ಹತ್ಯೆ ಬಳಿಕ ವೀಸಿ ಮನೆಯಲ್ಲಿ ನಡೆದಿತ್ತು ಪಾರ್ಟಿ!

By Kannadaprabha NewsFirst Published Oct 18, 2019, 8:09 AM IST
Highlights

ಅಲಯನ್ಸ್‌ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ಅಯ್ಯಪ್ಪ ದೊರೆ ಅವರನ್ನು ಹತ್ಯೆಗೈಯಲು ಹಂತಕರು ಬರೋಬ್ಬರಿ ಮೂರು ತಿಂಗಳಿನಿಂದ ಹಿಂಬಾಲಿಸಿದ್ದಎನ್ನುವ ವಿಚಾರ ಬಹಿರಂಗವಾಗಿದೆ. 

ಬೆಂಗಳೂರು [ಅ.18]:  ಆನೇಕಲ್‌ ತಾಲೂಕಿನ ಅಲಯನ್ಸ್‌ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ಅಯ್ಯಪ್ಪ ದೊರೆ ಅವರನ್ನು ಹತ್ಯೆಗೈಯಲು ಹಂತಕರು ಬರೋಬ್ಬರಿ ಮೂರು ತಿಂಗಳಿನಿಂದ ಹಿಂಬಾಲಿಸಿದ್ದರು. ಹತ್ಯೆ ಮಾಡಿದ ಬಳಿಕ ಅಲಯನ್ಸ್‌ ವಿವಿ ಹಾಲಿ ಕುಲಪತಿ, ಪ್ರಕರಣದ ಪ್ರಮುಖ ಆರೋಪಿ ಸುಧೀರ್‌ ಅಂಗೂರ್‌ ನಿವಾಸದಲ್ಲಿ ರಾತ್ರಿ ಇಡೀ ಪಾರ್ಟಿ ಮಾಡಿದ್ದರು. ಸುಧೀರ್‌ ಜತೆ ಸೆಲ್ಫಿಯನ್ನೂ ತೆಗೆಸಿಕೊಂಡಿದ್ದರು.

