ಒಬ್ಬ ಭಾರತೀಯ ಸ್ಟಾರ್ಟಪ್‌ ಸಂಸ್ಥಾಪಕಿ ತನ್ನ ಸಂಸ್ಥೆಗೆ ನೇಮಕವಾದ ಉದ್ಯೋಗಿಯೊಬ್ಬನ ವಂಚನೆಯ ಅನುಭವ ಹಂಚಿಕೊಂಡಿದ್ದಾರೆ. ಸ್ಟಾರ್ಟಪ್‌ಗಳಲ್ಲಿ ಉದ್ಯೋಗ ನೇಮಕಾತಿಯ ಸವಾಲುಗಳನ್ನು ಎತ್ತಿ ತೋರಿಸುವ ಈ ಅನುಭವ ವೈರಲ್‌ ಆಗಿದೆ. 

ಜೆನ್‌ ಝೀ ಸಾಹಸಿಗಳು ಸ್ಟಾರ್ಟಪ್‌ಗಳನ್ನು ಕಟ್ಟುವುದು, ಅಲ್ಲಿ ತಮ್ಮದೇ ಪ್ರಾಯದ ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದು ಇಂದು ಸಾಮಾನ್ಯ. ಹಾಗಂತ ಹೊಸ ಉದ್ಯೋಗಿಗಳು, ಜೆನ್‌ ಝೀ ಕೆಲಸಗಾರರಿಂದ ಒಳ್ಳೆಯ ಅನುಭವವೇ ಆಗುತ್ತದೆ ಎಂದೇನಿಲ್ಲ. ಉದಾಹರಣೆಗೆ ಇಲ್ಲೊಬ್ಬ ಭಾರತೀಯ ಸ್ಟಾರ್ಟಪ್‌ ಸಂಸ್ಥಾಪಕಿ ತನ್ನ ಸಂಸ್ಥೆಗೆ ಮಾಡಿಕೊಂಡ ಉದ್ಯೋಗಿಯೊಬ್ಬನ ನೇಮಕಾತಿಯ ಭಯಾನಕ ಅನುಭವವನ್ನು ನೋಡಬಹುದು. ಇದರಲ್ಲಿ ಅನುಭವಿಸಿದ ಹಾರರ್‌ನಿಂದಾಗಿ ಆಕೆ 3 ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಆ ಉದ್ಯೋಗಿಯನ್ನು ವಜಾ ಮಾಡಬೇಕಾಯ್ತು.

ಟಿಂಟ್ ಕಾಸ್ಮೆಟಿಕ್ಸ್‌ನ ಸಂಸ್ಥಾಪಕಿ ಅರ್ಷಿಯಾ ಕೌರ್ ಎಂಬವರು ಸ್ಟಾರ್ಟ್‌ಅಪ್ ಅನ್ನು ನಡೆಸುವಾಗ ಎದುರಾಗುವ ಹಲವು ಸವಾಲುಗಳ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಮಾತನಾಡಿದ್ದಾರೆ, ಅದರಲ್ಲಿ ಪ್ರಮುಖವಾದುದು, ಉದ್ಯೋಗಿಗಳು ಕಂಪನಿಯನ್ನು ವಂಚಿಸಲು ಮುಂದಾಗುವುದು. ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ಇನ್‌ಸ್ಟಾಗ್ರಾಮ್ ವೀಡಿಯೊಗಳಲ್ಲಿ ಆಕೆ ತಾವು ಮಾಡಿದ ಒಂದು ನೇಮಕಾತಿಯ ಭಯಾನಕ ಕಥೆಯನ್ನು ಹಂಚಿಕೊಂಡಿದ್ದಾರೆ.

ಕೌರ್ ತನ್ನ ಸ್ಟಾರ್ಟ್‌ಅಪ್ ಮಾರ್ಕೆಟಿಂಗ್ ಮುಖ್ಯಸ್ಥ ಹುದ್ದೆಗೆ ಒಬ್ಬ ವ್ಯಕ್ತಿಯನ್ನು ನೇಮಿಸಿಕೊಂಡಿದ್ದರು. ಅವರ ದಾಖಲೆಗಳನ್ನು ನೋಡಿದರೆ ಆ ವ್ಯಕ್ತಿಯ ಪ್ರತಿಭೆ "ಅದ್ಭುತ" ಎಂಬಂತೆ ಕಾಣುತ್ತಿತ್ತು. ಆದರೆ ಆ ವ್ಯಕ್ತಿಗೆ ನಿಯೋಜಿಸಲಾದ ಪ್ರತಿಯೊಂದು ಕೆಲಸವನ್ನೂ ಮಾಡಲು ಅವರು ವಿಫಲರಾದರು. ಅಂತಿಮವಾಗಿ ಕಂಪನಿಯು ಮೂರು ತಿಂಗಳಿಗಿಂತಲೂ ಕಡಿಮೆ ಅವಧಿಯಲ್ಲಿಯೇ ಅವರನ್ನು ವಜಾಗೊಳಿಸಬೇಕಾಯಿತು. ಆ ವ್ಯಕ್ತಿಯು ತನ್ನ ಸಂಪೂರ್ಣ ಸಿವಿಯನ್ನು ನಕಲಿ ಮಾಡಿದ್ದ, ಕೆಲಸ ಪಡೆಯಲು ನಕಲಿ ಸಂಬಳ ಸ್ಲಿಪ್‌ಗಳನ್ನು ಸೃಷ್ಟಿಸಿಕೊಂಡು ವಂಚಿಸಿದ್ದ ಎಂದು ಗೊತ್ತಾಯಿತು.

