Vintage Rolex 6062 auction: ರೋಲೆಕ್ಸ್ ವಾಚ್‌ ಬಹಳ ದುಬಾರಿ ಬ್ರಾಂಡ್‌ ಆಗಿದ್ದು, ಇದಕ್ಕೆ ಅಸಲಿ ಮಾರುಕಟ್ಟೆಯಲ್ಲಿ ಲಕ್ಷಾಂತರ ಬೆಲೆ ಇದೆ. ಈಗ ವಿಂಟೇಜ್ ರೋಲೆಕ್ಸ್‌ ವಾಚೊಂದು ಬರೋಬ್ಬರಿ 6.2 ಮಿಲಿಯನ್ ಯುಎಸ್ ಡಾಲರ್ ಎಂದರೆ 54.5 ಕೋಟಿ ರೂಪಾಯಿಗಳಿಗೆ ಹರಾಜಾಗಿ ಎಲ್ಲರ ಹುಬ್ಬೇರುವಂತೆ ಮಾಡಿದೆ.

ರೋಲೆಕ್ಸ್ ವಾಚ್ ಎಲ್ಲರಿಗೂ ಗೊತ್ತು. ರೋಲೆಕ್ಸ್ ಬ್ರಾಂಡ್ ಹೆಸರಿನಲ್ಲಿ ಅನೇಕ ನಕಲಿ ವಾಚ್‌ಗಳು ಮಾರುಕಟ್ಟೆಯಲ್ಲಿ ಅಗ್ಗದ ದರದಲ್ಲಿ ಸಿಗುವುದನ್ನು ನೀವು ನೋಡಿರುತ್ತೀರಿ. ಆದರೆ ರೋಲೆಕ್ಸ್ ವಾಚ್‌ ಬಹಳ ದುಬಾರಿ ಬ್ರಾಂಡ್‌ ಆಗಿದ್ದು, ಇದಕ್ಕೆ ಅಸಲಿ ಮಾರುಕಟ್ಟೆಯಲ್ಲಿ ಲಕ್ಷಾಂತರ ಬೆಲೆ ಇದೆ. ಅದೇ ರೀತಿ ಈಗ ವಿಂಟೇಜ್ ರೋಲೆಕ್ಸ್‌ ವಾಚೊಂದು ಬರೋಬ್ಬರಿ 6.2 ಮಿಲಿಯನ್ ಯುಎಸ್ ಡಾಲರ್ ಎಂದರೆ 54.5 ಕೋಟಿ ರೂಪಾಯಿಗಳಿಗೆ ಹರಾಜಾಗಿ ಎಲ್ಲರ ಹುಬ್ಬೇರುವಂತೆ ಮಾಡಿದೆ. ಮೊನಾಕೊ ಲೆಜೆಂಡ್ ಗ್ರೂಪ್ ನಡೆಸಿದ ಹರಾಜಿನಲ್ಲಿ ಅಪರೂಪದ ವಿಂಟೇಜ್ ರೋಲೆಕ್ಸ್, 6062 ವಾಚ್ ಬಹಳ ದುಬಾರಿ ಮೊತ್ತಕ್ಕೆ ಹರಾಜಾಗುವ ಮೂಲಕ ಜನ ಮೂಗಿನ ಮೇಲೆ ಬೆರಳಿಡುವಂತೆ ಆಗಿದೆ.

ಹೀಗೆ ಕೋಟ್ಯಾಂತರ ಮೌಲ್ಯಕ್ಕೆ ಮಾರಾಟವಾಗುವ ಮೂಲಕ ಈ ದುಬಾರಿ ರೋಲೆಕ್ಸ್ ವಾಚ್‌ ಈಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ವಿಷಯವಾಗಿದ್ದು, ಅನೇಕರು ಈ ವಾಚ್‌ನಲ್ಲಿ ಅಂತಹದ್ದೇನಿದೆ ಎಂದು ಬಹಳ ಕುತೂಹಲದಿಂದ ನೋಡುತ್ತಿದ್ದಾರೆ. ಈ ರೋಲೆಕ್ಸ್ ವಾಚ್ 1950 ರಲ್ಲಿ ಪರಿಚಯಿಸಲಾದ ರೋಲೆಕ್ಸ್ ಟ್ರಿಪಲ್ ಕ್ಯಾಲೆಂಡರ್ ಮೂನ್‌ಫೇಸ್ ರೆಫ್ ಆಗಿದ್ದು, ಬಹಳ ಸೀಮಿತ ಉತ್ಪಾದನೆಯಿಂದಾಗಿ ಇದು ಸಾಕಷ್ಟು ಗಮನ ಸೆಳೆಯುತ್ತಿದೆ. ಇದೇ ರೀತಿಯ ಕೇವಲ 350 ವಾಚ್‌ಗಳನ್ನು ಮಾತ್ರ ಆಗ ನಿರ್ಮಿಸಲಾಗಿತ್ತು.