ಮೂರು ತಿಂಗಳಿಂದ ಅಯ್ಯಪ್ಪ ದೊರೆ ಹಿಂಬಾಲಿಸಿದ್ದ ವಿ.ವಿ.ಯ ನೌಕರ ಸೂರಜ್‌ ನೇತೃತ್ವದ ಹಂತಕ ತಂಡಕ್ಕೆ, ಪ್ರತಿ ದಿನ ರಾತ್ರಿ ಊಟ ಮಾಡಿದ ಬಳಿಕ ಅವರು ವಾಯು ವಿಹಾರಕ್ಕೆ ಬರುವುದು ಗೊತ್ತಾಯಿತು. ಈ ವೇಳೆಯಲ್ಲೇ ಹತ್ಯೆ ನಡೆಸಲು ಹೊಂಚು ಹಾಕಿದ ಹಂತಕರು, ಮಂಗಳವಾರ ಬೆಳಗ್ಗೆಯಿಂದ ಬೆನ್ನು ಬಿದ್ದಿದ್ದರು. ಅಯ್ಯಪ್ಪ ಅವರು ಅರಣ್ಯ ಇಲಾಖೆ ವಸತಿ ಗೃಹ ಹಾಗೂ ಜಯನಗರದಲ್ಲಿ ಸ್ನೇಹಿತರನ್ನು ಭೇಟಿಯಾಗಿ ರಾತ್ರಿ 8ಕ್ಕೆ ಮನೆಗೆ ಮರಳಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇತ್ತ ಅವರ ಮನೆ ಮುಂದೆಯೇ ರಾತ್ರಿ ಎರಡು ಬೈಕ್‌ಗಳಲ್ಲಿ ಸೂರಜ್‌ ತಂಡ ಕಾಯುತ್ತಿತ್ತು. ಆದರೆ ರಾತ್ರಿ 10.20ರ ವೇಳೆಗೆ ಮನೆಯಲ್ಲಿ ಲೈಟ್‌ಗಳು ಆಫ್‌ ಆದ ತಕ್ಷಣ ಆರೋಪಿಗಳು, ಬೇಸರದಿಂದ ಹೊರಡಲು ಅಣಿಯಾಗಿದ್ದರು. ಅಷ್ಟರಲ್ಲಿ ಅಯ್ಯಪ್ಪ ಅವರು, ವಾಯು ವಿಹಾರಕ್ಕೆ ಹೊರ ಬಂದಿದ್ದಾರೆ. ಇದಾದ ಐದು ನಿಮಿಷದಲ್ಲೇ ಎಚ್‌ಎಂಟಿ ಮೈದಾನದ ಬಳಿ ಅವರ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಆರೋಪಿಗಳು ಕಾಲ್ಕಿತ್ತಿದ್ದಾರೆ. ಅಯ್ಯಪ್ಪ ಅವರ ದೇಹದಲ್ಲಿ 18 ಚೂರಿ ಇರಿತದ ಗಾಯಗಳು ಪತ್ತೆಯಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹತ್ಯೆ ಬಳಿಕ ಸೂರಜ್‌, ನೇರವಾಗಿ ಬಿಟಿಎಂ ಲೇಔಟ್‌ನಲ್ಲಿರುವ ಅಲಯನ್ಸ್‌ ವಿವಿಯ ಕುಲಪತಿ ಸುಧೀರ್‌ ಮನೆಗೆ ತೆರಳಿದ್ದಾನೆ. ‘ಅಂದುಕೊಂಡಂತೆ ಒಂದು ಕೆಲಸವಾಯಿತು. ಮತ್ತೊಂದು ಮುಗಿಸಿ ಬಿಡಿ’ ಎಂದು ಸುಧೀರ್‌ ಅಪ್ಪಣೆ ಕೊಟ್ಟಿದ್ದಾನೆ. ಕುಲಪತಿಗಳ ಮನೆಯಲ್ಲೇ ರಾತ್ರಿ 11.30ರಿಂದ ಮುಂಜಾನೆ 4.30ರವರೆಗೆ ಸೂರಜ್‌ ಇದ್ದ. ಅಲ್ಲದೆ ಹತ್ಯೆಯಿಂದ ಖುಷಿಗೊಂಡಿದ್ದ ಆತ, ಸುಧೀರ್‌ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಪಾರ್ಟಿ ಮಾಡಿದ್ದ. ಬಳಿಕ ಕುಲಪತಿಯಿಂದ 25 ಸಾವಿರ ರು. ಪಡೆದು ಹೋಟೆಲ್‌ಗೆ ಬಂದು ಸೂರಜ್‌ ತಂಗಿದ್ದ. ಇತ್ತ ಆತನ ಸೂಚನೆ ಮೇರೆಗೆ ಸಹಚರರು, ಮಧುಕರ್‌ ಅಂಗೂರ್‌ ಮನೆ ಬಳಿ ಹತ್ಯೆಗೆ ಸಜ್ಜಾಗಿದ್ದರು. ಅಷ್ಟರಲ್ಲಿ ಮಧುಕರ್‌ ಮನೆಗೆ ಪೊಲೀಸರು ರಕ್ಷಣೆ ನೀಡಿದ ಪರಿಣಾಮ ಕೊಲೆ ಸಂಚು ವಿಫಲವಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೊಲೆಗೆ ಸುಪಾರಿ ಪಡೆದಿದ್ದ ಸೂರಜ್‌, ತನ್ನ ನಾಲ್ವರು ಸ್ನೇಹಿತರಿಗೆ ಹಣದಾಸೆ ತೋರಿಸಿ ಕೃತ್ಯದಲ್ಲಿ ಬಳಸಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.

ವೀಸಿ ಸುಲಿಗೆಗೆ ಹೊಂಚು ಹಾಕಿದ್ದ ಹಂತಕ!

