ಗಾಳಿಪಟ 2 ಬರೀ ಸಿನಿಮಾ ಅಲ್ಲ, ಅದೊಂದು ಎಮೋಶನ್‌: ಗಣೇಶ್‌

By Kannadaprabha NewsFirst Published Aug 12, 2022, 10:50 AM IST
Highlights

ಗೋಲ್ಡನ್‌ ಸ್ಟಾರ್‌ ಗಣೇಶ್‌ ಪ್ರಧಾನ ಪಾತ್ರದಲ್ಲಿ ನಟಿಸಿರುವ ‘ಗಾಳಿಪಟ 2’ ಇಂದು ಬಿಡುಗಡೆಯಾಗುತ್ತಿದೆ. ಯೋಗರಾಜ್‌ ಭಟ್‌ ನಿರ್ದೇಶನ, ರಮೇಶ್‌ ರೆಡ್ಡಿ ನಿರ್ಮಾಣದ ಈ ಸಿನಿಮಾದ ಬಗ್ಗೆ ನಾಯಕ ಗಣೇಶ್‌ ಮಾತಾಡಿದ್ದಾರೆ.

ಪ್ರಿಯಾ ಕೆರ್ವಾಶೆ

ಎರಡನೇ ಬಾರಿ ಗಾಳಿಪಟ ಹಾರಿಸಿದ ಅನುಭವ?

ಬಹಳ ಚೆನ್ನಾಗಿತ್ತು. ಮೊದಲ ಭಾಗದಲ್ಲಿ ಜಾಸ್ತಿ ದಿನ ಕೆಲಸ ಮಾಡಿರಲಿಲ್ಲ. ಇದ್ರಲ್ಲಿ ಸಾಕಷ್ಟುದಿನ ಕೆಲಸ ಮಾಡಿದೆ. ಗಾಳಿಪಟ ಹಾರಿಸಿದ ಅನುಭವ ಇದ್ರಲ್ಲಿ ಇನ್ನೂ ಚೆನ್ನಾಗಿತ್ತು.

ಗಾಳಿಪಟ 1ರ ಜೊತೆಗೆ ನಿಮ್ಮ ಪಾತ್ರ ಹೇಗೆ ಕನೆಕ್ಟ್ ಆಗುತ್ತೆ?

ಎರಡೂ ಬೇರೆ ಬೇರೆ. ಪಾತ್ರ ಮಾತ್ರ ಒಂದೇ. ಅವನು ಗಣಿಯೇ ಆಗಿದ್ದರೂ ಕಥೆ ಸಂಪೂರ್ಣ ಭಿನ್ನವಾಗಿರುತ್ತೆ. ಗಾಳಿಪಟ ಅಂದರೆ ಫ್ರೆಂಡ್‌ಶಿಪ್‌ ಅಲ್ವಾ.. ಇದು ಗೆಳೆತನದ್ದೇ ಎಳೆ ಇರುವ ಮೂವರು ಗೆಳೆಯರ ಕತೆ.

ಗಾಳಿಪಟ-2; ಸೆನ್ಸೇಷನ್ ಸೃಷ್ಟಿಸಿದ ಭಟ್ರು-ಗಣಿ, ದಶಕದ ಹಿಂದಿನ ಇತಿಹಾಸ ಮತ್ತೆ ಮರುಕಳಿಸುತ್ತಾ?

ಈ ಪಾತ್ರ ಮಾಡುವಾಗ ಹಳೆಯ ಗಾಳಿಪಟ ಎಷ್ಟುನೆನಪಾಗುತ್ತಿತ್ತು?

ಗಾಳಿಪಟದ ಗಣಿ ಪಾತ್ರ ಬಹಳ ಎಮೋಶನಲ್‌, ಎಂಟರ್‌ಟೈನರ್‌ ಆತ. ತುಂಬ ನೆನಪಾಗ್ತಿತ್ತು. ಮೊದಲ ಭಾಗದಲ್ಲಿ ಯಾವಾಗ್ಲೂ ತಿನ್ನುತ್ತಲೇ ಇದ್ದು ದಪ್ಪಗಾಗಿರುವ ಗಣಿ. ಎರಡನೇ ಭಾಗದಲ್ಲಿ ಈ ಕಾಲದ ಹುಡುಗನ ಹಾಗಿರ್ತಾನೆ. ಗಾಳಿಪಟ 2ನಲ್ಲೂ ನನ್ನ ಪಾತ್ರಕ್ಕೆ 2 ಶೇಡ್‌ಗಳಿವೆ.

