sangeetha bhat sudarshan rangaprasad ಒಂಬತ್ತು ವರ್ಷಗಳ ದಾಂಪತ್ಯದ ನಂತರ, ನಟಿ ಸಂಗೀತಾ ಭಟ್ ಮತ್ತು ನಟ ಸುದರ್ಶನ್ ರಂಗಪ್ರಸಾದ್ "ಮಕ್ಕಳಿಲ್ಲದ ಬದುಕು" ನಡೆಸಲು ನಿರ್ಧರಿಸಿದ್ದಾರೆ. ಈ ಜಗತ್ತಿಗೆ ಮತ್ತೊಂದು ಜೀವ ತರಲು ಇಷ್ಟವಿಲ್ಲದ ಕಾರಣಗಳನ್ನು ಹಂಚಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ನ ಜನಪ್ರಿಯ ಜೋಡಿ, ನಟಿ ಸಂಗೀತಾ ಭಟ್ ಮತ್ತು 'ಭಾಗ್ಯಲಕ್ಷ್ಮಿ' ಖ್ಯಾತಿಯ ನಟ ಸುದರ್ಶನ್ ರಂಗಪ್ರಸಾದ್ ತಮ್ಮ ಬದುಕಿನ ಕುರಿತು ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದ್ದಾರೆ. ಒಂಬತ್ತು ವರ್ಷಗಳ ದಾಂಪತ್ಯದ ನಂತರ, ಈ ತಾರಾ ದಂಪತಿ "ನಮಗೆ ಮಕ್ಕಳೇ ಬೇಡ" ಎಂಬ ಗಟ್ಟಿ ನಿಲುವಿಗೆ ಬಂದಿದ್ದು, ಅದರ ಹಿಂದಿನ ಕಾರಣಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

'ಅಣ್ಣ' ಎಂದು ಕರೆದವನನ್ನೇ ವರಿಸಿದ್ದ ಸಂಗೀತಾ!

ಸಂಗೀತಾ ಮತ್ತು ಸುದರ್ಶನ್ ಅವರದ್ದು ಪ್ರೇಮವಿವಾಹ. ಒಂದು ಕಾಲದಲ್ಲಿ ಜಯನಗರದಲ್ಲಿ ಸುದರ್ಶನ್ ಅವರನ್ನು 'ಅಣ್ಣ' ಎಂದು ಕರೆದಿದ್ದ ಸಂಗೀತಾ, ವಿಧಿಯಾಟದಲ್ಲಿ ಅವರನ್ನೇ ತಮ್ಮ ಬಾಳಸಂಗಾತಿಯನ್ನಾಗಿ ಸ್ವೀಕರಿಸಿದರು. 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ, ಇದೀಗ ತಮ್ಮದೇ ಆದ ವಿಶಿಷ್ಟ ಜೀವನಶೈಲಿಯ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಮಕ್ಕಳು ಬೇಡ ಎನ್ನಲು ಕಾರಣವೇನು?

ತಮ್ಮ ಈ ನಿರ್ಧಾರದ ಬಗ್ಗೆ ಮಾತನಾಡಿದ ಸಂಗೀತಾ ಭಟ್, "ನಮ್ಮ ಜೀವನದಲ್ಲಿ ನಡೆದ ಕೆಲವು ಘಟನೆಗಳಿಂದಾಗಿ, ಈ ಜಗತ್ತಿಗೆ ಮತ್ತೊಂದು ಜೀವವನ್ನು ತರುವ ಇಚ್ಛೆ ನಮಗಿಲ್ಲ. ಈಗಿನ ದುಬಾರಿ ಜಗತ್ತಿನಲ್ಲಿ ಮಗುವನ್ನು ಬೆಳೆಸುವುದು ತಮಾಷೆಯಲ್ಲ. ಅದಕ್ಕೆ ಬೇಕಾದ ಜೀವನ ನೀಡುವುದು, ನಮ್ಮ ಬದುಕನ್ನು ತ್ಯಾಗ ಮಾಡುವುದು, ಆ ರೋಲರ್ ಕೋಸ್ಟರ್ ನಮಗೆ ಬೇಡ," ಎಂದು ಸ್ಪಷ್ಟಪಡಿಸಿದ್ದಾರೆ.

ಈ ನಿರ್ಧಾರಕ್ಕೆ ಸಮಾಜದಿಂದ ಟೀಕೆಗಳು ಬರಬಹುದು ಎಂಬುದನ್ನು ಅರಿತಿರುವ ಸುದರ್ಶನ್, "ಜನ ನಮ್ಮನ್ನು 'ನಾಲಾಯಕ್' ಅಂತ ಬೈಯಬಹುದು, ಆದರೆ ನಾವು ಅದಕ್ಕೆ ಸಿದ್ಧರಾಗಿದ್ದೇವೆ," ಎನ್ನುತ್ತಾರೆ.

ನಮ್ಮ ಬದುಕಿನ ಆದ್ಯತೆ ಬೇರೆ ಇದೆ!

ಮಕ್ಕಳ ಪಾಲನೆಯ ಜವಾಬ್ದಾರಿಯ ಬದಲು ತಮ್ಮ ಬದುಕನ್ನು ಬೇರೆ ರೀತಿಯಲ್ಲಿ ರೂಪಿಸಿಕೊಳ್ಳಲು ಈ ಜೋಡಿ ನಿರ್ಧರಿಸಿದೆ. "ನಮಗೆ ರೋಲರ್ ಕೋಸ್ಟರ್ ಬೇಕು, ಆದರೆ ಅದು ಮೋಜು, ಪ್ರಯಾಣ, ಒಳ್ಳೆಯ ಸಿನಿಮಾಗಳು ಮತ್ತು ಉತ್ತಮ ಪಾತ್ರಗಳಿಂದ ಕೂಡಿರಲಿ. ಎಲ್ಲಾ ಬೆರಳುಗಳು ಒಂದೇ ರೀತಿ ಇರುವುದಿಲ್ಲ, ಪ್ರತಿಯೊಬ್ಬರ ಆಯ್ಕೆಯೂ ವಿಭಿನ್ನ. ಇದು ನಮ್ಮ ಆಯ್ಕೆ, ಇದರಲ್ಲಿ ನಾವು ಖಚಿತವಾಗಿದ್ದೇವೆ," ಎನ್ನುವುದು ಸಂಗೀತಾ ಭಟ್ ಅವರ ದೃಢ ಮಾತು.

ತಮ್ಮ ವೈಯಕ್ತಿಕ ಬದುಕು ಮತ್ತು ವೃತ್ತಿಜೀವನದಲ್ಲಿ ಸ್ಪಷ್ಟ ಗುರಿಗಳನ್ನು ಹೊಂದಿರುವ ಸಂಗೀತಾ-ಸುದರ್ಶನ್ ದಂಪತಿ, ಸಮಾಜದ ಕಟ್ಟಳೆಗಳನ್ನು ಮೀರಿ ತಮ್ಮದೇ ಆದ ದಾರಿಯಲ್ಲಿ ಸಾಗಲು ನಿರ್ಧರಿಸಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ.