ರಾಜ್ ಬಿ ಶೆಟ್ಟಿ ನಟನೆಯ ಟೋಬಿ ಚಿತ್ರದ ಪ್ರಮುಖ ಪಾತ್ರ ಜೆನ್ನಿಯಾಗಿ ನಟಿಸಿರುವ ಚೈತ್ರಾ ಆಚಾರ್ ಸದ್ಯ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆಯುತ್ತಿರುವ ಪ್ರತಿಭೆ. ರಕ್ಷಿತ್ ಶೆಟ್ಟಿ ನಟನೆಯ ಸಪ್ತಸಾಗರದಾಚೆ ಎಲ್ಲೋ ಚಿತ್ರದ ನಾಯಕಿಯೂ ಹೌದು. ಆ.25ರಂದು ಟೋಬಿ ಬಿಡುಗಡೆ, ಸೆ.1ರಂದು ಸಪ್ತಸಾಗರದಾಚೆ ಎಲ್ಲೋ ರಿಲೀಸ್. ಈ ಹಿನ್ನೆಲೆಯಲ್ಲಿ ಅವರ ಸಂದರ್ಶನ.
ನಿಮ್ಮ ಹಿನ್ನೆಲೆ ಏನು, ಚಿತ್ರರಂಗಕ್ಕೆ ಕನೆಕ್ಟ್ ಆಗಿದ್ದು ಹೇಗೆ?
ನನ್ನ ಕುಟುಂಬಕ್ಕೆ ಚಿತ್ರರಂಗದ ಹಿನ್ನೆಲೆ ಇಲ್ಲ. ನನ್ನ ತಂದೆ ಪ್ರಿನ್ಸಿಪಾಲ್. ನನಗೆ ಚಿಕ್ಕಂದಿನಿಂದಲೂ ನಾಟಕಗಳ ಕಡೆ ಆಕರ್ಷಣೆ ಇತ್ತು. ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದಾಗಲೇ ‘ಬೆಂಗಳೂರ್ ಕ್ವೀನ್ಸ್’ ಹೆಸರಿನ ವೆಬ್ ಸರಣಿಯಲ್ಲಿ ನಟಿಸಿದೆ. ಈ ಚಿತ್ರದ ನಂತರ ‘ಮಹಿರ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದೆ.
undefined
ಆರಂಭದ ಹೆಜ್ಜೆ ಗುರುತುಗಳನ್ನು ನೆನಪಿಸಿಕೊಂಡರೆ?
ಮಹಿರ ಚಿತ್ರದಲ್ಲಿ ನಾನು 16 ವರ್ಷದ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಆದರೆ, ನಾನು ನಿಜವಾಗಿ ಆ ಪಾತ್ರದ ವಯಸ್ಸಿಗಿಂತ ದೊಡ್ಡವಳು. ಆದರೂ ಆ ಪಾತ್ರ ನಿಭಾಯಿಸಿದೆ. ನನ್ನ ಪಾತ್ರವನ್ನು ಎಲ್ಲರು ಗುರುತಿಸಿದರು. ಪಾತ್ರಕ್ಕೆ ಬೇಕಾದ ತಯಾರಿ ಮಾಡಿಕೊಂಡು ನಿರ್ದೇಶಕನ ಕಲ್ಪನೆಗೆ ಜೀವನ ತುಂಬಿದರೆ ಪ್ರೇಕ್ಷಕರು ಗುರುತಿಸುತ್ತಾರೆ ಎಂಬುದು ಆರಂಭದಲ್ಲೇ ಗೊತ್ತಾಯಿತು. ನಂತರ ಸಂಚಾರಿ ವಿಜಯ್ ಜತೆಗೆ ನಟಿಸಿದ್ದ ‘ತಲೆತಂಡ’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂತು. ನನ್ನ ಹೆಸರು ಎಲ್ಲರಿಗೂ ಗೊತ್ತಾಯಿತು.
ಟೋಬಿ ಚಿತ್ರದಲ್ಲೂ ಭಿನ್ನ ಪಾತ್ರ ಮಾಡುತ್ತಿದ್ದೀರಲ್ಲ?
ಹೌದು. ಪಾತ್ರದ ಹೆಸರು ಜೆನ್ನಿ. ಮುಗ್ಧೆ ಆಗಿರುತ್ತಾಳೆ. ತನ್ನ ಪ್ರೀತಿ ಹೇಳಿಕೊಳ್ಳುವುದು, ಎಲ್ಲರನ್ನು ಸಮಾನವಾಗಿ ನೋಡುವ ರೀತಿ ವಿಶೇಷವಾಗಿರುತ್ತದೆ. ಪ್ರೀತಿ ಅಂತ ಬಂದರೆ ಜಗಳಗಂಟಿಯಂತೆ ಕಾಣುತ್ತಾಳೆ. ಉತ್ತರ ಕನ್ನಡ ಭಾಗದ ಟಿಪಿಕಲ್ ಹುಡುಗಿ ಪಾತ್ರ ನನ್ನದು.
