ಮೇಕ್ ಮೈ ಟ್ರಿಪ್ ‘ದೀಪ’ಬೆಳಗಿದ ಕಲ್ರಾ ಯಶೋಗಾಥೆ!

By Web DeskFirst Published Jul 28, 2018, 6:22 PM IST
Highlights

ಮೇಕ್ ಮೈ ಟ್ರಿಪ್ ಆದಾಯ ಎಷ್ಟು ಗೊತ್ತಾ?

ಮುಳುಗುತ್ತಿದ್ದ ಕಂಪನಿಗೆ ದೀಪ್ ಕಲ್ರಾ ಆಸರೆ

ಅತೀ ದೊಡ್ಡ ಆನ್ ಲೈನ್ ಟ್ರಾವೆಲ್ ಸಂಗ್ರಾಹಕ ಸಂಸ್ಥೆ

ನ್ಯಾಸ್‌ಡ್ಯಾಕ್ ಸಂಸ್ಥೆಯ ಪಟ್ಟಿಯಲ್ಲಿ ಮೇಕ್ ಮೈ ಟ್ರಿಪ್ ಹೆಸರು 

ಹನ್ನೆರಡರಲ್ಲಿ ಒಂದು ವಿಮಾನ ಬುಕ್ಕಿಂಗ್ ಇಲ್ಲೇ ಆಗೋದು

ಬೆಂಗಳೂರು(ಜು.28): ಅದೊಂದು ಕಾಲವಿತ್ತು. ರೈಲ್ವೇ, ವಿಮಾನ ಟಿಕೆಟ್ ಬುಕ್ ಮಾಡಲೂ ಗಂಟೆಗಟ್ಟಲೆ ಕ್ಯೂ ನಿಲ್ಲಬೇಕಿತ್ತು. ಆದರೀಗ ಎಲ್ಲವೂ ಬೆರಳ ತುದಿಯಲ್ಲಿ ಲಭ್ಯವಿದೆ. ಸಾಮಾನ್ಯರಿಗೆ ಟಿಕೆಟ್ ಬುಕ್ಕಿಂಗ್ ಸುಲಭ ಮಾಡಿಕೊಟ್ಟ ಡಾಟ್‌ಕಾಮ್ ಜಗತ್ತಿನಲ್ಲಿ ನೂರಾರು ಕಂಪೆನಿಗಳು ತಲೆ ಎತ್ತಿವೆ. ಅವುಗಳ ನಡುವೆ ತೀವ್ರ ಪೈಪೋಟಿ ಇದೆ. ಈ ಸ್ಪರ್ಧೆಗೆ ಮುಖಾಮುಖಿಯಾಗಿ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಕ್ಷೇತ್ರದ ಲೀಡರ್‌ನಂತಿರುವುದು ‘ಮೇಕ್ ಮೈ ಟ್ರಿಪ್ ಡಾಟ್ ಕಾಮ್’. ಈ ಡಾಟ್ ಕಾಮ್‌ನ ಹಿಂದಿರುವುದು ದೀಪ್ ಕಲ್ರಾ ಸಕ್ಸಸ್ ಸ್ಟೋರಿ. 

ಹೈದರಾಬಾದ್‌ನಲ್ಲಿ ಹುಟ್ಟಿದ ದೀಪ್ ಕಲ್ರಾ ಎಕನಾಮಿಕ್ಸ್ ಪದವೀಧರ. ಅಹಮಬಾದ್‌ನ ಐಐಎಂನಿಂದ ಎಂಬಿಎ ಪದವಿ ಪಡೆದವರು. ವೃತ್ತಿ ಬದುಕಿಗೆ ಪಾದಾರ್ಪಣೆ ಮಾಡಿದ್ದು ಬ್ಯಾಂಕಿಂಗ್ ಕ್ಷೇತ್ರದ ಮೂಲಕ. ಎಂಬಿಎ ಪದವಿ ಪಡೆದ ಬೆನ್ನಲ್ಲೆ ದೀಪ್ ಕಲ್ರಾ ಅವರನ್ನು ಅರಸಿ ಬಂದದ್ದು ಎಬಿಎಂ ಆಮ್ರೋ ಬ್ಯಾಂಕ್‌ನ ಉದ್ಯೋಗ. 

