ಆತ್ಮ*ತ್ಯೆಗೆ ಯತ್ನಿಸಿದ ಮಹಿಳೆಯನ್ನು ವಿಪತ್ತು ನಿರ್ವಹಣಾ ಪಡೆ ರಕ್ಷಿಸಿದೆ. ಕಟ್ಟಡದಿಂದ ಹಾರಲು ಯತ್ನಿಸಿದ ಮಹಿಳೆಯನ್ನು ಧೈರ್ಯದಿಂದ ರಕ್ಷಿಸಿದ ಯೋಧರಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಈ ರಕ್ಷಣಾ ಕಾರ್ಯಾಚರಣೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಾನಸಿಕ ಖಿನ್ನತೆ ಇಂದು ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಅನೇಕರು ಸಾವಿನ ಯೋಚನೆ ಮಾಡಿ ಜೀವ ಕಳೆದುಕೊಳ್ಳುವ ಪ್ರಯತ್ನ ಮಾಡುತ್ತಾರೆ. ದೊಡ್ಡವರಿಗಾದರೂ ಆರ್ಥಿಕ ಸಂಕಷ್ಟ, ತನ್ನವರು ಯಾರು ಇಲ್ಲ ಎಂಬ ಉದ್ಯೋಗವಿಲ್ಲದಿರುವುದು ಹೀಗೆ ಹತ್ತು ಹಲವು ಕೊರಗುಗಳಿರುತ್ತವೆ. ಆದರೆ ಇತ್ತೀಚೆಗೆ ಪುಟ್ಟ ಮಕ್ಕಳು ಕೂಡ ಇಂತಹ ಭಯಾನಕ ನಿರ್ಧಾರವನ್ನು ಕೈಗೊಳ್ಳುತ್ತಿರುವುದು ಪೋಷಕರನ್ನು ಆತಂಕಕ್ಕೆ ದೂಡಿದೆ. ಹೀಗಿರುವಾಗ ಇಲ್ಲೊಂದು ಕಡೆ ಮಹಿಳೆಯೊಬ್ಬರು ಬದುಕಿಗೆ ಅಂತ್ಯ ಹಾಡುವುದಕ್ಕಾಗಿ ತಾವು ವಾಸವಿದ್ದ ಕಟ್ಟಡದ ಬಾಲ್ಕನಿಯ ತಡೆಗೋಡೆಯನ್ನು ಹತ್ತಿ ಕಟ್ಟಡದಿಂದ ಕೆಳಗೆ ಹಾರುವುದಕ್ಕಾಗಿ ಕಟ್ಟಡದ ಅಂಚಿನಲ್ಲಿ ಬಂದು ನಿಂತಿದ್ದಾರೆ. ಆದರೆ ಸ್ಥಳೀಯರು ಹಾಗೂ ವಿಪತ್ತು ನಿರ್ವಹಣಾ ಪಡೆಯ ತತ್‌ಕ್ಷಣದ ಕಾರ್ಯಾಚರಣೆಯಿಂದಾಗಿ ಆಕೆ ಬದುಕುಳಿದಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.

ಸಿಂಗಾಪುರದಲ್ಲಿ ನಡೆದ ಘಟನೆ

ಅಂದಹಾಗೆ ಈ ಘಟನೆ ಸಿಂಗಾಪುರದಲ್ಲಿ ನಡೆದಿರುವುದಾಗಿದೆ. ಕೆಳಗೆ ಬೀಳುವುದಕ್ಕಾಗಿ ಆಕೆ ಅಂಚಿನಲ್ಲಿ ನಿಂತಿದ್ದಳು. ಆದರೆ SCDF ಹಿಂಜರಿಯಲಿಲ್ಲ. ಯಾವುದೇ ಸೈರನ್‌ಗಳಿಲ್ಲ. ನಾಟಕವಿಲ್ಲ. ಕೇವಲ ಶುದ್ಧ ಧೈರ್ಯ, ಶಾಂತತೆ ಮತ್ತು ಸಹಾನುಭೂತಿಯಿಂದ ಆಕೆಯನ್ನು ರಕ್ಷಿಸಿದರು. ಇದು ಕೇವಲ ರಕ್ಷಣೆಯಲ್ಲ, ಇದು ಒಂದು ಜ್ಞಾಪನೆ. ನಮ್ಮ ಕರಾಳ ಕ್ಷಣಗಳಲ್ಲಿಯೂ ಸಹ ಸಹಾಯವು ಹರಿದು ಬರುತ್ತದೆ. ಮೌನವಾಗಿ ಮಾನಸಿಕ ಸಮಸ್ಯೆಯ ವಿರುದ್ಧ ಹೋರಾಡುವ ಪ್ರತಿಯೊಬ್ಬನಿಗೂ, ನೀವು ಮುಖ್ಯ. ಸಮವಸ್ತ್ರದಲ್ಲಿರುವ ನಮ್ಮ ದೈನಂದಿನ ವೀರರನ್ನು ನಾವು ನಿಮ್ಮನ್ನು ನೋಡುತ್ತೇವೆ. ಸಿಂಗಾಪುರದ ನಿಜವಾದ ವೀಡಿಯೋವಿದು ಎಂದು ಬರೆದು ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ.

