ಸಾವಿನ ಸನ್ನಿಧಿಯಲ್ಲಿ ಬದುಕಿನ ಬಳ್ಳಿ;ಜಗತ್ತಿನಲ್ಲಿ ಅತ್ಯಂತ ಆಶ್ಚರ್ಯದ ಸಂಗತಿ!

By Kannadaprabha News  |  First Published May 2, 2021, 9:12 AM IST

ಈ ಜಗತ್ತಿನಲ್ಲಿ ಅತ್ಯಂತ ಆಶ್ಚರ್ಯದ ಸಂಗತಿ ಯಾವುದು ಅಂತ ಯಕ್ಷ ಕೇಳಿದಾಗ ಅದಕ್ಕೆ ಧರ್ಮರಾಯ ಕೊಟ್ಟಉತ್ತರ ಬಹಳ ಪ್ರಸಿದ್ಧವಾದದ್ದು. ಧರ್ಮರಾಯ ಹೇಳುತ್ತಾನೆ: ಕಣ್ಣ ಮುಂದೆಯೇ ಸಾವಿನ ಮೆರವಣಿಗೆ ನಡೆಯುತ್ತಿದೆ. ಆದರೂ ಜನ ತಮಗೆ ಸಾವೇ ಇಲ್ಲವೆಂಬಂತೆ ಬದುಕುತ್ತಿದ್ದಾರೆ. ಇದಕ್ಕಿಂತ ಆಶ್ಚರ್ಯಕರವಾದದ್ದು ಮತ್ತೊಂದಿಲ್ಲ.


ಜಯರಾಮ

ಬದುಕಿನ ಶಕ್ತಿಯೇ ಅದು. ಯಾರ ಸಾವಿನಿಂದಲೂ ಮತ್ತೊಂದು ಬದುಕು ವಿಚಲಿತವಾಗುವುದಿಲ್ಲ. ಅದು ಬದುಕುವ ಮತ್ತೊಂದು ಹಾದಿಯನ್ನು ಕಂಡುಕೊಳ್ಳಲು ನೋಡುತ್ತದೆ. ದುರ್ಗಮವಾದ ಗುಹೆಯೊಳಗೆ ಸಿಕ್ಕಿಬಿದ್ದ ಹತ್ತು ಮಂದಿಯಲ್ಲಿ ಒಂಬತ್ತು ಮಂದಿ ಸತ್ತು ಬಿದ್ದ ನಂತರವೂ ಹತ್ತನೆಯವನು ಅಲ್ಲಿಂದ ಬದುಕಿ ಬರುವ ದಾರಿಯನ್ನು ಹುಡುಕುತ್ತಿರುತ್ತಾನೆ.

Latest Videos

undefined

ಇವತ್ತು ನಾವು ನಂಬಬೇಕಾಗಿರುವುದು ಧರ್ಮರಾಯ ಕೊಟ್ಟಉತ್ತರವನ್ನೇ. ನಮ್ಮ ಕಣ್ಮುಂದೆ ಏನೇ ನಡೆಯುತ್ತಿದ್ದರೂ ನಾವು ಬದುಕಿನತ್ತಲೇ ಹೊರಳಬೇಕು. ಸುದೀರ್ಘವಾದ ಕತ್ತಲೆಯ ಸುರಂಗದಂಥ ಹಾದಿಯ ಕೊನೆಯಲ್ಲಿ ಒಂದು ಬೆಳಕಿನ ಕಿಡಿ ಕಂಡರೂ ಸಾಕು, ಅದರಾಚೆಗೆ ಜೀವನವಿದೆ ಎಂದು ನಂಬುವ ಪ್ರಯಾಣಿಕನ ಸ್ಥಿತಿ ನಮ್ಮದು.

