ಸ್ಕೂಟಿಯಿಂದ ಕಾರಿಗೆ ಡಿಕ್ಕಿ ಹೊಡೆದ ಮಹಿಳೆಯೊಬ್ಬರು, ಹಾನಿಗೆ ಪರಿಹಾರ ಕೇಳಿದಾಗ ತಾನು ಐಪಿಎಸ್ ಅಧಿಕಾರಿಯ ತಾಯಿ ಎಂದು ಹೇಳಿ ಅವಾಜ್ ಹಾಕಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅಧಿಕಾರದ ದುರ್ಬಳಕೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
ಇತ್ತೀಚೆಗೆ ರಸ್ತೆಗಳಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ ಎಂದು ವರದಿಗಳು ಹೇಳುತ್ತವೆ. ಈ ನಡುವೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಒಂದು ವಿಡಿಯೋ ವೈರಲ್ ಆಗಿದೆ. ಒಬ್ಬ ಮಹಿಳೆ ಆಕ್ಸಿಡೆಂಟ್ ಮಾಡಿದ್ದಕ್ಕೆ ಆಕೆಯ ಬಳಿ ಪರಿಹಾರವನ್ನು ಕೇಳಲಾಗಿದೆ. ಆದರೆ, ಈ ಮಹಿಳೆ ನಾನ್ಯಾರು ಗೊತ್ತಾ, ಒಬ್ಬ ಐಪಿಎಸ್ ಅಧಿಕಾರಿಯ ತಾಯಿ ಎಂದು ಹೇಳಿ ಪರಿಹಾರದ ಹಣ ಕೊಡದೇ ಅವಾಜ್ ಹಾಕಿದ್ದು, ಇದೀಗ ಭಾರೀ ವೈರಲ್ ಆಗಿದೆ.
ಐಪಿಎಸ್ ಅಧಿಕಾರಿಯ ತಾಯಿ:
ನೀವು ನೋಡುತ್ತಿರುವ ವಿಡಿಯೋ ತುಂಬಾ ಕೆಟ್ಟದಾಗಿ ವರ್ತಿಸುವ ಮಹಿಳೆಯ ದೃಶ್ಯವಾಗಿತ್ತು. ಅವರು ಅಜಾಗರೂಕತೆಯಿಂದ ಓಡಿಸಿದ ಸ್ಕೂಟಿ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ನಂತರ, ಕಾರಿನ ಮಾಲೀಕ ತನ್ನ ಕಾರಿಗೆ ಆದ ಹಾನಿಗೆ ಪರಿಹಾರ ಕೇಳಿದ್ದಾರೆ. ಆಗ ಮಹಿಳೆ ಆತನೊಂದಿಗೆ ಜಗಳಕ್ಕಿಳಿದಿರುವುದು ವಿಡಿಯೋದಲ್ಲಿದೆ. ಈ ಮಧ್ಯೆ, ತಾನು ಐಪಿಎಸ್ ಅಧಿಕಾರಿಯ ತಾಯಿ ಎಂದು ಅವರು ಹೇಳಿಕೊಳ್ಳುತ್ತಾರೆ. ಈ ವೇಳೆ ಅವರು ತನಗೆ ಸಾಧ್ಯವಾದಷ್ಟು ಜೋರಾಗಿ ಬೈಯುವುದನ್ನೂ ಕೇಳಬಹುದು. ಇನ್ನು ವಿಶೇಷವಾಗಿ ನೇಪಾಳದ 'ನೆಪೋ ಕಿಡ್ಸ್' ಪ್ರತಿಭಟನೆಯೊಂದಿಗೆ ಕೆಲವರು ಈ ವಿಡಿಯೋವನ್ನು ಜೋಡಿಸಿದ್ದರಿಂದ, ವಿಡಿಯೋದ ಕೆಳಗೆ ಕಾಮೆಂಟ್‌ಗಳು ತುಂಬಿ ತುಳುಕುತ್ತಿವೆ. ಜನನಿಬಿಡ ರಸ್ತೆಯಲ್ಲಿ ಮಹಿಳೆಯೊಬ್ಬರ ಸ್ಕೂಟಿ ಕಾರಿಗೆ ತಾಗಿದ ವಿಚಾರಕ್ಕೆ ಸಂಬಂಧಿಸಿದ ಜಗಳ ಈ ವಿಡಿಯೋದಲ್ಲಿದೆ.
