ಗ್ರೀನ್‌ ಪಟಾಕಿ ನಗರದಲ್ಲಿ ಯಶ ಕಾಣುತ್ತಾ? ಗ್ರೀನ್ ಪಟಾಕಿ ಎಂದ್ರೇನು?

By Kannadaprabha NewsFirst Published Oct 23, 2019, 8:51 AM IST
Highlights

ಅತ್ಯಂತ ಹೆಚ್ಚು ಬೆಳಕು ಮತ್ತು ಶಬ್ದವನ್ನು ಹೊರಚೆಲ್ಲುವ ಹಾಗೂ ಪರಿಸರಕ್ಕೆ ಮಾರಕವಾಗುವ ಪಟಾಕಿಗಳಿಗೆ ಪರ್ಯಾಯವಾಗಿ ಗ್ರೀನ್‌ ಪಟಾಕಿಗಳನ್ನು ಪರಿಚಯಿಸಲಾಗಿದೆ. ಈ ಪಟಾಕಿಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ದಿಸೆಯಲ್ಲಿ ಸ್ಥಳೀಯ ಆಡಳಿತ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ. 

ರಮೇಶ್‌ ಬನ್ನಿಕುಪ್ಪೆ

ಬೆಂಗಳೂರು [ಅ.23]:  ಪರಿಸರ ಮಾಲಿನ್ಯ ನಿಯಂತ್ರಿಸುವುದಕ್ಕಾಗಿ ನೂತನವಾಗಿ ಆವಿಷ್ಕರಿಸಿರುವ ‘ಗ್ರೀನ್‌ ಪಟಾಕಿ’ ಬೆಂಗಳೂರು ನಗರದಲ್ಲಿ ಈ ಬಾರಿ ‘ಟುಸ್‌ ಪಟಾಕಿ’ಯಾಗುವ ಸಾಧ್ಯತೆಯಿದೆ.

ಅತ್ಯಂತ ಹೆಚ್ಚು ಬೆಳಕು ಮತ್ತು ಶಬ್ದವನ್ನು ಹೊರಚೆಲ್ಲುವ ಹಾಗೂ ಪರಿಸರಕ್ಕೆ ಮಾರಕವಾಗುವ ಪಟಾಕಿಗಳಿಗೆ ಪರ್ಯಾಯವಾಗಿ ಗ್ರೀನ್‌ ಪಟಾಕಿಗಳನ್ನು ಪರಿಚಯಿಸಲಾಗಿದೆ. ಈ ಪಟಾಕಿಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ದಿಸೆಯಲ್ಲಿ ಸ್ಥಳೀಯ ಆಡಳಿತ ಕಣ್ಣು ಮುಚ್ಚಿ ಕುಳಿತಿದೆ. ಈ ಹಿನ್ನೆಲೆಯಲ್ಲಿ ಗ್ರೀನ್‌ ಪಟಾಕಿಗೆ ನಗರದಲ್ಲಿ ಮಾರುಕಟ್ಟೆಯೇ ಇಲ್ಲದಂತಾಗಿದೆ.