ಬುದ್ಧ ಹೇಳಿದ ಒಂದು ಕತೆ ಹೀಗಿದೆ: ಒಬ್ಬನನ್ನು ಹುಲಿ ಅಟ್ಟಿಸಿಕೊಂಡು ಬರುತ್ತಿದೆ. ಆತ ಓಡುತ್ತಿದ್ದಾನೆ. ಅವನ ಎದುರಿಗೆ ಪ್ರಪಾತ ಕಾಣಿಸುತ್ತಿದೆ. ಒಂದು ದ್ರಾಕ್ಷಿಯ ಬಳ್ಳಿ ಆ ಪ್ರಪಾತಕ್ಕೆ ಇಳಿಬಿದ್ದಿದೆ. ಆತ ಆ ಬಳ್ಳಿಯನ್ನು ಹಿಡಿದುಕೊಂಡು ಪ್ರಪಾತಕ್ಕೆ ಇಳಿಯುತ್ತಾನೆ. ಇನ್ನೇನು ಅರ್ಧ ಇಳಿದಿದ್ದಾನೆ ಎನ್ನುವಾಗ ಹುಲಿಯ ಗುಟುಕು ಕೇಳಿಸುತ್ತದೆ. ತಿರುಗಿ ನೋಡಿದರೆ ಪ್ರಪಾತದ ಕೆಳಗೊಂದು ಹುಲಿ ಅವನನ್ನು ತಿನ್ನಲು ಕಾಯುತ್ತಿದೆ. ತಲೆಯೆತ್ತಿ ನೋಡಿದರೆ ಅಟ್ಟಿಸಿಕೊಂಡು ಬಂದ ಹುಲಿ ಇನ್ನೂ ಅಲ್ಲಿಯೇ ಇದೆ. ಈ ಮಧ್ಯೆ ಎರಡು ಇಲಿಗಳು ಅದೆಲ್ಲಿಂದಲೋ ಬಂದು ತಮ್ಮ ಗರಗಸದಂಥ ಹಲ್ಲುಗಳಿಂದ ಆತ ಹಿಡಿದುಕೊಂಡಿದ್ದ ದ್ರಾಕ್ಷಿಯ ಬಳ್ಳಿಯನ್ನು ಕತ್ತರಿಸಲು ಆರಂಭಿಸುತ್ತವೆ. ಆತ ಮತ್ತೇನೂ ತೋಚದೇ ತಿರುಗಿ ನೋಡಿದರೆ ಅದೇ ಬಳ್ಳಿಯ ಪಕ್ಕದಲ್ಲೇ ಒಂದು ಹಣ್ಣಾದ ದ್ರಾಕ್ಷಿಯ ಗೊಂಚಲು ಕಾಣಿಸುತ್ತದೆ. ಅವನು ಕಷ್ಟಪಟ್ಟು ಬಾಗಿ ಆ ಗೊಂಚಲಿನಿಂದ ಒಂದು ಹಣ್ಣು ಕಿತ್ತುಕೊಂಡು ತಿನ್ನುತ್ತಾನೆ. ಅಷ್ಟುಸಿಹಿಯಾದ ದ್ರಾಕ್ಷಿಯನ್ನು ಅವನೆಂದೂ ತಿಂದಿರುವುದಿಲ್ಲ.

ಮೇಲೂ ಕೆಳಗೂ ಸಾವೇ ಕಾಯುತ್ತಿದ್ದರೂ ಬದುಕಿನ ಸಣ್ಣ ಸುಖವನ್ನು ಬಿಟ್ಟುಕೊಡಲಾಗದ ಸ್ಥಿತಿಯನ್ನು ವರ್ಣಿಸುವ ಈ ಕತೆಯನ್ನು ಬುದ್ಧ ಹೇಳಿದ್ದು ತನ್ನ ಶಿಷ್ಯರಿಗೆ. ನಮ್ಮ ಸ್ಥಿತಿಯೂ ಅದಕ್ಕಿಂತ ಭಿನ್ನವಾಗಿಲ್ಲ. ಆದರೆ ನಾವು ಕಂಗೆಡಬೇಕಾಗಿಲ್ಲ ಅನ್ನುವುದಕ್ಕೂ ನಮ್ಮ ಮುಂದೆಯೇ ಉದಾಹರಣೆಯಿದೆ.

