ಜಪಾನ್ ಪ್ರವಾಸ ಪೂರ್ಣಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಪ್ರಧಾನಿ ಶಿಗೇರು ಇಶಿಬಾ ಅವರಿಗೆ ಅಮೂಲ್ಯ ಹರಳುಗಳಿಂದ ಮಾಡಿದ, ಬೆಳ್ಳಿಯ ಕಡ್ಡಿಗಳನ್ನು ಹೊಂದಿರುವ ರಾಮೆನ್ ಬಟ್ಟಲುಗಳನ್ನು ಹಾಗೂ ಅವರ ಪತ್ನಿಗೆ ವಿಶೇಷ ಪೇಪಿಯರ್ ಮ್ಯಾಚೆ ಪೆಟ್ಟಿಗೆಯಲ್ಲಿ ಪಶ್ಮಿನಾ ಶಾಲನ್ನು ಉಡುಗೊರೆಯಾಗಿ ನೀಡಿದ್ದಾರೆ.

ನವದೆಹಲಿ : ಸದ್ಯ ಜಪಾನ್ ಪ್ರವಾಸ ಪೂರ್ಣಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಪ್ರಧಾನಿ ಶಿಗೇರು ಇಶಿಬಾ ಅವರಿಗೆ ಅಮೂಲ್ಯ ಹರಳುಗಳಿಂದ ಮಾಡಿದ, ಬೆಳ್ಳಿಯ ಕಡ್ಡಿಗಳನ್ನು ಹೊಂದಿರುವ ರಾಮೆನ್ ಬಟ್ಟಲುಗಳನ್ನು ಹಾಗೂ ಅವರ ಪತ್ನಿಗೆ ವಿಶೇಷ ಪೇಪಿಯರ್ ಮ್ಯಾಚೆ ಪೆಟ್ಟಿಗೆಯಲ್ಲಿ ಪಶ್ಮಿನಾ ಶಾಲನ್ನು ಉಡುಗೊರೆಯಾಗಿ ನೀಡಿದ್ದಾರೆ.

ಇಶಿಬಾ ಅವರಿಗೆ 4 ಚಿಕ್ಕ ಮತ್ತು ಒಂದು ದೊಡ್ಡ ಚಂದ್ರಶಿಲೆಯ ಬಟ್ಟಲನ್ನು ನೀಡಿದ್ದಾರೆ. ಚಂದ್ರಶಿಲೆಯನ್ನು ಆಂಧ್ರಪ್ರದೇಶದ್ದಾಗಿದ್ದು, ದೊಡ್ಡ ಬಟ್ಟಲಿನ ತಳವನ್ನು ರಾಜಸ್ಥಾನದ ಮಕ್ರಾನಾ ಅಮೃತಶಿಲೆಯಿಂದ ತಯಾರಿಸಲಾಗಿದೆ. ಜಪಾನ್‌ನ ಡಾನ್‌ಬುರಿ ಮತ್ತು ಸೋಬಾ ಆಚರಣೆಗಳಿಂದ ಸ್ಫೂರ್ತಿ ಪಡೆದು ಇವುಗಳನ್ನು ವಿನ್ಯಾಸಗೊಳಿಸಲಾಗಿದೆ.

ಇಶಿಬಾ ಅವರ ಪತ್ನಿಗೆ ನೀಡಿದ ಪಶ್ಮಿನಾ ಶಾಲನ್ನು ಲಡಾಖ್‌ನ ಚಾಂಗ್‌ಥಂಗಿ ಆಡಿನ ಉಣ್ಣೆಯಿಂದ ಕಾಶ್ಮೀರಿ ಕುಶಲಕರ್ಮಿಗಳು ಸಿದ್ಧಪಡಿಸಿದ್ದಾರೆ. ಶಾಲು ಹಾಗೂ ಅದನ್ನು ನೀಡಿದ ಮ್ಯಾಚೆ ಪೆಟ್ಟಿಗೆ ಎರಡೂ ಕಾಶ್ಮೀರದ ಕಲಾತ್ಮಕತೆ, ಪರಂಪರೆಯನ್ನು ಪ್ರತಿನಿಧಿಸುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದಲ್ಲಿ ₹6 ಲಕ್ಷ ಕೋಟಿ ಹೂಡಿಕೆ: ಜಪಾನ್‌ ಘೋಷಣೆ

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜಪಾನ್‌ ಪ್ರವಾಸ ಯಶಸ್ವಿ ಆಗಿದ್ದು. ಮುಂದಿನ 1 ದಶಕದಲ್ಲಿ ಜಪಾನ್‌ ಭಾರತದಲ್ಲಿ ₹6 ಲಕ್ಷ ಕೋಟಿ (10 ಟ್ರಿಲಿಯನ್‌ ಯೆನ್‌) ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಇದಲ್ಲದೆ ಚಂದ್ರಯಾನ-5 ಅನ್ನು ಜಂಟಿಯಾಗಿ ಕೈಗೊಳ್ಳಲು ನಿರ್ಧರಿಸಿವೆ. ಅಮೆರಿಕ-ಭಾರತ ಆರ್ಥಿಕ ಸಂಘರ್ಷದ ನಡುವೆಯೇ ಚೇತೋಹಾರಿಯಾದ ಈ ಸುದ್ದಿ ಹೊರಬಿದ್ದಿದೆ.

ವಾರ್ಷಿಕ ಭಾರತ-ಜಪಾನ್‌ ಶೃಂಗದಲ್ಲಿ ಮೋದಿ ಹಾಗೂ ಜಪಾನ್‌ ಪ್ರಧಾನಿ ಶಿಗೆರು ಇಶಿಬಾ ನಡುವೆ ನಡೆದ ಸಭೆಯಲ್ಲಿ ಈ ಘೋಷಣೆ ಮಾಡಲಾಯಿತು.

ಶೃಂಗದ ಬಳಿಕ ಮಾತನಾಡಿದ ಮೋದಿ, ‘ಜಪಾನ್‌ ಭಾರತದಲ್ಲಿ 1 ದಶಕದಲ್ಲಿ 5.98 ಲಕ್ಷ ಕೋಟಿ ರು. ಹೂಡಿಕೆ ಮಾಡುವ ಗುರಿ ಇಟ್ಟುಕೊಂಡಿದೆ, ಅಮೂಲ್ಯ ಖನಿಜಗಳು, ರಕ್ಷಣೆ ಮತ್ತು ತಂತ್ರಜ್ಞಾನದಂತಹ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ಬಲಪಡಿಸಲು ಉಭಯ ದೇಶಗಳು ಮಾರ್ಗಸೂಚಿ ಸಿದ್ಧಪಡಿಸಿವೆ’ ಎಂದರು.