ಗಾಜಾದಲ್ಲಿ ಯುದ್ಧವನ್ನು ಕೊನೆಗೊಳಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 20 ಅಂಶಗಳ ಯೋಜನೆಯನ್ನು ಹಮಾಸ್ ಭಾಗಶಃ ಸ್ವಾಗತಿಸುವುದಾಗಿ ಘೋಷಿಸಿದ್ದರೂ, ಈ ಬಗ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತಪಡಿಸಿದ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರನ್ನು ಫೋನ್‌ನಲ್ಲಿ ಟ್ರಂಪ್‌ ತರಾಟೆ

ಟೆಲ್ ಅವಿವ್: ಗಾಜಾದಲ್ಲಿ ಯುದ್ಧವನ್ನು ಕೊನೆಗೊಳಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 20 ಅಂಶಗಳ ಯೋಜನೆಯನ್ನು ಹಮಾಸ್ ಭಾಗಶಃ ಸ್ವಾಗತಿಸುವುದಾಗಿ ಘೋಷಿಸಿದ್ದರೂ, ಈ ಬಗ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತಪಡಿಸಿದ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರನ್ನು ಫೋನ್‌ನಲ್ಲಿ ಟ್ರಂಪ್‌ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.

ಒತ್ತೆಯಾಳುಗಳ ಬಿಡುಗಡೆ ಮಾಡುತ್ತೇವೆ ಎಂದು ಹಮಾಸ್‌ ಘೋಷಿಸಿದ ನಂತರ ಟ್ರಂಪ್‌, ನೆತನ್ಯಾಹು ಅವರಿಗೆ ಕರೆ ಮಾಡಿ, ‘ಹಮಾಸ್‌ ನಡೆ ಸಕಾರಾತ್ಮಕ ಹೆಜ್ಜೆ’ ಎಂದರು. ಆದರೆ ಇದು ಅತ್ಯಲ್ಪ ಎಂದು ನೆತನ್ಯಾಹು ನೀರಸ ಪ್ರತಿಕ್ರಿಯೆ ನೀಡಿದರು.

ಇದರಿಂದ ಸಿಟ್ಟಿಗೆದ್ದ ಟ್ರಂಪ್, ‘ನೀವು ಯಾವಾಗಲೂ ಏಕೆ ನಕಾರಾತ್ಮಕವಾಗಿ ವರ್ತಿಸುತ್ತಿದ್ದೀರಿ. ಏಕೋ ಗೊತ್ತಿಲ್ಲ. ಇದು ಗೆಲುವು. ಅದನ್ನು ಸ್ವೀಕರಿಸಿ’ ಎಂದು ಚಾಟಿ ಬೀಸಿದರು ಎಂದ ಮಾಧ್ಯಮ ವರದಿಗಳು ಹೇಳಿವೆ.ಒತ್ತೆಯಾಳು ಬಿಡುಗಡೆ ಬಗ್ಗೆ ಮಾತುಕತೆ ಶುರು:

ಈ ನಡುವೆ ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆಗೆ ಸಂಬಂಧಿಸಿದಂತೆ ಈಜಿಪ್ಟ್‌ ಮಧ್ಯಸ್ಥಿಕೆಯಲ್ಲಿ ಕೈರೋದಲ್ಲಿ ಹಮಾಸ್‌ ಹಾಗೂ ಇಸ್ರೇಲ್‌ ನಡುವೆ ಮಾತುಕತೆ ಸೋಮವಾರ ಆರಂಭವಾಗಿವೆ.