ನಾನು ಐಪಿಎಸ್ ಅಧಿಕಾರಿಯ ತಾಯಿ ಅಂತ ನಿಮಗೆ ಗೊತ್ತಾ? ನಿಮ್ಮೆಲ್ಲರನ್ನೂ ನಾನು ಅರೆಸ್ಟ್ ಮಾಡಿಸುತ್ತೇನೆ. ನನ್ನ ಮಗನ ನಂಬರ್‌ಗೆ ಕಾಲ್ ಮಾಡಬೇಕಾ? ನಾನು ಐಪಿಎಸ್ ತಾಯಿ. ನನ್ನ ಮಗ ಕಷ್ಟಪಟ್ಟು ಓದಿದ್ದಾನೆ; ನಿಮ್ಮ ಹಾಗೆ ತೊಂದರೆ ಮಾಡಿ ಸಮಯ ಹಾಳು ಮಾಡಿಲ್ಲ ಎಂದು ಅವರು ಅಸಮಾಧಾನದಿಂದ ಕೂಗಾಡಿದರು. ಈ ಮಧ್ಯೆ, ಮತ್ತೊಬ್ಬ ವ್ಯಕ್ತಿ ತಾನು ಕೂಡ ಐಪಿಎಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ ಎಂದು ಹೇಳಿದಾಗ, ನೀವು ಪರೀಕ್ಷೆ ಬರೆಯಬಹುದು, ಆದರೆ ಎಂದಿಗೂ ಪಾಸ್ ಆಗುವುದಿಲ್ಲ. ನೀವು ಎಂದಿಗೂ ಗೆಲ್ಲುವುದಿಲ್ಲ. ನೀವು ಏನನ್ನೂ ಸಾಧಿಸುವುದಿಲ್ಲ. ನಿಮಗೆ ನನ್ನಿಂದ ಹಣ ಬೇಕಾ? ಎಂದು ಕೂಗಾಡುವುದನ್ನು ವಿಡಿಯೋದಲ್ಲಿ ನೋಡಬಹುದು.
ಸಾಮಾಜಿಕ ಮಾಧ್ಯಮ ಪ್ರತಿಕ್ರಿಯೆ:
ಮಹಿಳೆಯ ಭಾವನಾತ್ಮಕ ಪ್ರತಿಕ್ರಿಯೆ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಎರಡು ಗುಂಪುಗಳಾಗಿ ವಿಂಗಡಿಸಿದೆ. ಕೆಲವರು, ಮೂರ್ನಾಲ್ಕು ಯುವಕರು ಸೇರಿ ಆಕೆಯನ್ನು ಕೆರಳಿಸಿದರು, ಅದಕ್ಕಾಗಿಯೇ ಅವರು ಅಷ್ಟು ಕೋಪಗೊಂಡರು ಎಂದು ಬರೆದಿದ್ದಾರೆ. ಆದರೆ, ಐಪಿಎಸ್ ಅಧಿಕಾರಿಯ ತಾಯಿ ಎಂಬುದು ಭಾರತದಲ್ಲಿ ವಿಶೇಷ ಸವಲತ್ತುಳ್ಳ ಹುದ್ದೆಯೇ ಎಂದು ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಐಪಿಎಸ್ ಅಧಿಕಾರಿಗಳಿಗೆ ಅವರ ಕೆಲಸಕ್ಕೆ ತಕ್ಕಂತೆ ಸಮಾಜ ಗೌರವ ನೀಡುತ್ತದೆ. ಆದರೆ ಅವರ ಕುಟುಂಬದವರನ್ನೆಲ್ಲಾ ಸಾರ್ವಜನಿಕರು ಗೌರವಿಸಬೇಕಾದ ಅಗತ್ಯವಿಲ್ಲ ಎಂದು ಹಲವರು ಬರೆದಿದ್ದಾರೆ.
