ಬೆಂಗಳೂರಿನ ಪಾದಚಾರಿ ಮಾರ್ಗದ ವೈರಲ್ ವಿಡಿಯೋಗೆ ಪ್ರತಿಕ್ರಿಯೆಯಾಗಿ ಬೆಂಗಳೂರು ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಅದೇ ಮಾರ್ಗದಲ್ಲಿ ಕೂತು ಊಟ ಸೇವಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಈ ನಡೆ ಪ್ರಚಾರದ ಗಿಮಿಕ್ ಎನ್ನುತ್ತಿದ್ದಾರೆ. ವಿದೇಶಿಗರ ಟೀಕೆಗೆ ಮಾತ್ರ ಸ್ಪಂದಿಸುವ ಅಧಿಕಾರಿಗಳ ಬಗ್ಗೆ ಜನಾಕ್ರೋಶ.
ಬೆಂಗಳೂರು (ಸೆ.14): ಬೆಂಗಳೂರಿನ ಪಾದಚಾರಿ ಮಾರ್ಗಗಳ ಸ್ಥಿತಿಗತಿ ಕುರಿತು ಕೆನಡಾ ಮೂಲದ ವ್ಯಕ್ತಿಯೊಬ್ಬರು ಮಾಡಿದ್ದ ವಿಡಿಯೋ ರಾಷ್ಟ್ರಮಟ್ಟದಲ್ಲಿ ವೈರಲ್ ಆದ ನಂತರ, ಗ್ರೇಟರ್ ಬೆಂಗಳೂರು ಕೇಂದ್ರ ಪಾಲಿಕೆ ಕಮಿಷನರ್ ರಾಜೇಂದ್ರ ಚೋಳನ್ ಅವರು ಮೆಜೆಸ್ಟಿಕ್‌ನಲ್ಲಿ ಅದೇ ಪಾದಚಾರಿ ಮಾರ್ಗದಲ್ಲಿ ಕುಳಿತು ತಿಂಡಿ ಸೇವಿಸಿ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ. ಈ ನಡೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಕೆನಡಾ ಮೂಲದ ವ್ಯಕ್ತಿಯೊಬ್ಬರು ಬೆಂಗಳೂರಿನ ಪಾದಚಾರಿ ಮಾರ್ಗದಲ್ಲಿ ಒಂದೂವರೆ ಕಿಲೋಮೀಟರ್ ದೂರವನ್ನು ನಡೆದು ಹೋಗುವುದು ಎಷ್ಟು ಕಷ್ಟ ಎಂಬುದನ್ನು ತೋರಿಸುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಬೆಂಗಳೂರಿನ ಪಾದಚಾರಿ ಮಾರ್ಗಗಳ ಅವ್ಯವಸ್ಥೆ ಮತ್ತು ಒತ್ತುವರಿ ಕುರಿತು ಟೀಕಿಸಲಾಗಿತ್ತು. ವಿಡಿಯೋ ದೇಶಾದ್ಯಂತ ವೈರಲ್ ಆಗಿ, ಬೆಂಗಳೂರಿನ ಹೆಸರಿಗೆ ಧಕ್ಕೆಯಾಗಿತ್ತು.
ಈ ವಿಡಿಯೋ ವೈರಲ್ ಆದ ತಕ್ಷಣ ಎಚ್ಚೆತ್ತ ಕೇಂದ್ರ ಪಾಲಿಕೆ ಕಮಿಷನರ್ ರಾಜೇಂದ್ರ ಚೋಳನ್, ಖಾಸಗಿ ಸ್ವಯಂಸೇವಕರ ತಂಡದೊಂದಿಗೆ ಮೆಜೆಸ್ಟಿಕ್‌ನ ಅದೇ ಪಾದಚಾರಿ ಮಾರ್ಗವನ್ನು ಸ್ವಚ್ಛಗೊಳಿಸುವ ಕಾರ್ಯಾಚರಣೆಗೆ ಇಳಿದರು. ಸ್ವಚ್ಛಗೊಳಿಸಿದ ನಂತರ, ಅದೇ ಜಾಗದಲ್ಲಿ ಕುಳಿತು ತಿಂಡಿ ಸೇವಿಸುವ ಮೂಲಕ ಅಭಿಯಾನಕ್ಕೆ ವಿಶೇಷ ಮೆರುಗು ನೀಡಿದರು.
