CRPF ವಾಹನದ ಮೇಲೆ ಉಗ್ರರ ಆತ್ಮಾಹುತಿ ದಾಳಿ ಹಿನ್ನೆಲೆ| 49 ವೀರ ಯೋಧರನ್ನು ಬಲಿ ಪಡೆದ ಉಗ್ರರ ಆತ್ಮಾಹುತಿ ದಾಳಿ| ಪಾಕಿಸ್ತಾನಕ್ಕೆ ನೀಡಿದ್ದ ಪರಮಾಪ್ತ ರಾಷ್ಟ್ರದ ಸ್ಥಾನಮಾನ ಹಿಂಪಡೆದ ಭಾರತ| ಭಾರತ-ಪಾಕ್ ನಡುವಿನ ವ್ಯಾಪಾರ ವಹಿವಾಟಿನ ಪಕ್ಷಿನೋಟ| ಭಾರತದ ನಿರ್ಧಾರದಿಂದ ಬೆಚ್ಚಿ ಬಿದ್ದ ಪಾಕಿಸ್ತಾನ| ಪಾಕಿಸ್ತಾನದ ಆರ್ಥಿಕತೆಗೆ ಭಾರೀ ಪೆಟ್ಟು ಕೊಟ್ಟ ಮೋದಿ ಸರ್ಕಾರ
ನವದೆಹಲಿ(ಫೆ.15): CRPF ವಾಹನದ ಮೇಲೆ ನಡೆದ ಉಗ್ರರ ಆತ್ಮಾಹುತಿ ದಾಳಿ ಬಳಿಕ, ಪಾಕಿಸ್ತಾನಕ್ಕೆ ನೀಡಲಾಗಿದ್ದ 'ಪರಮಾಪ್ತ ರಾಷ್ಟ್ರ' ಎಂಬ ಮಾನ್ಯತೆಯನ್ನು ಭಾರತ ತಕ್ಷಣದಿಂದ ಜಾರಿಗೆ ಬರುವಂತೆ ವಾಪಸ್ ಪಡೆದಿದೆ.
ಪಾಕ್ ಬೆಂಬಲಿತ ಜೈಶ್-ಎ-ಮೊಹ್ಮದ್ ಸಂಘಟನೆ ನಿನ್ನೆ ಪುಲ್ವಾಮಾದಲ್ಲಿ CRPF ವಾಹನದ ಮೇಲೆ ಆತ್ಮಾಹುತಿ ದಾಳಿ ಮಾಡಿ 49 ಯೋಧರನ್ನು ಬಲಿ ಪಡೆದಿತ್ತು. ಇದರಿಂದ ರೊಚ್ಚಿಗೆದ್ದಿರುವ ಭಾರತ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಮುಂದಾಗಿದೆ.
ಇಂದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಭದ್ರತಾ ಸಮಿತಿ (ಸಿಸಿಎಸ್) ಸಭೆಯ ಬಳಿಕ ಮಾತನಾಡಿದ ವಿತ್ತ ಸಚಿವ ಅರುಣ್ ಜೇಟ್ಲಿ, ಪಾಕಿಸ್ತಾನಕ್ಕೆ ನೀಡಲಾಗಿದ್ದ ಪರಮಾಪ್ತ ರಾಷ್ಟ್ರದ ಸ್ಥಾನಮಾನ ಹಿಂಪಡೆಯಲಾಗಿದೆ ಎಂದು ಹೇಳಿದ್ದಾರೆ.