ಕೊರೋನಾ ನಮಗೊಂದು ಶಿಸ್ತು ಕಲಿಸಲು ಹೊರಟಿದೆ ನಮ್ಮ ಅದೃಷ್ಟವೆಂದರೆ ಅದು ಗಾಳಿಯಿಂದಲೋ ನೀರಿನಿಂದಲೋ ಹಬ್ಬುತ್ತಿಲ್ಲ. ನಮ್ಮ ಅದೃಷ್ಟವೆಂದರೆ ಗುಂಪುಗೂಡದೇ ಹೋದರೆ, ಮಾಸ್ಕ್‌ ಧರಿಸಿಕೊಂಡಿದ್ದರೆ, ನಮ್ಮಷ್ಟಕ್ಕೇ ನಾವು ಇದ್ದುಬಿಟ್ಟರೆ ಅದು ನಮ್ಮನ್ನು ಸಮೀಪಿಸುವುದಿಲ್ಲ. ನಮ್ಮ ಅದೃಷ್ಟವೆಂದರೆ ಅದು ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ.

ಆದರೆ ಇವತ್ತು ನಾವು ಅದನ್ನು ಹುಡುಕಿಕೊಂಡು ಹೋಗುತ್ತಿದ್ದೇವೆ. ಗುಂಪು ಸೇರುತ್ತೇವೆ. ಗುಂಪು ಸೇರಲಿಕ್ಕೆಂದೇ ನಾವು ಹುಟ್ಟಿದ್ದೇವೆ ಎಂದುಕೊಳ್ಳುತ್ತೇವೆ. ಅಷ್ಟಕ್ಕೂ ನಾವು ಗುಂಪು ಸೇರುವುದು ಯಾವ ಸದ್ಭಾವನೆಯಿಂದಲೂ ಅಲ್ಲ. ಯಾವುದೋ ರಾಜಕೀಯ ಮೇಳ, ಯಾರದೋ ಚುನಾವಣೆ, ಮತ್ಯಾರದೋ ಮದುವೆ, ಇನ್ನಾರದೋ ಮಸಣಯಾತ್ರೆಗೆ ಹೋಗುತ್ತೇವೆ. ಗೆಳೆಯರೂ ಬಂಧುಗಳೂ ಹೆಚ್ಚೆಂದರೆ ಸ್ಮಶಾನದ ತನಕ ಮಾತ್ರ ಬರಬಲ್ಲರು ಅನ್ನುತ್ತಿದ್ದರು. ಈಗ ನೋಡಿದರೆ ಅವರು ಅಲ್ಲಿಂದಲೂ ಮುಂದೆ ಬರಬಲ್ಲರು ಎಂದು ಕೊರೋನಾ ತೋರಿಸಿಕೊಟ್ಟಿದೆ.

ಕಳೆದ ಎರಡು ತಿಂಗಳಲ್ಲಿ ನಾವು ಅತೀ ಹೆಚ್ಚು ಮಾತುಗಳನ್ನು ಕೇಳಿದ್ದು ಕೊರೋನಾದ ಕುರಿತೇ. ನಾವೇನೇ ಮಾತಾಡಿದರೂ ಅದು ತಿರುಗಿ ತಿರುಗಿ ಕೊರೋನಾದ ಬಳಿಗೇ ಸುಳಿದು, ನಮ್ಮ ಬದುಕಿನ ಪಾಡನ್ನು ಕೊರೋನಾದ ತಕ್ಕಡಿಯಲ್ಲಿಟ್ಟು ತೂಗುವುದನ್ನು ನಾವು ಅಭ್ಯಾಸ ಮಾಡಿಕೊಂಡೆವು. ಹುಟ್ಟಿದವನಿಗೆ ಸಾವು ತಪ್ಪದು ಎಂಬ ಅನಾದಿಕಾಲದ ಮಾತನ್ನು ಸುತ್ತಾಡುವವನಿಗೆ ಕೊರೋನಾ ತಪ್ಪದು ಎಂದು ನಮ್ಮೊಳಗೇ ಬದಲಾಯಿಸಿಕೊಂಡು ಮನೆಯೊಳಗೇ ಇರಲು ಅಭ್ಯಾಸ ಮಾಡಿಕೊಳ್ಳತೊಡಗಿದೆವು,