ಇಷ್ಟಕ್ಕೇ ನಿಲ್ಲದೆ, ವಿಡಿಯೋ ಮಾಡಿದ್ದ ಕೆನಡಾದ ಪ್ರವಾಸಿಯನ್ನು ಕರೆಸಿ, ಸ್ವಚ್ಛಗೊಂಡ ಪಾದಚಾರಿ ಮಾರ್ಗದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವಂತೆ ಮತ್ತೊಂದು ವಿಡಿಯೋ ಮಾಡಿಸಿದ್ದಾರೆ. "ದೇಶಾದ್ಯಂತ ಹೋದ ಮಾನವನ್ನು ಉಳಿಸಿಕೊಳ್ಳಲು ಇಂತಹ 'ಹೈಡ್ರಾಮಾ' ಅಗತ್ಯವಿತ್ತೇ?" ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಕಮಿಷನರ್ ನಡೆಯ ಕುರಿತು ಟೀಕೆಗಳು
ಈ ಘಟನೆಯು ವಿದೇಶಿ ಪ್ರವಾಸಿಗರೊಬ್ಬರು ಟೀಕಿಸಿದಾಗ ಮಾತ್ರ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಸಾಮಾನ್ಯವಾಗಿ, ನಗರದ ನಾಗರಿಕರು ನೀಡಿದ ದೂರುಗಳಿಗೆ ಈ ಮಟ್ಟದ ತಕ್ಷಣದ ಪ್ರತಿಕ್ರಿಯೆ ಸಿಗುವುದಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತ್ಯಾಪೆ ಹಚ್ಚುವ' ಕೆಲಸ: ಕಮಿಷನರ್ ಅವರು ಪಾದಚಾರಿ ಮಾರ್ಗದಲ್ಲಿ ಕುಳಿತು ತಿಂಡಿ ಸೇವಿಸುವುದು, ವಿದೇಶಿ ವ್ಯಕ್ತಿಯಿಂದ ಮೆಚ್ಚುಗೆ ವಿಡಿಯೋ ಮಾಡಿಸುವುದು ಕೇವಲ 'ತ್ಯಾಪೆ ಹಚ್ಚುವ' ಕೆಲಸ ಎಂದು ಟೀಕಿಸಲಾಗಿದೆ. ಇದು ಶಾಶ್ವತ ಪರಿಹಾರವಲ್ಲ, ಬದಲಾಗಿ ಕೇವಲ ಪ್ರಚಾರಕ್ಕಾಗಿ ಮಾಡಿರುವ ಪ್ರಯತ್ನ ಎಂದು ಸಾರ್ವಜನಿಕರು ದೂರಿದ್ದಾರೆ.
ಖಾಸಗಿ ಸ್ವಯಂಸೇವಕರ ಬಳಕೆ: ಪಾಲಿಕೆ ಸಿಬ್ಬಂದಿ ಮಾಡಬೇಕಿದ್ದ ಕೆಲಸಕ್ಕೆ ಖಾಸಗಿ ಸ್ವಯಂಸೇವಕರನ್ನು ಬಳಸಿಕೊಂಡಿದ್ದಕ್ಕೆ ಟೀಕೆಗಳು ವ್ಯಕ್ತವಾಗಿವೆ. ಪಾಲಿಕೆಯು ನಿರ್ವಹಣಾ ಸಿಬ್ಬಂದಿಯನ್ನು ಹೊಂದಿದ್ದರೂ, ಯಾಕೆ ಖಾಸಗಿ ವ್ಯಕ್ತಿಗಳನ್ನು ಬಳಸಿಕೊಳ್ಳಲಾಗಿದೆ ಎಂಬ ಪ್ರಶ್ನೆ ಎದ್ದಿದೆ.