ಸಿಂಗಾಪುರದ ಈ ಸಿವಿಲ್ ಡಿಫೆನ್ಸ್ ಫೋರ್ಸ್‌ ಕೆಲಸಕ್ಕೆ ಭಾರಿ ಮೆಚ್ಚುಗೆ

ವೀಡಿಯೋ ನೋಡಿದ ಅನೇಕರು ಸಿಂಗಾಪುರದ ಈ ಸಿವಿಲ್ ಡಿಫೆನ್ಸ್ ಫೋರ್ಸ್‌ ಬಗ್ಗೆ ಹೆಮ್ಮೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದ್ಭುತ ರಕ್ಷಣೆ. ಜನರು ನೋಡಿ ಕೆಲಸ ಮಾಡಿದರು ಹಿಂದೆ ಸರಿಯಲಿಲ್ಲ, ನಮ್ಮ ನಾಯಕರಿಗೆ ಧನ್ಯವಾದಗಳು ಅವಳಿಗೆ ಸಹಾಯದ ಅಗತ್ಯವಿತ್ತು ಮತ್ತು ಅವಳು ಸಹಾಯವನ್ನು ಬಯಸುತ್ತಿದ್ದಳು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅವಳು ಆತ್ಮ8ತ್ಯೆ ಮಾಡಿಕೊಳ್ಳಲು ಬಯಸಿದ್ದಕ್ಕೆ ಕಾರಣ ಏನೇ ಇರಲಿ, ಅವಳು ಮತ್ತೆ ಸಂತೋಷವಾಗಿರುತ್ತಾಳೆ ಎಂದು ನಾನು ಭಾವಿಸುತ್ತೇನೆ. ಅವಳಿಗೆ ವೃತ್ತಿಪರ ಸಹಾಯ, ಬೆಂಬಲ ಮತ್ತು ಅವಳ ಸುತ್ತಲಿನ ಜನರಿಂದ ಬಹಳಷ್ಟು ಪ್ರೀತಿ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಎಂತಹ ಮಹಾನ್ ಹೀರೋಗಳು ಇವರು ಚೆನ್ನಾಗಿ ಕೆಲಸ ಮಾಡಿದ್ದಾರೆ. ದೇವರು ಅವರೆಲ್ಲರನ್ನೂ ಆಶೀರ್ವದಿಸಲಿ. ಅವರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಇತರರನ್ನು ಉಳಿಸಿದರು ಆಮೆನ್ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಉತ್ತಮ ಟೀಮ್‌ ವರ್ಕ್‌, ತುಂಬಾ ಮನಮುಟ್ಟಿತು ಆ ಮಹಿಳೆ ಬದುಕುವುದನ್ನು ಮುಂದುವರಿಸಲು ಧೈರ್ಯ ಸಿಗಲಿ ಎಂದು ಆಶಿಸುತ್ತೇನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ವಾಹ್, ಆ ಮಹಿಳೆಯ ಜೀವ ಉಳಿಸಿದ್ದಕ್ಕಾಗಿ ನೀವು ಅದ್ಭುತ, ಆಕೆಗೆ ಅಗತ್ಯವಿರುವ ಸಹಾಯ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ವೀಡಿಯೋದಲ್ಲೇನಿದೆ.