ಲಾಕ್‌ಡೌನು, ಕ್ವಾರಂಟೈನು, ಡಿಸ್ಟೆನ್ಸಿಂಗು, ಮಾಸ್ಕ್‌, ಸ್ಯಾನಿಟೈಸರ್‌, ಕಂಟೈನ್‌ಮೆಂಟ್‌, ಹೋಮ್‌ ಕ್ವಾರಂಟೈನು- ಮುಂತಾದ ಪದಗಳು ಕಳೆದ ಸಲದ ತರಗತಿಯಲ್ಲಿ ಬಳಸಲು ಕಲಿತಿದ್ದೇವೆ. ಈ ಸಲ ಕಲಿತ ಹೊಸಪದಗಳು- ವ್ಯಾಕ್ಸೀನು, ಆಕ್ಸಿಜನ್‌ ಮತ್ತು ವೆಂಟಿಲೇಟರ್‌.

***

ಪಾರ್ಕಿನಲ್ಲಿ ಯಾರೋ ಯಾರಿಗೋ ಹೇಳುತ್ತಿದ್ದರು:

ಈ ಕೊರೋನಾದಿಂದಾಗಿ ಇವತ್ತು ಭೇಟಿಯಾದವರು ನಾಳೆ ಮತ್ತೆ ಸಿಗುತ್ತೇವೆ ಅನ್ನುವ ಗ್ಯಾರಂಟಿ ಇಲ್ಲ. ಬದುಕು ನೀರ ಮೇಲಿನ ಗುಳ್ಳೆ. ಯಾರು ಯಾವಾಗ ಬೇಕಿದ್ದರೂ ಹೋಗಬಹುದು. ಮೊನ್ನೆ ರಾತ್ರಿ ಫೋನ್‌ ಮಾಡಿ ಒಂಚೂರು ಜ್ವರ ಇದೆ ಕಣಯ್ಯ, ಆಸ್ಪತ್ರೆಗೆ ಹೋಗ್ತಾ ಇದ್ದೀನಿ ಅಂತ ಹೇಳಿ ಹೋದ ನನ್ನ ಗೆಳೆಯ ಆಸ್ಪತ್ರೆಯಿಂದ ಹೆಣವಾಗಿ ಬಂದ.

ಹಾಗೆ ಮಾತಾಡುತ್ತಿದ್ದವರಿಗೆ ಸುಮಾರು ಅರವತ್ತು ವರ್ಷವಿದ್ದೀತು. ಇಬ್ಬರೂ ಮಾಸ್ಕ್‌ ಹಾಕಿಕೊಂಡಿದ್ದರು. ಎಲ್ಲರಂತೆ ಅದನ್ನು ಗಲ್ಲಕ್ಕೆ ಸಿಕ್ಕಿಸಿಕೊಂಡು ಮೂಗು ಬಾಯಿ ಎರಡೂ ಕಾಣುವಂತೆ ಮಾಡಿಕೊಂಡಿದ್ದರು. ಅವರ ಮಾತು ಮುಂದುವರಿದು, ಈ ಕಾಲದ ಹುಡುಗರಿಗೆ ಎಚ್ಚರಿಕೆಯಿಲ್ಲ, ಸರ್ಕಾರ ದುಡ್ಡು ಮಾಡಲಿಕ್ಕೆಂದೇ ಸೃಷ್ಟಿಮಾಡಿದ ಕಾಯಿಲೆ ಇದು, ವೆಂಟಿಲೇಟರ್‌ ಹಾಳಾಗಿ ಹೋಗ್ಲಿ ಸುಡೋದಕ್ಕೆ ಸ್ಮಶಾನವೇ ಸಿಕ್ತಿಲ್ಲವಂತೆ, ಇದನ್ನೆಲ್ಲ ನೋಡೋ ಬದಲು ಒಂದೇ ಸಲ ಸತ್ತು ಹೋಗೋದು ಒಳ್ಳೇದು, ತರಕಾರಿಗೆ ಕ್ಯೂ ನಿಲ್ತಾರಲ್ಲ, ಬುದ್ಧಿ ಇದೆಯಾ, ತರಕಾರಿ ಮಾರೋರೂ ಬದುಕೋದು ಬೇಡ್ವೇ - ಎಂದು ಎಷ್ಟುಆಯಾಮಗಳು ಸಾಧ್ಯವೋ ಅಷ್ಟನ್ನೂ ಚರ್ಚೆಯ ಅಂಗಳಕ್ಕೆ ತಂದು ಹಾಕಿತು.

