How Rajesaba Maktumasab Yankanchi Became Raju Talikote ಕನ್ನಡದ ಪ್ರಸಿದ್ಧ ಹಾಸ್ಯ ನಟ ಹಾಗೂ ರಂಗಕರ್ಮಿ ರಾಜು ತಾಳಿಕೋಟೆ ನಿಧನರಾಗಿದ್ದಾರೆ. ಮನಸಾರೆ, ಪಂಚರಂಗಿ ಚಿತ್ರಗಳಲ್ಲಿನ ಪಾತ್ರಗಳಿಂದ ಜನಪ್ರಿಯರಾಗಿದ್ದ ಅವರು, ನಟನೆಗೆ ಬರುವ ಮುನ್ನ ಲಾರಿ ಕ್ಲೀನರ್ ಆಗಿ ಕೆಲಸ ಮಾಡಿದ್ದರು. 

ಮನಸಾರೆ ಸಿನಿಮಾದ ಶಂಕರಪ್ಪ, ಪಂಚರಂಗಿ ಸಿನಿಮಾದ ಪಂಚಾಕ್ಷರಿ ಹಾಗೂ ಲೈಫು ಇಷ್ಟೇನೆ ಸಿನಿಮಾದ ಗೇಟ್‌ಕೀಪರ್‌ ಪಾತ್ರಗಳಲ್ಲಿ ನಟಿಸಿ ರಂಜಿಸಿದ್ದ ಕನ್ನಡದ ಪ್ರಸಿದ್ಧ ಹಾಸ್ಯ ಕಲಾವಿದ ಹಾಗೂ ರಂಗಕರ್ಮಿ ರಾಜು ತಾಳಿಕೋಟೆ ಸೋಮವಾರ ನಿಧನರಾದರು. 7ನೇ ಆವೃತ್ತಿಯ ಬಿಗ್‌ಬಾಸ್‌ನಲ್ಲೂ ಸ್ಪರ್ಧಿಸಿದ್ದ ರಾಜು ತಾಳಿಕೋಟೆ, 'ಕಲಿಯುಗದ ಕುಡುಕ' ನಾಟಕದಿಂದ ಸಖತ್‌ ಫೇಮಸ್‌ ಆಗಿದ್ದರು.

ರಾಜು ತಾಳಿಕೋಟೆ ಎಂದೇ ಪ್ರಸಿದ್ಧವಾಗಿ ಕರೆಯಿಸಿಕೊಂಡಿದ್ದ ಅವರ ಮೂಲ ಹೆಸರು ರಾಜೇಸಾಬ್‌ ಮಕ್ತುಮ್‌ಸಾಬ್‌ ಯೆಂಕಂಚಿ. ಆದರೆ, ಜನ ತಮ್ಮನ್ನು ರಾಜು ರಾಜು ಎಂದೆ ಶಾರ್ಟ್‌ಕಟ್‌ನಲ್ಲಿ ಕರೆಯಲು ಆರಂಭಿಸಿದರು. ಸರ್‌ ನೇಮ್‌ ಆದ ಯೆಂಕಂಚಿಯನ್ನು ಬದಿಗಿಟ್ಟು ನನ್ನ ಊರ ಹೆಸರಾದ ತಾಳಿಕೋಟೆಯನ್ನು ಸೇರಿಸಿಕೊಂಡೆ. ಊರಿನ ಹೆಸರಿನೊಂದಿಗೆ ನನ್ನ ಹೆಸರು ಸೇರಿದ್ದರಿಂದ ಪ್ರಸಿದ್ಧಿಯಾದೆ ಎಂದು ಕಲಾಮಾಧ್ಯಮ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ರಾಜು ತಾಳಿಕೋಟೆ ಅವರ ತಂದೆ ತಾಯಿ ಕೂಡ ರಂಗಭೂಮಿ ಕಲಾವಿದರು.ಅವರದ್ದೇ ಒಂದು ನಾಟಕ ಸಂಘ ಕೂಡ ಇತ್ತು ಎಂದು ರಾಜು ತಾಳಿಕೋಟೆ ಹೇಳಿದ್ದರು. ಬಾಲ್ಯದ ವಿದ್ಯಾಭ್ಯಾಸ ಎಲ್ಲವೂ ಆಗಿದ್ದು ಮಠದಲ್ಲಿ. ಮುಸ್ಲಿಂ ಆಗಿದ್ದರೂ, ಮಠದಲ್ಲಿ ಓದುತ್ತಿದ್ದ ಕಾರಣ ಅಲ್ಲಿಯ ರೀತಿ ನೀತಿಯಂತೇ ಇರಬೇಕಿತ್ತು. ವಿಭೂತಿ ಹಾಕಿಕೊಂಡು ಊಟ ಮಾಡಬೇಕಿತ್ತು. ವಚನಗಳ ಅಭ್ಯಾಸ ಮಾಡಬೇಕಿತ್ತು. ನಾನು ಈಗಲೂ ಕೂಡ ನನ್ನ ಹಿಂದೂ ಸ್ನೇಹಿತರ ಮನೆಗೆ ಹೋದರೆ ವಿಭೂತಿ ಧಾರಣೆ ಮಾಡಿಯೇ ಊಟ ಮಾಡುತ್ತೇನೆ ಎಂದಿದ್ದರು.