ಪಟಾಕಿ ಮಾರಾಟಗಾರರ ಸಂಘದ ಅಧ್ಯಕ್ಷ ಪರಂಜ್ಯೋತಿ ಅವರು, ಈ ಬಾರಿ ಬೆಂಗಳೂರು ಪಟಾಕಿ ಮಾರುಕಟ್ಟೆಗೆ ಒಟ್ಟಾರೆ ಪೂರೈಕೆಯಾಗಿರುವ ಪಟಾಕಿಯ ಪೈಕಿ ಶೇ.40ರಷ್ಟುಗ್ರೀನ್‌ ಪಟಾಕಿಯಿದೆ. ಆದರೆ, ಸದ್ಯಕ್ಕೆ ಈ ಗ್ರೀನ್‌ ಪಟಾಕಿಗೆ ಹೆಚ್ಚಿನ ಬೇಡಿಕೆಯೇ ಕಂಡು ಬಂದಿಲ್ಲ. ಸಾಮಾನ್ಯವಾಗಿ ದೀಪಾವಳಿ ಹಬ್ಬಕ್ಕೆ ಒಂದು ವಾರ ಮುನ್ನವೇ ಚಿಲ್ಲರೆ ವ್ಯಾಪಾರಿಗಳಿಂದ ವಿವಿಧ ಪಟಾಕಿಗಳಿಗೆ ಬೇಡಿಕೆ ಬರುತ್ತದೆ. ಸಗಟು ವ್ಯಾಪಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಗ್ರೀನ್‌ ಪಟಾಕಿ ದಾಸ್ತಾನು ಹೊಂದಿದ್ದರೂ, ಚಿಲ್ಲರೆ ವ್ಯಾಪಾರಿಗಳು ಹಾಗೂ ಗ್ರಾಹಕರು ಸಾಮಾನ್ಯ ಪಟಾಕಿಯ ಬಗ್ಗೆಯೇ ಆಸ್ಥೆ ಹೊಂದಿದ್ದಾರೆ. ಇದಕ್ಕೆ ಕಾರಣ ಗ್ರೀನ್‌ ಪಟಾಕಿ ಬಗ್ಗೆ ಮಾಹಿತಿ ಕಡಿಮೆ ಎಂದು ಹೇಳುತ್ತಾರೆ.

ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕೌನ್ಸಿಲ್‌ ಆಫ್‌ ಸೈಂಟಿಫಿಕ್‌ ಆ್ಯಂಡ್‌ ಇಂಡಸ್ಟ್ರೀಯಲ್‌ ರಿಸಚ್‌ರ್‍(ಸಿಎಸ್‌ಐಆರ್‌) ಇತ್ತೀಚೆಗೆ ‘ಗ್ರೀನ್‌ ಪಟಾಕಿ’ಯನ್ನು ಲೋಕಾರ್ಪಣೆ ಮಾಡಿತ್ತು. ಸಿಎಸ್‌ಐಆರ್‌ ಸರ್ಟಿಫೈ ಕೈಗಾರಿಕೆಗಳು ಹಸಿರು ಪಟಾಕಿ ಉತ್ಪಾದನೆಯಲ್ಲಿ ತೊಡಗಿವೆ. ಈ ಕಂಪನಿಗಳ ಪಟಾಕಿಗಳು ಈಗಾಗಲೇ ಮಾರುಕಟ್ಟೆಗೂ ಬಂದಿದೆ ಎಂದು ಪರಂಜ್ಯೋತಿ ಹೇಳುತ್ತಾರೆ.

ಪರಂ ಜ್ಯೋತಿ ಅವರ ಪ್ರಕಾರ ಪ್ರಸಕ್ತ ವರ್ಷ ಸುಮಾರು 50 ಕೋಟಿಯಷ್ಟುಪಟಾಕಿ ನಗರದಲ್ಲಿ ಮಾರಾಟವಾಗುವ ಅಂದಾಜಿದ್ದು, ಈ ಪೈಕಿ ಶೇ.40ರಷ್ಟುಗ್ರೀನ್‌ ಪಟಾಕಿಯನ್ನು ಸಗಟು ಮಾರಾಟಗಾರರು ಕಂಪನಿಗಳಿಂದ ಖರೀದಿ ಮಾಡಿ ದಾಸ್ತಾನು ಮಾಡಿದ್ದಾರೆ. ಆದರೆ, ಗ್ರಾಹಕರಿಗೆ ಈ ಪಟಾಕಿಯ ಬಗ್ಗೆ ಜಾಗೃತಿಯೇ ಇಲ್ಲದಿರುವುದರಿಂದ ಅವುಗಳ ಮಾರಾಟವಾಗುವ ಬಗ್ಗೆ ಪಟಾಕಿ ಮಾರಾಟಗಾರರಿಗೆ ಆತಂಕ ಆರಂಭವಾಗಿದೆ.

