ಜೇನ್‌ ಜೆಡ್‌ ಸಮುದಾಯದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ 19 ಜನರ ಸಾವಿನ ನಂತರ, ನೇಪಾಳ ಸರ್ಕಾರ ಸಾಮಾಜಿಕ ಜಾಲತಾಣಗಳ ಮೇಲಿನ ನಿಷೇಧವನ್ನು ತೆರವುಗೊಳಿಸಿದೆ.

19 ಜನರ ಸಾವಿನ ನಂತರ ಸೋಶಿಯಲ್ ಮೀಡಿಯಾ ಮೇಲಿನ ಬ್ಯಾನ್ ವಾಪಸ್ ಪಡೆದ ನೇಪಾಳ ಸರ್ಕಾರ:

ಜೇನ್‌ ಜೆಡ್‌ ಸಮುದಾಯದ ಉಗ್ರ ಪ್ರತಿಭಟನೆಗೆ ಮಣಿದ ನೇಪಾಳ ಸರ್ಕಾರ ಕಡೆಗೂ ಸೋಶಿಯಲ್ ಮೀಡಿಯಾಗಳ ಮೇಲಿನ ನಿಷೇಧ ಹಿಂಪಡೆದಿದೆ. ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಮೇಲಿನ ನಿಷೇಧ ಖಂಡಿಸಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ಇಳಿದ ನಂತರ 19 ಜನರು ಸಾವಿಗೀಡಾಗಿದ್ದಾರೆ. ಈ ಘಟನೆಯ ನಂತರ ಕೊನೆಗೂ ನೇಪಾಳ ಸರ್ಕಾರ ಸೋಶಿಯಲ್ ಮೀಡಿಯಾ ಮೇಲಿನ ಬ್ಯಾನ್ ಹಿಂಪಡೆದಿದೆ. ನೇಪಾಳದ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪೃಥ್ವಿ ಸುಬ್ಬ ಗುರುಂಗ್ ಸರ್ಕಾರ ಈ ನಿರ್ಧಾರವನ್ನು ಘೋಷಣೆ ಮಾಡಿದ್ದಲ್ಲದೇ, ಪ್ರತಿಭಟನೆಗಳನ್ನು ಹಿಂತೆಗೆದುಕೊಳ್ಳುವಂತೆ ಜೇನ್‌ ಝಡ್‌ಗೆ ಮನವಿ ಮಾಡಿದೆ ಎಂದು ಅವರು ಹೇಳಿದರು.

ಪ್ರತಿಭಟನೆ ಹಿಂಸೆಗೆ ತಿರುಗಿ 19 ಜನರ ಸಾವು

(ತಿಳಿಯದಿರುವವರಿಗಾಗಿ ಜೇನ್ ಜೆಡ್‌ ಎಂದರೆ 1996ರಿಂದ 2010ರ ನಡುವೆ ಜನಿಸಿದ ಸಮುದಾಯವಾಗಿದೆ.) ಜೇನ್ ಜೆಡ್ ತಲೆಮಾರಿನ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ 19ಜನ ಸಾವಿಗೀಡಾದ ಹಿನ್ನೆಲೆ ಸರ್ಕಾರ ತಡರಾತ್ರಿ ತುರ್ತಾಗಿ ಚರ್ಚೆ ನಡೆಸಿ ಈ ನಿರ್ಧಾರ ಕೈಗೊಂಡಿದೆ. ಪೊಲೀಸರು ಹಾಗೂ ಪ್ರತಿಭಟನಾಕಾರರ ಸಂಘರ್ಷದದಲ್ಲಿ ಒಟ್ಟು 19 ಜನ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಮಧ್ಯರಾತ್ರಿಯೇ ತುರ್ತು ಸಚಿವ ಸಂಪುಟ ಸಭೆ ಕರೆದ ನೇಪಾಳ ಸರ್ಕಾರ, ಜನರೇಷನ್‌ ಜೆಡ್ ತಲೆಮಾರಿನ ಒತ್ತಾಯಕ್ಕೆ ಮಣಿದು ಸೋಶಿಯಲ್ ಮೀಡಿಯಾ ಮೇಲಿನ ನಿಷೇಧವನ್ನು ವಾಪಸ್ ಪಡೆದಿರುವುದಾಗಿ ಹೇಳಿದ್ದಾರೆ. ಅಲ್ಲದೇ ಸೋಶಿಯಲ್ ಮೀಡಿಯಾ ಮೇಲೆ ನಿಷೇಧ ಹೇರಿರುವ, ಸರ್ಕಾರದ ಹಿಂದಿನ ನಿರ್ಧಾರದ ಬಗ್ಗೆ ಯಾವುದೇ ಬೇಸರ ಇಲ್ಲ ಎಂದು ಗೌರಂಗ್ ಪ್ರತಿಭಟನೆ ನಿಲ್ಲಿಸುವಂತೆ ಕರೆ ನೀಡಿದರು.