ಈ ಕೆಲಸ ಸಿಕ್ಕಿದಾಗ ದೀಪ್ ಕಾಲು ನೆಲದಲ್ಲಿರಲಿಲ್ಲ. ಅಷ್ಟು ಖುಷಿ ಇತ್ತು. ಆದರೆ ಕೇವಲ ಮೂರೇ ವರ್ಷದಲ್ಲಿ ಈ ಬ್ಯಾಂಕಿಂಗ್ ಕ್ಷೇತ್ರ ತನ್ನ ಕಪ್ ಆಫ್ ಟೀ ಅಲ್ಲ ಅಂತ ಅರಿವಾಯಿತು. ಬದುಕಿನಲ್ಲಿ ತಾನು ಮುಂದುವರಿಯಬೇಕಾದ ಕ್ಷೇತ್ರ ಬೇರೆ ಇದೆ ಅಂತ ತಿಳಿದದ್ದೇ ಬ್ಯಾಂಕಿಂಗ್ ಉದ್ಯೋಗಕ್ಕೆ ಗುಡ್‌ಬೈ ಹೇಳಿದರು. ಮುಂದಿನ ಒಂದು ವರ್ಷ ತನಗೆ ಸರಿಯಾದ ಕ್ಷೇತ್ರ ಯಾವುದು ಅನ್ನುವುದನ್ನು ನಿರ್ಧರಿಸುವುದರಲ್ಲೇ ಕಳೆದುಹೋಯ್ತು.

ಅದು 1995ನೇ ಇಸವಿ. ದೀಪ್ ಕೈಯಲ್ಲಿ ಪ್ರಸಿದ್ಧ ಕಂಪೆನಿಗಳ ಅತ್ಯುತ್ತಮ ಆಫರ್‌ಗಳು. ಆದರೆ ಅವ್ಯಾವುವೂ ಇವರ ಆಗಿದ್ದ ಮನಸ್ಥಿತಿಗೆ ಸರಿ ಹೊಂದುವಂತಿರಲಿಲ್ಲ. ಅಮೆರಿಕಾದ ಎ.ಎಂ.ಎಫ್ ಬೌಲಿಂಗ್ ಕಂಪೆನಿ ಭಾರತದಲ್ಲಿ ಬಂಡವಾಳ ಹೂಡಿಕೆ ಮುಂದಾದಾಗ ಅದರ ನಿರ್ವಹಣೆಯ ಹೊಣೆ ಹೊತ್ತರು. ನಾಲ್ಕು ವರ್ಷಗಳ ಬಳಿಕ ಈ ಕ್ಷೇತ್ರವನ್ನೂ ತೊರೆದು ‘ಜಿ.ಇ ಕ್ಯಾಪಿಟಲ್’ನಲ್ಲಿ ಬ್ಯುಸಿನೆಸ್ ಡೆವಲೆಪ್‌ಮೆಂಟ್ ಮುಖ್ಯಸ್ಥರಾದರು.

