ಅಮೆರಿಕದ ಸುಂಕ ಬೆದರಿಕೆ ಲೆಕ್ಕಿಸದೆ ರಷ್ಯಾದಿಂದ ತೈಲ ಖರೀದಿ ಮುಂದುವರಿಸುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಇಂಧನ ಸುರಕ್ಷತೆ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ಮುಖ್ಯವೆಂದು ಪರಿಗಣಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನವದೆಹಲಿ (ಸೆ.5): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ವಿಧಿಸಿರುವ ಸುಂಕಗಳ ಬೆದರಿಕೆಯ ನಡುವೆಯೂ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ಮುಂದುವರಿಸುವ ಬಗ್ಗೆ ದೃಢವಾದ ಹೇಳಿಕೆ ನೀಡಿದ್ದಾರೆ.

ಸಿಎನ್ಎನ್-ನ್ಯೂಸ್ 18 ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಸೀತಾರಾಮನ್, ನಮ್ಮ ಅಗತ್ಯತೆಗಳು, ಬೆಲೆಗಳು ಮತ್ತು ಲಾಜಿಸ್ಟಿಕ್ಸ್ ಆಧಾರದ ಮೇಲೆ ನಾವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ವಿದೇಶಿ ವಿನಿಮಯ ಮತ್ತು ಇಂಧನ ಸುರಕ್ಷತೆ ನಮಗೆ ಅತ್ಯಂತ ಮುಖ್ಯ. ಭಾರತದ ಒಟ್ಟು ಆಮದು ವೆಚ್ಚದಲ್ಲಿ ಕಚ್ಚಾ ತೈಲವು ಅತಿದೊಡ್ಡ ಪಾಲನ್ನು ಹೊಂದಿದೆ. ಅಗ್ಗದ ಮತ್ತು ಸ್ಥಿರವಾದ ತೈಲ ಎಲ್ಲಿಂದ ಲಭ್ಯವಾಗುತ್ತದೆಯೋ ಅಲ್ಲಿಂದ ನಾವು ಖರೀದಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ರಷ್ಯಾದಿಂದ ಭಾರತ ತೈಲ ಖರೀದಿ ಮುಂದುವರಿಯುತ್ತೆ:

ರಷ್ಯಾದಿಂದ ತೈಲ ಖರೀದಿಯು ನಮ್ಮ ಆರ್ಥಿಕ ಕಾರ್ಯತಂತ್ರದ ಪ್ರಮುಖ ಭಾಗವಾಗಿದೆ. ನಾವು ಖಂಡಿತವಾಗಿಯೂ ಅದನ್ನು ಮುಂದುವರಿಸುತ್ತೇವೆ, ಎಂದು ಘೋಷಿಸಿದರು. ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ರಾಷ್ಟ್ರವಾದ ಭಾರತ, ತನ್ನ ಇಂಧನ ಅಗತ್ಯಗಳನ್ನು ಪೂರೈಸಲು ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಒತ್ತಿಹೇಳಿದ ಸೀತಾರಾಮನ್, ನಮ್ಮ ಆರ್ಥಿಕ ಹಿತಾಸಕ್ತಿಗಳಿಗೆ ಅನುಗುಣವಾಗಿ ಕೆಲಸ ಮಾಡುತ್ತೇವೆ. ರಷ್ಯಾದಿಂದ ತೈಲ ಖರೀದಿ ನಮ್ಮ ಆರ್ಥಿಕ ಯೋಜನೆಯ ಭಾಗವಾಗಿದ್ದು, ಈ ನಿಟ್ಟಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಟ್ರಂಪ್ ಅವರ ಸುಂಕದ ಬೆದರಿಕೆಯನ್ನು ಧಿಕ್ಕರಿಸಿ, ಭಾರತದ ಈ ದಿಟ್ಟ ನಿಲುವು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ದೇಶದ ಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ. ಈ ಹೇಳಿಕೆಯು ಭಾರತದ ಇಂಧನ ಸುರಕ್ಷತೆ ಮತ್ತು ಆರ್ಥಿಕ ಸ್ವಾತಂತ್ರ್ಯಕ್ಕೆ ಒತ್ತು ನೀಡುವ ಸಂದೇಶವನ್ನು ಜಗತ್ತಿಗೆ ಸಾರಿದೆ. ಮುಂದಿನ ಅಪ್‌ಡೇಟ್‌ಗಾಗಿ ಕಾಯಿರಿ!