‘ಚಿಕ್ಕೆಜಮಾನಿ’ ಧಾರಾವಾಹಿಯಲ್ಲಿ ಹೀರೋಯಿನ್ ಕಾವೇರಿ ತಾನು ಪ್ರೀತಿಸಿದವನನ್ನು ಮದುವೆ ಆಗೋ ಬದಲು, ಲವ್ವರ್ ತಂದೆಯನ್ನು ಮದುವೆ ಆಗುತ್ತಾಳೆ. ಇದಕ್ಕೆ ಕಾರಣ ಏನು?
‘ಚಿಕ್ಕೆಜಮಾನಿ’ ಧಾರಾವಾಹಿಯಲ್ಲಿ ಕಾವೇರಿ ನದಿ ಕರುನಾಡಿನ ಜೀವನದಿ ಆದ್ರೆ ನಮ್ಮ ಕಾವೇರಿ ಮನೆಯವರ ಜೀವನಾಡಿ. ಅಪ್ಪನ ಕನಸನ್ನು ನನಸು ಮಾಡುವ ಸಂಕಲ್ಪದೊಂದಿಗೆ ತನ್ನ ಭವಿಷ್ಯವನ್ನು ಅರಸುತ್ತಾ ಪರಶುರಾಮ್ ಕಂಪನಿ ಸೇರುವ ಕಾವೇರಿಯ ಮುಂದೆ ಅಪ್ಪನ ಆದರ್ಶಗಳನ್ನು ನಿಜ ಮಾಡುವ ಅವಕಾಶಗಳು ತೆರೆದುಕೊಳ್ಳುತ್ತಾ ಹೋಗುತ್ತದೆ.
ಅಪ್ಪನ ಸ್ನೇಹಿತರಾದ ಪರಶುರಾಮ್ ಹಾಗು ಅವರ ಕುಟುಂಬ ಕಾವೇರಿಗೆ ಒತ್ತಾಸೆಯಾಗಿ ನಿಲ್ಲುತ್ತದೆ. ವಿದೇಶದಲ್ಲಿದ್ದು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿದ್ದ ಪ್ರೀತಂ ಕಾವೇರಿಯ ಒಡನಾಟದಿಂದ ಎಲ್ಲರೂ ಪ್ರೀತಿಸುವಂತ ಜವಾಬ್ಧಾರಿಯುತ ವ್ಯಕ್ತಿಯಾಗಿ ಬದಲಾಗುತ್ತಾನೆ. ಇನ್ನೊಂದೆಡೆ ಕಾವೇರಿಯ ಬಾಲ್ಯದ ಗೆಳೆಯ ಯದು ಕಾವೇರಿಯ ಸ್ನೇಹವನ್ನು ಪ್ರೀತಿಯಾಗಿ ಬದಲಿಸುವಲ್ಲಿ ಸೋತು ಅವಳನ್ನು ಪಡೆಯಬೇಕು ಎಂಬ ಹಠಕ್ಕೆ ಬಿದ್ದು ಕಾವೇರಿಯ ಭವಿಷ್ಯವನ್ನೂ ಹಾಳು ಮಾಡಿ ತನ್ನ ವ್ಯಕ್ತಿತ್ವವನ್ನೇ ನಾಶ ಮಾಡಿಕೊಳ್ಳುತ್ತಾನೆ. ಮೊದಮೊದಲು ಪ್ರೀತುವಿನ ಪ್ರೀತಿಯನ್ನು ಒಪ್ಪಿಕೊಳ್ಳದ ಕಾವೇರಿ ನಂತರ ಅವನ ಒಳ್ಳೆಯತನಕ್ಕೆ ಸೋತು ಪ್ರೀತಿಸುತ್ತಿದ್ದರೂ ಸಹ ಯದುವಿನಿಂದ ಆದ ಮೋಸಕ್ಕೆ ಪ್ರೀತಿಯನ್ನು ತನ್ನ ಮನಸಿನ ಒಳಗಡೆಯೇ ಮಣ್ಣು ಮಾಡಿಕೊಳ್ಳುತ್ತಾಳೆ.
ಯದುವಿನ ಮೋಸವನ್ನು ಹಾಗು ಪ್ರೀತಂನ ಪ್ರೀತಿಯನ್ನು ಎದೆಯಲ್ಲಿಟ್ಟುಕೊಂಡು ಯಾರಿಗೂ ಹೇಳಿಕೊಳ್ಳಲಾಗದೆ ಸಂಕಟ ಪಡುತ್ತಾಳೆ. ತಾನು ದೂರವಾದರೆ ಪ್ರೀತಂ ತನ್ನನ್ನು ಮರೆಯಬಹುದು, ಯದುವಿನ ಕಿರುಕುಳದಿಂದ ಪಾರಾಗಬಹುದು ಮತ್ತು ಅಮ್ಮ, ಅಕ್ಕನ ನೆಮ್ಮದಿಯನ್ನೂ ಉಳಿಸಬಹುದು ಎಂದು ಯೋಚಿಸಿ ತನಗಿಷ್ಟವಿಲ್ಲದ ಮದುವೆಗೆ ಒಪ್ಪಿ ಅಮೇರಿಕಾಗೆ ಹೊರಡಲು ತಯಾರಾಗುತ್ತಾಳೆ, ಆದರೆ ಮದುವೆಯಾಗಲು ಬಂದ ಆಕಾಶ್ ಮೋಸಗಾರ ಎಂದು ತಿಳಿದು ಆರಂಭದಲ್ಲೇ ಸಂಬಂಧ ಮುರಿದು ಬೀಳುತ್ತದೆ.