ಈ ವಾಚ್‌ನ ವಿಶಿಷ್ಟ ವಿಶೇಷತೆಗಳು

ಈ ರೋಲೆಕ್ಸ್ 6062 ವಾಚ್‌ ವಜ್ರದ ಸಮಯ ಸೂಚ್ಯಂಕಗಳಿಂದ ಅಲಂಕರಿಸಲ್ಪಟ್ಟ ಕಪ್ಪು ಡಯಲ್ ಅನ್ನು ಹೊಂದಿದೆ. ಪ್ರಸ್ತುತ ಅಸ್ತಿತ್ವದಲ್ಲಿರುವ ಮೂರೇ ಮೂರು ಈ ಸರಣಿಯ ರೋಲೆಕ್ಸ್ ವಾಚ್‌ಗಳಲ್ಲಿ ಇದು ಒಂದು. ಹೀಗಾಗಿಯೇ ವಿಶೇಷ ವಸ್ತುಗಳ ಸಂಗ್ರಹಕಾರರಿಗೆ ಇದರ ಮೇಲೆ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ. ಇದೇ ಮಾಡೆಲ್‌ನ ವಾಚ್‌ ಈ ಹಿಂದೆ 2017ರಲ್ಲಿ ಹರಾಜಾಗಿತ್ತು. ವಿಯೆಟ್ನಾಂನ ಕೊನೆಯ ಚಕ್ರವರ್ತಿ ಬಾವೊ ಡೈ ಒಡೆತನದ ವಾಚ್ ಅದಾಗಿತ್ತು. 2017ರಲ್ಲಿ ಈ ವಾಚ್ 5 ಮಿಲಿಯನ್ ಡಾಲರ್‌ಗೆ ಸೇಲ್ ಆಗಿತ್ತು. ಇದು ವಿಂಟೇಜ್ ರೋಲೆಕ್ಸ್ ವಾಚ್‌ಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಮೌಲ್ಯದ ವಹಿವಾಟುಗಳಿಗೆ ಸೇಲ್ ಆಗುವುದಕ್ಕೆ ಒಂದು ಪೂರ್ವ ನಿದರ್ಶನ ಆಯ್ತು.

ರೋಲೆಕ್ಸ್ 6062 ರ ಮೂಲವೂ ಅದರ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿದೆ. ಏಕೆಂದರೆ ಇದು ಶ್ರೀಮಂತ ವ್ಯಕ್ತಿಗಳ ಜೊತೆಗೆಯೇ ಸಂಬಂಧವನ್ನು ಹೊಂದಿದೆ. 2006 ರಲ್ಲಿ ಆಂಟಿಕ್ವರಮ್‌ನಲ್ಲಿ ನಡೆದ ಈ ಗಡಿಯಾರದ ಹಿಂದಿನ ಹರಾಜಿನಲ್ಲಿ ಅದು 391,000 ಅಮೆರಿಕನ್‌ ಡಾಲರ್‌ಗೆ ಮಾರಾಟವಾಗಿತ್ತು. ಇದು ವರ್ಷಗಳಲ್ಲಿ ಅದರ ಹೆಚ್ಚುತ್ತಿರುವ ಮೌಲ್ಯವನ್ನುತೋರಿಸುತ್ತದೆ. ಇದರ ಜೊತೆಗೆ ಇತ್ತೀಚಿನ ಹರಾಜು ಪ್ರಕ್ರಿಯೆಯಲ್ಲಿ ಈ ರೋಲೆಕ್ಸ್ 6062ಗೆ ಸಿಕ್ಕ ಬೆಲೆಯೂ ಇದುವರೆಗೆ ಈ ವಾಚ್‌ಗೆ ಸಿಕ್ಕ 3ನೇ ಅತ್ಯಧಿಕ ಬೆಲೆಯಾಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಅಂತಹ ಅಪರೂಪದ ಕೈಗಡಿಯಾರಗಳ ಮೇಲೆ ಇರಿಸಲಾದ ಅಪಾರ ಮೌಲ್ಯವನ್ನು ಒತ್ತಿ ಹೇಳುತ್ತದೆ.

ಈ ಗಡಿಯಾರದ ವೀಡಿಯೊವನ್ನು ಮೊನಾಕೊ ಲೆಜೆಂಡ್ ಗ್ರೂಪ್‌ನ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಲಕ್ಷಾಂತರ ಜನ ವೀಕ್ಷಣೆ ಮಾಡಿದ್ದಾರೆ. ಈ ವಿಂಟೇಜ್ ವಾಚ್ ಇಷ್ಟೊಂದು ದುಬಾರಿ ಮೊತ್ತಕ್ಕೆ ಹರಾಜಾಗಿರುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.