ಏನಿದು ಪರಮಾಪ್ತ ರಾಷ್ಟ್ರದ ಸ್ಥಾನ?:
1996ರಲ್ಲಿ ಭಾರತ ನೆರೆಯ ಪಾಕಿಸ್ತಾನಕ್ಕೆ ಪರಮಾಪ್ತ ರಾಷ್ಟ್ರದ ಸ್ಥಾನಮಾನ ನೀಡಿತ್ತು. ವಿಶ್ವ ವ್ಯಾಪಾರ ಸಂಘಟನೆಯ ವ್ಯಾಪಾರಕ್ಕೆ ಸಂಬಂಧಿಸಿದ ಸಾಮಾನ್ಯ ಒಪ್ಪಂದದ (ಗ್ಯಾಟ್) ಅಡಿಯಲ್ಲಿ ಈ ಸ್ಥಾನಮಾನ ನೀಡಲಾಗುತ್ತದೆ. ಈ ಒಪ್ಪಂದದಡಿಯಲ್ಲಿ, ಪರಸ್ಪರ ವ್ಯಾಪಾರ ಅಭಿವೃದ್ಧಿಯ ದೃಷ್ಟಿಯಿಂದ ಉಭಯ ರಾಷ್ಟ್ರಗಳ ನಡುವೆ ಸೀಮಾ ಸುಂಕ ಕಡಿಮೆ ಮಾಡಲಾಗಿತ್ತು.
ಎಷ್ಟಿದೆ ವಹಿವಾಟು?:
2016-17ರಲ್ಲಿ 2.27 ಶತಕೋಟಿ ಡಾಲರ್ ಇದ್ದ ಭಾರತ-ಪಾಕ್ ನಡುವಿನ ವ್ಯಾಪಾರ ಪ್ರಮಾಣ, 2017-18ರಲ್ಲಿ 2.41 ಶತಕೋಟಿ ಡಾಲರ್‌ಗೆ ಏರಿಕೆಯಾಗಿತ್ತು. ಭಾರತ ಕಳೆದ ಹಣಕಾಸು ವರ್ಷದಲ್ಲಿ 48.85 ಕೋಟಿ ಡಾಲರ್ ಮೌಲ್ಯದ ಸರಕನ್ನು ಪಾಕಿಸ್ತಾನದಿಂದ ಆಮದು ಮಾಡಿಕೊಂಡಿದ್ದರೆ, 1.92 ಶತಕೋಟಿ ಡಾಲರ್ ಮೌಲ್ಯದ ಸರಕನ್ನು ರಫ್ತು ಮಾಡಿತ್ತು.
ಪರಿಣಾಮ ಏನು?:
ಪಾಕಿಸ್ತಾನಕ್ಕೆ ನೀಡಲಾಗಿದ್ದ ಪರಮಾಪ್ತ ರಾಷ್ಟ್ರದ ಸ್ಥಾನಮಾನ ಹಿಂಪಡೆದಿರುವ ಪರಿಣಾಮ, ಪಾಕಿಸ್ತಾನದಿಂದ ಭಾರತಕ್ಕೆ ಬರುವ ಸರಕುಗಳಿಗೆ ಸೀಮಾ ಸುಂಕ ಹೆಚ್ಚಳವಾಗಲಿದೆ. ಪಾಕಿಸ್ತಾನದಿಂದ ಬರುವ ಯಾವುದೇ ಸರಕುಗಳಿಗೆ ಹೆಚ್ಚಿನ ಸೀಮಾ ಸುಂಕ ವಿಧಿಸಬಹುದಾಗಿದ್ದು, ಪಾಕಿಸ್ತಾನದ ಆರ್ಥಿಕತೆಗೆ ಹೊಡೆತ ನೀಡಲಿದೆ.
ಭಾರತವು ಮುಖ್ಯವಾಗಿ ಹತ್ತಿ, ರಾಸಾಯನಿಕಗಳು, ತರಕಾರಿ, ಕಬ್ಬಿಣ ಮತ್ತು ಉಕ್ಕನ್ನು ಪಾಕಿಸ್ತಾನಕ್ಕೆ ರಫ್ತು ಮಾಡುತ್ತಿದ್ದರೆ, ಹಣ್ಣುಗಳು, ಸಿಮೆಂಟ್, ಚರ್ಮ, ರಾಸಾಯನಿಕಗಳು ಮತ್ತು ಸಂಬಾರ ಪದಾರ್ಥಗಳನ್ನು ಪಾಕಿಸ್ತಾನ ಭಾರತಕ್ಕೆ ರಫ್ತು ಮಾಡುತ್ತಿದೆ.