ಇಂಟರ್‌ನೆಟ್‌ನ ಮಾಯಾಲೋಕ:
ಅದು 1999ನೇ ಇಸವಿ. ಅಂತರ್ಜಾಲ ಎಂಬ ಆಕರ್ಷಕ ಮಾಯಾಲೋಕ ಆಗಷ್ಟೇ ಜನಪ್ರಿಯವಾಗುತ್ತಿತ್ತು. ಹೊಸತನದ ಹುಡುಕಾಟದಲ್ಲಿರುವವರಿಗೆ ಇಂಟರ್‌ನೆಟ್ ಅನ್ನುವುದು ಒಂದು ಭರವಸೆಯಂತಿತ್ತು. ವಿಭಿನ್ನತೆಗೆ ಸದಾ ತುಡಿಯುತ್ತಿದ್ದ ದೀಪ್‌ಗೂ ಇಂಟರ್‌ನೆಟ್ ಬಗ್ಗೆ ಕುತೂಹಲವಿತ್ತು. ಜಿ.ಇ ಕ್ಯಾಪಿಟಲ್‌ನಲ್ಲಿ ದುಡಿದ ಹಣದಲ್ಲಿ ಒಂದಿಷ್ಟು ಉಳಿತಾಯವಾಗಿತ್ತು. ಅದರಿಂದ ಇಂಟರ್‌ನೆಟ್ ಬಳಸಿ ಏನಾದರೂ ಹೊಸ ಬ್ಯುಸಿನೆಸ್ ಶುರು ಮಾಡೋಣ ಅನ್ನುವ ಯೋಚನೆ ಹುಟ್ಟಿಕೊಂಡಿತು. ಒಂದಿಷ್ಟು ಹಣ ಒಟ್ಟಾಗಿದ್ದೇ ತಡ ದೀಪ್, ಜಿ.ಇ ಕ್ಯಾಪಿಟಲ್ ಉದ್ಯೋಗಕ್ಕೆ ರಾಜೀನಾಮೆ ನೀಡಿದರು.

ಪ್ರಯಾಸದ ಪ್ರಯಾಣದಲ್ಲಿ ಮಿಂಚಿದ ಐಡಿಯಾ:
ನಮ್ಮ ದೇಶದಲ್ಲಿ ರೈಲು, ವಿಮಾನ ಪ್ರಯಾಣದ ಟಿಕೆಟ್ ಬುಕ್ಕಿಂಗ್ ಎಷ್ಟು ಕಷ್ಟ ಅನ್ನುವುದು ಇವರಿಗೆ ತಿಳಿದಿತ್ತು. ಎಷ್ಟೋ ಸಲ ಸ್ವತಃ ದೀಪ್ ಅವರೇ ಇದರಿಂದಾಗಿ ಪೇಚಾಟಕ್ಕಿಟ್ಟುಕೊಂಡಿದ್ದರು. ತಾನ್ಯಾಕೆ ಈ ಒದ್ದಾಟಕ್ಕೆ ಇತಿಶ್ರೀ ಹಾಡಬಾರದು ಎಂಬ ಐಡಿಯಾ ಬಂತು. ಅದನ್ನೇ ಕಾರ್ಯರೂಪಕ್ಕೆ ತರುವ ಇಚ್ಛೆ ಪ್ರಬಲವಾಯ್ತು. ಈ ನಡುವೆ ಇಂಟರ್‌ನೆಟ್ ಬಳಸುತ್ತಿದ್ದ ಹಲವು ಮಂದಿಯನ್ನು ಸಂಪರ್ಕಿಸಿ ಅವರ ಅನುಭವಗಳಿಗೆ ಕಿವಿಯಾದರು ದೀಪ್.

ನಮ್ಮ ದೇಶದ ಜನರಿಗೆ ಟ್ರಾವೆಲ್ ಅನುಭವವನ್ನು ಇನ್ನಷ್ಟು ಸುಂದರ ಹಾಗೂ ಸರಳವಾಗಿಸುವ ನಿಟ್ಟಿನಲ್ಲಿ ಹೊಸತೊಂದು ಪ್ರಯೋಗಕ್ಕೆ ಕೈ ಹಾಕಿದರು. ಆಗ ಇ-ಕಾಮರ್ಸ್ ಅನ್ನುವುದು ನಮ್ಮ ಜನರಿಗೆ ಹೊಸ ವಿಷಯ. ಇ- ಕಾಮರ್ಸ್ ಅನ್ನು ಟ್ರಾವೆಲ್ ಜೊತೆಗೆ ಮಿಕ್ಸ್ ಮಾಡಿ ಹೊಸದೊಂದು ಪ್ರಾಜೆಕ್ಟ್ ರೆಡಿ ಮಾಡಿದರು. ೨೦೦೦ನೇ ಇಸವಿಯಲ್ಲಿ ‘ಮೇಕ್ ಮೈ ಟ್ರಿಪ್’ಹುಟ್ಟಿತು.