ಒಟ್ಟಾರೆಯಾಗಿ, ಈ ಘಟನೆಯು ಬೆಂಗಳೂರಿನ ಮೂಲಭೂತ ಸೌಕರ್ಯಗಳ ಕುರಿತು ಸರ್ಕಾರದ ನಿರ್ಲಕ್ಷ್ಯವನ್ನು ಎತ್ತಿ ತೋರಿಸಿದ್ದು, ಸಮಸ್ಯೆಗಳನ್ನು ಪರಿಹರಿಸುವುದಕ್ಕಿಂತ, ಅದನ್ನು ಪ್ರಚಾರ ಗಿಟ್ಟಿಸುವ ಸಾಧನವಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ಭಾವನೆಯನ್ನು ಸಾರ್ವಜನಿಕರಲ್ಲಿ ಮೂಡಿಸಿದೆ. ಈ ವಿಚಾರ ಈಗ 'ಜಿಬಿಎ ಕೇಂದ್ರ ಪಾಲಿಕೆ ಕಮಿಷನರ್ ನಡೆ' ಕುರಿತು ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಕೆನಡಾದ ಇನ್‌ಪ್ಲೂಯೆನ್ಸರ್ ಕೆಲಬ್ ವಿಡಿಯೋ ಬೆನ್ನಲ್ಲೇ ಕ್ಲೀನ್:
ಕಳೆದ ಮೂರು ದಿನಗಳ ಹಿಂದೆ ವಿದೇಶಿ ಇನ್‌ಪ್ಲೂಯೆನ್ಸರ್ ಕೆಲಬ್ ಮೆಜೆಸ್ಟಿಕ್ ಸುತ್ತಮುತ್ತಲಿನ ಪಾದಚಾರಿ ಮಾರ್ಗಗಳ ಸ್ಥಿತಿಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋಗಳನ್ನು ಹಂಚಿಕೊಂಡಿದ್ದರು. ಅದನ್ನು ಕೇಂದ್ರ ನಗರ ಪಾಲಿಕೆ ಆಯುಕ್ತರು ಗಂಭೀರ ವಿಷಯವಾಗಿ ಪರಿಗಣಿಸಿ ಕೂಡಲೇ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅದರಂತೆ ನಿನ್ನೆ ಗಾಂಧಿ ನಗರ ವಿಭಾಗದ ಅಧಿಕಾರಿ, ಸಿಬ್ಬಂದಿಗಳ ತಂಡುವು ಪಾದಚಾರಿ ಮಾರ್ಗದಲ್ಲಿ ಸಂಪೂರ್ಣ ಸ್ವಚ್ಛತಾ ಕಾರ್ಯ ಕೈಗೊಂಡು, ಜೆಟ್ಟಿಂಗ್ ಯಂತ್ರದ ಮೂಲಕ ಪಾದಚಾರಿ ಮಾರ್ಗ ಸ್ವಚ್ಛಗೊಳಿಸಿ, ವಾಸನೆ ಬರದಂತೆ ಬ್ಲೀಚಿಂಗ್ ಪೌಡರ್ ಹಾಕಿ, ಸ್ವಚ್ಛಗೊಳಿಸಲಾಗಿತ್ತು. ಇಂದು ಅದೇ ಜಾಗದಲ್ಲಿ ಪಾದಚಾರಿ ಮಾರ್ಗವನ್ನು ಆಕರ್ಷಣಿಯ ಸ್ಥಳವನ್ನಾಗಿ ಬದಲಾಯಿಸಿ, ಅಲ್ಲಿಯೇ ಕುಳಿತು ಊಟ ಮಾಡಿದ್ದಾರೆ.