ಮುಂಗಾರು ಮಳೆ ಕಾಲದಿಂದಲೂ ನಿಮ್ಮನ್ನು ಹ್ಯೂಮರ್‌, ಎಮೋಶನ್‌ ಬೆರೆತ ಪಾತ್ರಗಳಲ್ಲೇ ಜನ ಇಷ್ಟಪಡ್ತಿದ್ದಾರೆ. ಈ ಚಿತ್ರದಲ್ಲಿ ಅದನ್ನು ಮೀರಿ ಮತ್ತೇನನ್ನೋ ಕೊಡುವ ಪ್ರಯತ್ನ ಮಾಡಿದ್ದೀರಾ?

ಡಿಯನ್ಸ್‌ ನಮ್ಮನ್ನು ಯಾಕೆ ಇಷ್ಟಪಡ್ತಾರೋ ಅದನ್ನು ಕೊಡಲೇ ಬೇಕಲ್ವಾ? ಈ ಥರ ಟೈಟಲಿಟ್ಟುಕೊಂಡು ನಾನು ಗನ್‌ ಹಿಡ್ಕೊಂಡು ನಿಂತಿರೋದಕ್ಕಾಗುತ್ತಾ? ಗಣಿ ಗಣಿಯಾಗಿರಲೇ ಇರಬೇಕಲ್ವಾ? ಅದರ ಜೊತೆಯಲ್ಲಿ ಹೊಸದಾಗಿ ಏನೋ ಹೇಳಲಿಕ್ಕೆ ಹೊರಡಬೇಕು, ಅದು ನಮ್ಮ ಗಾಳಿಪಟ 2ನಲ್ಲಿದೆ.

ಪವನ್ ಕುಮಾರ್ ನಿದ್ರೆಯಿಂದೆದ್ದು ಸೆಲ್ಪಿ ಕಳುಹಿಸಿದ್ದಕ್ಕೆ ಗಾಳಿಪಟ 2ಗೆ ಆಯ್ಕೆ ಆದರಂತೆ!

ಜನ ಕಲಾವಿದನನ್ನು ಹೀಗೆ ಒಂದು ಜಾನರ್‌ಗೆ ಫಿಕ್ಸ್‌ ಮಾಡೋದು ಎಷ್ಟರಮಟ್ಟಿಗೆ ಆರ್ಟಿಸ್ಟ್‌ಗೆ ಲಾಸ್‌?

ಜನ ಕೇಳಿದ್ದನ್ನು ನಾವು ಕೊಡಲೇ ಬೇಕಲ್ವಾ, ನಮಗೆ ಬೇಕಾದ್ದನ್ನೇ ಮಾಡಬೇಕು ಅಂದರೆ ನಾವೇ ನೋಡ್ಕೊಳ್ಳಬೇಕಷ್ಟೇ. ಅದರೆ ನಾವು ಕಲಾವಿದರಾಗಿ ಬೆಳೆಯಬೇಕು ಅಂದರೆ ಪ್ರಯೋಗಗಳನ್ನೂ ಮಾಡಲೇಬೇಕಾಗುತ್ತೆ. ತಾಯಿ ಚಿತ್ರಾನ್ನ ಮಾಡ್ತಾರೆ, ಅದು ಮೊನಾಟನಸ್‌ ಅನಿಸುತ್ತಾ, ಆಗ ಪುಳಿಯೋಗರೆ ತಿನ್ನಿ ಅಷ್ಟೇ. ಪುಳಿಯೋಗರೆ ತಿಂದಮೇಲೆ ಚಿತ್ರಾನ್ನನೇ ಬೇಕಾಗುತ್ತೆ. ನಾನು ಯೋಗರಾಜ್‌ ಮಾಡಿದಾಗ ಜನ ಕಾಮನ್‌ ಪೀಪಲ್‌ ಸ್ಟೋರಿನೇ ಮಾಡ್ಬೇಕು, ಜನ ಬಯಸೋದೇ ಅದನ್ನು. ಅದರ ಜೊತೆಗೆ ಬೇರೆ ಬೇರೆ ಪ್ರಯೋಗವನ್ನೂ ಮಾಡಬೇಕು.