ಯದುವಿನ ಮೋಸದ ಫಲವನ್ನು ಗರ್ಭದಲ್ಲಿ ಹೊತ್ತು ಹಾಗೂ ಮೊದಲು ಮದುವೆ ಆಗೋ ಗಂಡ ಸಾಯುತ್ತಾನೆ ಎಂಬ ದೋಷವನ್ನು ತನ್ನ ಜಾತಕದಲ್ಲಿ ಹಣೆಬರಹವಾಗಿ ತುಂಬಿಕೊಂಡ ಕಾವೇರಿ ಜೀವನ ದೊಡ್ಡ ಪ್ರಶ್ನೆಯಾಗಿ ನಿಲ್ಲುತ್ತದೆ, ಕಾವೇರಿ ನದಿಯು ಹೇಗೆ ಹಳ್ಳಕೊಳ್ಳಗಳನ್ನು ದಾಟಿ ಸಮುದ್ರವನ್ನು ಸೇರುತ್ತದೆಯೋ ಹಾಗೆ ಯದುವಿನ ಜೊತೆಗೆ ಮದುವೆಯಾಗಲು ಬಂದು ನಿಲ್ಲುತ್ತದೆ. ಆದರೆ ಅಲ್ಲೂ ಕಾವೇರಿ ವಿಧಿಯಾಟದ ಕೈ ಗೊಂಬೆ ಆಗುತ್ತಾಳೆ, ಜಾತಕ ದೋಷದ ಬಗ್ಗೆ ತಿಳಿದು ಎದು ಮದುವೆಯನ್ನು ಮುರಿದುಕೊಂಡು ಹೋದರೆ, ಅದೇ ಸಮಯಕ್ಕೆ ಕಾವೇರಿ ಮುಚ್ಚಿಟ್ಟಿದ್ದ ಯದುವಿನ ಮೋಸದ ಗರ್ಭದ ಕಥೆ ಮನೆಯವರಿಗೆ ತಿಳಿದು ಕಾವೇರಿಯನ್ನು ನಿಂದಿಸುತ್ತಾರೆ. ಅಲ್ಲೂ ಮಾಡದ ತಪ್ಪಿಗೆ ಕಾವೇರಿ ಅಪರಾಧಿಯಾಗಿ ನಿಲ್ಲುತ್ತಾಳೆ.
ಈ ಸಮಯದಲ್ಲಿ ಬದುಕೇ ಬೇಡ ಅಂತ ಹೊರಟಿದ್ದ ಕಾವೇರಿ ಜೀವನದಲ್ಲಿ ದೇವರು ಹೊಸದೊಂದು ರೀತಿಯ ಮಂತ್ರ ಮಾಂಗಲ್ಯದ ಮದುವೆಗೆ ವೇದಿಕೆ ಸಿದ್ದ ಮಾಡಿರುತ್ತಾನೆ, ಯಾರು ನಿರೀಕ್ಷೆ ಮಾಡದ ಹಾಗೆ ಪರಶುರಾಮ್ ಜೊತೆಗೆ ಕಾವೇರಿಯ ಮದುವೆ ಸಂಬಂಧ ಬೆಸೆಯುತ್ತಾನೆ. ಆದರೆ ಇದರಿಂದ ಕಾವೇರಿಯ ಜೀವನದಲ್ಲಿ ಹಲವಾರು ದುರಂತಗಳು ನಡೆಯುತ್ತದೆ. ಮನೆಯವರ ಸಂಬಂಧವನ್ನ ಕಳೆದುಕೊಳ್ಳುತ್ತಾಳೆ. ಸಮಾಜದ ಧೋರಣೆಯನ್ನು ಕಟ್ಟಿಕೊಳ್ಳುತ್ತಾಳೆ. ಪ್ರೀತಂ ಕಣ್ಣೀರಿಗೆ ಹಾಗೂ ಪರಶುರಾಮ್ ಮನೆಯವರ ಕೋಪಕ್ಕೆ ಕಾವೇರಿ ಕಾರಣವಾಗುತ್ತಾಳೆ, ಪರಶುರಾಮ್ ಕಂಪನಿಯ ಹಾಗೂ ಮನೆಯ ಯಜಮಾನಿ ಆಗಿದ್ದಕ್ಕೆ ಕಾವೇರಿ ಎಲ್ಲರ ದ್ವೇಷವನ್ನು ಕಟ್ಟಿಕೊಳ್ಳುತ್ತಾಳೆ.
ಕಾವೇರಿಯ ಪರಶುರಾಮ್ ಮದುವೆ ಹಿಂದಿನ ಗುಟ್ಟು ಎಲ್ಲರಿಗೂ ದೊಡ್ಡ ಪ್ರಶ್ನೆಯಾಗಿ ಕಾಡುವ ವಿಷಯವಾಗುತ್ತದೆ, ಯಾವ ಕಾರಣಕ್ಕೆ ಯಾವ ಹೆಣ್ಣು ಆಗದ ರೀತಿ ಕಾವೇರಿ ಮದುವೆ ಆದಳು, ಸ್ವಾರ್ಥಿಯ ಹಣೆಪಟ್ಟಿ ಕಟ್ಟಿಕೊಂಡವಳ ಹಿಂದೆ ಇರುವ ತ್ಯಾಗದ ಕತೆ ಏನು? ಔದಾರ್ಯ ಏನು? ಯಾರು ನಿರೀಕ್ಷೆ ಮಾಡಿರದ... ಮನೆಯವರು ಸಮಾಜವು ಮೆಚ್ಚುವಂತ ಪ್ರೀತಿ ಮಮತೆಯ ಕತೆ ಆ ಗುಟ್ಟಿನಲ್ಲಿ ಅಡಗಿರುತ್ತದೆ