ಆಟೋ ಮೇಲೆ ಪರಮಾತ್ಮನ ಫೋಟೋ; ಅರ್ಥವಾಗದ ಪ್ರೀತಿ ಎಂದ ನಟಿ ಚೈತ್ರಾ ಆಚಾರ್
ಈ ಚಿತ್ರದ ಕತೆ ಹಾಗೂ ಪಾತ್ರದ ಬಗ್ಗೆ ಹೇಳಿದಾಗ ನಿಮಗೆ ಏನನಿಸಿತು?
ಕತೆ ಕೇಳಿದ ಮೇಲೆ ಟೋಬಿ ಸ್ಕ್ರಿಪ್ಟ್ ಓದಲು ಕೊಟ್ಟರು. ಓದುವಾಗಲೇ ಏನಪ್ಪ ಈ ಪಾತ್ರ ಹೀಗಿದೆ, ಹೇಗೆ ಮಾಡೋದು ಎನ್ನುವ ಭಯ ಮತ್ತು ಅಚ್ಚರಿ ಉಂಟಾಯಿತು. ಚಿತ್ರದ ನಾಯಕ ರಾಜ್ ಬಿ ಶೆಟ್ಟಿ ಪಾತ್ರದಷ್ಟೇ ಮಹತ್ವ ಜೆನ್ನಿ ಪಾತ್ರಕ್ಕೂ ಇದೆ. ತುಂಬಾ ಹೋಮ್ ವರ್ಕ್ ಮಾಡಿಕೊಂಡು ಈ ಪಾತ್ರ ಮಾಡಿದ್ದಕ್ಕೆ, ಸುಲಭ ಆಯಿತು. ಆಗಸ್ಟ್ 25ಕ್ಕೆ ಈ ಸಿನಿಮಾ ಬಿಡುಗಡೆ ಆಗುತ್ತಿದೆ.
ರಕ್ಷಿತ್ ಶೆಟ್ಟಿ ಅವರ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಕ್ಕೆ ಕನೆಕ್ಟ್ ಆಗಿದ್ದು ಹೇಗೆ?
ಗಿಲ್ಕಿ ಸಿನಿಮಾ ನೋಡಿದ ನಿರ್ದೇಶಕ ಹೇಮಂತ್ ರಾವ್ ಫೋನ್ ಮಾಡಿ, ನನ್ನ ಪಾತ್ರವನ್ನು ಮೆಚ್ಚಿ ಮಾತನಾಡಿದರು. ಆ ಚಿತ್ರದ ನನ್ನ ಪಾತ್ರ ನೋಡಿ ಅವರು ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಅವಕಾಶ ಕೊಟ್ಟರು.
‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ನಿಮ್ಮ ಪಾತ್ರ ಹೇಗಿದೆ?
ನನ್ನ ಪಾತ್ರದ ಹೆಸರು ಸುರಭಿ. ಸ್ವತಂತ್ರವಾಗಿ ಜೀವನ ಮಾಡುತ್ತಿರುವ ಹುಡುಗಿ. ಅಂಥವಳ ಜೀವನದಲ್ಲಿ ಮನು ಎನ್ನುವ ಪಾತ್ರ ಬಂದಾಗ ಏವಾಗುತ್ತದೆ ಎಂಬುದೇ ನನ್ನ ಪಾತ್ರದ ಕತೆ.
ಏನು ಈ ಪಾತ್ರದ ವಿಶೇಷತೆ?
ಜೀವನ ಅನುಭವ ತುಂಬಾ ಇರುತ್ತದೆ. ಒಳಗೆ ಎಮೋಷನಲ್, ಹೊರಗೆ ಸ್ಟ್ರಾಂಗ್ ಆಗಿರುವ ಹೆಣ್ಣು ಮಗಳು. ಗಂಡಸರ ಕಣ್ಣುಗಳನ್ನು ತಪ್ಪಿಸಿಕೊಳ್ಳಲಾರದ ಒಂಟಿ ಹೆಂಗಸಿನ ಪಾತ್ರ. ಆದರೆ, ಜೀವನದ ಅನುಭವಗಳು ಆಕೆಗೆ ಎಲ್ಲವನ್ನೂ ಕಲಿಸಿಕೊಟ್ಟಿರುತ್ತದೆ. ಇದನ್ನು ನನ್ನ ಪಾತ್ರದಲ್ಲಿ ತೋರಿಸಬೇಕಿತ್ತು.