ವೀಡಿಯೋದಲ್ಲಿ ಕಾಣುವಂತೆ ಮಹಿಳೆಯೊಬ್ಬರು ಬಾಲ್ಕನಿ ಪಕ್ಕದ ತಡೆಗೋಡೆಯ ಹೊರಗೆ ಕಟ್ಟಡದ ಅಂಚಿನಲ್ಲಿ ಬಂದು ನಿಂತಿದ್ದಾರೆ. ಒಂದು ಹೆಜ್ಜೆ ಮುಂದಿಟ್ಟರು ಅವರು ಕಟ್ಟಡದಿಂದ ಕೆಳಗೆ ಬೀಳುವುದು ಪಕ್ಕಾ. ಇಂತಹ ಪರಿಸ್ಥಿತಿಯಲ್ಲಿ ಸ್ಥಳೀಯರು ಯಾರೋ ಎಸ್‌ಸಿಡಿಎಫ್‌ಗೆ ಮಾಹಿತಿ ನೀಡಿದ್ದಾರೆ, ಕೂಡಲೇ ಕಾರ್ಯಪ್ರವೃತ್ತರಾದ ಅವರು ಕಟ್ಟಡದ ಮೇಲಿನಿಂದಲೇ ಬಲೆಗಳನ್ನು ಕೆಳಗೆ ಇಳಿಬಿಟ್ಟಿದ್ದಾರೆ. ಜೊತೆ ಜೊತೆಗೆ ಹಗ್ಗದ ಮೂಲಕ ಇಬ್ಬರು ಆ ಪಡೆಯ ಯೋಧರು ಕೆಳಗೆ ಜಾರಿಬಂದು ಆ ಮಹಿಳೆ ವಿರೋಧ ವ್ಯಕ್ತಪಡಿಸಿದರು. ಆಕೆಯನ್ನು ಅಲ್ಲಿಂದ ಎತ್ತಿ ಒಳಗೆ ಕರೆದೊಯ್ಯುವ ಮೂಲಕ ರಕ್ಷಣೆ ಮಾಡಿದ್ದಾರೆ ಈ ವೀಡಿಯೋ ಈಗ ಭಾರಿ ವೈರಲ್ ಆಗಿದೆ. ಅನೇಕರು ಮಹಿಳೆಯನ್ನು ರಕ್ಷಿಸಿದ ಯೋಧರಿಗೆ ಧನ್ಯವಾದ ಹೇಳಿದ್ದಾರೆ. ಈ ವಿಡಿಯೋ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.

ವಿಶೇಷ ಮನವಿ:

ಆತ್ಮ8ತ್ಯೆ ಮಾಡಿಕೊಳ್ಳುವ ಮುನ್ನ ಒಮ್ಮೆ ಯೋಚಿಸಿ... ಆತ್ಮ8ತ್ಯೆ ಮಾಡಿಕೊಂಡ ನಂತ್ರ ಮುಂದೇನು? ಸಮಸ್ಯೆಗೆ ಪರಿಹಾರ ಸಿಗುತ್ತಾ? ಇಲ್ಲ, ಕಷ್ಟಗಳಿದ್ದರೆ ಆತ್ಮೀಯರಿಗೆ ಹೇಳಿಕೊಳ್ಳಿ, ಏನೇ ಕಷ್ಟಗಳಿದ್ದರೂ ಆ ಸಮಯ ಕಳೆದು ಹೋಗುತ್ತದೆ ಎಂಬುದು ನೆನಪಿರಲಿ. ನೀವು ಅಥವಾ ನಿಮಗೆ ಪರಿಚಿತರಾದ ಯಾರಾದರೂ 'ಆತ್ಮ8ತ್ಯೆ' ಯೋಚನೆಗಳನ್ನು ಹೊಂದಿದ್ದರೆ, ನಿಮಗಾಗಿ ನೆರವು ಲಭ್ಯವಿದೆ. ಜಗತ್ತಿನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವವರು ನೀವು ಒಬ್ಬರು ಮಾತ್ರವಲ್ಲ ಎಂಬುದನ್ನು ದಯವಿಟ್ಟು ತಿಳಿದುಕೊಳ್ಳಿ. ಕೆಲವೊಮ್ಮೆ ಜೀವನ ಬಹಳ ಬೇಡವೆಂದೇ ಅನಿಸುತ್ತಿರಬಹುದು, ಆದರೆ ನೆರವು ಯಾವಾಗಲೂ ಲಭ್ಯವಿರುತ್ತದೆ. ಜಗತ್ತಿನಲ್ಲಿ ಪರಿಹಾರವಿಲ್ಲದ ಸಮಸ್ಯೆಗಳಿಲ್ಲ. ತಮ್ಮವರ ಅಥ್ವಾ ಯಾರಾದರ ಜೊತೆ ಮಾತನಾಡುವುದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ಖಂಡಿತಾ ಸಿಗುತ್ತೆ. ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಲು ಅಥವಾ ಸಹಾಯವಾಣಿಗೆ ಕರೆ ಮಾಡಿ:

Sahai Helpline - 080 2549 7777

ಇದನ್ನೂ ಓದಿ:
ಎಷ್ಟು ಬಾರಿ ಕೊಟ್ಟರು ಹಣದ ಬದಲು ರಾಷ್ಟ್ರಧ್ವಜವನ್ನೇ ಆಯ್ಕೆ ಮಾಡಿದ ವೃದ್ಧ: ದೇಶಪ್ರೇಮಕ್ಕೆ ದೊಡ್ಡ ಸಲಾಂ
ತಡೆಯಲಾಗದ ಕಾಲು ನೋವು: ಕಾರಿನ ಮೇಲೆ ಸಿಟ್ಟು ತೋರಿದ ಗಾಯಗೊಂಡ ಕಾಡಾನೆ

ಘಟನೆಯ ವೀಡಿಯೋ ಇಲ್ಲಿದೆ ನೋಡಿ:

View post on Instagram