ಸಂಕಷ್ಟದ ದಿನಗಳು:
ಈ ನಡುವೆ ಡಾಟ್ ಕಾಮ್‌ಗಳ ಮೇಲೆ ಹೂಡಿಕೆ ಮಾಡುವುದು ನಷ್ಟದ ಬಾಬತ್ತು ಎಂಬ ಸ್ಥಿತಿ ನಿರ್ಮಾಣವಾಯ್ತು. ವಿ.ಸಿ ಎಂಬ ಸಂಸ್ಥೆಯು ಕರಾರಿನಂತೆ 1 ಮಿಲಿಯನ್ ಡಾಲರ್ ಹೂಡಿಕೆ ಮಾಡಲು ಹಿಂದೇಟು ಹಾಕಿತು. ಅದು ಕಷ್ಟದ ಕಾಲ. ಆಗ ದೀಪ್‌ಗಿನ್ನೂ 31 ವರ್ಷ. ಪತ್ನಿ ಮತ್ತು ಮಗು ಇವರ ದುಡಿಮೆಯನ್ನೇ ನೆಚ್ಚಿಕೊಂಡಿದ್ದರು. 

ಜಾಗತಿಕ ಮಟ್ಟದಲ್ಲಿ ಡಾಟ್ ಕಾಮ್ ಬ್ಯುಸಿನೆಸ್‌ನಲ್ಲಿ ತೊಡಗಿಸಿಕೊಳ್ಳುವುದು ಹಗಲು ಕಂಡ ಬಾವಿಯಲ್ಲಿ ಇರುಳು ಬೀಳುವಂತೆ ಎಂಬ ಮನಸ್ಥಿತಿ ಬೆಳೆಯುತ್ತಿತ್ತು. ತಾನು ಆ ಬಾವಿಯಲ್ಲಿ ಬೀಳಲಾರೆ ಎಂಬ ಹುಂಬ ಧೈರ್ಯ ದೀಪ್ ಅವರದು. ಇಂಥದ್ದೊಂದು ಸಂಕಷ್ಟದ ಸ್ಥಿತಿಯಲ್ಲೂ ಅವರು ಸೋಲಿನಿಂದ ಹೊರಬರುವ ಬಗೆಗೇ ಯೋಚಿಸಿದರು. ತನ್ನ ಇಬ್ಬರು ಮ್ಯಾನೇಜರ್‌ಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸಗಾರರ ಸಂಖ್ಯೆಯನ್ನು ಅರ್ಧಕ್ಕೆ ಇಳಿಸಿದರು.

ದೀಪಕ್ ಹಾಗೂ ಇವರ ಬೆಂಬಲಕ್ಕೆ ನಿಂತ ಪಾಲುದಾರರು ಸಂಬಳವಿಲ್ಲದೇ 18 ತಿಂಗಳು ದುಡಿಯಲು ನಿರ್ಧರಿಸಿದರು. ದೂರದೃಷ್ಟಿಯ ಕಾರ್ಯತಂತ್ರ ಹಾಗೂ ಬುದ್ಧಿವಂತ ನಿರ್ಧಾರಗಳಿಂದ ಮೇಕ್ ಮೈ ಟ್ರಿಪ್‌ನ ದೆಸೆ ಬದಲಾಯ್ತು. ಡಾಟ್ ಕಾಮ್ ಸುನಾಮಿಯ ನಡುವೆಯೂ ಮೇಕ್ ಮೈ ಟ್ರಿಪ್ ಬದುಕುಳಿಯಿತು. ಸ್ಥಿತಿ ಬದಲಾಯ್ತು. ನೆಲಕ್ಕಚ್ಚಿದ್ದ ಸಂಸ್ಥೆ ಅಭಿವೃದ್ಧಿಯತ್ತ ಮುಖ ಮಾಡಿತು. 

