Sujatha Bhat: ಅನನ್ಯಾ ಭಟ್‌ ಎಂಬ ಸುಳ್ಳಿನ ಕಥೆ ಹೆಣೆದು ಇಡೀ ನಾಡಿನ ಜನರನ್ನು ಮೂರ್ಖರನ್ನಾಗಿಸಿದ್ದ ಸುಜಾತಾ ಭಟ್‌ಗೆ ಈಗ ಬಿಗ್‌ ಆಫರ್‌ ಸಿಕ್ಕಿದೆಯಂತೆ. ಏನದು? 

ಅನನ್ಯಾ ಭಟ್‌ ಎಂಬ ಹೆಸರು ಹೇಳಿ ವಾರಗಟ್ಟಲೇ ಇಡೀ ನಾಡಿನ ಜನತೆಗೆ ಚಳ್ಳೆಹಣ್ಣು ತಿನಿಸಿದ್ದ ಸುಜಾತಾ ಭಟ್‌ಗೆ ದೊಡ್ಡ ಆಫರ್‌ ಸಿಕ್ಕಿದೆಯಂತೆ. ಹೌದು, ಮುಂಬರುವ ಸೆಪ್ಟೆಂಬರ್‌ 28ರಂದು ‘ಬಿಗ್‌ ಬಾಸ್‌ ಕನ್ನಡ ತನ್ನ 12ʼ ಶೋ ಪ್ರಸಾರ ಆಗಲಿದೆ. ಕಿಚ್ಚ ಸುದೀಪ್‌ ಅವರು ನಿರೂಪಕರಾಗಿ ಮುಂದುವರಿಯಲಿದ್ದಾರೆ. ಈಗಾಗಲೇ ಶೋನ ಲೋಗೋ ಬಿಡುಗಡೆಯಾಗಿದ್ದು, ಈ ಬಾರಿ ಯಾರೆಲ್ಲ ಸ್ಪರ್ಧಿಗಳಾಗಿ ಎಂಟ್ರಿ ಕೊಡಲಿದ್ದಾರೆ ಎಂದು ಕಾದು ನೋಡಬೇಕಿದೆ. ಈಗ ಸುಜಾತಾ ಭಟ್‌ ಅವರಿಗೆ ‘ಬಿಗ್‌ ಬಾಸ್‌ ಕನ್ನಡ ಸೀಸನ್ 12’ ಶೋಗೆ ಆಹ್ವಾನ ಬಂದಿದೆ ಎನ್ನಲಾಗಿದೆ.

‘ಬಿಗ್‌ ಬಾಸ್‌ ಕನ್ನಡ’ ಶೋ ತನ್ನ ವಿಶಿಷ್ಟ ಆಟಗಳು, ರೋಚಕ ಟ್ವಿಸ್ಟ್‌ಗಳು, ವಿವಾದಾತ್ಮಕ ಸೇರಿದಂತೆ ವಿಭಿನ್ನ ವ್ಯಕ್ತಿತ್ವ ಇರುವ ಸ್ಪರ್ಧಿಗಳು, ಕಿಚ್ಚ ಸುದೀಪ್‌ ನಿರೂಪಣೆಯಿಂದಾಗಿ ಕನ್ನಡದಲ್ಲಿ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಎಂಬ ಹೆಗ್ಗಳಿಕೆ ಪಡೆದಿದೆ.‌ ಬೆಂಗಳೂರಿನ ಬಿಡದಿಯ ಇನೋವೇಟಿವ್‌ ಫಿಲ್ಮ್‌ ಸಿಟಿಯಲ್ಲಿ ಈ ಬಾರಿಯ ಸೀಸನ್ ಶೂಟಿಂಗ್‌ ನಡೆಯಲಿದೆ. ಈಗಾಗಲೇ ಭವ್ಯವಾದ ಸೆಟ್‌ ಹಾಕಲಾಗಿದ್ದು, ಹೊಸ ಥೀಮ್‌ನಲ್ಲಿ ಈ ಶೋ ಮೂಡಿಬರಲಿದೆ. 17 ಸ್ಪರ್ಧಿಗಳು ಈ ಬಾರಿ ಈ ಶೋನಲ್ಲಿ ಭಾಗವಹಿಸುವ ಸಾಧ್ಯತೆ ಇದೆಯಂತೆ.