ಲಾರಿ ಕ್ಲೀನರ್‌ ಆಗಿ ಕೆಲಸ ಮಾಡುತ್ತಿದ್ದ ರಾಜು ತಾಳಿಕೋಟೆ

ನಾನು 3ನೇ ಕ್ಲಾಸ್‌ ಪಾಸ್‌ ಆಗಿದ್ದೇನೆ. 4ನೇ ಕ್ಲಾಸ್‌ ಮುಗಿಸಲಿಲ್ಲ. ಅಪ್ಪ-ಅಮ್ಮ ತೀರಿಹೋದ ಬಳಿಕ ನನ್ನ ಅಣ್ಣ ನಾಟಕ ಸಂಸ್ಥೆ ನಡೆಸಿಕೊಂಡು ಹೋಗುತ್ತಿದ್ದ. ಅಣ್ಣ ಕೂಡ ತೀರಿ ಹೋದ ಬಳಿಕ, ಮಠಕ್ಕೆ ಶುಲ್ಕ ಕೊಡೋಕೆ ಯಾರೂ ಇರಲಿಲ್ಲ. ಇಡೀ ಮನೆಯಲ್ಲಿ ನಾನೇ ಕೊನೆ ಮಗ. ಕೊನೆಗೆ ನನ್ನ ಜೀವನ ನಾನೇ ಕಟ್ಟಿಕೊಳ್ಳೋಕೆ ಶುರು ಮಾಡಿದೆ. ಹೋಟೆಲ್‌ನಲ್ಲಿ ಆರಂಭದಲ್ಲಿ ಕೆಲಸ ಮಾಡಿದ್ದೆ. ಬಳಿಕ ಲಾರಿ ಕ್ಲೀನರ್‌ ಆಗಿಯೂ ಕೆಲಸ ಮಾಡಿದ್ದೆ.

ಆ ಬಳಿಕವೇ ನನ್ನನ್ನು ರಂಗಭೂಮಿ ಸೆಳೆದಿತ್ತು. ನನ್ನ ತಂದೆ ತಾಯಿ ರಂಗಭೂಮಿಯಲ್ಲಿ ಕೆಲಸ ಮಾಡಿದ್ದರು. ನಾನು ಹೋಟೆಲ್‌ಗಳಲ್ಲಿ ಕೆಲಸ ಮಾಡುವಾಗ ಇದು ನನ್ನ ಕೆಲಸ ಅಲ್ಲ ಅಂತಾ ಯಾವಾಗಲೂ ಅನಿಸುತ್ತಿತ್ತು. ಅದಕ್ಕಾಗಿಯೇ ನಾನು ರಂಗಭೂಮಿಗೆ ಮರಳಿದ್ದೆ ಎಂದು ರಾಜು ತಾಳಿಕೋಟೆ ಹೇಳಿಕೊಂಡಿದ್ದರು.