ಟೋಬಿ ಹಾಗೂ ಸಪ್ತ ಸಾಗರದಾಚೆ ಎಲ್ಲೋ ಚಿತ್ರಗಳ ನಂತರ ನಿಮ್ಮಲ್ಲಿ ದೊಡ್ಡ ಬದಲಾವಣೆ ಆಗಿದೆ ಅನಿಸುತ್ತದಲ್ಲಾ?
ನನ್ನಲ್ಲಿ ಏನು ಬದಲಾವಣೆ ಆಗಿದೆ ಅಂತ ನನಗೆ ಗೊತ್ತಿಲ್ಲ. ಆದರೆ, ಒಂದು ದೊಡ್ಡ ಬಜೆಟ್ ಸಿನಿಮಾ, ಸ್ಟಾರ್ ಹೀರೋ ಜತೆಗೆ ನಟಿಸಿದ ಮೇಲೆ ಒಳ್ಳೆಯ ಚಿತ್ರಕಥೆಗಳು, ಪಾತ್ರಗಳು ಇರುವ ಸಿನಿಮಾಗಳು ಸಿಗುತ್ತವೆ. ನಾವು ಯಾರು ಎಂಬುದು ಹೆಚ್ಚು ಹೆಚ್ಚು ಜನಕ್ಕೆ ಗೊತ್ತಾಗುತ್ತದೆ. ಕ್ವಾಂಟಿಟಿಗಿಂತ ಕ್ವಾಲಿಟಿ ಕತೆ ಮತ್ತು ಪಾತ್ರಗಳು ಇರುವ ಸಿನಿಮಾಗಳು ಸಿಗುತ್ತವೆ. ಈ ಬದಲಾವಣೆಯಂತೂ ಆಗಿದೆ. \B\B
ಮುಂದೆ ಯಾವ ಸಿನಿಮಾಗಳು ಇವೆ?
ಬ್ಲಿಂಕ್ ಹಾಗೂ ಸ್ಟ್ರಾಬೆರಿ. ಇವೆರಡೂ ಶೂಟಿಂಗ್ ಮುಗಿದಿದ್ದು, ಸದ್ಯದಲ್ಲೇ ತೆರೆಗೆ ಬರಲಿವೆ.
ಚಿತ್ರರಂಗದಲ್ಲಿ ನಿಮ್ಮ ಗುರಿ ಏನು?
ಪಾತ್ರ ಹಾಗೂ ಕತೆ ಆಯ್ಕೆಯಲ್ಲಿ ನನಗೇ ನಾನೇ ಸವಾಲು ಹಾಕಿಕೊಳ್ಳಬೇಕು. ಪ್ರತಿ ಚಿತ್ರ, ಪಾತ್ರಕ್ಕೂ ಭಿನ್ನತೆ ಕಾಯ್ದುಕೊಳ್ಳಬೇಕು. ನನಗೆ ಗೊತ್ತಿಲ್ಲದ್ದನ್ನು ಪಾತ್ರಗಳ ಮೂಲಕ ನಾನು ಎಕ್ಸ್‌ಪ್ಲೋರ್ ಮಾಡಬೇಕು. ಒಂದು ದಿನ ನನ್ನ ಕೆರಿಯರ್ ಅನ್ನು ನಾನೇ ಹಿಂತಿರುಗಿ ನೋಡಿಕೊಂಡರೆ, ನನ್ನ ಪಯಣ- ಹೆಜ್ಜೆಗುರುತುಗಳ ಬಗ್ಗೆ ನನಗೇ ಪಶ್ಚಾತ್ತಾಪ ಕಾಡಬಾರದು ಅಂಥ ಸಿನಿಮಾ ಮತ್ತು ಪಾತ್ರಗಳನ್ನು ನಾನು ಮಾಡಿರಬೇಕು. ನನಗೇ ನನ್ನ ಆಯ್ಕೆಗಳು ಖುಷಿ ಕೊಡಬೇಕು. ಸಾರ್ಥಕತೆ ಭಾವನೆ ಮೂಡಿಸಬೇಕು. ಈಗ ನನ್ನ ಪಯಣ ಕೂಡ ಅದೇ ದಿಕ್ಕಿನಲ್ಲಿ ಸಾಗುತ್ತಿರುವುದಕ್ಕೆ ಖುಷಿ ಇದೆ.