ಸುಜಾತಾ ಭಟ್‌ಗೆ ‘ಬಿಗ್‌ ಬಾಸ್‌ ಕನ್ನಡ ಸೀಸನ್ 12’ ಶೋಗೆ ಆಫರ್‌ ಬಂದಿರುವ ಬಗ್ಗೆ‌ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ನಡೆದಿವೆ. ಆದರೆ ಈ ಬಗ್ಗೆ ಕಲರ್ಸ್‌ ಕನ್ನಡ ವಾಹಿನಿ ಅಥವಾ ಸುಜಾತಾ ಭಟ್‌ ಅವರು, ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಿಚ್ಚ ಸುದೀಪ್‌ ಅವರಂತೂ ಈ ಶೋನಲ್ಲಿ ಭಾಗಿಯಾಗುವ ಸ್ಪರ್ಧಿಗಳ ಆಯ್ಕೆಯಲ್ಲಿ ಭಾಗಿಯಾಗುವುದಿಲ್ಲ ಎಂದು ಹೇಳಿದ್ದಾರೆ.

ಸುಜಾತಾ ಭಟ್‌ ಯಾರು?

ಸದ್ಯ ಧರ್ಮಸ್ಥಳದ ಸೌಜನ್ಯಾ ಅ*ತ್ಯಾಚಾರ ಮಾಡಿದವರಾರು ಎಂದು ಕಂಡುಹಿಡಿಯಬೇಕು ಎಂದು ತನಿಖೆ ನಡೆಯುತ್ತಿದೆ. ಇನ್ನೊಂದು ಕಡೆ ಚಿನ್ನಯ್ಯ ಅಲಿಯಾಸ್‌ ಭೀಮ ತಾನು ಧರ್ಮಸ್ಥಳದಲ್ಲಿ ನೂರಾರು ಶವ ಹೂತಿರೋದಾಗಿ ಹೇಳಿದ್ದನು. ಇದನ್ನೆಲ್ಲ ತನಿಖೆ ಮಾಡಲು ಎಸ್‌ಐಟಿ ರಚನೆ ಮಾಡಲಾಗಿದೆ. ಮೆಡಿಕಲ್‌ ಕಾಲೇಜಿನಲ್ಲಿ ನನ್ನ ಮಗಳು ಅನನ್ಯಾ ಭಟ್‌ ಓದುತ್ತಿದ್ದಳು, ಅವಳನ್ನು ಅ*ತ್ಯಾಚಾರ ಮಾಡಲಾಗಿದೆ, ಕೊನೇ ಪಕ್ಷ ಅಸ್ತಿ ಕೊಡಿ ಎಂದು ಸುಜಾತಾ ಭಟ್‌ ಅವರು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದರು. ಈ ಬಗ್ಗೆ ತನಿಖೆ ಕೈಗೊಂಡಾಗ ಮಾಧ್ಯಮದ ಮುಂದೆ ಬಂದ ಅವರು, “ಮಹೇಶ್‌ ತಿಮರೋಡಿ ಮನೆಯಲ್ಲಿ ನಾನಿದ್ದೆ, ನಮ್ಮ ತಾತನ ಆಸ್ತಿಯನ್ನು ಜೈನರಿಗೆ ಕೊಟ್ಟರು ಎಂಬ ಬೇಸರ ಇತ್ತು. ಹೀಗಾಗಿ ಈ ಸುಳ್ಳು ಹೇಳಿದೆ. ನನಗೆ ಯಾರೂ ದುಡ್ಡು ಕೊಟ್ಟಿಲ್ಲ. ನನಗೆ ಅನನ್ಯಾ ಭಟ್‌ ಎಂಬ ಮಗಳೇ ಇಲ್ಲ” ಎಂದು ಹೇಳಿದ್ದರು.

ಅದಾದ ಬಳಿಕ ಮತ್ತೆ “ನಾನು ಈ ರೀತಿ ತಪ್ಪೊಪ್ಪಿಗೆ ಕೊಡುವಂತೆ ಮಾಧ್ಯಮದವರು ಹೇಳಿದ್ದರು” ಎಂದು ಹೇಳಿದ್ದರು. ಒಟ್ಟಿನಲ್ಲಿ ಸುಜಾತಾ ಭಟ್‌ ಸುಳ್ಳಿನ ಕಂತೆಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ಇವರೀಗ ಬಿಗ್‌ ಬಾಸ್‌ ಮನೆಗೆ ಹೋದರೆ ಹೇಗಿರುತ್ತದೆ ಎಂದು ವೀಕ್ಷಕರು ಆಲೋಚಿಸುತ್ತಿದ್ದಾರೆ. ಇದಕ್ಕೆ ಸೆಪ್ಟೆಂಬರ್‌ 28ಕ್ಕೆ ಉತ್ತರ ಸಿಗುವುದು.