ದೈತ್ಯ ಸಂಸ್ಥೆಯಾಗಿ ಬೆಳೆದ ಮೇಕ್ ಮೈ ಟ್ರಿಪ್ ಎಲ್ಲ ಸವಾಲುಗಳನ್ನೂ ಯಶಸ್ವಿಯಾಗಿ ಎದುರಿಸಿದ ಸಂಸ್ಥೆ ಒಂದು ಹಂತದ ಬಳಿಕ ತನ್ನ ಪರಿಧಿಯನ್ನು ವಿಸ್ತರಿಸಿತು. ಇದೇ ಹೊತ್ತಿಗೆ ಐಆರ್‌ಸಿಟಿಸಿ (ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಆ್ಯಂಡ್ ಟೂರಿಸಮ್ ಕಾರ್ಪೊರೇಶನ್) ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ಕಿಂಗ್ ಸೇವೆ ಆರಂಭಿಸಲು ಹೊರಟು ವಿಫಲವಾಯ್ತು. 

ಈ ಅವಕಾಶವನ್ನು ಬಳಸಿಕೊಂಡ ಮೇಕ್ ಮೈ ಟ್ರಿಪ್ ಐಆರ್‌ಸಿಟಿಸಿ ಪಾಲುದಾರಿಕೆಯಲ್ಲಿ ಭಾರತೀಯರಿಗೆ ಸುಲಭವಾಗಿ ರೈಲ್ವೇ ಟಿಕೆಟ್ ಬುಕ್ ಮಾಡುವ ವ್ಯವಸ್ಥೆ ಒದಗಿಸಿತು. ಮುಂದೆ ಬಜೆಟ್ ವಿಮಾನಗಳ ಬುಕ್ಕಿಂಗ್‌ಗೇ ಈ ಡಾಟ್ ಕಾಮ್ ಕೈ ಹಾಕಿತು. ನಿಧಾನಕ್ಕೆ ಭಾರತೀಯ ಟ್ರಾವೆಲ್ ಮಾರ್ಕೆಟ್‌ನಲ್ಲಿ ತನ್ನ ಛಾಪನ್ನೊತ್ತುವಲ್ಲಿ ಮೇಕ್ ಮೈ ಟ್ರಿಪ್ ಯಶಸ್ವಿಯಾಯಿತು.

ಹನ್ನೆರಡರಲ್ಲಿ ಒಂದು ವಿಮಾನ ಬುಕ್ಕಿಂಗ್:
ಈ ಎಲ್ಲಾ ಬೆಳವಣಿಗೆಗಳಿಂದ ಕಂಪೆನಿಯ ಆದಾಯದಲ್ಲಿ ಹೆಚ್ಚಿನ ಏರಿಕೆಯಾಯ್ತು. ಮೇಕ್ ಮೈ ಟ್ರಿಪ್‌ನ ಬ್ಯುಸಿನೆಸ್ ಯಾವ ಮಟ್ಟಿನ ಯಶಸ್ಸು ಸಾಧಿಸಿತು ಅಂದರೆ, ಇಂದಿಗೂ ಕನಿಷ್ಠ ಪ್ರತೀ ಹನ್ನೆರಡು ವಿಮಾನಗಳಲ್ಲಿ ಒಂದು ವಿಮಾನದ ಬುಕ್ಕಿಂಗ್ ಮೇಕ್ ಮೈ ಟ್ರಿಪ್‌ನಿಂದಲೇ ಆಗಿರುತ್ತದೆ. ಈ ಎಲ್ಲ ಬೆಳವಣಿಗೆಗಳ ನಡುವೆಯೇ ಕಂಪನಿ ಕೇವಲ ಒಂದು ವರ್ಷದಲ್ಲಿ ಕಂಪೆನಿಯ ಗ್ರಾಹಕರ ಸಂಖ್ಯೆ 2 ಲಕ್ಷ ಮೀರಿತ್ತು.

