರಿಯಪ್ಪನ ಪತ್ನಿ ಹಾಗೂ ಮಗಳು ಸೇರಿ ಆತನ ಸೋದರಳಿಯ ಭೀಕರ ಕೊಲೆಗೆ ಕಾರಣರಾಗಿರುವುದು ಬೆಳಕಿಗೆ ಬಂದಿದೆ,
ತುಮಕೂರು (ಫೆ.14): ಕುಣಿಗಲ್ ತಾಲೂಕಿನ ಹೇರೂರು ವ್ಯಾಪ್ತಿಯ ಕುಳ್ಳಿ ನಂಜಯ್ಯನ ಪಾಳ್ಯದಲ್ಲಿ ಅತಿಥಿ ಶಿಕ್ಷಕನ ಭೀಕರ ಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಕುಣಿಗಲ್ ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದಾರೆ. ಮೃತ ಶಿಕ್ಷಕ ಮರಿಯಪ್ಪನ ಪತ್ನಿ ಶೋಭಾ ಹಾಗೂ ಮಗಳು ಹೇಮಲತಾ ಸೇರಿ ಆತನ ಸೋದರಳಿಯ ಈ ಭೀಕರ ಕೊಲೆಗೆ ಕಾರಣರಾಗಿರುವುದು ಬೆಳಕಿಗೆ ಬಂದಿದೆ,
ಮೃತ ವ್ಯಕ್ತಿಯ ಮಗಳು ಹೇಮಲತಾ ತಂದೆಯ ಸೋದರ ಸಂಬಂಧಿ ಶಾಂತಕುಮಾರ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಈ ವಿಚಾರವಾಗಿ ಕೆಲವು ದಿನಗಳ ಹಿಂದೆ ಶಾಂತಕುಮಾರ್ ಮತ್ತು ಮರಿಯಪ್ಪನ ನಡುವೆ ಜಗಳ ನಡೆದು ಇಬ್ಬರ ದ್ವೇಷಕ್ಕೆ ಕಾರಣವಾಗಿತ್ತು.
undefined
ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹಾಗೂ ತಾನು ಪ್ರೀತಿಸಿದ ಹೇಮಲತಾಳನ್ನು ಮದುವೆಯಾಗಲು ಹೇಮಲತಾಳ ತಾಯಿಯ ಸಹಕಾರದಿಂದ 50ಸಾವಿರ ರು.ಗಳನ್ನು ಪಡೆದು ಬೆಂಗಳೂರಿನ ವಾಸಿ ಸ್ನೇಹಿತರಾದ ಸಂತೋಷ್, ಹೇಮಂತಗೆ 5 ಲಕ್ಷ ರು. ನೀಡಿ ಕೊಲೆಗೆ ಸುಫಾರಿ ನೀಡಿದ್ದು, ಮುಂಗಡ 50 ಸಾವಿರ ನೀಡಿದ್ದರೆನ್ನಲಾಗಿದೆ. ಇನ್ನುಳಿದ ಹಣಕ್ಕಾಗಿ ಗಂಡ ಮರಿಯಪ್ಪ ಸತ್ತ ನಂತರ ಆತನ ಖಾತೆಯಲ್ಲಿರುವ ಹಣವನ್ನು ಬ್ಯಾಂಕ್ನಿಂದ ಡ್ರಾ ಮಾಡಿ ಕೊಡುವುದಾಗಿ ಪತ್ನಿ ಶೋಭಾ ಒಪ್ಪಿಕೊಂಡಿದ್ದಳು ಎಂಬುದು ತಿಳಿದು ಬಂದಿದೆ.
ಮರಿಯಪ್ಪನ ಕೊಲೆಗೆ ಸಂಚು ರೂಪಿಸಿದ್ದ ಪತ್ನಿ ಹಾಗೂ ಮಗಳು ಸುಪಾರಿ ಹಂತಕರಿಗೆ ಮಾಹಿತಿ ನೀಡುತ್ತಿದ್ದರು.ಮರಿಯಪ್ಪನು ಅಮಾವಾಸ್ಯೆ ಪೂಜೆಗೆ ಹೋಗುವ ಮಾರ್ಗ ಮಧ್ಯೆ ಕೊಲೆಗೆ ಸಂಚು ತಯಾರಾಗಿತ್ತು, ಅದರಂತೆ ಆತ ದ್ವಿಚಕ್ರ ವಾಹನದಲ್ಲಿ ವಾಪಸ್ ಬರುವಾಗ ಆತನ ಮೇಲೆ ಪೆಪ್ಪರ್ ಸ್ಪ್ರೇ ಮಾಡಿ, ಲಾಂಗು ಮಚ್ಚುಗಳಿಂದ ಕೊಲೆ ಮಾಡಿದ್ದ ಹಂತಕರು ಅಲ್ಲಿಂದ ನಾಪತ್ತೆಯಾಗಿದ್ದರು.
ಮೃತ ವ್ಯಕ್ತಿ ಮರಿಯಪ್ಪನಿಗಿದ್ದ ದ್ವೇಷದ ಮಾಹಿತಿ ಹಾಗೂ ಮಗಳಿಗಿದ್ದ ಪ್ರೇಮ ಸಂಬಂಧ ಕಲೆ ಹಾಕಿದ ಪೊಲೀಸರು, ಮೊಬೈಲ್ ನೆಟ್ವರ್ಕ್ ಸೇರಿ ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿ ಮೃತನ ಪತ್ನಿ, ಮಗಳು ಸೇರಿ 8 ಜನರನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು ಮುಂದಿನ ತನಿಖೆ ಆರಂಭಿಸಿದ್ದಾರೆ.