ಗ್ರೀನ್‌ ಪಟಾಕಿಯನ್ನು ಉತ್ಪಾದಿಸಿದರೆ ಸಾಲದು ಈ ಬಗ್ಗೆ ಸಮರ್ಪಕ ಜಾಗೃತಿಯನ್ನು ಮೂಡಿಸಬೇಕು. ಈ ದಿಸೆಯಲ್ಲಿ ಸರ್ಕಾರಿ ಸಂಸ್ಥೆಗಳು ಪಟಾಕಿ ಮಾರಾಟಗಾರರ ನೆರವಿಗೆ ಧಾವಿಸಬೇಕು ಎಂದು ಅವರು ಹೇಳುತ್ತಾರೆ.

ಕಡಿಮೆ ಪ್ರಮಾಣದಲ್ಲಿ ರಾಸಾಯನಿಕ:

ಸುಪ್ರೀಂಕೋರ್ಟ್‌ ಸೂಚನೆ ಮೇರೆಗೆ ಪಟಾಕಿ ತಯಾರಿಕೆಗೆ ಬಳಕೆ ಮಾಡುತ್ತಿದ್ದ ಬೇರಿಯಂ ನೈಟ್ರೇಟ್‌ ರಾಸಾಯನಿಕವನ್ನು ಕೇಂದ್ರ ಸರ್ಕಾರ ನಿಷೇಧಿಸಿತು. ಅದಕ್ಕೆ ಬದಲಾಗಿ ನೀರಿನಲ್ಲಿ ಕರಗಬಲ್ಲ ರಸಾಯನಿಕಗಳು, ಕಬ್ಬಿಣದ ವೆಲ್ಡಿಂಗ್‌ಗೆ ಬಳಸುವ ಥರ್ಮೈಟ್‌ ಮತ್ತು ಅಲ್ಯೂಮಿನಿಯಂ ಬಳಸಿ ಗ್ರೀನ್‌ ಪಟಾಕಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಸೀಸದ ಅಂಶ ಬಳಕೆ ಮಾಡಿರುವುದಿಲ್ಲ. ಸಾಮಾನ್ಯ ಪಟಾಕಿಗಿಂತ ಕಡಿಮೆ ಬೆಳಕನ್ನು ಹೊರ ಸೂರುವ ಈ ಪಟಾಕಿಗಳು ಸಣ್ಣ ಪ್ರಮಾಣದ್ದಾಗಿರಲಿವೆ. ಇವುಗಳಿಗೆ ಅತ್ಯಂತ ಕಡಿಮೆ ಪ್ರಮಾಣದ ಗಂಧಕ ಬಳಕೆ ಮಾಡಿದ್ದು ಸಂಪೂರ್ಣವಾಗಿ ದೂಳನ್ನು ನಿಯಂತ್ರಿಸುತ್ತದೆ.

ಶಬ್ದ ಮಾಲಿನ್ಯ ಕಡಿಮೆ:

ಈ ಹಸಿರು ಪಟಾಕಿಗಳು ಹಿಂದಿನ ಸಾಮಾನ್ಯ ಪಟಾಕಿಗಿಂತಲೂ ಶೇ. 30 ರಷ್ಟುಮಾಲಿನ್ಯವನ್ನು ತಗ್ಗಿಸುತ್ತವೆ. ಅಲ್ಲದೆ, ಅತ್ಯಂತ ಕಡಿಮೆ ಶಬ್ದ ಬರಲಿದ್ದು, ಕಡಿಮೆ ದೂಳಿನ ಕಣಗಳನ್ನು ಹೊರ ಚೆಲ್ಲುತ್ತವೆ. ಈ ಪಟಾಕಿಗಳು 125 ಡಿಸೆಬಲ್‌ ಶಬ್ದ ಮಾಡುತ್ತವೆ. (ಸಾಮಾನ್ಯ ಪಟಾಕಿ 160 ಡಿಸೆಬಲ್‌ ಇರುತ್ತದೆ) ನೆಲ ಚಕ್ರ, ಹೂಬುಟ್ಟಿಸೇರಿದಂತೆ ಹಲವು ಪಟಾಕಿಗಳನ್ನು ಪ್ರಸಕ್ತ ವರ್ಷದಲ್ಲಿ ಸಿದ್ಧ ಪಡಿಸಲಾಗಿದೆ. ಗ್ರೀನ್‌ ಪಟಾಕಿಗಳ ಪಾಕೆಟ್‌ಗಳ ಮೇಲೆ ಕ್ಯೂಆರ್‌ ಕೋಡ್‌ ಇರಲಿದ್ದು, ಖರೀದಿ ಮಾಡುವವರಿಗೆ ನೆರವಾಗಲಿದೆ.