ಸೋಶಿಯಲ್ ಮೀಡಿಯಾಗೆ ಬ್ಯಾನ್ ಮಾಡಿದ್ದು ಏಕೆ?

ಈ ಪ್ರತಿಭಟನೆ ಹಿಂಸಾಚಾರದ ಸ್ವರೂಪ ತಾಳಿದ ಬಗ್ಗೆ ಪರಿಶೀಲಿಸಲು ಸಂಪುಟವು ತನಿಖಾ ಸಮಿತಿಯನ್ನು ರಚಿಸಿದ್ದು ಈ ಸಮಿತಿಗೆ ವರದಿ ತಯಾರಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ. ಕ್ಯಾಬಿನೆಟ್ ಬ್ರೀಫಿಂಗ್ ಸಮಯದಲ್ಲಿ ಮಾತನಾಡಿದ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ, ನಿಷೇಧಿತ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಎಕ್ಸ್, ನೇಪಾಳದ ರಾಷ್ಟ್ರೀಯ ಸಾರ್ವಭೌಮತ್ವವನ್ನು ಅಗೌರವಿಸುವ ರೀತಿಯಲ್ಲಿ ಪ್ರತಿಕ್ರಿಯಿಸಿದೆ ಎಂದು ಹೇಳಿದ್ದರು. ನಾವು ಇದನ್ನು ಒಂದೂವರೆ ವರ್ಷದಿಂದ ಹೇಳುತ್ತಿದ್ದೆವು. ಸೋಶಿಯಲ್ ಮೀಡಿಯಾ ಸಂಸ್ಥೆಗಳಿಗೆ ಪಟ್ಟಿಗೆ ಸೇರಿಸಲು ನಾವು ಕೇಳಿದ್ದೆವು. ನೇಪಾಳದ ಕಾನೂನುಗಳನ್ನು ಪಾಲಿಸಲು ನಾವು ಅವರನ್ನು ಕೇಳಿದ್ದೆವು. ಇದು ನಮ್ಮ ರಾಷ್ಟ್ರೀಯ ಸಾರ್ವಭೌಮತ್ವವನ್ನು ಗೌರವಿಸುವ ವಿಷಯ ಎಂದು ಪ್ರಧಾನಿ ಓಲಿ ಹೇಳಿದ್ದಾರೆ.

ಸೋಶಿಯಲ್ ಮೀಡಿಯಾದ ದುರುಪಯೋಗವನ್ನು ಹತ್ತಿಕ್ಕುವ ಗುರಿಯನ್ನು ಹೊಂದಿರುವ ಹೊಸ ನಿಯಮಗಳ ಅಡಿಯಲ್ಲಿ ನೋಂದಾಯಿಸಲು ಸೋಶಿಯಲ್ ಮೀಡಿಯಾ ಕಂಪನಿಗಳಾದ ಮೆಟಾ, ಇನ್ಸ್ಟಾಗ್ರಾಮ್, ಫೇಸ್‌ಬುಕ್‌ ಮುಂತಾದವುಗಳಿಗೆ ಸರ್ಕಾರ ನೀಡಿದ್ದ ಗಡುವು ಅಂತ್ಯವಾದ ಹಿನ್ನೆಲೆ ಕಂಪನಿಗಳು ಗಡುವನ್ನು ತಪ್ಪಿಸಿಕೊಂಡ ನಂತರ, ಕಳೆದ ವಾರ ನೇಪಾಳ ಸರ್ಕಾರವು ಹಲವಾರು ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ದೇಶದಲ್ಲಿ ನಿರ್ಬಂಧ ವಿಧಿಸಿದೆ.

ಕೆಲ ಸಾಮಾಜಿಕ ಜಾಲತಾಣ ಬಳಕೆದಾರರು ನಕಲಿ ಐಡಿಗಳನ್ನು ಸೃಷ್ಟಿಸಿ ಈ ವೇದಿಕೆಗಳನ್ನು ದ್ವೇಷ ಭಾಷಣ ಮತ್ತು ನಕಲಿ ಸುದ್ದಿಗಳನ್ನು ಹರಡುವುದು, ವಂಚನೆ ಮತ್ತು ಇತರ ಅಪರಾಧಗಳನ್ನು ಮಾಡಲು ಬಳಸುತ್ತಾರೆ. ಹೀಗಾಗಿ ನೋಂದಾಯಿಸದ ಸಾಮಾಜಿಕ ಮಾಧ್ಯಮವನ್ನು ನಿಷ್ಕ್ರಿಯಗೊಳಿಸುವಂತೆ ನೇಪಾಳದ ದೂರಸಂಪರ್ಕ ನಿಯಂತ್ರಕ ಪ್ರಾಧಿಕಾರಕ್ಕೆ ಸರ್ಕಾರಿ ಸೂಚನೆಯು ನಿರ್ದೇಶನ ನೀಡಿದೆ ಆದರೆ ಯಾವ ಜಾಲತಾಣಗಳಿಗೆ ನಿಷೇಧ ಹೇರಲಾಗಿದೆ ಎಂಬ ಬಗ್ಗೆ ಯಾವುದೇ ವಿವರಗಳನ್ನು ನೀಡಿಲ್ಲ ಎಂದು ನೇಪಾಳ ಸರ್ಕಾರ ಹೇಳಿದೆ.