ಅಂತಾರಾಷ್ಟ್ರೀಯ ಸಾಧನೆ: 2008 ರಿಸೆಷನ್ ಸಮಯದಲ್ಲಿ ಕಂಪನಿಯ ಮೌಲ್ಯ 1000 ಕೋಟಿಗೆ ಬೆಳೆಯಿತು. ಇದೇ ವರ್ಷ ಕಂಪೆನಿ 34 ಕೋಟಿ 44 ಲಕ್ಷದಷ್ಟು ಆದಾಯ ಗಳಿಸಿತು. ವಿಮಾನ ಬುಕ್ಕಿಂಗ್ ಜೊತೆಗೆ ಕಾರ್ ಬುಕ್ಕಿಂಗ್ ಸರ್ವಿಸ್, ಹಲವಾರು ಟ್ರಾವೆಲ್ ಸಂಬಂಧಿಸಿದ ಆ್ಯಪ್‌ಗಳು ಸೇರಿದಂತೆ ಕಂಪೆನಿಯ ಕಾರ್ಯನಿರ್ವಹಣೆ ವಿಸ್ತರಿಸಿತು. ಆಗಸ್ಟ್ 2010 ಕಂಪನಿ ಇತಿಹಾಸದಲ್ಲೇ ಮಹತ್ವದ ಮೈಲುಗಲ್ಲು. 

ಅಮೆರಿಕಾದ ಎರಡನೇ ಅತಿದೊಡ್ಡ ಸ್ಟಾಕ್ ಎಕ್ಸ್‌ಚೇಂಜ್ ಸಂಸ್ಥೆ ನ್ಯಾಸ್‌ಡ್ಯಾಕ್ ಸಂಸ್ಥೆಯ ಪಟ್ಟಿಯಲ್ಲಿ ಮೇಕ್ ಮೈ ಟ್ರಿಪ್ ಹೆಸರು ಸೇರ್ಪಡೆಯಾಯ್ತು. ಇದರಿಂದ ಭಾರತೀಯ ಮೂಲದ ಐಟಿ ಸೆಕ್ಟರ್‌ಗಳಲ್ಲಿ ವಿದೇಶಿ ಹೂಡಿಕೆ ಸರಾಗವಾಯ್ತು. ಸ್ಟಾರ್ಟ್‌ಅಪ್‌ಗಳಲ್ಲಿ ತೊಡಗಿಸಿಕೊಂಡ ದೇಶದ ಯುವ ಬ್ಯುಸಿನೆಸ್‌ಮೆನ್‌ಗಳಿಗೂ ಇದರಿಂದ ಅನುಕೂಲವಾಯ್ತು.

ಈಗ ಮೇಕ್ ಮೈ ಟ್ರಿಪ್ ಸಂಸ್ಥೆ goibibo.com redbus.in ಸಂಸ್ಥೆಗಳ ಮಾಲಿಕತ್ವವನ್ನೂ ನಿಭಾಯಿಸುತ್ತಿದೆ. ಭಾರತದ ಅತೀ ದೊಡ್ಡ ಆನ್ ಲೈನ್ ಟ್ರಾವೆಲ್ ಸಂಗ್ರಾಹಕ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ನ್ಯೂಯಾರ್ಕ್‌ನಲ್ಲೂ ಕಂಪೆನಿಯ ಶಾಖೆ ಯಶಸ್ವಿಯಾಗಿ ಕಾರ್ಯಾಚರಿಸುತ್ತಿದೆ. 2017ರ ಹಣಕಾಸು ವರ್ಷದಲ್ಲಿ ಕಂಪನಿಯ ಆದಾಯ 3079 ಕೋಟಿ 60 ಲಕ್ಷ ದಾಖಲಿಸಿತ್ತು. ಈ ವರ್ಷ ಜೂನ್ ಅಂತ್ಯಕ್ಕೆ ಕಂಪನಿಯ ಆದಾಯ 980 ಕೋಟಿಗೂ ಅಧಿಕವಿದೆ. ಸದ್ಯಕ್ಕೀಗ ಸಂಸ್ಥೆಯಲ್ಲಿ ಮೂರೂವರೆ ಸಾವಿರಕ್ಕೂ ಅಧಿಕ ಉದ್ಯೋಗಿಗಳಿದ್ದಾರೆ. ವಿಭಿನ್ನ ಯೋಚನೆಯ ಸ್ಟಾರ್ಟ್‌ಅಪ್‌ಗಳನ್ನೂ ಕಂಪೆನಿ ಪ್ರೋತ್ಸಾಹಿಸುತ್ತಿದೆ.

click me!