ನೇಮಕಾತಿ ಮಾಡಿದ್ದು ಹೇಗೆ? ನವೆಂಬರ್ 2024ರಲ್ಲಿ ಕೌರ್‌ ಮಾರ್ಕೆಟಿಂಗ್ ಮುಖ್ಯಸ್ಥ ಹುದ್ದೆಗೆ ಯಾರನ್ನಾದರೂ ನೇಮಿಸಿಕೊಳ್ಳಲು ಬಯಸಿದ್ದರು. ಸಂಸ್ಥೆಯ ಪ್ರಮಾಣ, ಬೆಳವಣಿಗೆ, ಇ-ಕಾಮರ್ಸ್, ಕಾರ್ಯಕ್ಷಮತೆ, ಜಾಹೀರಾತುಗಳು, ಎಲ್ಲವನ್ನೂ ನಿರ್ವಹಿಸಬಲ್ಲ ವ್ಯಕ್ತಿ ಬೇಕಾಗಿತ್ತು. ಒಬ್ಬ ವ್ಯಕ್ತಿ ಸ್ಟಾರ್ಟ್‌ಅಪ್ ಅನ್ನು ಸಂಪರ್ಕಿಸಿದ. ಕೌರ್ ಆತನ ಕಾಗದಪತ್ರ ಪರಿಶೀಲಿಸಿದಾಗ "ಅದ್ಭುತ"ವಾಗಿ ಕಂಡ. "ಅವರು ತಮ್ಮ ಹಿಂದಿನ ಕೆಲಸದ ಬಗ್ಗೆ ನಮಗೆ ವಿವರಿಸಿದರು. ಅವರ ಹಿಂದಿನ ಕಂಪನಿಗೆ ಅವರು ಮಾಡಿದ ಎಲ್ಲಾ ಕೆಲಸ, ಬೆಳವಣಿಗೆ ಎಲ್ಲವೂ ಅತ್ಯಂತ ಕಾನೂನುಬದ್ಧವಾಗಿ ಕಾಣುತ್ತಿದ್ದವು" ಎಂದು ಕೌರ್ ಹೇಳಿದರು.

ಕಂಪನಿಯು ಅವರನ್ನು ನೇಮಕ ಮಾಡಿಕೊಂಡಿತು. ಆದರೆ ಒಂದು ತಿಂಗಳೊಳಗೆ. ʼಏನೋ ತಪ್ಪಾಗಿದೆʼ ಎಂಬ ವಾಸನೆ ಕೌರ್‌ಗೆ ಬಡಿಯಿತು. ಮಾರ್ಕೆಟಿಂಗ್ ಮುಖ್ಯಸ್ಥರು ಆಡಳಿತ ತಂಡ ಅಥವಾ ನಿರ್ವಹಣೆಯೊಂದಿಗೆ ಸಂವಹನ ನಡೆಸಲು ಸಾಧ್ಯವಾಗಲಿಲ್ಲ. ಅವರ ಎಲ್ಲಾ ಕೆಲಸಗಳನ್ನು ಇತರ ತಂಡದ ಸದಸ್ಯರಿಗೆ ನೀಡಲಾಯಿತು ಅಥವಾ ಸಂಸ್ಥಾಪಕರು ಅವುಗಳನ್ನು ಮಾಡಬೇಕಾಯಿತು. ಹಲವಾರು ಮೀಟಿಂಗ್‌ಗಳು ಮತ್ತು ಎಚ್ಚರಿಕೆಗಳ ನಂತರ ಆ ಉದ್ಯೋಗಿಯನ್ನು ವಜಾಗೊಳಿಸಲಾಯಿತು. ಅವರು ಸೇರಿದ ಕೇವಲ ಎರಡೂವರೆ ತಿಂಗಳ ನಂತರ.