ಗಾಳಿಪಟ ಹ್ಯಾಂಗೋವರ್‌ನಿಂದ ಹೊರಬರಲು ತುಂಬ ಸಮಯ ಬೇಕಾಯ್ತಲ್ಲಾ?

ಹಾಗೇನಿಲ್ಲ. ಬಹಳ ಬೇಗ ಇನ್ನೊಂದು ಪಾತ್ರ ಮಾಡ್ತೀನಿ. ನನಗೆ ಯಾವಾಗಲೂ ಅನಿಸೋದು ಐ ಡೋಂಟ್‌ ಆ್ಯಕ್ಟ್, ಐ ಬಿಹೇವ್‌ ಅಂತ. ಅಂದ್ರೆ ನನಗೆ ಪಾತ್ರದಂತೆ ಬಿಹೇವ್‌ ಮಾಡ್ಬೇಕು ಅಂತಷ್ಟೇ ಇರುತ್ತೆ. ಹೀಗಾಗಿ ಈ ಹ್ಯಾಂಗೋವರ್‌ ಎಲ್ಲ ಇರೋದಿಲ್ಲ.

ಗಾಳಿಪಟ 2 ಹಾಡುಗಳು ಕ್ಲಿಕ್‌ ಆಗಿವೆ. ಇದು ಸಿನಿಮಾಕ್ಕೆ ಪಾಸಿಟಿವ್‌ ಆಗುತ್ತಾ, ನೆಗೆಟಿವ್‌ ಆಗುತ್ತಾ?

ಹಾಡುಗಳು ಸಿನಿಮಾಕ್ಕೆ ಆಹ್ವಾನ ಇದ್ದ ಹಾಗೆ ಅದು ಪಾಸಿಟಿವ್‌ ಆಗಿರುತ್ತೆ. ಡಿಜಿಟಲ್‌ ಯುಗದಲ್ಲಿ ಹಾಡುಗಳು ಜನರನ್ನು ಎಷ್ಟುಎಂಗೇಜ್‌ ಮಾಡ್ತವೋ, ಅದರಿಂದ ಜನರಿಗೆ ಸಿನಿಮಾದಲ್ಲಿ ಆಸಕ್ತಿ ಹುಟ್ಟಿಅವರು ಥಿಯೇಟರ್‌ಗೆ ಬರ್ತಾರೆ.

ಓವರ್‌ ನಿರೀಕ್ಷೆ ಚಿತ್ರಕ್ಕೆ ಮುಳುವಾದ ಉದಾಹರಣೆಗಳೂ ಇವೆಯಲ್ಲ?

ಅದೆಲ್ಲ ಟೈಮಿಂಗ್‌ ಅಷ್ಟೇ. ಒಂದು ಸಿನಿಮಾ ಹಿಟ್‌ ಆಗೋದಕ್ಕೆ ಫಾಮ್ರ್ಯುಲಾಗಳಿಲ್ಲ. ಇದು ಕ್ರಿಯೇಟಿವ್‌ ಮಾಧ್ಯಮ. ಕೆಲವೊಮ್ಮೆ ಗೆಲ್ಲುತ್ತೆ, ಕೆಲವೊಮ್ಮೆ ಗೆಲ್ಲೋದಿಲ್ಲ.

ಗಾಳಿಪಟ 2 ವಿಷ್ಯುವಲ್‌ ವೈರಲ್‌ ಆಗಿತ್ತು. ಹೇಗಿತ್ತು ಆ ಜರ್ನಿ?