ಮಾಲಿನ್ಯ ನಿಯಂತ್ರಣ ಮಂಡಳಿಗೂ ಸ್ಪಷ್ಟತೆಯಿಲ್ಲ!

ಗ್ರೀನ್‌ ಅಥವಾ ಹಸಿರು ಪಟಾಕಿ ಎಂದರೆ ಏನು ಎಂಬ ಬಗ್ಗೆ ಸಾಮಾನ್ಯ ಜನರಿಗೆ ಸಮರ್ಪಕ ಮಾಹಿತಿ ಇಲ್ಲ. ಇದಕ್ಕೆ ಕಾರಣ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬಿಬಿಎಂಪಿಯಂತಹ ಸಂಸ್ಥೆಗಳು ಈ ಬಗ್ಗೆ ಜಾಗೃತಿ ಮೂಡಿಸಿಲ್ಲ ಎಂಬುದು ಆರೋಪ.

ಆದರೆ, ಈ ಜಾಗೃತಿ ಮೂಡಿಸುವ ಕಾರ್ಯವನ್ನು ಏಕೆ ಮಾಡಿಲ್ಲ ಎಂದು ಪರಿಸರ ಮಾಲಿನ್ಯ ಮಂಡಳಿಯ ಅಧಿಕಾರಿಗಳನ್ನು ಕೇಳಿದರೆ ದೊರೆಯುವ ಉತ್ತರ- ‘ನಮಗೂ ಗ್ರೀನ್‌ ಪಟಾಕಿ ಎಂದರೆ ಯಾವುದು ಎಂಬ ಬಗ್ಗೆ ಸ್ಪಷ್ಟತೆಯಿಲ್ಲ’ ಎನ್ನುತ್ತಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪರಿಸರ ಮಾಲಿನ್ಯ ನಿಯಂತ್ರಣಾ ಮಂಡಳಿಯ ಪ್ರಭಾರಿ ಅಧ್ಯಕ್ಷ ಸಂದೀಪ್‌ ದವೆ ಅವರು, ‘ಕೇಂದ್ರ ಸರ್ಕಾರ ಇತ್ತೀಚೆಗೆ ಗ್ರೀನ್‌ ಪಟಾಕಿಗಳನ್ನು ಪರಿಚಯಿಸಿದೆ. ಆದರೆ, ಯಾವುದು ಗ್ರೀನ್‌ ಪಟಾಕಿ, ಯಾವುದು ಅಲ್ಲ ಎಂಬುದರ ಬಗ್ಗೆ ಈವರೆಗೂ ಸ್ಪಷ್ಟತೆ ಲಭ್ಯವಾಗಿಲ್ಲ. ಸ್ಪಷ್ಟತೆ ಲಭ್ಯವಾದ ಬಳಿಕ ಈ ಬಗ್ಗೆ ರಾಜ್ಯಾದ್ಯಂತ ಪ್ರಚಾರ ಕಾರ್ಯ ಮಾಡುತ್ತೇವೆ’ ಎನ್ನುತ್ತಾರೆ. ಮಾಲಿನ್ಯ ನಿಯಂತ್ರಣ ಮಂಡಳಿಗೆ ಗ್ರೀನ್‌ ಪಟಾಕಿ ಯಾವುದು ಎಂಬುದು ಎಂದು ಗೊತ್ತಿಲ್ಲದ ಮೇಲೆ ಈ ಬಗ್ಗೆ ಜಾಗೃತಿ ಮೂಡಿಸುವುದಾದರೂ ಹೇಗೆ ಎಂದು ಪಟಾಕಿ ಮಾರಾಟಗಾರರು ಪ್ರಶ್ನಿಸುತ್ತಾರೆ.

click me!