Car Bomb Explosion in Pakistan: ಪಾಕಿಸ್ತಾನದ ಬಲೋಚ್ ಪ್ರಾಂತ್ಯದಲ್ಲಿ ಭೀಕರವಾದ ಕಾರ್‌ ಬಾಂಬ್ ಸ್ಫೋಟಗೊಂಡಿದ್ದು, ಈ ದುರಂತದಲ್ಲಿ ಕನಿಷ್ಠ 10 ಜನ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ.

ಬಲೋಚ್‌ನ ಕ್ವೆಟ್ಟಾದಲ್ಲಿ ಪ್ರಬಲ ಬಾಂಬ್ ಸ್ಫೋಟ

ಪಾಕಿಸ್ತಾನದ ಬಲೋಚ್ ಪ್ರಾಂತ್ಯದಲ್ಲಿ ಭೀಕರವಾದ ಕಾರ್‌ ಬಾಂಬ್ ಸ್ಫೋಟಗೊಂಡಿದ್ದು, ಈ ದುರಂತದಲ್ಲಿ ಕನಿಷ್ಠ 10 ಜನ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ಪಾಕಿಸ್ತಾನದ ಕ್ವೆಟಾದಲ್ಲಿರುವ ಪಾಕಿಸ್ತಾನದ ಪ್ಯಾರಾ ಮಿಲಿಟರಿ ಪ್ರಧಾನ ಕಚೇರಿ ಮುಂದೆಯೇ ಪ್ರಬಲವಾದ ಕಾರು ಬಾಂಬ್ ಸ್ಫೊಟ ಸಂಭವಿಸಿದ್ದು 10 ಜನ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನದ ಪ್ರಮುಖ ಮಾಧ್ಯಮ ಡಾನ್ ನ್ಯೂಸ್ ವರದಿ ಮಾಡಿದೆ.

ಬಾಂಬ್‌ ಸ್ಫೋಟದ ಸದ್ದು ಮೈಲುಗಳಷ್ಟು ದೂರದವರೆಗೆ ಕೇಳಿಬಂದಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಗಿದೆ. ಸ್ಫೋಟಕ ತುಂಬಿದ ವಾಹನವು ಮಾಡೆಲ್ ಟೌನ್‌ನಿಂದ ಫ್ರಾಂಟಿಯರ್ ಕಾನ್‌ಸ್ಟಾಬ್ಯುಲರಿ (ಎಫ್‌ಸಿ) ಪ್ರಧಾನ ಕಚೇರಿಯ ಬಳಿಯ ಹಾಲಿ ರಸ್ತೆಯ ಕಡೆಗೆ ತಿರುಗಿದಾಗ ಸ್ಫೋಟ ಸಂಭವಿಸಿದೆ ಎಂದು ಕ್ವೆಟ್ಟಾದ ವಿಶೇಷ ಕಾರ್ಯಾಚರಣೆಗಳ ಎಸ್‌ಎಸ್‌ಪಿ ಮುಹಮ್ಮದ್ ಬಲೋಚ್ ಹೇಳಿದ್ದಾರೆ.

ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಪ್ರಾಂತೀಯ ಆರೋಗ್ಯ ಸಚಿವ ಬಖತ್ ಕಾಕರ್ ಹೇಳಿದ್ದಾರೆ. ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸುವ ಬಲೋಚ್ ಲಿಬರೇಷನ್ ಆರ್ಮಿಯಂಹ ಗುಂಪುಗಳಿಂದ ಬಲೋಚ್‌ನಲ್ಲಿ ನಿರಂತರ ಸ್ಫೋಟಗಳು ಸಂಭವಿಸುತ್ತಲೇ ಇವೆ. ಇದಕ್ಕೂ ಮೊದಲು ಸೆಪ್ಟೆಂಬರ್ 3 ರಂದು, ಕ್ವೆಟ್ಟಾದಲ್ಲಿ ನಡೆದ ರಾಜಕೀಯ ಸಮಾವೇಶವೊಂದರಲ್ಲಿ ನಡೆದ ಆತ್ಮ*ಹತ್ಯಾ ಬಾಂಬ್ ದಾಳಿಯಲ್ಲಿ 11 ಜನರು ಸಾವನ್ನಪ್ಪಿದರು ಮತ್ತು 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಬಲೂಚಿಸ್ತಾನ್ ರಾಷ್ಟ್ರೀಯ ಪಕ್ಷದ (ಬಿಎನ್‌ಪಿ) ಬೆಂಬಲಿಗರು ನೂರಾರು ಸಂಖ್ಯೆಯಲ್ಲಿ ಸೇರಿದ್ದ ಕ್ರೀಡಾಂಗಣದಲ್ಲಿ ಆಗ ಸ್ಫೋಟ ಸಂಭವಿಸಿತ್ತು.

2024ರಿಂದ ಬಲೂಚಿಸ್ತಾನದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ 782 ಬಲಿ

ಪಾಕಿಸ್ತಾನಿ ಪಡೆಗಳು ಬಲೂಚಿಸ್ತಾನದಲ್ಲಿ ದಶಕದಿಂದಲೂ ನಡೆಯುತ್ತಿರುವ ದಂಗೆಯ ವಿರುದ್ಧ ಹೋರಾಟ ನಡೆಸುತ್ತಲೇ ಬಂದಿವೆ. 2024 ರಲ್ಲಿ ಇಲ್ಲಿ 782 ಜನರು ಸಾವನ್ನಪ್ಪಿದ್ದಾರೆ. ಮಾರ್ಚ್‌ನಲ್ಲಿ, ಬಲೂಚ್ ಲಿಬರೇಶನ್ ಆರ್ಮಿ ಅಲ್ಲಿನ ರೈಲನ್ನು ಹೈಜಾಕ್ ಮಾಡಿ ಕರ್ತವ್ಯ ನಿರತ ಸೈನಿಕರನ್ನು ಕೊಂದಿತು. ಜನವರಿಯಿಂದ ಇಲ್ಲಿವರೆಗೆ 430 ಕ್ಕೂ ಹೆಚ್ಚು ಜನರು ದಾಳಿಯಲ್ಲಿ ಸಾವನ್ನಪ್ಪಿದ್ದಾರೆ, ಅವರಲ್ಲಿ ಹೆಚ್ಚಿನವರು ಭದ್ರತಾ ಸಿಬ್ಬಂದಿಯಾಗಿದ್ದಾರೆ.

ಈ ಪ್ರಬಲ ಬಾಂಬ್ ಸ್ಫೋಟದ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿವೆ.

ಇದನ್ನೂ ಓದಿ: ತನ್ನ ಗರ್ಭಿಣಿಯಾಗಿಸಿ ಮದುವೆಗೊಪ್ಪದ ಬಾಯ್‌ಫ್ರೆಂಡ್ ಕತೆ ಮುಗಿಸಿದ 16ರ ಅಪ್ರಾಪ್ತೆ

ಇದನ್ನೂ ಓದಿ: ದಿನಾ ಮನೆ ಕೆಲಸಕ್ಕೆ ಸಹಾಯ ಮಾಡುವ ಮಕ್ಕಳು ಬದುಕಿನಲ್ಲಿ ಹೆಚ್ಚು ಯಶಸ್ವಿಯಾಗ್ತಾರೆ: ಅಧ್ಯಯನ ವರದಿ

Scroll to load tweet…