ಹಮಾಸ್‌ಗೆ ಟ್ರಂಪ್ ಎಚ್ಚರಿಕೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಮತ್ತೊಮ್ಮೆ ಪ್ಯಾಲೆಸ್ತೀನ್ ಉಗ್ರ ಸಂಘಟನೆ ಹಮಾಸ್‌ಗೆ (Hamas) ಕಠಿಣ ಎಚ್ಚರಿಕೆ ನೀಡಿದ್ದಾರೆ. ಗಾಝಾ ಶಾಂತಿ ಒಪ್ಪಂದವನ್ನು (Gaza Peace Plan) ತಕ್ಷಣವೇ ಒಪ್ಪಿಕೊಳ್ಳದಿದ್ದರೆ, 'ಎಲ್ಲಾ ಡೀಲ್ ಮುಗಿದಂತೆ' ಎಂದು ಹೇಳಿದ್ದಾರೆ. ತಾತ್ಕಾಲಿಕವಾಗಿ ಬಾಂಬ್ ದಾಳಿ ನಿಲ್ಲಿಸಿ ಶಾಂತಿ ಮಾತುಕತೆಗೆ ಅವಕಾಶ ನೀಡಿದ್ದಕ್ಕಾಗಿ ಟ್ರಂಪ್ ಇಸ್ರೇಲ್ ಅನ್ನು ಹೊಗಳಿದ್ದಾರೆ. ಇದಕ್ಕೂ ಮುನ್ನ, ಶುಕ್ರವಾರ ಟ್ರಂಪ್ ಹಮಾಸ್‌ಗೆ ಭಾನುವಾರ ಸಂಜೆ 6 ಗಂಟೆಯವರೆಗೆ (US ಸಮಯ) ಅಂತಿಮ ಗಡುವು ನೀಡಿದ್ದರು. ಅಷ್ಟರಲ್ಲಿ ಶಾಂತಿ ಒಪ್ಪಂದ ಆಗದಿದ್ದರೆ ನರಕದ ಬಾಗಿಲು ತೆರೆಯಲಿದೆ ಎಂದು ಅವರು ಹೇಳಿದ್ದರು.

ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್ ಖಾತೆಯಲ್ಲಿ, 'ಬಾಂಬ್ ದಾಳಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಿ, ಒತ್ತೆಯಾಳುಗಳ ಬಿಡುಗಡೆ ಮತ್ತು ಶಾಂತಿ ಒಪ್ಪಂದಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ನಾನು ಇಸ್ರೇಲ್ ಅನ್ನು ಶ್ಲಾಘಿಸುತ್ತೇನೆ. ಹಮಾಸ್ ಬೇಗನೆ ಮುಂದೆ ಬರಬೇಕು, ಇಲ್ಲದಿದ್ದರೆ ಎಲ್ಲವೂ ಅಪಾಯಕ್ಕೆ ಸಿಲುಕುತ್ತದೆ. ಯಾವುದೇ ವಿಳಂಬವನ್ನು ನಾನು ಸಹಿಸುವುದಿಲ್ಲ. ಗಾಝಾ ಮತ್ತೆ ಅಪಾಯಕಾರಿಯಾಗಲು ನಾನು ಬಿಡುವುದಿಲ್ಲ. ಭಾನುವಾರ ಸಂಜೆ 6 ಗಂಟೆಯವರೆಗೆ ಅವಕಾಶವಿದೆ' ಎಂದು ಬರೆದಿದ್ದಾರೆ. ಗಾಝಾ ನಗರದಲ್ಲಿ ಇಸ್ರೇಲಿ ವೈಮಾನಿಕ ದಾಳಿಯಲ್ಲಿ 10 ಜನರು ಸಾವನ್ನಪ್ಪಿದ ಸಮಯದಲ್ಲಿ ಅವರ ಈ ಹೇಳಿಕೆ ಬಂದಿದೆ. ಇಸ್ರೇಲ್ ರಕ್ಷಣಾ ಪಡೆ (IDF) ದಾಳಿಯನ್ನು ದೃಢಪಡಿಸಿಲ್ಲ, ಆದರೆ ಸೇನಾ ಮೂಲಗಳು ರಕ್ಷಣಾತ್ಮಕ ಕ್ರಮಗಳು ಮುಂದುವರಿದಿವೆ ಎಂದು ತಿಳಿಸಿವೆ.