Bill Gates: ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಬಿಲ್ ಗೇಟ್ಸ್ ವಿರುದ್ಧ ವಾದ ಮಾಡಿ ಭಾರತೀಯರೊಬ್ಬರು ಗೆದ್ದಿದ್ದರು. ಆಗ ಬಿಲ್ ಅವರು ತಪ್ಪಾಗಿದೆ ಎಂದು ಡಾಲರ್ ಮೇಲೆ ಬರೆದುಕೊಟ್ಟಿದ್ದರಂತೆ.
ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಬಿಲ್ ಗೇಟ್ಸ್ ಅವರ ( Bill Gates ) ಮುಂದೆ ಮೈಕ್ರೋಸಾಫ್ಟ್ ಇಂಡಿಯಾದ ಮಾಜಿ ಅಧ್ಯಕ್ಷ ರವಿ ವೆಂಕಟೇಸನ್ ಗೆದ್ದಿದ್ದಾರಂತೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಹೇಳಿಕೊಂಡಿದ್ದಾರೆ.
ಕರಿಯರ್ ಪೀಕ್‌ನಲ್ಲಿದ್ದಾಗಲೇ ರಾಜೀನಾಮೆ ಕೊಟ್ರು
ರವಿ ವೆಂಕಟೇಸನ್ ಅವರು 2004 ರಿಂದ 2011ರವರೆಗೆ ಮೈಕ್ರೋಸಾಫ್ಟ್ ಇಂಡಿಯಾದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ ಕಾರ್ಪೊರೇಟ್ ಕರಿಯರ್‌ನಲ್ಲಿ ಅತ್ಯುನ್ನತ ಯಶಸ್ಸು ಇದ್ದಾಗಲೇ ಅವರು ಕೆಲಸ ಬಿಟ್ಟು, ಸಾಮಾಜಿಕ ಕೆಲಸ ಮಾಡಲು ಮುಂದಾಗಿದ್ದರು.
ಡಾಲರ್‌ಗೆ ಸಹಿ ಹಾಕಿದ್ರು
ಶ್ರೀಷ್ಟಿ ಸಾಹು ಅವರೊಂದಿಗಿನ ಪಾಡ್‌ಕಾಸ್ಟ್‌ನಲ್ಲಿ, ವೆಂಕಟೇಸನ್ ಅವರು ಸಾಕಷ್ಟು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ವಿರುದ್ಧ ಒಮ್ಮೆ ಚರ್ಚೆ ಮಾಡಿ ಗೆದ್ದಿದ್ದೆ, ಆ ಕ್ಷಣ ಹೇಗಿತ್ತು ಎಂದು ವಿವರಿಸಿದ್ದಾರೆ, ಅಷ್ಟೇ ಅಲ್ಲದೆ ನೆನಪಿಗೋಸ್ಕರ ಗೇಟ್ಸ್ ಅವರು ಒಂದು ಡಾಲರ್‌ನ ಬಿಲ್‌ಗೆ ಸಹಿ ಮಾಡಿ ನೀಡಿದ್ದರಂತೆ. ಇದು 2006 ಅಥವಾ 2007ರಲ್ಲಿ ನಡೆದಿತ್ತು.
ವಾದ ಶುರುವಾಯ್ತು
“ಬಿಲ್ ಗೇಟ್ಸ್ ಮತ್ತು ಅವರ ಅಂದಿನ ಪತ್ನಿ ಮೆಲಿಂಡಾ ಭಾರತಕ್ಕೆ ಭೇಟಿ ಕೊಟ್ಟಿದ್ದರು. ಬಿಲ್ ಅವರು ದೆಹಲಿಗೆ ಬೆಳಗ್ಗೆ ಬೇಗ ಬಂದಿದ್ದರು. ನಾವು ಚೆನ್ನೈಗೆ ಹೋಗೋಣ ಎಂದು ವಿಮಾನ ಹತ್ತಿದೆವು, ಆಗ ಅವರಿಗೆ ಸುಸ್ತಾಗಿತ್ತು. ನನಗಂತೂ ಅವರಿಗಿಂತ ಜಾಸ್ತಿ ಸುಸ್ತಾಗಿತ್ತು. ರಾತ್ರಿ 11.30 ಆಗಿತ್ತ” ಎಂದು ರವಿ ಹೇಳಿದ್ದಾರೆ. ಅಲ್ಲಿ ಬಿಲ್ ಗೇಟ್ಸ್, ಮೆಲಿಂಡಾ, ವೆಂಕಟೇಸನ್ ವಿಮಾನದಲ್ಲಿದ್ದು, ಎಟಿಸಿ ಅನುಮತಿಗಾಗಿ ಕಾಯುತ್ತಿದ್ದರು. ಆಗ ಒಂದು ಸಣ್ಣ ವಿಷಯದ ಬಗ್ಗೆ ರವಿ, ಬಿಲ್ ಗೇಟ್ಸ್ ನಡುವೆ ವಾದ ಶುರುವಾಯಿತು.