ಅಲಯನ್ಸ್‌ ವಿವಿ ನೌಕರ ಸೂರಜ್‌, ತನ್ನ ಪೋಷಕರ ಜತೆ ಮುನಿರೆಡ್ಡಿಪಾಳ್ಯದಲ್ಲಿ ನೆಲೆಸಿದ್ದ. ಆತನ ತಂದೆ ಗ್ರಂಧಿಗೆ ಅಂಗಡಿ ಇಟ್ಟುಕೊಂಡಿದ್ದಾರೆ. 2010ರಲ್ಲಿ ಎಂಬಿಎ ವ್ಯಾಸಂಗ ಮುಗಿಸಿದ ಬಳಿಕ ಅಲಯನ್ಸ್‌ ವಿವಿಯಲ್ಲಿ ಕೆಲಸಕ್ಕೆ ಸೇರಿದ್ದ ಸೂರಜ್‌, ತನ್ನ ಸೇವೆ ಮೂಲಕ ಕುಲಪತಿ ಸುಧೀರ್‌ ಅವರ ವಿಶ್ವಾಸ ಗಳಿಸಿದ್ದ. ಹಣದಾಸೆಗೆ ಕೊಲೆ ಕೃತ್ಯದಲ್ಲಿ ಪಾಲ್ಗೊಂಡಿದ್ದಾನೆ. ಅಲ್ಲದೆ ಈ ಹತ್ಯೆ ಕೃತ್ಯವನ್ನು ಮುಂದಿಟ್ಟು ಬ್ಲ್ಯಾಕ್‌ ಮೇಲ್‌ ಮೂಲಕ ಸುಧೀರ್‌ ಅವರಿಂದ ನೂರಾರು ಕೋಟಿ ಸುಲಿಗೆ ಮಾಡಲು ಸಹ ಸೂರಜ್‌ ಸಂಚು ರೂಪಿಸಿದ್ದ. ಹೀಗಾಗಿಯೇ ತನ್ನ ಸ್ನೇಹಿತರಿಗೆ ವಿವಿಯಲ್ಲಿ ಕುಟುಂಬದವರಿಗೆ ಕೆಲಸ ಹಾಗೂ ಕೈ ತುಂಬ ಹಣದ ಆಮಿಷವೊಡ್ಡಿ ಕೊಲೆಯಲ್ಲಿ ಆತ ಬಳಸಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಸುಧೀರ್‌ ಬಗ್ಗೆ ಆರಂಭದಲ್ಲೇ ಅನುಮಾನ

ಈ ಹತ್ಯೆ ಪ್ರಕರಣದ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ, ಆರಂಭದಲ್ಲೇ ಸುಧೀರ್‌ ಮೇಲೆ ಬಗ್ಗೆ ಶಂಕೆ ಮೂಡಿದೆ. ಅಲ್ಲದೆ ಮೃತ ಅಯ್ಯಪ್ಪ ಪತ್ನಿ ಪಾವನಾ ಹಾಗೂ ವಿವಿಯ ಕೆಲ ಉದ್ಯೋಗಿಗಳು ಕೂಡ ಸುಧೀರ್‌ ಮೇಲೆ ಸಂದೇಹ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ .12 ಕೋಟಿ ಹಣದ ವಿಚಾರವಾಗಿ ಅಯ್ಯಪ್ಪ ಮತ್ತು ಸುಧೀರ್‌ ಮಧ್ಯೆ ಗಲಾಟೆ ನಡೆದಿದ್ದ ಸಂಗತಿ ಗೊತ್ತಾಯಿತು. ಈ ಸುಳಿವು ಪಡೆದು ಚುರುಕಾದ ಪೊಲೀಸರು, ಸುಧೀರ್‌ ಮೊಬೈಲ್‌ ಕರೆಗಳನ್ನು ಪರಿಶೀಲಿಸಿದಾಗ ಆರೋಪಿಗಳ ಜಾಡು ಸಿಕ್ಕಿದೆ. ಅಯ್ಯಪ್ಪ ಹತ್ಯೆ ಬಳಿಕ ಆರೋಪಿ ಸುಧೀರ್‌ ಮನೆಗೆ ತೆರಳಿ ರಾತ್ರಿ ಇಡೀ ಪಾರ್ಟಿ ಮಾಡಿದ್ದ. ಹೀಗಾಗಿ ಆತ ಸುಲಭವಾಗಿ ಸಿಕ್ಕಿಬಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯದಶಮಿ ಹಬ್ಬದ ವೇಳೆ ಗಲಾಟೆ:

ಮುನಿರೆಡ್ಡಿ ಪಾಳ್ಯದಲ್ಲಿ ‘ಶ್ರೀರಾಮ ಯುವಕರ ಸಂಘ’ ಕಟ್ಟಿಕೊಂಡಿದ್ದ ಸೂರಜ್‌, ಇದರಲ್ಲಿ ಏಳೆಂಟು ಮಂದಿ ಸದಸ್ಯರನ್ನು ಮಾಡಿಕೊಂಡಿದ್ದ. ವಿಜಯದಶಮಿ ಹಬ್ಬದ ದಿನ ಮೆರವಣಿಗೆ ವಿಚಾರದಲ್ಲಿ ಪೊಲೀಸರ ಜತೆ ಆತ ಗಲಾಟೆ ಸಹ ಮಾಡಿಕೊಂಡಿದ್ದ ಎಂದು ಮೂಲಗಳು ಹೇಳಿವೆ.

ಅಲಯನ್ಸ್‌ ವಿವಿ ಮಾಜಿ ಕುಲಪತಿ ಅಯ್ಯಪ್ಪ ದೊರೆ ಕೊಲೆ ಕೃತ್ಯವನ್ನು ತ್ವರಿತವಾಗಿ ಭೇದಿಸಿದ ತಂಡಕ್ಕೆ ಅಭಿನಂದನೆ. ಮುಖ್ಯಮಂತ್ರಿಗಳು ಹಾಗೂ ಡಿಜಿ ಅವರು ಸಹ ಪೊಲೀಸರನ್ನು ಪ್ರಶಂಶಿಸಿದ್ದಾರೆ. ತನಿಖಾ ತಂಡಕ್ಕೆ ಒಂದು ಲಕ್ಷ ರು. ಬಹುಮಾನ ನೀಡುತ್ತೇನೆ. ತಪ್ಪಿಸಿಕೊಂಡಿರುವ ಉಳಿದ ಆರೋಪಿಗಳನ್ನು ಶೀಘ್ರವೇ ಪತ್ತೆ ಹಚ್ಚುತ್ತೇವೆ.

-ಭಾಸ್ಕರ್‌ ರಾವ್‌, ನಗರ ಪೊಲೀಸ್‌ ಆಯುಕ್ತ.

 ನನ್ನ ಪ್ರಾಣ ಉಳಿಸಿದ ಪೊಲೀಸರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ವಿವಿ ಕಟ್ಟಿಬೆಳೆಸುವಲ್ಲಿ ನಾನು ತುಂಬಾ ಶ್ರಮಿಸಿದ್ದೇನೆ. ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡಿ ಸುಧೀರ್‌ ಅಂಗೂರ್‌ ಪ್ರಕರಣ ದಾಖಲಿಸಿದ್ದ. ಕಾನೂನು ಹೋರಾಟದಲ್ಲಿ ನನಗೆ ಜಯ ಸಿಗುತ್ತದೆ ಎಂಬ ಕಾರಣಕ್ಕೆ ನನ್ನ ಕೊಲೆ ಸಂಚು ರೂಪಿಸಿದ್ದನ್ನು ಕೇಳಿ ಆಘಾತವಾಯಿತು.

-ಮಧುಕರ್‌ ಅಂಗೂರ್‌, ಅಲಯನ್ಸ್‌ ವಿವಿ ಕುಲಪತಿ ಸೋದರ.

click me!