ಯಾವ ಸೋಶಿಯಲ್ ಮೀಡಿಯಾಗಳು ಬ್ಯಾನ್ ಆಗಿದ್ದವು?

ನಿಷೇಧಿತ ವೇದಿಕೆಗಳಲ್ಲಿ ಮೆಟಾದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್, ಆಲ್ಫಾಬೆಟ್‌ನ ಯೂಟ್ಯೂಬ್, ಚೀನಾದ ಟೆನ್ಸೆಂಟ್ ಮತ್ತು ಸ್ನ್ಯಾಪ್‌ಚಾಟ್, ಪಿನ್‌ಟಾರೆಸ್ಟ್ ಮತ್ತು ಎಕ್ಸ್ ಸೇರಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ನಿನ್ನೆ ಮುಂಜಾನೆ ಆರಂಭವಾದ ಈ ಪ್ರತಿಭಟನೆಯಲ್ಲಿ ಸಾವಿರಾರು ಪ್ರತಿಭಟನಾಕಾರರು ಪೊಲೀಸ್ ಬ್ಯಾರಿಕೇಡ್ ಅನ್ನು ಮುರಿದು ನೇಪಾಳದ ಸಂಸತ್‌ ಪ್ರವೇಶಿಸಲು ಪ್ರಯತ್ನಿಸಿದ ನಂತರ ಅಧಿಕಾರಿಗಳು ಸಂಸತ್ತಿನ ಕಟ್ಟಡದ ಸುತ್ತಲೂ ಕರ್ಫ್ಯೂ ವಿಧಿಸಿದರು. ಈ ವೇಳೆ ಗುಂಪನ್ನು ನಿಯಂತ್ರಿಸಲು ಪೊಲೀಸರಿಗೆ ಜಲಫಿರಂಗಿ, ಲಾಠಿ ಪ್ರಹಾರ ಮತ್ತು ರಬ್ಬರ್ ಗುಂಡುಗಳನ್ನು ಬಳಸಿದ್ದರು.

ಮತ್ತೊಂದೆಡೆ ಅಲ್ಲಿನ ಯುವಕರು ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ದೇಶದಲ್ಲಿ ಭ್ರಷ್ಟಾಚಾರವನ್ನು ನಿಷೇಧ ಮಾಡಿ ಸಾಮಾಜಿಕ ಜಾಲತಾಣವನ್ನಲ್ಲ ಎಂದು ಪ್ಲೇಕಾರ್ಡ್‌ಗಳನ್ನು ಹಿಡಿದು ಅಲ್ಲಿ ಯುವಕರು ಬೀದಿಗಿಳಿದಿದ್ದರು. ದೇಶದಲ್ಲಿ ಭ್ರಷ್ಟಾಚಾರದ ಕಾರಣಕ್ಕೆ ಪ್ರತಿಭಟನೆ ನಡೆಯುತ್ತಿದೆ ಆದರೆ ಅದನ್ನು ಸೋಶಿಯಲ್ ಮೀಡಿಯಾ ಬ್ಯಾನ್ ಆದ ಕಾರಣಕ್ಕೆ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ತಿರುಚಲಾಗುತ್ತಿದೆ ಎಂದು ಕೆಲವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಪೋಷಕರು ಮನೆಯಲ್ಲಿಲ್ಲದ ವೇಳೆ ದುರಂತ: ಲೋಡೆಡ್ ಗನ್‌ ಜೊತೆ ಆಟ, ಟ್ರಿಗರ್ ಒತ್ತಿದ ಬಾಲಕ ಸಾವು

ಇದನ್ನೂ ಓದಿ: ರುಚಿರುಚಿಯಾಗಿ ತಿಂದ್ರು 61ರಲ್ಲೂ ಫಿಟ್ & ಫೈನ್ ಆಗಿರುವುದು ಹೇಗೆ? : ಸೀಕ್ರೆಟ್ ಬಿಟ್ಟುಕೊಟ್ಟ ಖ್ಯಾತ ಬಾಣಸಿಗ