ಆ ವ್ಯಕ್ತಿ ಇತರ ಬ್ರಾಂಡ್‌ಗಳಿಗೆ ಇಷ್ಟು ಅದ್ಭುತ ಕೆಲಸ ಮಾಡಿದ್ದಾನೆಂದು ಹೇಳಿಕೊಂಡೂ ತನ್ನ ಕಂಪನಿಗೆ 5% ಕೂಡ ಹಣವನ್ನು ತರಲು ಸಾಧ್ಯವಾಗದಿದ್ದುದು ಏಕೆ ಎಂದು ಕೌರ್ ಆಶ್ಚರ್ಯ ಪಡಲು ಪ್ರಾರಂಭಿಸಿದರು. ಕೊನೆಗೆ, ಆಕೆ ಅವನ ಹಿಂದಿನ ಸಂಬಳ ಚೀಟಿಗಳನ್ನು ಪರಿಶೀಲಿಸಿದರು. ಆಗ ಅವಳು ತಾನು ಮೋಸ ಹೋಗಿದ್ದೇನೆ ಎಂದು ಅರಿತುಕೊಂಡರು.

ಸಂಬಳ ಚೀಟಿಗಳೆಲ್ಲವೂ ಮೈಕ್ರೋಸಾಫ್ಟ್ ಎಕ್ಸೆಲ್‌ನಲ್ಲಿ ಮಾಡಿದ ನಕಲಿಯಾಗಿದ್ದವು. ಕೆಲವು ಸ್ಲಿಪ್‌ಗಳ ಪ್ರಕಾರ ಈ ಉದ್ಯೋಗಿ ತಿಂಗಳ 31ರಲ್ಲಿ 31 ದಿನಗಳೂ ಕೆಲಸ ಮಾಡಿದ್ದಾನೆಂದು ಇತ್ತು. ಅಂದರೆ ಅವನು ವಾರಾಂತ್ಯಗಳಲ್ಲಿಯೂ ಕೆಲಸ ಮಾಡಿದ್ದನೆಂದಿತ್ತು. ಆದರೆ ಸ್ಲಿಪ್‌ಗಳಲ್ಲಿ ಕಂಪನಿಯ ಯಾವುದೇ ಮುದ್ರೆ ಅಥವಾ ಸಹಿ ಇರಲಿಲ್ಲ.

ಕೌರ್ ತಾನು ಕಠಿಣ ರೀತಿಯಲ್ಲಿ ಪಾಠ ಕಲಿತಿದ್ದೇನೆ, ಇತರರು ಅದೇ ತಪ್ಪನ್ನು ಮಾಡದಂತೆ ತನ್ನ ಕಥೆಯನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ. ಯಾರನ್ನಾದರೂ ನೇಮಿಸಿಕೊಳ್ಳುವ ಮೊದಲು ಎಲ್ಲವನ್ನೂ ಸರಿಯಾಗಿ ಪರಿಶೀಲಿಸುವಂತೆ ಕೇಳಿಕೊಂಡಿದ್ದಾರೆ.

“ನೀವು ಹಣವಿಲ್ಲದ ಕಠಿಣ ದಿನಗಳನ್ನು ಕಂಡಿರುತ್ತೀರಿ. ನಿಮಗೆ ಆಗ ಪ್ರತಿಯೊಂದು ಪೈಸೆಯೂ ಮುಖ್ಯ. ಹೀಗೆ ಮಾಡಿ ಗಳಿಸಿದ ಹಣವನ್ನು ಕಳೆದುಕೊಳ್ಳುತ್ತೀರಿ. ಜನ ಏನು ಕೇಳಿದರೂ ನೀವು ಅವರಿಗೆ ಪಾವತಿಸಬಹುದು ಎಂಬುದು ಸಾಧ್ಯವಾಗುವ ಮಾತಲ್ಲ. ಸ್ಟಾರ್ಟಪ್‌ ಸ್ಥಾಪಕರೇ ದಯವಿಟ್ಟು ಈ ತಪ್ಪನ್ನು ಮಾಡಬೇಡಿ. ನೀವು ನೇಮಿಸಿಕೊಳ್ಳಲು ನಿರ್ಧರಿಸಿದ ವ್ಯಕ್ತಿಯ ಬಗ್ಗೆ ಸರಿಯಾದ ಮಾಹಿತಿಯನ್ನು ಹೊಂದಿರುವುದು ನಿಮ್ಮ ಹಕ್ಕು” ಎಂದು ಅವರು ಬರೆದಿದ್ದಾರೆ.

View post on Instagram