
ಮುಂಬೈ(ಫೆ.16): ‘ಎಲ್ಲವೂ ನನ್ನ ಕೈ ಮೀರಿದೆ. ಈಗ ನಾನು ಯಾರೂ ಅಲ್ಲ, ಕೊಡಲು ನನ್ನ ಬಳಿ ಏನೂ ಇಲ್ಲ...’ಇದು ಅನಿಲ್ ಅಂಬಾನಿ ಸುಪ್ರೀಂ ಕೋರ್ಟ್‌ನಲ್ಲಿ ಅಲವತ್ತುಕೊಂಡ ಪರಿ.
ಹೌದು, ಎರಿಕ್ಸನ್ ಕಂಪನಿಗೆ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯುನಿಕೇಶನ್ಸ್ 550 ಕೋಟಿ ರೂ. ಸಾಲ ನೀಡಬೇಕಿದ್ದು, ಈ ಕುರಿತು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದೆ.
ವಿಚಾರಣೆ ವೇಳೆ ಅನಿಲ್ ಅಂಬಾನಿ ಪರ ವಾದ ಮಂಡಿಸಿದ ಮುಕುಲ್ ರೋಹ್ಟಗಿ, ಅನಿಲ್ ಅವರ ಸಂದೇಶವನ್ನು ಕೋರ್ಟ್‌ಗೆ ತಿಳಿಸಿದರು. ಸದ್ಯ ಅನಿಲ್ ಅಂಬಾನಿ ದಿವಾಳಿತನದ ಕುರಿತು ದಿವಾಳಿ ನ್ಯಾಯಾಲಯದಲ್ಲಿ ಪ್ರತ್ಯೇಕ ವಿಚಾರಣೆ ನಡೆಯುತ್ತಿದ್ದು, ಸುಪ್ರೀಂ ಕೋರ್ಟ್ ನಿಗದಿಪಡಿಸಿರುವ ಅವಧಿಯೊಳಗಾಗಿ ಸಾಲ ತೀರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಎರಿಕ್ಸನ್ ಕಂಪನಿ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ದುಶ್ಯಂತ್ ದವೆ ಮತ್ತು ಅನಿಲ್ ಖೇರ್, ಕಂಪನಿಯೊಂದಿಗೆ ಮಾಡಿಕೊಂಡ ಒಪ್ಪಂದದಂತೆ ಅನಿಲ್ ಅಂಬಾನಿ 550 ಕೋಟಿ ರೂ. ಸಾಲ ತೀರಿಸಬೇಕಿದ್ದು, ಕಂಪನಿಗೆ ನ್ಯಾಯ ಒದಗಿಸಿ ಕೊಡಬೇಕಿದೆ ಎಂದು ಮನವಿ ಮಾಡಿದರು.
ಆದರೆ ಅನಿಲ್ ಅಂಬಾನಿ ಸಾಲ ತೀರಿಸಲು ತೀವ್ರ ಪ್ರಯತ್ನ ಪಡುತ್ತಿದ್ದು, ಹಣ ಹೊಂದಿಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಮುಕುಲ್ ರೋಹ್ಟಗಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಸದ್ಯ ವಾದ ವಿವಾದಗಳನ್ನು ಆಲಿಸಿರುವ ಸುಪ್ರೀಂ ಕೋರ್ಟ್, ತೀರ್ಪನ್ನು ಕಾಯ್ದಿರಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.