ಅಷ್ಟುಚೆನ್ನಾಗಿರಲಿಕ್ಕೆ ನಮ್ಮ ನಿರ್ಮಾಪಕ ರಮೇಶ್‌ ರೆಡ್ಡಿ ಅವರು ಪ್ರಮುಖ ಕಾರಣ. ಗಾಳಿಪಟ ಟೈಟಲ್‌ಗೆ ಒಂದು ಘನತೆ ಇದೆ. ಅದಕ್ಕೆ ನಮ್ಮ ಕಡೆಯಿಂದ ಅಪವಾದ ಬರಬಾರದು ಅನ್ನೋದು ಅವರ ನಿಲುವು. ಈ ಸಿನಿಮಾ ಶೂಟಿಂಗ್‌ ಮಾಡುವಾಗ ಲಾಕ್‌ಡೌನ್‌ ಓಪನ್‌ ಆಗಿತ್ತಷ್ಟೇ. ಬಹಳ ಎಚ್ಚರಿಕೆಯಲ್ಲಿ ಕುದುರೆಮುಖ, ಖಜಕ್‌ಸ್ತಾನ್‌ಗೆ ಟೀಮ್‌ ಜೊತೆಗೆ ಹೋಗಿದ್ದು ಎಲ್ಲ ಬೆಸ್ಟ್‌ ಅನುಭವ. ಎಲ್ಲಕ್ಕಿಂತ ಮುಖ್ಯ ಅನಿಸೋದು ಗಾಳಿಪಟ 2 ಅನ್ನೋದು ಒಂದು ಎಮೋಶನ್‌. ಅದು ಬರೀ ಸಿನಿಮಾ ಅಲ್ಲ. ಹೀಗಾಗಿ ತಂಡಕ್ಕೆ ಟೆನ್ಶನ್‌, ಒತ್ತಡ, ಜವಾಬ್ದಾರಿ ಹೆಚ್ಚೇ ಇದೆ.

ಬುಕಿಂಗ್‌, ಲೈಕ್ಸ್‌ ವಿಚಾರದಲ್ಲಿ ಅಕ್ಷಯ್‌ ಕುಮಾರ್‌ ಸಿನಿಮಾವನ್ನೇ ಹಿಂದೆ ಹಾಕಿದೆ?

ಜನರ ಆ ನಂಬಿಕೆ, ಎಮೋಶನ್‌ ಉಳಿಸಿಕೊಳ್ಳೋ ಥರವೇ ಸಿನಿಮಾವಿದೆ. ಬಹಳ ಖುಷಿ ಆಗುತ್ತೆ ಅದನ್ನೆಲ್ಲ ನೋಡಿದಾಗ. ಈ ವಿಚಾರ ನನಗೆ ಹೊಸತು, ಯಾಕಂದ್ರೆ ಕಳೆದ 20 -25 ದಿನಗಳಿಂದ ಗಾಳಿಪಟ 2 ಬಿಟ್ರೆ ಬೇರೇನನ್ನೂ ನೋಡ್ತಿಲ್ಲ ನಾನು. ಅದರಲ್ಲೇ ಮುಳುಗಿದ್ದೇನೆ.

ಕನ್ನಡದ ಸಿನಿಮಾ ಬರ್ತದೆ ಅಂದರೆ ಬಾಲಿವುಡ್‌ ಸಿನಿಮಾಗಳಿಗೂ ನಡುಕ?

ಅದು ನಮ್ಮ ಸಿನಿಮಾಕ್ಕೆ ಈಗ ಬಂದಿರುವ ಪವರ್‌. ಕೊನೆಗೂ ಯಾವುದೇ ಸಿನಿಮಾ ಅಂದರೆ ಇಂಡಿಯನ್‌ ಸಿನಿಮಾ. ಇಂಟರೆಸ್ಟಿಂಗ್‌ ಅನಿಸಿದರೆ ಜನ ನೋಡ್ತಾರೆ, ಇಲ್ಲಾಂದ್ರೆ ಇಲ್ಲ.

ಪ್ರೇಕ್ಷಕರಿಂದ ನಿರೀಕ್ಷಿಸೋದು?

ಅವರ ಪ್ರೀತಿ, ಶಭಾಷ್‌ ಟೀಮ್‌ ಗಾಳಿಪಟ 2 ಅಂದ್ರೆ ಅದೇ ಖುಷಿ.

click me!