ವಾದ ಬಿಡಲಿಲ್ಲ
“ಬಿಲ್ ಒಳ್ಳೆಯ ಮೈಂಡ್ ಸೆಟ್‌ನಲ್ಲಿ ಇರಲಿಲ್ಲ. ಆಗ ನಾವು ವಾದ ಮಾಡಿದೆವು, ಈಗ ಅದನ್ನು ಯೋಚಿಸಿದರೆ ಆ ವಾದ ಸಿಕ್ಕಾಪಟ್ಟೆ ಸಿಲ್ಲಿ ಎಂದು ಕಾಣುತ್ತದೆ. ಆದರೆ ಬಿಲ್‌ಗೆ ವಾದದಲ್ಲಿ ಅವರು ಸೋಲುವುದು ಇಷ್ಟವಿರಲಿಲ್ಲ. ಕಂಪನಿಯ ಫೌಂಡರ್ ಜೊತೆ ವಾದ ಮಾಡುವಾಗ ಕೆಲವರು ವಾದ ಮಾಡೋದಿಲ್ಲ, ಸುಮ್ಮನೆ ಆಗೋದುಂಟು. ಆದರೆ ನಾನು ಆ ರೀತಿ ಇರಲಿಲ್ಲ. ಈ ಬಾರಿ ನಾನು, ‘ಅವನು ಬಿಲ್ ಗೇಟ್ಸ್ ಆಗಿದ್ದರೆ ಏನಂತೆ?’ ಅಂದುಕೊಂಡೆ, ವಾದ ಮಾಡಿದೆ, ಬಿಡಲಿಲ್ಲ” ಎಂದು ಹೇಳಿದ್ದಾರೆ.
ತಪ್ಪಾಗಿದೆ ಎಂದಿದ್ದರು
“ಕೊನೆಗೆ ಅವರು, ‘ಸರಿ, ನೀನು ಸರಿ ಇರಬಹುದು ಅಂತ ಹೇಳಿ ಸೈಲೆಂಟ್ ಆದರು. ಆಗ ಮೆಲಿಂಡಾ ಗೇಟ್ಸ್ 1 ಡಾಲರ್‌ನ ಬಿಲ್ ಅನ್ನು ಬಿಲ್‌ಗೇಟ್ಸ್‌ಗೆ ಕೊಟ್ಟು, “ಬಿಲ್, ನೀನು ಏನು ಮಾಡುತ್ತೀಯಾ? ಅಂತ ಕೇಳಿದರು. ಆಗ ಮೈಕ್ರೋಸಾಫ್ಟ್ ಸಂಸ್ಥಾಪಕರು ಆ ಡಾಲರ್‌ನ ಬಿಲ್‌ನ ಮೇಲೆ ನಾನು ತಪ್ಪು ತಿಳಿದುಕೊಂಡಿದ್ದೆ, ಬಿಲ್ ಗೇಟ್ಸ್ ಎಂದು ಬರೆದು ನನಗೆ ನೀಡಿದರು. ನಾನು ಇಂದಿಗೂ ಆ ಬಿಲ್ ಅನ್ನು ಫ್ರೇಮ್ ಹಾಕಿ ಇಟ್ಕೊಂಡಿದ್ದೇನೆ” ಎಂದು ಹೇಳಿದ್ದಾರೆ.
ಅಂದಹಾಗೆ 85000-94000 ಕೋಟಿ ರೂಪಾಯಿ ಒಡೆಯ ಬಿಲ್ ಗೇಟ್ಸ್.