ಸ್ಮಶಾನದ ದಾರಿಗಳೆಲ್ಲಾ ಅಳುತ್ತಿವೆ! 

ಇಬ್ಬರೂ ಕೊರೋನಾವನ್ನು ಮತ್ಯಾರಿಗೋ ಬಂದಿರುವ ಕಾಯಿಲೆ, ತಾವಿಬ್ಬರೂ ಅದರಿಂದ ಮುಕ್ತರು, ತಮಗೆ ಅದು ಬರಲಿಕ್ಕೆ ಸಾಧ್ಯವೇ ಇಲ್ಲ ಎಂಬಂತೆ ನೋಡುತ್ತಿದ್ದರು ಎಂಬುದು ಅವರ ಮಾತಿನಿಂದಲೂ ವರ್ತನೆಯಿಂದಲೂ ಸ್ಪಷ್ಟವಾಗಿ ಗ್ರಹಿಸಬಹುದಾಗಿತ್ತು. ಒಂದು ವೈರಸ್ಸು ಇಷ್ಟೆಲ್ಲ ಮಾಡಲು ಸಾಧ್ಯ ಎಂದು ಅವರು ನಂಬುವುದಕ್ಕೇ ತಯಾರಿರಲಿಲ್ಲ. ಅವರ ಪ್ರಕಾರ ಇದೆಲ್ಲ ವ್ಯಾಪಾರೀಕರಣಗೊಂಡ ರಾಜಕಾರಣ ಮತ್ತು ವೈದ್ಯ ಕ್ಷೇತ್ರದ ಪಿತೂರಿ.

ಇಂಥ ಮಾತುಗಳನ್ನು ನಾವು ಹಲವು ಮೂಲಗಳಿಂದ ಕೇಳುತ್ತಿರುತ್ತೇವೆ. ಆ ವೃದ್ಧರು ಪಾರ್ಕಿನ ಕಲ್ಲುಬೆಂಚಲ್ಲಿ ಕುಳಿತು ಆಡಿದ ಮಾತುಗಳನ್ನೇ ನಾವು ಸೋಷಲ್‌ ಮೀಡಿಯಾದ ಕಲ್ಲು ಬೆಂಚುಗಳ ಮೇಲೆ ಕೂತು ಆಡುತ್ತಿರುತ್ತೇವೆ ಮತ್ತು ಅಂಥದ್ದೇ ಮಾತುಗಳನ್ನು ಮತ್ತೊಬ್ಬರು ಆಡಿದಾಗ ಅದನ್ನೂ ನಂಬುತ್ತೇವೆ.

***

ಕೊರೋನಾದ ಬಗ್ಗೆ ಮಾತಾಡುವ ಯಾರಿಗೇ ಆಗಲಿ, ಕೊರೋನಾ ಹೇಗೆ ಬಂತು, ಹೇಗೆ ಬರುತ್ತದೆ, ಯಾರಿಗೆ ಬರುತ್ತದೆ, ಯಾಕೆ ಬರುತ್ತದೆ, ಯಾವಾಗ ಬರುತ್ತದೆ, ಯಾವ ವಯಸ್ಸಿನವರಿಗೆ ಬರುತ್ತದೆ, ಬಂದವರ ಪೈಕಿ ಯಾರು ಸಾಯುತ್ತಾರೆ, ಯಾರು ಬದುಕಿ ಬರುತ್ತದೆ ಎಂಬುದು ಖಚಿತವಾಗಿ ಗೊತ್ತಿಲ್ಲ. ಇಲ್ಲಿ ಎಲ್ಲವೂ ನಡೆಯುತ್ತಿರುವುದು ಅಂದಾಜಿನ ಮೇಲೆ!

ಈ ಅಂದಾಜೇ ಇಲ್ಲದ ಅಂದಾಜು ನಮ್ಮ ಅಂದಾಜು ತಪ್ಪುವಂತೆ ಮಾಡುತ್ತಿದೆ. ಇದು ನಮಗೆ ಅಂದಾಜಾಗುತ್ತಿಲ್ಲ ಅಷ್ಟೇ.

 

click me!